ಯುವಜನ/ಮಕ್ಕಳು

ಹಾಸ್ಟೆಲ್ ದಾರಿಯಲ್ಲಿ ಸಿಕ್ಕ ನೋಟುಗಳು...

ಹಾಸ್ಟೆಲ್ ದಾರಿಯಲ್ಲಿ ಸಿಕ್ಕ ನೋಟುಗಳು...
Published On :

ಆ ದಿನ ನನ್ನ ಪತ್ರಿಕೋದ್ಯಮದ ನಾಲ್ಕನೇ ಸೆಮಿಸ್ಟರ್‌ನ ಮೊದಲ ದಿನ. ತರಗತಿಗಳೆಲ್ಲ ಮುಗಿದ ಮೇಲೆ ಗೆಳೆಯರೆಲ್ಲರೂ ಕ್ಯಾಂಪಸ್‌ನಲ್ಲಿ ಸೇರಿದೆವು. ಹೇಳಿ ಕೇಳಿ ಚಳಿಗಾಲ... ಒಂದು ಲೋಟ ಚಹಾ ಹೀರಬೇಕೆನಿಸಿತು. ಚಹಾ ಕುಡಿದ ಬಳಿಕ ಒಂದಷ್ಟತ್ತು ಹೊತ್ತು ಹರಟೆ ಹೊಡೆದ ಗೆಳೆಯರು ನಂತರ ಅವರವರ ಮನೆಯತ್ತ ಹೆಜ್ಜೆ ಹಾಕಿದರು. ನಾನು ಹಾಸ್ಟೆಲ್‌ನತ್ತ ಹೊರಟೆ... ನೂರು ಹೆಜ್ಜೆ ಇಟ್ಟಿದ್ದೆನೋ ಇಲ್ವೋ ದಾರಿ ಮಧ್ಯೆ ನೂರು ರುಪಾಯಿಯ ಮೂರು ನೋಟು ಅನಾಥವಾಗಿ ಬಿದ್ದಿದ್ದು ಕಣ್ಣಿಗೆ ಬಿತ್ತು. ಲಕ್ಷ್ಮೀ ಕೃಪಾಕಟಾಕ್ಷ ಅಂದುಕೊಂಡು ಗಾಳಿಗೆ ಹಾರುತ್ತಿದ್ದ ಆ ನೋಟುಗಳನ್ನು ಎತ್ತಿಕೊಂಡೆ. ಗರಿ ಗರಿ ನೋಟುಗಳು... ಆಗ ತಾನೆ ಫ್ರಿಂಟ್ ಆದಂತಿತ್ತು. ಖುಷಿಯಿಂದ ಆ ನೋಟುಗಳನ್ನು ಕಿಸೆಗೆ ಹಾಕಿಕೊಂಡೆ. ಈ ದುಡ್ಡು ಯಾರದ್ದಾಗಿರಬಹುದು..? ಅದು ಹೇಗೆ ಬಿದ್ದಿರಬಹುದು... ಹೀಗೆ ನಾನಾ ಪ್ರಶ್ನೆಗಳನ್ನು ನನಗೆ ನಾನೇ ಹಾಕಿಕೊಂಡು
ಮುಂದಡಿ ಇಟ್ಟೆ. ಈ ವೇಳೆಗೆ ಅದ್ಯಾಕೋ ಚಿಕ್ಕವನಿದ್ದಾಗ ದುಡ್ಡು ಕಳೆದುಕೊಂಡಿದ್ದ ಘಟನೆ ನೆನಪಾಯಿತು.

