ಗುರು ಬಾಬಾಜಿಯನ್ನು ಕಂಡೆ
ಮರುದಿನ ಮುಂಜಾವಿನಲ್ಲೇ ಮಾನಾ ಹಳ್ಳಿಯ ಕಡೆಗೆ ಹೊರಟೆ, ಮಧ್ಯಾಹ್ನದ ವೇಳೆಗೆಲ್ಲ ಹಳ್ಳಿ ತಲುಪಿದ್ದೆ. ವ್ಯಾಸ ಗುಹೆಯವರೆಗೆ ನಡೆಯುತ್ತ ಹೋದೆ, ಅದೊಂದು ಮಧ್ಯಮ ಗಾತ್ರದ ನೈಸರ್ಗಿಕ ಗುಹೆ.
ಆಸುಪಾಸಿನಲ್ಲಿರುವ ಇತರ ಗುಹೆಗಳನ್ನು ಶೋಧಿಸಲು ನಿರ್ಧರಿಸಿ ಬಂಡೆಗಳಾಚೆ ನಡೆಯುತ್ತ ಮುಂದೆ ಮುಂದೆ ಹೋದಂತೆ ಸುರಂಗವೊಂದರೊಳಗಿಂದ ಭೋರ್ಗರೆದು ಹರಿಯುತ್ತ ಹೊರಬರುವ ಸರಸ್ವತಿ ಅಲಕನಂದೆಯೊಂದಿಗೆ ಸಂಗಮಿಸುವುದನ್ನು ಕಂಡೆ. ಬಂಡೆಗಳೇ ತುಂಬಿದ ಭೂ ಪ್ರದೇಶದಲ್ಲಿ ಇನ್ನೂ ಒಂದು ಗಂಟೆ ಕಾಲ ನಡೆದ ಮೇಲೆ ವಸುಧಾರಾ ಜಲಪಾತ ಕಾಣಿಸಿತು. ಸ್ವರ್ಗಾರೋಹಿಣಿಯನ್ನು ತಲುಪುವುದು ನನ್ನ ಯೋಜನೆಯಾಗಿತ್ತು. ಯುಧಿಷ್ಠಿರನನ್ನು ಸ್ವರ್ಗಕ್ಕೆ ಕೊಂಡೊಯ್ದ ಕಥೆಯಲ್ಲಿ ಏನೋ ಅಡಗಿರಬಹುದು. ಪ್ರಾಯಶಃ ಅಸಾಮಾನ್ಯ ಜೀವಿಗಳು ಅಲ್ಲಿ ಜೀವಿಸುತ್ತಿರಬಹುದೆ?
ಇನ್ನೇನು ಕತ್ತಲಾಗುತ್ತ ಬಂತು. ಗಾಳಿ ಆದಾಗಲೇ ಶೀಲತವಾಗುತ್ತಲಿದ್ದು, ಕಣ್ಣಿಗೆ ಯಾರೂ ಕಾಣಿಸುತ್ತಲೂ ಇರಲಿಲ್ಲ, ಮಾನಾ ಹಳ್ಳಿಯವರೆಗಾದರೂ ನಡೆದುಹೋಗುವುದು ಅಂದುಕೊಂಡೆ. ಆ ರಾತ್ರಿ ತಂಗಲು ಸ್ಥಳ ಮತ್ತುಏನಾದರೊಂಚೂರು ಆಹಾರ ನೀಡಬಲ್ಲ ಯಾರನ್ನಾದರೂ ಹುಡುಕಬೇಕಿತ್ತು. ಶೋಧದಲ್ಲಿ ವಿಫಲನಾಗಿದ್ದೆ. ತಡೆಯಲಾರದ ಹಸಿವು, ಸಂದೇಹ, ಭಯ, ಹಸಿವೆ ಮತ್ತು ಹತಾಶೆ, 'ನಿಜವಾದ ಮಹಾತ್ಮರು ಕಲ್ಪನೆಯಲ್ಲಿ ಮಾತ್ರವೇ ಇರುತ್ತಾರಲ್ಲದೆ ವಾಸ್ತವದಲ್ಲಲ್ಲ. ಈ ರೀತಿ ಬದುಕುವುದಕ್ಕಿಂತ ಸಾಯುವುದು ಮೇಲು. ಅಲಕನಂದೆಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವೆ' - ತೀರ್ಮಾನಕ್ಕೆ ಬಂದೆ.
