ಎಂಥ ದೊಡ್ಡ ಪಾತ್ರೆ ಇದುವೆ
ಏನು ಇದರ ಥಳುಕು
ಹಗಲಿನಲ್ಲಿ ರವಿಯು ಮತ್ತೆ
ಇರುಳು ಚಂದ್ರ ಬೆಳಕು॥
ಪಾತ್ರೆ ತುಂಬ ಹೊಳೆಯುತಿವೆ
ಝಗಮಗಿಸುವ ತಾರೆ
ಇರುಳು ಪೂರ್ತಿ ಮೆರೆಯುತಿವೆ
ಚಮಕಿಸುತಲಿ ಮೋರೆ॥
ಪಾತ್ರೆ ತುಂಬ ತೇಲುತಿವೆ
ಕರಿ-ಬಿಳಿಯ ಮೋಡ
ತಮ್ಮನಾರೋ ಹಿಡಿಯಬಹರು
ಎನ್ನುವಂತೆ ನೋಡ॥
ಪಾತ್ರೆ ತುಂಬಿ ನೀರು ಜಾರಿ
ಹನಿಗಳಾಗಿ ಇಳಿದು
ಭೂಮಿಯೆಲ್ಲ ನೆನೆಯುತಿಹದು
ಮಳೆ-ಬೆಳೆಯು ಬೆಳೆದು॥
ಹಕ್ಕಿ-ಪಕ್ಷಿ ವಿಮಾನಕ್ಕೆ
ಅಂಗಳವು ಎನಿಸಿ
ಅದರ ಚಂದ ಹಾರಾಟಕ್ಕೆ
ಕರೆಯುತಿಹುದು, ರಮಿಸಿ॥
= ಗುರುರಾಜ ಬೆಣಕಲ್