ಭಾರತದ ರಾಷ್ಟ್ರೀಯ ಪಕ್ಷಿ ನವಿಲು. ಇದು ಫಾಸಿನಿಡೆ ಕುಟುಂಬಕ್ಕೆ ಸೇರಿದ್ದು. ಭಾರತದ ಆಗ್ನೇಯ ಏಷಿಯಾದ ಕಾಡುಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಗಂಡು ನವಿಲು ಕಾಮನಬಿಲ್ಲಿನ ಬಣ್ಣಗಳಂತೆ ಆಕರ್ಷಕ ಗರಿಗಳನ್ನು ಹೊಂದಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ನೃತ್ಯ ಮಾಡುತ್ತದೆ. ಹೆಣ್ಣು ನವಿಲು ಮಸುಕಾದ ಹಸಿರು, ಬೂದು ಮತ್ತು ಕಂದುಬಣ್ಣ ಮಿಶ್ರಿತ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಆದರೆ ಗಂಡು ಮತ್ತು ಹೆಣ್ಣು ನವಿಲುಗಳೆರಡೂ ತಮ್ಮ ತಲೆಯ ಮೇಲೆ ಮುಕುಟವನ್ನು ಹೊಂದಿರುತ್ತವೆ. ಈ ಮುಕುಟವನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತವೆ. ಭಾರತೀಯ ನವಿಲುಗಳು ಮುಖ್ಯವಾಗಿ ಹೊಳಪಿನ ನೀಲಿ ಬಣ್ಣದ ಗರಿಗಳನ್ನು ಹೊಂದಿರುತ್ತವೆ. ಅಲ್ಲದೇ ಗರಿಗಳು ತುದಿಯಲ್ಲಿ ಡೊಂಕಾಗಿ ತಂತಿಯಾಕಾರದಲ್ಲಿರುತ್ತವೆ. ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತವೆ.
ನವಿಲುಗಳು ಹೆಚ್ಚಾಗಿ ಪರ್ಣಪಾತಿ ಕಾಡುಗಳು, ಕುರುಚಲು ಕಾಡು, ಮೈದಾನ ಪ್ರದೇಶಗಳಲ್ಲಿ ಕಂಡುಬರುತ್ತವೆ. ನೆಲ ಹಾಗೂ ಮರಗಳ ಮೇಲೆ ವಾಸಿಸುತ್ತವೆ. ನೆಲಮಟ್ಟದ ಪೊದೆಗಳಲ್ಲಿ ಗೂಡುಕಟ್ಟುತ್ತವೆ.
ಇವುಗಳ ಸಂತಾನೋತ್ಪತ್ತಿ ಸಮಯ ಜನವರಿಯಿಂದ ಅಕ್ಟೋಬರ್ ನಡುವೆ. ಒಮ್ಮೆ 4ರಿಂದ 7 ಕೆನೆಬಣ್ಣದ ಮೊಟ್ಟೆಗಳನ್ನಿಡುತ್ತವೆ. ಸುಮಾರು 29 ದಿನ ಕಾವು ಕೊಟ್ಟು ಮರಿ ಮಾಡುತ್ತವೆ.