ಅಷ್ಟರಲ್ಲಾಗಲೇ ಸಂಪೂರ್ಣವಾಗಿ ಕತ್ತಲಾಗತೊಡಗಿ ಶೀತಗಾಳಿ ಸುಯ್ಯುತ್ತಲಿತ್ತು. ಪುನಃ ವ್ಯಾಸಗುಹೆಯ ಬಳಿ ಬಂದೆ. ಅಚ್ಚರಿಯೆ! ಗುಹೆಯ ಬಾಯಿಯ ಬಳಿ 'ಧುನಿ'ಯೊಂದು ಪ್ರಕಾಶಮಾನವಾಗಿ ಜ್ವಲಿಸುತ್ತಿರುವುದು ಕಂಡೆ. ಮರದ ತುಂಡುಗಳು ಗಳಗಳನೆ ಉರಿಯುವಂತೆ ಜ್ವಾಲೆ ನಲಿಯುತ್ತಲಿತ್ತು. ಆ ಕೊರೆಯುವ ಚಳಿಯಲ್ಲಿ ಬೆಂಕಿಯ ಶಾಖ ಕೈ ಬೀಸಿ ಕರೆಯಿತು. ಅಲ್ಲಿ ಯಾರು ಬೆಂಕಿ ಹಚ್ಚಿರಬಹುದೆಂದು ಅಚ್ಚರಿಪಡುತ್ತ ಅದರ ಬಳಿ ಸಾರಿದೆ. ಪ್ರಾಯಶಃ ಯಾವುದೋ ದನಗಾಹಿ? ಅಥವಾ ಕೊನೆಗೂ ಒಬ್ಬ ಯೋಗಿಯನ್ನು ನೋಡಲಿದ್ದೇನೆಯೆ?
ಗವಿಯೊಳಗಿಂದ ದನಿಯೊಂದು ಕೇಳಿಸಿತು. ಪರಿಚಿತವಲ್ಲವೇ ಅದು? ಆ ಧ್ವನಿ ನನ್ನ ಮನಸ್ಸಿನ ಗುಪ್ತ ತಳದಲ್ಲೆಲ್ಲೋ ವರ್ಷಾನುಗಟ್ಟಲೆಯಿಂದ ಹುದುಗಿಕೊಂಡಿದ್ದು ಈಗ ಕೇಳುತ್ತಿದೆಯೇ? ಸಣ್ಣಗೆ ನಡುಗುತ್ತ ಗವಿಯೆಡೆಗೆ ಲಗುಬಗೆಯಿಂದ ನಡೆದೆ. ಒಳಗಿನಿಂದ ನೀಳಗೂದಲು, ಬರಿಮೈಯಲ್ಲಿರುವ ಎತ್ತರ ನಿಲುವಿನ ವ್ಯಕ್ತಿಯೊಬ್ಬರು ಕಾಣಿಸಿಕೊಂಡರು. 'ಬಾ' ಎಂದು ಸ್ಪಷ್ಟ ಹಿಂದೂಸ್ತಾನಿಯಲ್ಲಿ ಕರೆದು, 'ಎಲ್ಲಿ ಅಲೆಯುತ್ತಿದ್ದೆ ಮಧು?' ಎಂದು ಕೇಳಿದರು.
'ಮಧು?' ಗತದಲ್ಲಿ ಮರೆತ ಯಾವುದೋ ಕನಸಿನಲ್ಲಿ ಈ ಹೆಸರನ್ನು ಕೇಳಿದ್ದೆನೇ? ಯಾರೀತ? 'ನಾನು ಮಧು ಅಲ್ಲ, ನನ್ನ ಹೆಸರು ಮು...'
