ಪ್ರಧಾನ ಸುದ್ದಿ

ನುಸುಳಿಕೊಂಡರು..!

ನುಸುಳಿಕೊಂಡರು..!
Published On :

ಪಿಟಿಐ ನವದೆಹಲಿ ಆ.1-
ಮಾಹಿತಿ ಹಕ್ಕು ಕಾಯ್ದೆಯಡಿ ರಾಜಕೀಯ ಪಕ್ಷಗಳ ಮಾಹಿತಿ ಕೇಳಿದರೆ ಸಿಗಲಾರದು. ಕೇಂದ್ರ ಸರ್ಕಾರ ಇದಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇತ್ತೀಚೆಗೆ ಕೇಂದ್ರ ಮಾಹಿತಿ ಆಯೋಗ ಆರು ರಾಷ್ಟ್ರೀಯ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ತೀರ್ಪು ನೀಡಿತ್ತು. ಪಕ್ಷಗಳು ಸಂಗ್ರಹಿಸುವ ದೇಣಿಗೆ ಮತ್ತು ಅವುಗಳ ಕಾರ್ಯವೈಖರಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ಮಾಹಿತಿ ನೀಡಲೇಬೇಕೆಂದು ಜೂ.3ರಂದು ಸೂಚಿಸಿತ್ತು.
ಈ ಬಗ್ಗೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಎನ್‌ಸಿಪಿ, ಸಿಪಿಎಂ ಮತ್ತು ಬಿಎಸ್‌ಪಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದವು.

ಸುಗ್ರೀವಾಜ್ಞೆಗೆ ಮುಂದಾಗಿತ್ತು: ಮಾಹಿತಿ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ಮುಂದಾಗಿತ್ತು. ಕಾನೂನು ಸಚಿವಾಲಯ ಕೂಡ ಸುಗ್ರೀವಾಜ್ಞೆಯನ್ನು ಸಿದ್ಧಪಡಿಸಿತ್ತು. ಅದೇ ಸಂದರ್ಭದಲ್ಲಿ ಮುಂಗಾರು ಅಧಿವೇಶನದ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಸೂದೆಯನ್ನೇ ಅಧಿವೇಶನದಲ್ಲಿ ನಿರ್ಧರಿಸಿತು. ಕೆಲ ರಾಜಕೀಯ ಪಕ್ಷಗಳೂ ಕೂಡ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಲು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಕೇಂದ್ರ ಸರ್ಕಾರ ಪ್ರಮುಖ ರಾಜಕೀಯ ಪಕ್ಷಗಳ ಮೂಲಕ ರಹಸ್ಯ ಮಾತುಕತೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಂಡಿತ್ತು. ಕೇಂದ್ರ ಸರ್ಕಾರ ಅಧಿವೇಶದಲ್ಲಿ ಮಂಡಿಸಲಿರುವ ತಿದ್ದುಪಡಿ ಕಾಯ್ದೆಗೆ ಎಲ್ಲ ರಾಜಕೀಯ ಪಕ್ಷಗಳು ಒಮ್ಮತದಿಂದ ಅನುಮೋದಿಸಿದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಪಕ್ಷಗಳ ಮಾಹಿತಿ ಸಿಗಲಾರದು.

ಇತರ ಪಟ್ಟಣಗಳಿಗೂ ವಿಸ್ತರಣೆ: ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳು ಈಗಾಗಲೇ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಎಫ್‌ಡಿಐ ಅನುಮತಿ ನೀಡಿವೆ. ಸದ್ಯ 1 ಕೋಟಿ ಜನಸಂಖ್ಯೆ ಇರುವ ನಗರಗಳಲ್ಲಿ ಮಾತ್ರ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ವಹಿವಾಟು ನಡೆಸಲು ಅವಕಾಶ ಇದೆ. ಇನ್ನು ಮುಂದೆ ಇತರ ನಗರಗಳಲ್ಲಿಯೂ ಕೂಡ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಮಳಿಗೆಗಳನ್ನು ಆರಂಭಿಸಲು ಅವಕಾಶವಿದೆ.

ಶೇ.100 ಹೂಡಿಕೆ: ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರವೆಂದರೆ ಈಗಾಗಲೇ ನಿರ್ಧರಿಸಿದಂತೆ ಟೆಲಿಕಾಂ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿದೆ. ಸದ್ಯ ಅದರ ಮಿತಿ ಶೇ.74 ಇತ್ತು. ಕಳೆದ ತಿಂಗಳ 16ರಂದು ದೂರಸಂಪರ್ಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿಧಿಸಲಾಗಿದ್ದ ಮಿತಿಯನ್ನು ತೆಗೆದು ಹಾಕಲು ನಿರ್ಧಾರಕ್ಕೆ ಬಂದಿತ್ತು.
ಇದರಿಂದಾಗಿ ಮೂಲ ದೂರವಾಣಿ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳು ನಿರಾಯಾಸವಾಗಿ ದೇಶದಲ್ಲಿ ಬಂಡವಾಳ ಹೂಡಲು ಅವಕಾಶ ತೆರೆದಿಟ್ಟಂತಾಗಿದೆ.

