ಮಳೆಗಾಲ ಬಂದು ಬಾಗಿಲು ತಟ್ಟಿತು!

ಸ್ವಾತಿ ಮುತ್ತಿನ ಮಳೆ ಹನಿಯೇ... ಮೆಲ್ಲ ಮೆಲ್ಲನೆ ಧರೆಗಿಳಿಯೇ... ಎಂದು ಗುನುಗುತ್ತ ಯಾವುದೋ ಲಹರಿಯಲ್ಲಿ ಕ್ಲಾಸಿನಿಂದ ಹೊರಬರುತ್ತಿದ್ದೆ. ಅಷ್ಟರಲ್ಲಾಗಲೇ ನನ್ನ ಹಾಡು ...
ಮಳೆಗಾಲ ಬಂದು ಬಾಗಿಲು ತಟ್ಟಿತು!
Updated on: 

ಸ್ವಾತಿ ಮುತ್ತಿನ ಮಳೆ ಹನಿಯೇ... ಮೆಲ್ಲ ಮೆಲ್ಲನೆ ಧರೆಗಿಳಿಯೇ... ಎಂದು ಗುನುಗುತ್ತ ಯಾವುದೋ ಲಹರಿಯಲ್ಲಿ ಕ್ಲಾಸಿನಿಂದ ಹೊರಬರುತ್ತಿದ್ದೆ. ಅಷ್ಟರಲ್ಲಾಗಲೇ ನನ್ನ ಹಾಡು ಕೇಳಿಸಿಕೊಂಡವನಂತೆ ಮಳೆರಾಯ ಮುಗಿಲ ಮನೆಯಿಂದ ನೀರ ಮುತ್ತುಗಳನ್ನು ಧರೆಗೆ ಚಿಮುಕಿಸಲು ಆರಂಭಿಸಿದ. ಆಗಲೇ ನನ್ನ ಬಣ್ಣದ ಕೊಡೆ ಮನೆಯಲ್ಲೇ ಬಿಟ್ಟು ಬಂದಿದ್ದು ನೆನಪಾದದ್ದು. ಆದರೆ, ಯಾಕೋ ಬೇಸರವೇನೂ ಆಗಲಿಲ್ಲ. ಜಿಟಿ ಜಿಟಿ ಮಳೆಯ ನಡುವೆಯೇ ಮುಂದಡಿ ಇಟ್ಟೆ. ಯಾವುದೋ ಖುಷಿಯ ಲಹರಿಯಲ್ಲಿ ಮೈ, ಮನ ತೊಯ್ದು ಬಿಟ್ಟೆ.
ಮಳೆಯೆಂದರೆ, ಮಳೆಯಲ್ಲಿ ನೆನೆಯುವುದೆಂದರೆ ನನ್ನ ಪಾಲಿಗದು ಯಾವತ್ತೂ ಖುಷಿಯ ವಿಚಾರ. ಬಾನಿನಿಂದ ಭುವಿಗೆ ಮುತ್ತುಗಳ ಸಾಲು ಜೋಡಿಸುವ ಮಳೆಗಾಲವೆನ್ನುವ ಈ ಪ್ರಕೃತಿಯ ವೈಶಿಷ್ಟ್ಯ ನನ್ನ ಪಾಲಿಗೆ ಅನನ್ಯ. ಮಾಯದಂಥ ಮಳೆಯಲ್ಲಿ ಎಷ್ಟೋ ಬಾರಿ ನನಗರಿವಿಲ್ಲದೆಯೇ ಮಗುವಾಗಿ ಬಿಡುತ್ತೇನೆ. ಒಬ್ಬಳೇ ಇದ್ದಾಗ ನೆನಪುಗಳ ಹಾಯಿದೋಣಿ ಮಾಡಿಕೊಂಡು ಎಲ್ಲೆಲ್ಲೋ ಸಾಗುತ್ತಿರುತ್ತೇನೆ.
ಬೇಸಿಗೆಯಲ್ಲಿ ಒಣಹಾಕಿದ ಅಮ್ಮನ ಕೈಯಲ್ಲರಳುವ ಹಪ್ಪಳ, ಸಂಡಿಗೆ, ಚಿಪ್ಸ್‌ಗಳೆಲ್ಲ ಡಬ್ಬಿ ಸೇರುವುದು ಮೊದಲ ಮಳೆಯ ಸೂಚನೆ ಸಿಕ್ಕಾಗಲೇ. ಮಳೆಯ ಭೋರ್ಗರೆತ ಜೋರಾದಾಗ ಅವು ಬಾಣಲೆಗೆ ಅಲ್ಲಿಂದ ನಮ್ಮ ತಟ್ಟೆಗೆ ಬಂದು ಬೀಳುತ್ತವೆ. ಸುರಿವ ಮಳೆ ನೋಡುತ್ತ, ಹಲಸಿನ ಹಪ್ಪಳವೋ, ಚಿಪ್ಸನ್ನೋ ಬಾಯಿಗಿಟ್ಟುಕೊಂಡು ಕಾಫಿ ಹೀರುವುದಿದೆಯಲ್ಲ ಅದಕ್ಕಿಂತ ಸುಂದರ ಗಳಿಗೆ ಮತ್ತೊಂದಿಲ್ಲ.
ಮಳೆಗಾಲ ಅಂದಾಕ್ಷಣ ನನಗೆ ತಕ್ಷಣಕ್ಕೆ ನೆನಪಾಗುವುದು ರಾಷ್ಟ್ರಕವಿ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿ. ಬಹುಷಃ ಮಳೆಯ ಅನುಭವವನ್ನು ಇದಕ್ಕಿಂತ ಉತ್ತಮವಾಗಿ ಕಟ್ಟಿಕೊಡಲು ಬೇರಿನ್ಯಾರಿಂದಲೂ ಸಾಧ್ಯವಿಲ್ಲವೇನೋ? ಮಳೆ ಸುರಿಯುವ ಪರಿ, ಅದರಿಂದ ಉಳಿದ ಜೀವ ಜಾಲಗಳ ಮೇಲಾಗುವ ಪರಿಣಾಮ, ಎಲೆಗಳಿಂದ ನೀರು ತೊಟ್ಟಿಕ್ಕುವ ಬಗೆ, ಮಣ್ಣಿನ ಕಂಪು ಪಸರಿಸುವ ವಿಧ... ಹೀಗೆ ಮಳೆಗಾಲ ಧುತ್ತನೆ ಕಣ್ಣೆದುರು ಬಂದು ನಿಲ್ಲುವಂತೆ ಆ ಸಮಯದ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ ಕುವೆಂಪು. ಈ ಮಾಯದಂಥ ಮಳೆಯನ್ನು ಕಂಡರೆ ಮುಖ ಸಿಂಡರಿಸುವವರು ಅನೇಕರಿದ್ದಾರೆ. ಆದರೆ, ನನಗಂತೂ ಮಳೆಯೆನ್ನುವುದು, ಜಿಟಿಜಿಟಿ ಮಳೆಯಲ್ಲಿ ನೆನೆಯುವುದೆಂದರೆ ಅದು ಅಮೃತಗಳಿಗೆ.

- ಶ್ರೀಗೌರಿ ಎಸ್. ಜೋಶಿ,
ಪತ್ರಿಕೋದ್ಯಮ ವಿಭಾಗ, ಆಳ್ವಾಸ್ ಕಾಲೇಜು, ಮೂಡುಬಿದಿರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com