ನೀರವ ದಿರಿಸು ತೊಟ್ಟು ನಿಂತ ಸಂಜೆ, ಮನಸೆಂಬುದು ಕನಸು ಹಡೆಯಲಾಗದ ಬಂಜೆ. ಪಶ್ಚಿಮದಲ್ಲಿ ಮುಳುಗುತ್ತಿರುವ ಸೂರ್ಯ ಮುಗುಳ್ನಗೆ ಹೊತ್ತೊಯ್ಯುತ್ತಿದ್ದಾನೆ. ಜಗದ ಜೀವಂತಿಕೆ ಮನದ ಕಡಲಿಗೆ ರವಾನೆಯಾಗುತ್ತಿಲ್ಲ. ಮನದ ಕಡಲು ಭೋರ್ಗರೆಯುತ್ತಿದೆ: ಆದರೆ, ಅದನ್ನು ಆಲಿಸಲು ಜಗದ ಕಿವಿಗಳು ತಯಾರಿಲ್ಲ. 'ನಾನು' ನಾನಾಗೇ ಉಳಿದು ಬಿಡಲು ಬಿಡದ ಕಾಲ, ಎಲ್ಲೆಲ್ಲಿಗೋ ನನ್ನನ್ನು ದೂಡುತ್ತಿದೆ. ಕಾಲ ಪ್ರಶ್ನಾತೀತ. ನಾನು ಉತ್ತರ ಸಿಗದ ಪ್ರಶ್ನೆಗಳಿಗೆ ಅತೀತ.
ಓದಬೇಕೆಂದು ತಂದು ಗುಡ್ಡೆ ಹಾಕಿಕೊಂಡ ಪುಸ್ತಕಗಳು ಸತ್ತ ಶವದ ಪ್ರತಿರೂಪದಂತೆ ಬಿದ್ದಿವೆ. ಅಕ್ಷರ ಹಾದರಕ್ಕಿಳಿದ ಮಂದಿಯನ್ನು ಕಣ್ಣಾರೆ ಕಂಡ ಮೇಲೆ ಓದುವ ಹಸಿವು ಹಾರಿ ಹೋಯ್ತು. ಆದರ್ಶದ ಶವಯಾತ್ರೆಯಲ್ಲಿ ಪಾಲ್ಗೊಂಡು ಬಂದ ಮೇಲೂ ಮನಸ್ಸು ನಿಟ್ಟುಸಿರು ಬಿಡುತ್ತಿಲ್ಲ. ನೆಚ್ಚಿಕೊಂಡ ನಾಳೆಗಳು ನಿನ್ನೆಗಳಷ್ಟು ಸುಂದರವಾಗಿಲ್ಲ. ಮನಸ್ಸು ಕನಸು ಕಾಣುವಷ್ಟು ಪಾರದರ್ಶಕವಾಗಿ ಉಳಿದಿಲ್ಲ. ಹಲ್ಲಂಡೆಗಳ ಗುಡಾಣ ಹೊತ್ತುಕೊಂಡು ಹಾಯಾಗಿ ತಿರುವಗುವ ಮಂದಿಯ ಕಂಡು ಅದು ಕರುಬುತ್ತಿದೆ. ನಿರೀಕ್ಷೆಗಳು ಕಾರಣ ನೀಡದೆ ಸಾವನ್ನಪ್ಪುತ್ತಿವೆ. ನಿರಾಸೆಗಳು ಅಕಾರಣವಾಗಿ ಅಪ್ಪುತ್ತಿವೆ. 'ಯಾರೋ ಬರುತ್ತಾರೆ, ಬದುಕು ಬೆಳಗುತ್ತಾರೆ. ಕನಸಿನ ಕದ ತೆರೆಯುತ್ತಾರೆ. ಮನಸ್ಸಿಗೆ ಮುದ ತುಂಬುತ್ತಾರೆ' ಒಂದು ಸುಂದರ ಭ್ರಮೆಯ ಪಯಣ ಹೀಗೆ ಸಾಗುತ್ತದೆ. ಕೊನೆಗೆ ಸಾಯುತ್ತದೆ.
- ಎಚ್.ಕೆ. ಶರತ್