

ಜೀವನ ನಿರ್ವಹಣೆಗೆಂದೋ, ಕನಸು ಈಡೇರಲೆಂದೋ, ಇಲ್ಲಾ ತೀರಾ ಸ್ವಾಭಿಮಾನದ ಪ್ರಶ್ನೆ ಕಾಡಿ ಅಪ್ಪನ ಜೇಬಿಗೆ ಕತ್ತರಿ ಹಾಕಲಾರೆನೆಂಬ ಛಲ ಗರಿಗೆದರಿದಾಗ ವಿದ್ಯಾರ್ಥಿಗಳ ಮನಸು ಅರೆಕಾಲಿಕ ಉದ್ಯೋಗದೆಡೆಗೆ ವಾಲುವುದುಂಟು. ಈ ಹಂತದಲ್ಲಿ ಯಾವುದಾದರೂ ಸೈ ಉದ್ಯೋಗವೊಂದು ಸಿಕ್ಕರೆ ಸಾಕು. ಯಾವುದಾದರೂ ಕೋರ್ಸ್ ಆದರೂ ಸೈ, ಮುಂದೆ ನೋಡೋಣ ಎನ್ನುವ ಮನೋಭಾವಕ್ಕೆ ವಿದ್ಯಾರ್ಥಿಗಳು ಬೀಳುವುದುಂಟು. ಕಲಿತ ವಿದ್ಯೆ, ಶ್ರದ್ಧೆಯಿಂದ ಮಾಡಿದ ಯಾವುದೇ ಕೆಲಸ ವ್ಯರ್ಥವಲ್ಲ ಎಂಬುದು ನಿಜ.
ಆದರೂ ಇಂಥ ಪರಿಸ್ಥಿತಿಯಲ್ಲಿ ಭವಿಷ್ಯ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಸಿಕ್ಕಿದ ಕೆಲಸಕ್ಕೆ ಥಟ್ಟನೆ ಸೇರಿಕೊಂಡುಬಿಡುವುದು ಜಾಣತನ. ಹಾಗೆಂದು ಇದ್ದಬಿದ್ದ ಕೆಲಸಕ್ಕೆ ಹಾತೊರೆಯುವುದು ಮೂರ್ಖತನ. ಯಾವ ನೌಕರಿಗೆ ಸೇರಿದರೂ, ಯಾವ ಕೋರ್ಸ್ ತೆಗೆದುಕೊಂಡರೂ ನಿಭಾಯಿಸಬಲ್ಲೆನೆಂಬ ಆತ್ಮವಿಶ್ವಾಸ ಒಳ್ಳೆಯದೇ... ಆದರೆ, ಆ ಕೆಲಸ ಖುಷಿ ಕೊಡಬೇಕು. ಕಲಿತ ವಿದ್ಯೆ ಕೈ ಹಿಡಿದು ನಡೆಸಬೇಕು. ಇಲ್ಲವಾದಲ್ಲಿ ಎಲ್ಲಾ ಗಳಿಸಿಕೊಂಡ ಮೇಲೂ ಇನ್ನೇನನ್ನೋ ಕಳೆದುಕೊಂಡಂತೆ ಭಾಸವಾದೀತು. ನೀವು ಇಷ್ಟಪಟ್ಟು ಮಾಡುತ್ತಿರುವ ಉದ್ಯೋಗಕ್ಕೂ, ಆಸ್ಥೆಯಿಂದ ನಡೆಸುತ್ತಿರುವ ವಿದ್ಯಾಭ್ಯಾಸಕ್ಕೂ ಪರಸ್ಪರ ಸಂಬಂಧ ಇದೆಯೆಂದಾದಲ್ಲಿ ಭವಿಷ್ಯದ ಬುನಾದಿ ಭದ್ರವಾಯಿತೆಂದೇ ಅರ್ಥ.
ಆತ್ಮವಿಶ್ವಾಸ ವೃದ್ಧಿ
ಯಾವುದೇ ಕಂಪನಿ ಉದ್ಯೋಗ ನೀಡುವಾಗ ಆ ಕ್ಷೇತ್ರದಲ್ಲಿ ಅಭ್ಯರ್ಥಿಯ ಅನುಭವ, ಕೌಶಲವನ್ನು ತೂಗಿ ಅಳೆದು ನೋಡುತ್ತದೆ. ಎಲ್ಲವನ್ನೂ ಕಾಲೇಜಿನಲ್ಲಿ ಕಲಿಯಲಾಗುವುದಿಲ್ಲ. ಕಲಿಸಿ ಬೆಳೆಸುವಷ್ಟು ಸಮಯಾವಕಾಶ ಕಂಪನಿಗಳ ಬಳಿಯೂ ಇರುವುದಿಲ್ಲ. ಹೀಗಾಗಿ ಧುಮುಕಬೇಕೆಂದು ಅಂದುಕೊಂಡಿರುವ ಕ್ಷೇತ್ರದ ಕುರಿತು ವಿದ್ಯಾರ್ಥಿ ಜೀವನದಲ್ಲೇ ಆಸಕ್ತಿ ತೋರಿದಲ್ಲಿ ಅದರಿಂದಾಗುವ ಲಾಭ ಬಹಳ ದೊಡ್ಡದು. ಸಂದರ್ಶನದ ಸಮಯದಲ್ಲಿ ಉಳಿದ ಅಭ್ಯರ್ಥಿಗಳಿಗಿಂತಲೂ ನಿಮಗೆ ಹೆಚ್ಚಿನ ಆದ್ಯತೆ ಸಿಕ್ಕೇ ಸಿಗುತ್ತದೆ. ಉದ್ಯೋಗ ದೊರಕಿದಾಗ ಹೇಗೋ ಏನೋ ಎಂಬ ಆತಂಕ ಗೊಂದಲಗಳಿರದೆ, ಸಲೀಸಾಗಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಈ ಆತ್ಮವಿಶ್ವಾಸವೇ ಶೀಘ್ರ ಮುಂಬಡ್ತಿ, ವೇತನ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆಗಳು ಇಲ್ಲದಿಲ್ಲ.