ಆವತ್ತೊಂದು ದಿನ ಅಪ್ಪ ನನ್ನ ಕೈಯಲ್ಲಿ 50 ಕೊಟ್ಟು ಅಂಗಡಿಗೆ ಕಳುಹಿಸಿದ್ದ. ಸೈಕಲ್ ತುಳಿದುಕೊಂಡು ಹೋಗಿದ್ದ ನಾನು ಅಂಗಡಿ ಮುಂದೆ ಹೋಗಿ ನಿಂತು ಕಿಸೆಗೆ ಕೈ ಹಾಕಿದರೆ ಆಘಾತ... ಜೇಬಲ್ಲಿ ದುಡ್ಡಿಲ್ಲ. ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತ ಅನುಭವ. ಅಪ್ಪನ ಸಿಟ್ಟು ನೆನೆಸಿಕೊಂಡು ಬಂದ ದಾರಿಯಲ್ಲಿ ಕಳೆದು ಹೋದ ನೋಟಿಗಾಗಿ ಎಷ್ಟು ಹೊತ್ತು ಹುಡುಕಾಡಿದೆನೋ ನನಗೇ ಗೊತ್ತಿಲ್ಲ. ಇದ್ದ ದೇವರನ್ನೆಲ್ಲ ನೆನಪು ಮಾಡಿಕೊಂಡಿದ್ದೆ. ಯಾವ ದೇವರೂ ನೆರವಿಗೆ ಬಾರದಿದ್ದಾಗ ಭಯದಿಂದ ಮನೆಗೆ ವಾಪಸಾಗಿದ್ದೆ. ಮನೆಯಲ್ಲೆಲ್ಲಾದರೂ ಬಿದ್ದಿದೆಯೇನೋ ಅಂದುಕೊಂಡು ಹುಡುಕಾಡುತ್ತಿದ್ದಾಗ ಅಪ್ಪನ ಕಣ್ಣಿಗೆ ಬಿದ್ದೆ. ನನ್ನ ಮುಖದಲ್ಲಿದ್ದ ಗಾಬರಿ ಕಂಡು ಅನುಮಾನಗೊಂಡ ಅಪ್ಪ ದೊಡ್ಡ ದನಿಯಲ್ಲೆ ಏನಾಯ್ತೋ ಎಂದು ಕೇಳಿದ. ಅಷ್ಟೇ ಸಾಕಿತ್ತು. ಹೆದರುತ್ತಲೆ ನಡೆದ ಪ್ರಸಂಗ ವಿವರಿಸಿದೆ.

ಮೊದಲೇ ಅಪ್ಪನಿಗೆ ಮೂಗಿನ ಮೇಲೆ ಸಿಟ್ಟು. ವಿಷಯ ತಿಳಿದ ತಕ್ಷಣ ಸೀದಾ ದನದ ಕೊಟ್ಟಿಗೆಗೆ ಹೋಗಿ ಬಾರ್‌ಕೋಲು ಎತ್ತಿಕೊಂಡು ಬಂದಿದ್ದ. ಇನ್ನೇನು ಅದು ನನ್ನ ಮೈಮೇಲೆ ನರ್ತನ ಮಾಡಬೇಕು ಎನ್ನುವಾಗ ಅಮ್ಮನ ಪ್ರೀತಿ ಅಡ್ಡ ಬಂತು.

ಕೇವಲ 50 ಕಳೆದುಕೊಂಡದ್ದಕ್ಕೇ ಅಷ್ಟೆಲ್ಲ ರಾದ್ಧಾಂತವಾಗಿತ್ತು. ಇನ್ನು 300 ಕಳೆದುಕೊಂಡವನ ಸ್ಥಿತಿ ಏನಾಗಿರಬೇಡ ಎಂಬ ಯೋಚನೆ ತಲೆಗೆ ಹತ್ತಿತು. ಹೋಗ್ಲಿ ಸಿಕ್ಕ ಹಣ ವಾಪಸ್ ಕೊಡೋಣ ಅಂದ್ರೆ ಯಾರಿಗೇಂತ ಕೊಡೋದು?
ಯಾರಾದ್ರೂ ಕೇಳ್ತಾರ ಅಂತ ಕಾದೆ. ಅಂತಹ ಯಾವುದೇ ಲಕ್ಷಣಗಳು ಕಾಣಲಿಲ್ಲ. ಕೊನೆಗೆ ಆ ನೋಟು ನನ್ನವೇ ಆಗಿ ಬಿಟ್ಟಿತು.

ನಿಮಗೊಂದು ವಿಚಾರ ಗೊತ್ತಾ? ಆ ಮೂರು ನೋಟುಗಳು ನನ್ನ ಬಳಿ ಇನ್ನೂ ಭದ್ರವಾಗಿವೆ. ಹೊಸ ವರ್ಷದಂದು ಸಿಕ್ಕಿದ ನೋಟು ಅದು. ಈಗಲೂ ಹಾಗೆಯೇ ಇಟ್ಟುಕೊಂಡಿದ್ದೇನೆ...
-ಶರಣು ಹಾಳಕೇರಿ
ಪತ್ರಿಕೋದ್ಯಮ ವಿಭಾಗ,ಕವಿವಿ ಧಾರವಾಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.