

ಹತ್ತು ಹುದ್ದೆಗಳಿಗೆ ಸಾವಿರಾರು ಅರ್ಜಿಗಳು... ಅವುಗಳನ್ನು ಒಂದೊಂದಾಗಿ ಪರಿಶೀಲಿಸುತ್ತಾ, ಯಾವುದು ಉತ್ತಮ, ಯಾರು ಹಿತವರು ಎಂಬುದನ್ನು ಹುಡುಕುತ್ತಾ ಕೂರುವ ಕಾಲ ಮುಗೀತು. ಈಗ ಏನಿದ್ದರೂ ಸಾಮಾಜಿಕ ತಾಣಗಳ ಭರಾಟೆ. ಅನೇಕ ಸಂಸ್ಥೆಗಳು ತಮಗೆ ಬೇಕಾದ ನೌಕರನನ್ನು ಇಂಥ ಜಾಲತಾಣಗಳಲ್ಲಿ ಜಾಲಾಡಿ ಹುಡುಕಿ ತೆಗೆಯುವುದುಂಟು.
ನೀವು ಈಗಷ್ಟೇ ಕಾಲೇಜು ಮುಗಿಸಿ ಉದ್ಯೋಗದ ಬೇಟೆಯಲ್ಲಿದ್ದೀರೇನು? ಹಾಗಾದರೆ ನಿಮಗೆ ಲಿಂಕ್ಡ್‌ಇನ್‌ನಂಥ ತಾಣಗಳು ನಿಜಕ್ಕೂ ಮರಳುಭೂಮಿಯಲ್ಲಿ ಓಯಸಿಸ್ ಇದ್ದಂತೆ. ಅದರಲ್ಲಿ ಸಿವಿ ಅಪ್‌ಡೇಟ್ ಮಾಡಿದರೆ ಮುಗೀತು. ನಿಮ್ಮ ವೃತ್ತಿಪರ ಅನುಭವ, ಹಿತಾಸಕ್ತಿಗಳು, ಸಾಮರ್ಥ್ಯಗಳಿಗೆ ಹಿಡಿದ ಕನ್ನಡಿಯಂತೆ ಲಿಂಕ್ಡ್‌ಇನ್ ಪ್ರೊಫೈಲ್ ಕೆಲಸ ಮಾಡುತ್ತದೆ. ನಿಮಗಾಗಿ ಸರ್ಚ್ ಮಾಡುವ ವ್ಯಕ್ತಿಗಳಿಗೆ ಈ ಪ್ರೊಫೈಲ್ ಆಕರ್ಷಕವಾಗಿ ಕಂಡರೆ ನಿಮ್ಮ ಪ್ರಯತ್ನ ಫಲ ಕೊಟ್ಟಂತೆ. ಉದ್ಯೋಗದ ಮಾರುಕಟ್ಟೆಯಲ್ಲಿ ನೀವು ಸೇಲ್ ಆಗಬೇಕೆಂದರೆ ಬಲಿಷ್ಠ ಪ್ರೊಫೈಲ್ ಹೊಂದಿರಬೇಕಾಗುತ್ತದೆ. ಅಂಥ ಪ್ರೊಫೈಲ್ ಹೊಂದುವುದು ಹೇಗೆ ಗೊತ್ತೇ?
ಆಕರ್ಷಕ ಶೀರ್ಷಿಕೆ
ಪ್ರೊಫೈಲ್‌ನ ಶೀರ್ಷಿಕೆ ಡಲ್ ಆದರೆ, ಮುಂದಿನದನ್ನು ಓದುವ ಮನಸ್ಸು ಯಾರಿಗೂ ಬರುವುದಿಲ್ಲ. ನಿಮ್ಮ ಸಿವಿಯನ್ನು ಇತರರು ಓದಬೇಕೆಂದರೆ, ಕ್ರಿಯಾಶೀಲವಾದ ತಲೆಬರಹ ನೀಡಿ. ನಿಮ್ಮ ಪ್ರೊಫೆಷನಲ್ ಬ್ರ್ಯಾಂಡ್‌ನ ಘೋಷವಾಕ್ಯದಂತಿರಲಿ ಪ್ರೊಫೈಲ್ ಶೀರ್ಷಿಕೆ. ಇತರರ ಪ್ರೊಫೈಲ್‌ಗಳನ್ನು ಓದುವ ಮೂಲಕ ಕೆಲವೊಂದು ಐಡಿಯಾಗಳನ್ನು ಪಡೆದುಕೊಳ್ಳಿ. ಆದರೆ, ಅದನ್ನೇ ಕಾಪಿ, ಪೇಸ್ಟ್ ಮಾಡುವುದು ಮಾತ್ರ ಬೇಡ.
