

ಸಂಬಂಧ
ನಮ್ಮದು ಮನುಷ್ಯ ಸಂಬಂಧ. ಅದಕ್ಕೇ ಸುತ್ತಲೂ ಆಸೆ, ಹತಾಶೆ, ನಿಟ್ಟುಸಿರುಗಳ ಬಂಧ.
ಕನಸು
ಖಾಲಿ ಆಗಸದ ಮೇಲೆ ಚಿತ್ತಾರದ ಗಾಳಿಪಟ... ಅವನ ಕಣ್ಣುಗಳಲ್ಲಿ ಸಾಯದ ಹಟ.
ಭಿಕ್ಷೆ
ಸೂರು ಕಳೆದುಕೊಂಡ ಕನಸು ನಡುಬೀದಿಯಲ್ಲಿ ಭಿಕ್ಷೆ ಬೇಡುತ್ತಿದೆ. ಆಶ್ರಯ ಕೊಟ್ಟವನು ಹಾದಿ ಬದಿಯಲ್ಲಿ ಬೆತ್ತಲಾಗಿ ಮಲಗಿದ್ದಾನೆ.
ಪ್ರಶ್ನೆ
ಕನಸುಗಳು ಬೆಲೆ ಕಳೆದುಕೊಂಡ ಊರಲ್ಲಿ ನಿದ್ರೆಗೇನು ಕೆಲಸ?
ಸ್ವಯಂಕೃತ ಅಪರಾಧ
ಕೈಯಾರೆ ಕಳೆದುಕೊಂಡ ನೆಮ್ಮದಿಯ ನಿದ್ರೆಗಳು ಪಶ್ಚಾತ್ತಾಪ ಹೊತ್ತುಕೊಂಡು ಬರುತ್ತಿವೆ.
ವಿಪರ್ಯಾಸ
ಅನಂತ ಕಡಲಿನ ಮಡಿಲಿಗೆ ಕಣ್ಣನ್ನು ಅಡವಿಟ್ಟು ತೀರದಲ್ಲಿ ಕೂತಿದ್ದೆ. ಬೆತ್ತಲೆ ದೇಹಗಳು ತುಂಬಾ ನೊಂದುಕೊಂಡವು
ಮಾತು
ಆಡಲೇನು ಬೇಜಾನ್ ಮಾತುಗಳಿವೆ. ಆದರೂ ಬೇಜಾರು, ನನ್ನದಲ್ಲದ ಮಾತನಾಡಲು!
ಮೌನ
ಮೋಡ ಕವಿದ ಮುಂಜಾನೆ... ಮಾತಿನ ಮಳೆ ಸುರಿಯುತ್ತಿರಲಿಲ್ಲ. ಆದರೂ ಮನಸ್ಸು ಹದವಾಗುತ್ತಿತ್ತು.
-ಎಚ್. ಕೆ. ಶರತ್, ಹಾಸನ.