

ನಿಮ್ಮ ಸ್ನೇಹಿತ/ಸ್ನೇಹಿತೆ ಅಥವಾ ಕುಟುಂಬದ ಸದಸ್ಯರೊಬ್ಬರು ಉದ್ಯೋಗದ ಬೇಟೆಯಲ್ಲಿ ತೊಡಗಿದ್ದಾರೆ. ಅಂತಹ ಸಮಯದಲ್ಲಿ ನೀವು ಅವರಿಗೆ ನೆರವಾಗಬೇಕು. ಅಷ್ಟೇ ಅಲ್ಲ, ಅವರ ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು. ನಿರುದ್ಯೋಗಿ ಗೆಳೆಯ/ಗೆಳತಿಗೆ ನೀವೇನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪದೇ ಪದೆ ಪ್ರಶ್ನಿಸದಿರಿ
ಕೆಲಸ ದೊರೆಯಿತಾ? ಇಂಟರ್‌ವ್ಯೂಗೆ ಕರೆ ಬಂತಾ? ಮೊನ್ನೆ ತಾನೇ ಸಂದರ್ಶನ ಮಾಡಿದವರು ಮತ್ತೆ ಕಾಲ್ ಮಾಡಿದ್ರಾ? ಹೀಗೆ ಪದೇ ಪದೇ ಪ್ರಶ್ನಿಸದಿರಿ. ನೀವು ಇದನ್ನು ಆಸಕ್ತಿಯಿಂದ ಕೇಳುತ್ತಿರಬಹುದು. ಆದರೆ, ನಿಮ್ಮ ಪ್ರಶ್ನೆಗಳು ನಿರುದ್ಯೋಗಿ ಗೆಳೆಯ/ಗೆಳತಿಗೆ ಖಂಡಿತಾ ಕಿರಿಕಿರಿ, ಮುಜುಗರ ಉಂಟುಮಾಡುತ್ತದೆ. ಕೆಲಸ ಸಿಗುವಂತಹ ವಿಚಾರವಿದ್ದರೆ ಅವರು ಖಂಡಿತಾ ನಿಮಗೆ ತಿಳಿಸುತ್ತಾರೆ.
ಅನಗತ್ಯ ಸಲಹೆ ಬೇಡ
ನಿರಂತರವಾಗಿ ಎಲ್ಲರಿಂದ ಸಲಹೆಗಳನ್ನು ಪಡೆಯುವುದೇ ನಿರುದ್ಯೋಗಿಗಳಿಗೆ ಕಾಯಕವಾಗಿರುತ್ತದೆ. ಅದರಲ್ಲಿ ಹೆಚ್ಚಿನವು ಉಪಯೋಗಕ್ಕೆ ಬಾರದವುಗಳಾಗಿರುತ್ತವೆ. ನೀವು ಪ್ರಸ್ತುತ ಜಾಬ್ ಮಾರುಕಟ್ಟೆಯಲ್ಲಿಲ್ಲದಿದ್ದರೆ ಅಥವಾ ಆ ಬಗ್ಗೆ ಮಾಹಿತಿಯಿಲ್ಲದೇ ಸಲಹೆ ನೀಡಲು ಹೋಗದಿರಿ. ಏಕೆಂದರೆ, ಉದ್ಯೋಗ ಮಾರುಕಟ್ಟೆಯು ಬದಲಾಗುತ್ತಾ ಇರುತ್ತದೆ. ಆ ಬಗ್ಗೆ ಗೊತ್ತಿಲ್ಲದೇ ಮಾಹಿತಿ ನೀಡುವುದರಿಂದ ನೀವು ಅವರನ್ನು ದಾರಿ ತಪ್ಪಿಸಿದಂತಾಗುತ್ತದೆ.
ಕೋಪಗೊಳ್ಳದಿರಿ
ನೀವು ಸಲಹೆ ನೀಡಿದ್ದನ್ನು ಆಕೆ/ಆತ ಈಗಾಗಲೇ ಪ್ರಯತ್ನಿಸಿರಬಹುದು ಅಥವಾ ಅದು ಅವರಿಗೆ ಸರಿಹೊಂದದೇ ಇರಬಹುದು. ನಿಮಗೆ ಗೊತ್ತಿರುವ ಉದ್ಯೋಗಾವಕಾಶದ ಬಗ್ಗೆ ಅವರಿಗೆ ತಿಳಿಸಿ. ಆದರೆ, ನಾನು ಹೇಳಿದ ಕೆಲಸಕ್ಕೆ ಅಪ್ಲೈ ಮಾಡಿದ್ದೀಯಾ? ಎಂದು ಆಗಾಗ್ಗೆ ಕೇಳಬೇಡಿ. ನಿಮ್ಮ ಸಲಹೆಯನ್ನು ಆಕೆ/ಆತ ಕೇಳಲಿಲ್ಲವೆಂದು ಕೋಪಗೊಳ್ಳುವುದೂ ತರವಲ್ಲ. ಅವರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಅವರು ಶಕ್ತರು ಎಂಬುದು ಗೊತ್ತಿರಲಿ.
