ಪ್ರಧಾನ ಸುದ್ದಿ

ಕೃಷಿ ಇಲಾಖೇಲಿ ಕಾರುಬಾರು!

Published On :

ವಿಧಾನಸೌಧ, ವಿಕಾಸಸೌಧದಲ್ಲೂ ಇಲ್ಲದ ಸೌಲಭ್ಯ ಹೊಂದಿದೆ ಆಯುಕ್ತಾಲಯ
-ಪ್ರದೀಪ್ ಕುಮಾರ್ ಎಂ.
ಕನ್ನಡಪ್ರಭ ವಾರ್ತೆ ಬೆಂಗಳೂರು ಆ. 2

ರಾಜ್ಯದಲ್ಲಿ ಕೃಷಿ ಬೆಳವಣಿಗೆ ಕುಂಠಿತವಾಗಿದೆ. ಸರ್ಕಾರದ ಸೌಲಭ್ಯಗಳು ರೈತರಿಗೆ ಸರಿಯಾಗಿ ತಲುಪಿಲ್ಲ. ಅವರಿಗೆ ಕೃಷಿ ಸಲಕರಣೆಗಳನ್ನು ಒದಗಿಸುವಲ್ಲಿಯೂ ಇಲಾಖೆ ಗುರಿ ಸಾಧಿಸಿಲ್ಲ.
ಇದು ರೈತರ ಕಥೆಯಾದರೆ ಇತ್ತ ಕೃಷಿ ಇಲಾಖೆ ಮತ್ತು ಹಿರಿಯ ಅಧಿಕಾರಿಗಳ ಕಥೆ ಇದಕ್ಕೆ ಉಲ್ಟಾ.
ಹೌದು, ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದರೂ ರೈತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಕೃಷಿ ಇಲಾಖೆ ಗುರಿ ಸಾಧನೆ ಮಾಡಿಲ್ಲ. ಆದರೆ, ಅಧಿಕಾರಿಗಳ ವಿಚಾರದಲ್ಲಿ ಹಾಗಲ್ಲ, ಸಕಲ ಸೌಲಭ್ಯಗಳೊಂದಿಗೆ ಐಷಾರಾಮಿಯಾಗಿದ್ದಾರೆ. ರೈತರಿಗೆ ಸೌಲಭ್ಯಗಳು ಎಷ್ಟರ ಮಟ್ಟಿಗೆ ತಲುಪಿವೆಯೋ ಗೊತ್ತಿಲ್ಲ, ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಮಾತ್ರ ತಮಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.
ಶೇಷಾದ್ರಿ ರಸ್ತೆಯಲ್ಲಿ ಶತಮಾನದಷ್ಟು ಹಳೆಯದಾದ ಬೃಹತ್ ಕಟ್ಟಡದಲ್ಲಿ ಕೃಷಿ ಆಯುಕ್ತಾಲಯವಿದೆ. ಹೊರನೋಟಕ್ಕೆ ಇದು ಹಳೆಯ ಕಟ್ಟಡವಾದರೂ ಇದರೊಳಗಿರುವ ಹವಾನಿಯಂತ್ರಿತ ವ್ಯವಸ್ಥೆ, ಅತ್ಯಾಧುನಿಕ ಸಲಕರಣೆಗಳು ಆಡಳಿತ ಕೇಂದ್ರವಾದ ವಿಧಾನಸೌಧ, ವಿಕಾಸಸೌಧದಲ್ಲೂ ಇಲ್ಲ. ಹಾಗೆಂದು, ಸರ್ಕಾರಿ ಕಚೇರಿಯಲ್ಲಿ ಸೌಲಭ್ಯಗಳು ಇರಬಾರದೆಂದೇನೂ ಅಲ್ಲ. ಆದರೆ, ಕೆಲಸಕ್ಕಿಂತ ಸೌಲಭ್ಯವೇ ಮುಖ್ಯವಾದರೆ? ಪ್ರಸ್ತುತ ಕೃಷಿ ಆಯುಕ್ತಾಲಯ ಕಚೇರಿಯ ಪರಿಸ್ಥಿತಿ ಇದೇ ಆಗಿದೆ.
