ಜ್ಞಾನೋದಯ
ಮಳಲಕೆರೆ ಎಂಬ ಊರಲ್ಲಿ ವೀರಣ್ಣ, ಬಸಮ್ಮ ಎಂಬ ರೈತ ದಂಪತಿ ಇದ್ದರು. ಅವರ ಒಬ್ಬನೇ ಮಗ...
ಮಳಲಕೆರೆ ಎಂಬ ಊರಲ್ಲಿ ವೀರಣ್ಣ, ಬಸಮ್ಮ ಎಂಬ ರೈತ ದಂಪತಿ ಇದ್ದರು. ಅವರ ಒಬ್ಬನೇ ಮಗ ವಸಂತ ಶುದ್ಧ ಸೋಮಾರಿ. ಓದಿನಲ್ಲಿ ಆಸಕ್ತಿ ಇಲ್ಲವಾದರೂ ಹಾಗೂ ಹೀಗೂ ಹತ್ತನೇ ಕ್ಲಾಸಿಗೂ ಬಂದು ಫೇಲಾಗಿದ್ದ. ಪದೇ ಪದೇ ಪರೀಕ್ಷೆ ಕಟ್ಟಿ, ಬರೆದು, ಫೇಲ್ ಆಗುತ್ತಲೇ ಇದ್ದ. ಅವನಿಗೆ ನಗರಕ್ಕೆ ಹೋಗಿ ಕಾಲೇಜು ವ್ಯಾಸಂಗ ಮಾಡಬೇಕೆಂಬ ಆಸೆಯೇನೋ ಇತ್ತು. ಆದರೆ, ಪ್ರಯತ್ನ ಮಾಡುತ್ತಿರಲಿಲ್ಲ. ವಸಂತನ ತಂದೆ ತಾಯಿ ಇರುವ ಒಬ್ಬ ಮಗ ಚೆನ್ನಾಗಿ ಓದಿ ಒಳ್ಳೆಯ ನೌಕರಿ ಹಿಡಿದು ಸುಖವಾಗಿರಲಿ ಎಂದು ಬಯಸುವುದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಸುಮ್ಮನೆ ಪೋಲಿ ಹುಡುಗರೊಂದಿಗೆ ತಿರುಗುವುದು, ಮನೆಗೆ ಬಂದು ಹೊಟ್ಟೆ ಬಿರಿಯುವಂತೆ ತಿಂದು ಮಲಗುವುದು ಅವನ ದಿನಚರಿ.
ಇಂಥ ವಸಂತನಿಗೆ ದೇವರ ಮೇಲೆ ಬಹಳ ನಂಬಿಕೆ. ನಿತ್ಯ ದೇಗುಲಕ್ಕೆ ಹೋಗಿ ಬರುತ್ತಿದ್ದನು. ಪ್ರತಿ ಬಾರಿಯೂ 'ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸು... ಮಾಡಿಸು...' ಎಂದು ಬೇಡುತ್ತಿದ್ದನು. ಯಾರಾದರೂ 'ನಿನ್ನ ಓದು ಹೇಗೆ ನಡೆದಿದೆ? ಪಾಸಾಗುವೆಯಾ?' ಎಂದರೆ 'ನಾನು ನಿತ್ಯವೂ ದೇಗುಲಕ್ಕೆ ಹೋಗ್ತೀನಿ. ದೇವರು ನನ್ನ ಕೈಬಿಡುವುದಿಲ್ಲ' ಎನ್ನುತ್ತಿದ್ದ.
ತನ್ನ ಗೆಳೆಯರೆಲ್ಲ ಪಾಸಾಗಿ ಮುಂದಿನ ಓದಿಗಾಗಿ ನಗರಕ್ಕೆ ಹೋದರು. ನೆರೆಹೊರೆಯವರು ಇವನನ್ನು ಸೋಮಾರಿ, ದಡ್ಡ, ಅಪ್ರಯೋಜಕ ಎಂದೆಲ್ಲ ಹಂಗಿಸಿದರು. ತಂದೆ ತಾಯಿಗಳೂ ದಂಡಪಿಂಡ ಎಂದು ತಾತ್ಸಾರದಿಂದ ನೋಡುತ್ತಿದ್ದರು. ವಸಂತನಿಗೆ ಇವೆಲ್ಲವೂ ಬೇಸರ ತಂದಿತು. ದೇವರ ಮೇಲೆ ಕೋಪವೂ ಬಂದಿತು. ದೇಗುಲಕ್ಕೆ ಹೋಗಿ 'ದೇವರೇ, ನಾನು ನಿನ್ನನ್ನು ಎಷ್ಟೊಂದು ನಂಬಿದ್ದೆ. ಪರೀಕ್ಷೆಯಲ್ಲಿ ಪಾಸು ಮಾಡೆಂದು ಗೋಗರದೆ. ನಂಬಿದವನನ್ನು ಹೀಗೆ ಕೈಬಿಟ್ಟೆ. ನಿನ್ನನ್ನು ಪೂಜಿಸಿ ಫಲವೇನು' ಎಂದು ದೂಷಿಸುತ್ತಾ ಕೂತ.
ದೇವರಿಗೆ ಇವನ ಕೂಗು ಕೇಳಿಸಿತೇನೋ ಎಂಬಂತೆ ಪ್ರತ್ಯಕ್ಷವಾಗಿ 'ಮಗೂ ವಸಂತ, ನಿನ್ನ ಸೋಮಾರಿತನದಿಂದ ಈ ಪರೀಕ್ಷೆಯಲ್ಲಿ ಫೇಲಾದೆ. ನಿನ್ನ ಪ್ರಾರ್ಥನೆಗೆ ಬೆಲೆ ಕೊಟ್ಟು ಅನೇಕ ಸಾರಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟೆ. ಓದುವುದನ್ನು ಬಿಟ್ಟು ನನ್ನನ್ನೇ ನಂಬಿ ಕೂತೆ. ಇದು ಸರಿಯಲ್ಲ, ಪರಿಶ್ರಮವಿಲ್ಲದೇ ಯಾವ ಫಲವೂ ಸಿಗದು. ಸೋಮಾರಿಗಳನ್ನು ಯಾರೂ ಕ್ಷಮಿಸುವುದಿಲ್ಲ. ಕಷ್ಟಪಡುವವರನ್ನಷ್ಟೇ ನಾನು ಮೆಚ್ಚುವುದು, ಆಶೀರ್ವದಿಸುವುದು' ಎಂದು ಹೇಳಿ ದೇವರು ಮಾಯವಾದ.
ವಸಂತನಿಗೆ ತನ್ನ ತಪ್ಪಿನ ಅರಿವಾಯಿತು. ಮತ್ತೊಮ್ಮೆ ಪರೀಕ್ಷೆಯನ್ನು ಕಟ್ಟಿ, ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ಪಾಸಾದನು. 'ಕೈ ಕೆಸರಾದರೆ ಬಾಯಿ ಮೊಸರು' ಎಂಬ ಜೀವನ ತತ್ವವನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡು, ಯಶಸ್ಸನ್ನು ಪಡೆದನು. ಆ ನಂತರದ ದಿನಗಳಲ್ಲಿ ದೇವರಿಗೆ ಕೈಮುಗಿದು ತನ್ನ ಕರ್ತವ್ಯವನ್ನು ತಾನು ಅಚ್ಚುಕಟ್ಟಾಗಿ ಮಾಡುತ್ತಾ ಸಾರ್ಥಕ ಜೀವನ ನಡೆಸಿದನು.
- ಎಂ.ಎಸ್. ಶಿವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