ವಿಮೆ ಕ್ಷೇತ್ರದಲ್ಲಿ: ವಿಮಾ ಕ್ಷೇತ್ರದಲ್ಲಿ ಕೂಡ ಎಫ್‌ಡಿಐ ಮಿತಿ ಹೆಚ್ಚಳಕ್ಕೆ ಕೂಡ ಕೇಂದ್ರ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸ್ವಯಂಚಾಲಿತವಾಗಿ ಬಂಡವಾಳ ಹೂಡಿಕೆ (ಅಟೋಮ್ಯಾಟಿಕ್ ರೂಟ್) ಮಿತಿಯನ್ನು ಹಾಲಿ ಶೇ.26ರಿಂದ ಶೇ.49ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಬಂಡವಾಳ ಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇರುವ ಮಸೂದೆಗೆ ರಾಜ್ಯಸಭೆಗೆ ಇನ್ನೂ ಒಪ್ಪಿಗೆ ನೀಡಿಲ್ಲ.

ರೇಲ್ವೆ ಟಿಕೆಟ್ ಪ್ರಾಧಿಕಾರ
ಈಗಾಗಲೇ ರೇಲ್ವೇ ಮುಂಗಡ ಪತ್ರದಲ್ಲಿ ಘೋಷಿಸಲಾಗಿರುವಂತೆ ರೇಲ್ವೆ ಟಿಕೆಟ್ ದರ ಪರಿಷ್ಕರಣೆ ಮಾಡಲು ಪ್ರಾಧಿಕಾರ ರೂಪುಗೊಳ್ಳಲಿದೆ. ಈ ಬಗ್ಗೆ ಕೇಂದ್ರ ಸಂಪುಟ ತನ್ನ ಅನುಮೋದನೆ ನೀಡಿದೆ. ಹೀಗಾಗಿ, ತೈಲೋತ್ಪನ್ನಗಳ ಬೆಲೆ ಬದಲಾದಂತೆ ರೇಲ್ವೆ ಇಲಾಖೆ ಕೂಡ ಪ್ರಯಾಣ ಮತ್ತು ಸರಕು ದರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಎಫ್‌ಡಿಐ ನಿಯಮ ಸಡಿಲ

ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದ ಮತ್ತೊಂದು ಪ್ರಮುಖ ವಿಚಾರವೆಂದರೆ ಮಲ್ಟಿ ಬ್ರ್ಯಾಂಡ್ ರಿಟೇಲ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿಗದಿಪಡಿಸಲಾಗಿದ್ದ ಮಿತಿಯನ್ನು ಮತ್ತಷ್ಟು ಸರಳಗೊಳಿಸಿದೆ. ಇದರಿಂದಾಗಿ ವಾಲ್‌ಮಾರ್ಟ್‌ನಂಥ ಬಹುಬ್ರಾಂಡ್ ದೈತ್ಯ ಕಂಪನಿಗಳು ದೇಶದಲ್ಲಿ ಬಂಡವಾಳ  ಹೂಡಿಕೆ ಮಾಡಿ ಮಳಿಗೆಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ. ಇದಕ್ಕಾಗಿಯೇ ಸಣ್ಣ ಉದ್ದಿಮೆದಾರರು ಎಂಬ ವ್ಯಾಖ್ಯೆಯನ್ನು ಬದಲಿಸಲು ಕೂಡ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.  ಈ ನಿರ್ಧಾರದಿಂದಾಗಿ ವಾಲ್‌ಮಾರ್ಟ್‌ನಂಥ ಕಂಪನಿಗಳು ವಾರ್ಷಿಕವಾಗಿ 12 ಕೋಟಿ ವಹಿವಾಟು ನಡೆಸುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಂದ ವಸ್ತುಗಳನ್ನು ಖರೀದಿಸುವಂತಾಗುತ್ತದೆ. ಈ ಹಿಂದೆ ವಾರ್ಷಿಕವಾಗಿ 6 ಕೋಟಿ ವಹಿವಾಟು ನಡೆಸುವ ಭಾರತೀಯ ಮೂಲದ ಸಣ್ಣ ಮತ್ತು ಮಧ್ಯಮ ಕಂಪನಿಗಳಿಗೆ ಹೊರಗುತ್ತಿಗೆ ನೀಡಬೇಕು ಎಂದು ನಿಯಮ ವಿಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.