'ಸಾಕು, ಸಾಕು, ಗೊತ್ತು ನನಗೆ. ವಾಂಚಿಯೂರಿನ ಹಲಸಿನ ಮರದಿಂದ ದೂರದ ಉತ್ತರದ ವ್ಯಾಸ ಗುಹೆಯವರೆಗೆ.
ಬಾ, ಇಲ್ಲಿ ಬೆಂಕಿಯ ಬಳಿ ಕುಳಿತುಕೋ, ಮೊದಲು ನಿನಗೇನಾದರೂ ತಿನ್ನಲು ಕೊಡುವೆ, ತಿಂದು ಮಲಕೋ, ನಾಳೆ ಮಾತನಾಡೋಣ'. ಅಪಾರ ಮಮತೆ ತುಂಬಿ ಬಲಗೈಯಿಂದ ನನ್ನ ಎಡ ಭುಜವನ್ನು ತಟ್ಟಿದರು. 'ಇಲ್ಲಿ ಕೂರು'.
ನನ್ನ ಒಂಬತ್ತನೆಯ ವಯಸ್ಸಿನಲ್ಲಿ ನಮ್ಮ ಮನೆಯ ಹಿತ್ತಲಲ್ಲಿದ್ದ ಹಲಸಿನ ಮರದ ಕೆಳಗೆ ನಾನು ಭೇಟೆ ಮಾಡಿದ್ದ ಮನುಷ್ಯ ಇವರೇ. ಹೌದು, ಖಂಡಿತ, ಧ್ವನಿ ಕೂಡ ಅದೇ. ನನ್ನ ಗುರು, ತಂದೆ, ತಾಯಿ, ಶಿಕ್ಷಕ ಎಲ್ಲವೂ ಒಬ್ಬರೇ, ಇವರೇ ಎಂದು ಆ ಗಳಿಗೆಯಲ್ಲಿ ನನ್ನ ಅರಿವಿಗೆ ಬಂತು. ಮುಂದಿನ ಮೂರೂವರೆ ವರ್ಷಗಳವರೆಗೆ ಅವರನ್ನು ಬಿಟ್ಟು ಅಗಲಲಿಲ್ಲ ನಾನು.
ಅವರು ಗವಿಯೊಳಗೆ ಹೋಗಿ ಕಮಂಡಲ ಹಿಡಿದು ಹೊರಬಂದರು. ಅದರೊಳಗೆ ಆಗಷ್ಟೆ ಮಾಡಿದಂಥ ಎರಡು ಗೋಧಿರೊಟ್ಟಿ ಮತ್ತು ಬಿಸಿಯಾದ ಆಲೂಗಡ್ಡೆ ಪಲ್ಯವಿತ್ತು. ನನ್ನ ಮುಂದಿಟ್ಟು 'ತಿನ್ನು' ಎಂದರು. ಬಾಕಿ ಅವರ ಪಾದಗಳಿಗೆ ನಮಸ್ಕರಿಸಿದೆ. 'ನಿಮ್ಮನ್ನು ಬಾಬಾಜಿ ಎಂದು ಕರೆಯುತ್ತೇನೆ' ಎಂದೆ. "ನನಗೆ ಬೇರಾವ ಬಾಬಾಜಿಯೂ ಗೊತ್ತಿಲ್ಲ. ನೀವೇ ನನ್ನ ಬಾಬಾ, ನನ್ನ ತಂದೆ, ಆಜೀವಪರ್ಯಂತ ನಿಮಗೆ ಋಣಿ ನಾನು. ಇನ್ನೇನು ನನ್ನ ತಾಳ್ಮೆ ಕುಸಿಯಿತು ಎಂಬಂಥ ಸಮಯದಲ್ಲಿ ನೀವು ಸಿಕ್ಕಿದಿರಿ' ಕಣ್ಣೀರು ಹರಿದು ದೃಷ್ಟಿ ಮಂಜಾಯಿತು.