ಅಧಿಕಾರಿಗಳ 'ಕಾರು'ಬಾರು: ಇತರೆ ಇಲಾಖೆಗಳಂತೆ ಕೃಷಿ ಇಲಾಖೆಯಲ್ಲೂ ಅಧಿಕಾರಿಗಳ 'ಕಾರು'ಬಾರಿಗೇನೂ ಇಲ್ಲಿ ಕಡಿಮೆಯಿಲ್ಲ. ಕೃಷಿ ಇಲಾಖೆಯಲ್ಲಿ ಒಟ್ಟು 17 ಸರ್ಕಾರಿ ಕಾರುಗಳಿವೆ. ಈ ಪೈಕಿ 2 ಕಾರುಗಳು ಸಚಿವರಿಗೆ, ಮೂರು ಕಾರುಗಳು ಕೃಷಿ ಆಯುಕ್ತರಿಗೆ ಮತ್ತು ಎರಡು ಕಾರುಗಳು ಕೃಷಿ ನಿರ್ದೇಶಕರಿಗೆ ಬಳಕೆಯಾಗುತ್ತವೆ. ಉಳಿದ 10 ಕಾರುಗಳು ಇಲಾಖೆಯ ಇತರೆ ಅಧಿಕಾರಿಗಳು ಬಳಸಿಕೊಳ್ಳುತ್ತಾರೆ.
ಇದಿಷ್ಟೇ ಅಲ್ಲ, ಸುಮಾರು 12 ಟ್ಯಾಕ್ಸಿಗಳು ಕೃಷಿ ಇಲಾಖೆಯಲ್ಲಿ ಓಡಾಡುತ್ತಿವೆ. ಇದರ ಜತೆಗೆ ಕೃಷಿ ಇಲಾಖೆಗೆ ಸೇರಿದ ನಿಗಮ- ಮಂಡಳಿಗಳಲ್ಲಿರುವ ಕಾರುಗಳು ಕೂಡ ಕೆಲವೊಮ್ಮೆ ಇಲಾಖೆ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗಾಗಿ ಬಳಕೆಯಾಗುತ್ತವೆ.
ಆಯುಕ್ತರಿಗೆ ಐದು ಕಾರು, ನಿರ್ದೇಶಕರಿಗೆ ಮೂರು: ಅದರಲ್ಲೂ ಕೃಷಿ ಆಯುಕ್ತರೊಬ್ಬರೇ ಐದು ಕಾರುಗಳನ್ನು ಬಳಸಿಕೊಳ್ಳುತ್ತಾರೆ. ಕೆಎ 01 ಜಿ- 5425, ಕೆಎ 01 ಜಿ- 5724, ಕೆಎ 01 ಜಿ- 4050 ಸಂಖ್ಯೆಯ ಸರ್ಕಾರಿ ವಾಹನಗಳು ಮತ್ತು ಒಂದು ಟ್ಯಾಕ್ಸಿ ಆಯುಕ್ತರ ಸೇವೆಗಾಗಿ ಇದೆ. ಈ ಪೈಕಿ ಒಂದು ಕಾರು (ಸ್ವಿಫ್ಟ್) ಯಾವಾಗಲೂ ವಿಜಯನಗರ ಆಸ್ಪತ್ರೆಯೊಂದರ ಬಳಿ ನಿಂತಿರುತ್ತದೆ. ಇದು ಸರ್ಕಾರಿ ಕಾರಾದರೂ ಅದರಲ್ಲಿ ಈ ಕುರಿತ ಫಲಕವಿಲ್ಲ.