ಸೂಕ್ತ ಭಾವಚಿತ್ರ
ವೃತ್ತಿಪರ, ಉತ್ತಮ ಗುಣಮಟ್ಟದ ಫೋಟೋವನ್ನು ಅಪ್‌ಲೋಡ್ ಮಾಡಿ. ಪಾರ್ಟಿ ಫೋಟೋಗಳು, ನಿಮ್ಮ ಕಾರ್ಟೂನ್ ಅವತಾರಗಳು, ಮುದ್ದಿನ ನಾಯಿಮರಿಯೊಂದಿಗೆ ತೆಗೆಸಿದ ಛಾಯಾಚಿತ್ರಗಳನ್ನೆಲ್ಲ ಹಾಕಲು ಹೋಗಬೇಡಿ. ಲಿಂಕ್ಡ್‌ಇನ್‌ನ ವೃತ್ತಿಪರ ವಾತಾವರಣದಲ್ಲಿ ಇಂಥ ಫೋಟೋಗಳು ಮ್ಯಾಚ್ ಆಗದು.
ಶಿಕ್ಷಣದ ಮಾಹಿತಿ
ನೀವು ಕಲಿತ ಎಲ್ಲ ಶಾಲೆಗಳ ಬಗೆಗಿನ ಮಾಹಿತಿಯನ್ನು ಒದಗಿಸಲು ಮರೆಯದಿರಿ. ನಿಮ್ಮ ಚಟುವಟಿಕೆಗಳ ಹೈಲೈಟ್ಸ್‌ಗಳನ್ನು ಉಲ್ಲೇಖಿಸಿ. ವಿದೇಶಕ್ಕೆ ಹೋಗಿ ಏನಾದರೂ ತರಬೇತಿ ಪಡೆದಿದ್ದರೆ, ರಜಾ ಅವಧಿಯಲ್ಲಿ ಯಾವುದಾದರೂ ಸಂಸ್ಥೆಗಳಿಗೆ ಹಾಜರಾಗಿದ್ದರೆ ಅವುಗಳನ್ನೂ ತಿಳಿಸಿ. ಅಷ್ಟೇ ಅಲ್ಲ, ನಿಮಗೆ ದೊರೆತ ಪ್ರಶಸ್ತಿ, ಬಹುಮಾನಗಳ ಪ್ರದರ್ಶನಕ್ಕೆ ಲಿಂಕ್ಡ್‌ಇನ್ ಪ್ರೊಫೈಲ್ ಅತ್ಯುತ್ತಮ ವೇದಿಕೆ.
ಸಮ್ಮರಿ ಸ್ಟೇಟ್‌ಮೆಂಟ್
ಅತ್ಯುತ್ತಮವಾದ ಹಾಗೂ ವೃತ್ತಿಪರವಾದ ಸಮ್ಮರಿ ಸ್ಟೇಟ್‌ಮೆಂಟ್ ನೀಡಿ. ನಿಮ್ಮ ಗುರಿ ಹಾಗೂ ಶಿಕ್ಷಣದ ಬಗ್ಗೆ ಸಂಕ್ಷಿಪ್ತವಾಗಿ ಮತ್ತು ಆತ್ಮವಿಶ್ವಾಸದಿಂದ ಹೇಳಿಕೊಳ್ಳುವ ಹೇಳಿಕೆಯಿದು. ಅದರಲ್ಲಿ ನಿಮ್ಮ ಇಂಟರ್ನ್‌ಶಿಪ್, ಸ್ವಯಂಸೇವಾ ಕಾರ್ಯಗಳು, ಪಠ್ಯೇತರ ಚಟುವಟಿಕೆಗಳ ವಿವರವನ್ನೂ ಸೇರಿಸಿ. ಈ ವಿವರಗಳನ್ನೆಲ್ಲ ಉದ್ದಕ್ಕೆ ಬರೆದುಕೊಂಡು ಹೋಗುವ ಬದಲು ಬುಲೆಟ್ ಪಾಯಿಂಟ್ ಹಾಕಿ ಬರೆಯಿರಿ. ಆಗ ಓದಲೂ ಸುಲಭ. ನೋಡಲೂ ಚೊಕ್ಕವಾಗಿರುತ್ತದೆ.
ಗ್ರೂಪ್ ಜತೆ ಸಂಪರ್ಕ
ಲಿಂಕ್ಡ್‌ಇನ್‌ನ ಸಮಾನಮನಸ್ಕ ಗ್ರೂಪ್ ಜತೆಗೆ ಸಂಪರ್ಕ ಸಾಧಿಸಿ. ಈ ಮೂಲಕ ನಿಮಗೆ ಜನರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವ ಹಂಬಲವಿದೆ ಎಂಬುದನ್ನು ತೋರಿಸಿ. ವಿದ್ಯಾರ್ಥಿಗಳು ಹೆಚ್ಚಾಗಿ ತಾವು ಸೇರಬಯಸುವ ಇಂಡಸ್ಟ್ರಿ ಗ್ರೂಪ್‌ಗಳೊಂದಿಗೆ ಸಂಪರ್ಕ ಬೆಳೆಸುತ್ತಾರೆ.