'ಅದೆಲ್ಲ ಇರಲಿ, ಈಗ ಕೂತುಕೊಂಡು ತಿನ್ನು' ಎಂದರು ವಾತ್ಸಲ್ಯದಿಂದ.
ಅಲ್ಲಿ ಬೆಂಕಿಯ ಮುಂದೆ, ಸುತ್ತ ಹಿಮಾಲಯ ಶ್ರೇಣಿಯ ನಡುವೆ ನನ್ನ ಗುರುವಿನ ಅಕ್ಕರೆಯ ಕಣ್ತಂಪಿನಲ್ಲಿ ಕುಳಿತು ರೊಟ್ಟಿ ತಿನ್ನತೊಡಗಿದೆ. ಪುನಃ ಒಳಹೋಗಿ ಒಂದು ಜಿಲೇಬಿ ತಂದು, ನಾನು ರೊಟ್ಟಿ ಮುಗಿಸುವವರೆಗೆ ಅದನ್ನು ತಾನು ಹಿಡಿದುಕೊಂಡಿರುತ್ತೇನೆಂದರು. ಊಟದ ನಂತರ ಬಾಬಾಜಿ ನೀಡಿದ ಅಲಕನಂದನೆಯ ಶುದ್ಧ ಶುಭ್ರ ನೀರು ಕುಡಿದೆ. ನಿದ್ದೆ ತೂಗಲಾರಂಭಿಸಿತು. ಶತಮಾನಗಳಿಂದ ನಾನು ಮಲಗಿಯೇ ಇಲ್ಲವೇನೋ ಎಂಬಂತೆ ಅನಿಸುತ್ತಿತ್ತು.
ಬಾಬಾಜಿ ನನ್ನನ್ನು ಗವಿಯ ಒಳಗೆ ಕರೆದುಕೊಂಡು ಹೋದರು. ಒಣ ಎಲೆ ಹಾಗೂ ಪುರುಲೆಗಳ ಮೇಲೆ ರಗ್ಗೊಂದನ್ನು ಹಾಸಿ ನನಗಾಗಿ ಅವರೇ ತಯಾರಿಸಿದ್ದ ಹಾಸಿಗೆ ಬೆಂಕಿಯ ಮಂದ ಬೆಳಕಿನಲ್ಲಿ ಕಂಡಿತು. ಹಗುರಾದ ಗಾಳಿಯು ಬೆಂಕಿಯ ಕಾವನ್ನು ಗವಿಯೊಳಗೆ ಊದುತ್ತಿರುವಂತೆ ಅನಿಸಿತು. ಬಾಬಾಜಿ ನನ್ನನ್ನು ನೋಡಿಕೊಳ್ಳುತ್ತಾರೆ ಎಂಬ ಭದ್ರತೆಯ ಭಾವ ತುಂಬಿ ಕ್ಷಣಾರ್ಧದಲ್ಲಿ ನಿದ್ದೆಹೋದೆ. ಕಣ್ಣೆವೆಗಳು ಮುಚ್ಚುವ ಮುನ್ನ ಆಖೈರಾಗಿ ಕಂಡ, ನನ್ನ ಸ್ಮೃತಿಯಲ್ಲಿ ನಿಂತಿರುವ ಬಾಬಾಜಿಯ ಚಿತ್ರವೆಂದರೆ ಅಗ್ನಿಗೆ ಸಮ್ಮುಖವಾಗಿ, ಮಡಸಿದ ಒಂದು ರಗ್ಗಿನ ಮೇಲೆ ಅಲ್ಲಾಡದೆ, ಸ್ಥಿರವಾಗಿ ಪದ್ಮಾಸನದಲ್ಲಿ ಕುಳಿತ ಅವರ ಭಂಗಿ.
ಶ್ರೀ ಎಂ
ಅನು: ಡಾ. ನಯನಾ ಕಾಶ್ಯಪ್
magnetapress1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