ಪ್ರಯತ್ನ ಮುಂದುವರಿಸಿ
ನಿಮ್ಮ ನಿರುದ್ಯೋಗಿ ಗೆಳೆಯ/ಗೆಳತಿಗೆ ಉದ್ಯೋಗ ಕಲ್ಪಿಸಿಕೊಡುವ ಪ್ರಯತ್ನ ಮುಂದುವರಿಸಿ. ಅವರ ರೆಸ್ಯೂಮೆಯನ್ನು ನಿಮ್ಮ ಪರಿಚಿತರೊಂದಿಗೆ ಹಂಚಿಕೊಳ್ಳಿ. ಆಕೆ/ಆತನಿಗೆ ನೆರವಾಗಬಲ್ಲಂತಹ ಸ್ನೇಹಿತ ನಿಮ್ಮ ಗುಂಪಿನಲ್ಲಿದ್ದಾರೆಯೇ ಎಂಬ ಬಗ್ಗೆ ಯೋಚಿಸಿ. ವೈಯಕ್ತಿಕ ಸಂಪರ್ಕದಿಂದಲೇ ಅನೇಕ ಮಂದಿಗೆ ಉದ್ಯೋಗ ದೊರೆತಿವೆ. ಹಾಗಾಗಿ ನಿಮ್ಮಿಂದ ಸಾಧ್ಯವಿಲ್ಲ ಎಂದು ಭಾವಿಸದಿರಿ. ಗೆಳೆಯರಿಗಾಗಿ ನೀವು ಸಾಕಷ್ಟು ಸಹಾಯ ಮಾಡಬಹುದು.
ಸಂಪರ್ಕ ಕಲ್ಪಿಸಿ
ನಿಮ್ಮ ಗೆಳೆಯ/ಗೆಳತಿಗೆ ಹೊರಗಿನ ಜನರಲ್ಲಿ ಬೆರೆತು ಹೆಚ್ಚಿನ ಅನುಭವವಿರುವುದಿಲ್ಲ. ಅವರನ್ನು ಹೊರಗೆ ಕರೆದುಕೊಂಡು ಹೋಗಿ, ನಿಮ್ಮ ಇತರ ಸ್ನೇಹಿತರನ್ನು ಪರಿಚಯಿಸಿ. ಅವರ ಭೇಟಿಯ ಮೂಲಕ ಉದ್ಯೋಗ ಸಿಗುವ ಸಾಧ್ಯತೆಯೂ ಇರುತ್ತದೆ. ಮತ್ತೊಂದು ವಿಷಯ ನೆನಪಿಡಿ, ಕೆಲಸಕ್ಕೆ ಹೋಗುವುದಕ್ಕಿಂತ ಸುತ್ತಾಡುತ್ತಾ, ಟಿವಿ ನೋಡುತ್ತಾ ಮಜಾ ಅನುಭವಿಸುವುದರಲ್ಲೇ ಖುಷಿ ಇದೆ ಎಂದೆಲ್ಲಾ ನಿಮ್ಮ ನಿರುದ್ಯೋಗಿ ಗೆಳೆಯರಲ್ಲಿ ಹೇಳದಿರಿ. ಅವರು ತುಂಬಾ ನೊಂದಿರುತ್ತಾರೆ. ನಿಮ್ಮ ಇಂತಹ ಮಾತುಗಳು ಅವರನ್ನು ಇನ್ನಷ್ಟು ನೋಯಿಸಬಹುದು.
ಸುಖಾಸುಮ್ಮನೆ ತೆಗಳದಿರಿ
ಕೆಲಸ ಸಿಕ್ಕಿಲ್ಲ ಎಂದು ಗೆಳೆಯರನ್ನು ತೆಗಳದಿರಿ. ನೀನು ಸರಿಯಾಗಿ ಪ್ರಯತ್ನ ಪಟ್ಟಿಲ್ಲ. ಹಾಗಾಗಿ ಉದ್ಯೋಗ ದೊರಕುತ್ತಿಲ್ಲ ಎನ್ನದಿರಿ. ಏಕೆಂದರೆ, ನೀವು ಹೇಳಿದ್ದಕ್ಕಿಂತಲೂ ಹೆಚ್ಚು ಪರಿಶ್ರಮವನ್ನು ಅವರು ಹಾಕಿರಬಹುದು. ಕೆಲಸ ಸಿಗಲು ಕೆಲವೊಮ್ಮೆ ತಿಂಗಳುಗಳು, ವರ್ಷಗಳೇ ಕಳೆಯಬಹುದು. ಅವರ ಉತ್ಸಾಹ ಕುಂದಿಸುವುದು ಬೇಡ.