ಕೆಲಸ ಖುಷಿ ಕೊಡಲಿ
ಪಾರ್ಟ್‌ಟೈಂ ಕೆಲಸದಿಂದ ಹಣ ಸಂಪಾದನೆ ಆಗಬಹುದು. ನಿಮ್ಮ ಅಗತ್ಯಗಳು ಈಡೇರಬಹುದು. ಆದರೆ, ಕೆಲಸ ಖುಷಿ ಕೊಡಬೇಕಾದ್ದು ಬಹಳ ಮುಖ್ಯ. ಇಲ್ಲವಾದಲ್ಲಿ ಓದು, ನೆಮ್ಮದಿ ಎರಡೂ ಹಾಳು.
ಸ್ಪಷ್ಟತೆ ಇರಲಿ
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದರೆ, ಅಕೌಂಟ್ಸ್‌ಗೆ ಸಂಬಂಧಪಟ್ಟ ಕೆಲಸ ಮಾಡಬಹುದು. ಅಧ್ಯಾಪನ ವೃತ್ತಿಗೆ ಸೇರಬೇಕೆಂಬ ಆಸಕ್ತಿ ಇದ್ದಲ್ಲಿ ಕೋಚಿಂಗ್ ಸೆಂಟರ್‌ಗಳಲ್ಲಿ ಪ್ರಯತ್ನ ನಡೆಸಬಹುದು. ಮಾಧ್ಯಮದಲ್ಲಿ ಮುಂದುವರಿಯಬೇಕೆಂಬ ಉತ್ಕಟ ಇಚ್ಛೆ ಇದ್ದಲ್ಲಿ ವಿದ್ಯಾಭ್ಯಾಸದೊಂದಿಗೆ ಪಾರ್ಟ್ ಟೈಂ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಹಲವು ಸಂದರ್ಭಗಳಲ್ಲಿ ಅಭ್ಯರ್ಥಿಯ ಅಂಕಪಟ್ಟಿಗಿಂತಲೂ ಆತನ ಪ್ರತಿಭೆ, ಕೌಶಲವೇ ಹಣೆಬರೆಹ ನಿರ್ಧರಿಸಿಬಿಡುತ್ತದೆ. <
ನಿಶ್ಚಿತ ಗುರಿಯಿದೆ
ಬೆಳಗ್ಗಿನಿಂದ ಸಂಜೆವರೆಗೆ ಖಾಸಗಿ ಪ್ರವಾಸೋದ್ಯಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಂಗಳೂರಿನ ಬೆಸೇಂಟ್ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದೇನೆ. ಮುಂದೆ ಟೂರಿಸಂ ಮ್ಯಾನೇಜ್‌ಮೆಂಟ್‌ನಲ್ಲಿ ಪಿ.ಜಿ. ಮಾಡಬೇಕೆಂಬ ಗುರಿ ಇದೆ. ಈಗಿರುವ ಉದ್ಯೋಗ ಎಲ್ಲಾ ರೀತಿಯಲ್ಲೂ ಅದಕ್ಕೆ ಪೂರಕವಾಗಿದೆ.
- ಹರ್ಷಿತ್, ವಿದ್ಯಾರ್ಥಿ
ಬದುಕು ರೂಪಿಸಿತು
ವಿದ್ಯಾಭ್ಯಾಸ ವೇಳೆ ಉದ್ಯೋಗ ಅನಿವಾರ್ಯವಾಗಿತ್ತು. ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದೆ. ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದೆ. ಅಂದಿನ ಅನುಭವಗಳೇ ನನ್ನ ಬದುಕನ್ನು ರೂಪಿಸಿವೆ ಎನ್ನಲಡ್ಡಿಯಿಲ್ಲ.
- ಸಂತೋಷ್ ಎಕ್ಕಾರು, ಉಪನ್ಯಾಸಕ
ಓದಿಗೆ ಅನುಕೂಲ ಆಯ್ತು
ಮಣಿಪಾಲದಲ್ಲಿ ಎಂಬಿಎ ಮಾಡುತ್ತಿದ್ದೇನೆ. ಎಂಬಿಎ ಅಂದಮೇಲೆ ಪ್ರತಿಸೆಮಿಸ್ಟರ್‌ನಲ್ಲೂ ಪುಸ್ತಕ, ಪ್ರಾಜೆಕ್ಟ್‌ಗಳಿಗಾಗಿ ಖರ್ಚು ತಪ್ಪಿದ್ದಲ್ಲ. ಆದ್ರೆ ಪ್ರತಿಯೊಂದಕ್ಕೂ ಮನೆಯವರನ್ನು ಹೇಗೆ ಕೇಳೋದು? ಹಾಗಾಗಿ ಇಂಟರ್‌ನ್ಯಾಷನಲ್ ಇಂಗ್ಲಿಷ್ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್‌ನಲ್ಲಿ ಪಾರ್ಟ್‌ಟೈಂ ಕೆಲಸಕ್ಕೆ ಸೇರಿದೆ. ಹಣವೂ ಸಿಕ್ತು, ಓದಿಗೂ ಅನುಕೂಲ ಆಯ್ತು.
- ಮನೀಷ್, ಎಂಬಿಎ ವಿದ್ಯಾರ್ಥಿ
- ಗಣೇಶ ಪ್ರಸಾದ್ ಕುಂಬ್ಳೆ