ಚಿಟ್ಟೆ ಮಾತ್ರ ಹಾರುತ್ತೆ
ಹುಳ ಯಾಕೆ ತೆವಳುತ್ತೆ
ಅದಕ್ಕೂನೂವೆ ರೆಕ್ಕೆ ಕೊಟ್ರೆ
ಹಾರಲ್ವೇನಮ್ಮ?
ಹೇಳೇ ನನ್ನಮ್ಮ
ತಾನನಾನ ನಾನನಾನ
ತಾನನಾನನ
ಜೋರಾಗಿ ಮಳೆ ಬಂದ್ರೆ
ಕೋತಿ ಎಲ್ಲಿ ಮಲಗುತ್ತೆ
ನಮ್ಮನೇಲೇ ಜಾಗ ಕೊಟ್ರೆ
ಇರಲ್ವೇನಮ್ಮ?
ಮುದ್ದು ನನ್ನಮ್ಮ ತಾನನಾನ
ತೆಂಗಿನ್ ಗಿಡ ನೆಟ್ಬಿಟ್ರೆ
ಅಷ್ಟೆತ್ರಾ ಬೆಳೆಯುತ್ತೆ
ಚಾಕೋಲೆಟ್ ಕೂಡಾ ಬಿತ್ತಿದ್ರೆ
ಮರ ಆಗುತ್ತೇನಮ್ಮ?
ನಿಜ ಹೇಳಮ್ಮ ತಾನನಾನ
ಕ್ರಿಮಿಕೀಟ ಹುಳು ಹುಪ್ಪಡಿ
ತಿನ್ನುತ್ತಂತೆ ಹಕ್ಕಿ
ಅನ್ನ ಉಣ್ಣೋದೆ ನಂಕಷ್ಟ
ಹೇಗೆ ತಿನ್ನುತ್ತಮ್ಮ?
ಜಾಣೆ ನನ್ನಮ್ಮ ತಾನನಾನ
ತಮ್ಮ ಯಾಕೆ ನನ್ನಂತಿಲ್ಲ
ಉದ್ದ ಜಡೆಯೂ ಇಲ್ಲ
ಬೋಳುಬಪ್ಪ ಇವನಮ್ಮ
ಇವ್ನನ್ನೆಲ್ಲಿಂದ ತಂದ್ಯಮ್ಮ?
ನೀನೇ ನನ್ನಮ್ಮ ತಾನನಾನ
ಇಷ್ಟೆಲ್ಲ ಓದ್ಕೊಂಡಿದ್ದಿ
ಹೊಡಿತೀ ಯಾಕೆ ನಂಗೆ
ಮಗುವಿನ ಮನಸು ಹಸಿಮಣ್ಣು
ಗೊತ್ತಿಲ್ಲೇನಮ್ಮ?
ದಡ್ಡಿ ನನ್ನಮ್ಮ ತಾನನಾನ
ಅಜ್ಜಿ ನೋಡು ಹೆಂಗಿದಾರೆ
ಬಿಳಿಕೂದ್ಲು ಹಲ್ಲಿಲ್ಲ
ನೀನು ಕೂಡಾ ಒಂದಿನ
ಅಜ್ಜಿ ಆಗ್ತೀಯೇನಮ್ಮ?
ಅಯ್ಯೋ ನನ್ನಮ್ಮ
ಹ್ಹ ಹ್ಹಾ ನನ್ನಮ್ಮ ತಾನನಾನ
- ವಿಜಯಶ್ರೀ ಹಾಲಾಡಿ