ವಿಶಿಷ್ಟ ಯುಆರ್‌ಎಲ್
ಸರ್ಚ್ ಎಂಜಿನ್‌ನಲ್ಲಿ ಯಾರಾದರೂ ನಿಮ್ಮ ಹೆಸರು ಬರೆದ ತಕ್ಷಣ ನಿಮ್ಮ ಪ್ರೊಫೆಷನಲ್ ರಿಸಲ್ಟ್ ಕಾಣಿಸಿಕೊಳ್ಳಬೇಕೆಂದರೆ, ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಅನ್ನು 'ಪಬ್ಲಿಕ್' ಎಂದು ಸೆಟ್ ಮಾಡಿ. ನಿಮ್ಮದೇ ಹೆಸರಿನ ಯುಆರ್‌ಎಲ್ ಅನ್ನೂ ನಿರ್ಮಿಸಿ. ಉದಾ: 'www.linkedin.com/in/ನಿಮ್ಮ ಹೆಸರು'.
ಕೆಲಸ ಶೇರ್ ಮಾಡಿ
ಯುಆರ್‌ಎಲ್ ಅನ್ನು ನಮೂದಿಸುವ ಮೂಲಕ ಅಥವಾ ಲಿಂಕ್ಡ್‌ಇನ್ ಅಪ್ಲಿಕೇಷನ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಬರಹಗಳು, ವಿನ್ಯಾಸಗಳು ಅಥವಾ ಇತರೆ ಸಾಧನೆಗಳನ್ನು ಇತರರು ನೋಡುವಂತೆ ಮಾಡಿ. ಪ್ರೊಫೈಲ್‌ನಲ್ಲಿ ಯುಆರ್‌ಎಲ್ ಸೇರಿಸುವುದರಿಂದ, ನೀವು ಜನರನ್ನು ನೇರವಾಗಿ ನಿಮ್ಮ ವೈಬ್‌ಸೈಟ್, ಬ್ಲಾಗ್ ಅಥವಾ ಟ್ವಿಟರ್ ಫೀಡ್‌ನತ್ತ ಮುಖ ಮಾಡುವಂತೆ ಪ್ರೇರೇಪಿಸಬಹುದು. ಅಪ್ಲಿಕೇಷನ್ ಮೂಲಕ ನಿಮ್ಮ ಡಿಜಿಟಲ್ ಪೋರ್ಟ್‌ಫೋಲಿಯೋ, ಗೂಗಲ್ ದಾಖಲೆಗಳು, ಪವರ್‌ಪಾಯಿಂಟ್ ಪ್ರೆಸೆಂಟೇಷನ್‌ಗಳನ್ನು ಶೇರ್ ಮಾಡಿಕೊಳ್ಳಬಹುದು.
ಅಪ್‌ಡೇಟ್ ಮಾಡುತ್ತಿರಿ...
ನಿಮ್ಮ ಪ್ರೊಫೆಷನಲ್ ಇಮೇಜ್ ಹೆಚ್ಚಿಸಿಕೊಳ್ಳಬೇಕೆಂದರೆ, ವಾರಕ್ಕೊಮ್ಮೆಯಾದರೂ ಸಿವಿಯನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿರಿ. ಒಮ್ಮೆ ಅಪ್‌ಲೋಡ್ ಮಾಡಿ ನಂತರ ಆ ಕಡೆ ಮುಖ ಹಾಕದೇ ಮಲಗಿದರೆ ನಿಮಗೇ ನಷ್ಟ. ನೀವು ಭಾಗವಹಿಸುತ್ತಿರುವ ಕಾರ್ಯಕ್ರಮಗಳು, ಪೂರ್ಣಗೊಳಿಸಿದ ಪ್ರಮುಖ ಪ್ರಾಜೆಕ್ಟ್‌ಗಳು, ಓದುತ್ತಿರುವ ವೃತ್ತಿಪರ ಪುಸ್ತಕಗಳ ಬಗ್ಗೆ ಲಿಂಕ್ಡ್‌ಇನ್ ಗೆಳೆಯರಿಗೆ ಮಾಹಿತಿ ನೀಡುತ್ತಿರಿ. ಆಗ ಇತರರು ನಿಮ್ಮತ್ತ ಆಕರ್ಷಿತರಾಗುತ್ತಾರೆ.
- ದಿಯಾ