

ಪುಟಾಣಿಗಳೇ, ರಾಕೆಟ್ ಹಾರಿಸುವ ಕನಸಿದೆಯೇ? ಮನೆಯಲ್ಲೇ ಬಲೂನ್ ರಾಕೆಟ್ ಹಾರಿಸಿ ಮಜಾ ನೋಡಿ.
ಏನೇನ್ ಬೇಕು?
1 ವೃತ್ತಾಕಾರದ ಬಲೂನ್
ಗಾಳಿಪಟಕ್ಕೆ ಬಳಸುವ ದಾರ (10-15 ಅಡಿ ಉದ್ದ)
ಒಂದು ಪ್ಲಾಸ್ಟಿಕ್ ಸ್ಟ್ರಾ
ಟೇಪ್
ಏನ್ ಮಾಡ್ಬೇಕು?
ದಾರದ ಒಂದು ತುದಿಯನ್ನೋ ಕುರ್ಚಿಯ ಕೈಗೆ ಬಿಗಿಯಾಗಿ ಕಟ್ಟಿ. ಇನ್ನೊಂದು ತುದಿಯಿಂದ ಸ್ಟ್ರಾವನ್ನು ಒಳಗೆ ಹಾಕಿ. ನಂತರ ದಾರದ ಆ ತುದಿಯನ್ನೂ ಕೋಣೆಯಲ್ಲಿರುವ ಮತ್ತೊಂದು ಕುರ್ಚಿಯೋ, ಟೇಬಲ್‌ನ ಕಾಲಿಗೆ ಎಳೆದು ಕಟ್ಟಿ. ಬಲೂನನ್ನು ಊದಿಟ್ಟುಕೊಂಡು ಅಡ್ಡ ಮಲಗಿಸಿದ ಆಕಾರದಲ್ಲಿ ಹಿಡಿದು ಚಿತ್ರದಲ್ಲಿ ತೋರಿಸಿದಂತೆ ಟೇಪ್‌ನಿಂದ ಸ್ಟ್ರಾಗೆ ಅಂಟಿಸಿ. ಈಗ ಬಲೂನಿನ ಬಾಯಿಯನ್ನು ತೆರೆದುಬಿಡಿ. ಕೋಣೆಯೊಳಗೆ ನಿಮ್ಮ ರಾಕೆಟ್ ಹಾರತೊಡಗುತ್ತದೆ.
ಏಕೆ ಹಾರುತ್ತದೆ?
ಬಲೂನಿನ ಗಾಳಿ ಒಂದು ದಿಕ್ಕಿನಲ್ಲಿ ಹೊರ ಹೋಗುವಾಗ ಉತ್ಪತ್ತಿಯಾಗುವ ಶಕ್ತಿ ಇನ್ನೊಂದು ದಿಕ್ಕಿಗೆ ಬಲೂನನ್ನು ತಳ್ಳುತ್ತದೆ. ನಿಜವಾದ ರಾಕೆಟ್‌ನಲ್ಲಿ ಬಿಸಿಯಾದ ಇಂಧನವು ಒತ್ತಡಕ್ಕೊಳಗಾಗಿ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಈ ಶಕ್ತಿಯು ಎಂಜಿನ್ ಕೆಳಗೆ ಬ್ಲಾಸ್ಟ್ ಆಗುವಂತೆ ಮಾಡಿ ರಾಕೆಟನ್ನು ಮೇಲೆ ತಳ್ಳುತ್ತದೆ.
--