ಅದು ಅವರ ಕುಟುಂಬ ಸದಸ್ಯರ ಬಳಕೆಗಾಗಿ ಮೀಸಲು ಎಂದು ಹೇಳಲಾಗುತ್ತಿದೆ. ಇನ್ನು ಇರುವ ಒಂದು ಟ್ಯಾಕ್ಸಿ ಆಯುಕ್ತರ ಆಪ್ತ ಸಹಾಯಕರಿಗೆ ನಿಗದಿಯಾಗಿದೆ. ಅದೇ ರೀತಿ ಕೃಷಿ ನಿರ್ದೇಶಕರು ಕೆಎ 01 ಜಿ- 5402, ಕೆಎ 01 ಜಿ- 5791 ಸಂಖ್ಯೆಯ ಸರ್ಕಾರಿ ವಾಹನಗಳು ಮತ್ತು ಒಂದು ಟ್ಯಾಕ್ಸಿ ಬಳಸುತ್ತಿದ್ದಾರೆ. ಈ ಪೈಕಿ ಸರ್ಕಾರಿ ಕಾರುಗಳು ಅಧಿಕಾರಿ ಮತ್ತು ಅವರ ಕುಟುಂಬದವರಿಗೆ ಮೀಸಲಾದರೆ ಟ್ಯಾಕ್ಸಿ ಅವರ ಆಪ್ತ ಸಹಾಯಕರ ಓಡಾಟಕ್ಕಾಗಿ ಮೀಸಲು.
ಬಿಳಿಯಾನೆಗಳಿವು: ರೈತರಿಗೆ ಸೌಲಭ್ಯಗಳನ್ನು ಒದಗಿಸಬೇಕಾದ ಕೃಷಿ ಇಲಾಖೆ ಪಾಲಿಗೆ ಈ ಕಾರುಗಳೇ ಬಿಳಿಯಾನೆಗಳಂತಾಗಿವೆ. ಸರ್ಕಾರಿ ವಾಹನಗಳೆಂದರೆ ಅವು ಪೆಟ್ರೋಲ್ ವಾಹನಗಳೆಂಬುದು ಖಚಿತ. ಪ್ರಸ್ತುತ ಪೆಟ್ರೋಲ್ ದರ ಮುಗಿಲೆತ್ತರಕ್ಕೇರಿದರೂ ಕಾರುಗಳ ಓಡಾಟವೇನೂ ಕಮ್ಮಿಯಾಗಿಲ್ಲ. ಕೆಲವು ವಾಹನಗಳು ದಿನಕ್ಕೆ ಕನಿಷ್ಠವೆಂದರೂ 100 ಕಿಲೋಮೀಟರ್ ಓಡುತ್ತವೆ. ಹೀಗಾಗಿ ಪೆಟ್ರೋಲ್ ಹಾಕಲೆಂದೇ ವರ್ಷಕ್ಕೆ ಕೋಟ್ಯಂತರ ರುಪಾಯಿ ವೆಚ್ಚವಾಗುತ್ತದೆ. ಇನ್ನು ಇಲಾಖೆಯಲ್ಲಿ 12 ಟ್ಯಾಕ್ಸಿಗಳಿವೆ. ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳಿಗೆ ವಾಹನ ಸೌಲಭ್ಯ ಇಲ್ಲದೇ ಇದ್ದರೂ ಅಧಿಕಾರಿಗಳು ಟ್ಯಾಕ್ಸಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಬಳಸುತ್ತಿದ್ದಾರೆ. ತಿಂಗಳೊಂದಕ್ಕೆ ಈ ಟ್ಯಾಕ್ಸಿಗಳಿಗೆ 20 ಸಾವಿರ ಬಾಡಿಗೆ ನೀಡಬೇಕಾಗುತ್ತದೆ. ಇದನ್ನು ಕೃಷಿ ಇಲಾಖೆಯೇ ಭರಿಸಬೇಕು.
ಕೋಟ್ಯಂತರ ಖರ್ಚು: ಕಳೆದ ಮೂರು ವರ್ಷಗಳಲ್ಲಿ ಈ ಹಳೆಯ ಕಟ್ಟಡದ ನವೀಕರಣಕ್ಕೆ ಕೋಟ್ಯಂತರ ರುಪಾಯಿ ಖರ್ಚು ಮಾಡಲಾಗಿದೆ. ಇದರ ಜತೆಗೆ ಅನೇಕ ಕೊಠಡಿಗಳಿಗೆ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಶತಮಾನೋತ್ಸವದ ಅಂಗವಾಗಿ ಹಳೆಯ ಕಟ್ಟಡವನ್ನು ಆ್ಯಸಿಡ್ ವಾಶ್ ಮಾಡಲಾಗುತ್ತಿದೆ.  ಇನ್ನು ಕೃಷಿ ಆಯುಕ್ತಾಲಯದ ಪಕ್ಕದಲ್ಲಿ ಶತಮಾನೋತ್ಸವ ಭವನ ನಿರ್ಮಾಣವಾಗುತ್ತಿದೆ. ಈ ಕಟ್ಟಡ ಕಾಮಗಾರಿಯ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಕಟ್ಟಡ ನಿರ್ಮಾಣಕ್ಕೆಂದು ತಂದು ಹಾಕಿರುವ ಇಟ್ಟಿಗೆಗಳು ಪುಡಿಯಾಗಿ ಬಿದ್ದಿರುವುದನ್ನು ಗಮನಿಸಿದಾಗ ಈ ಅಪಸ್ವರದಲ್ಲಿ ಸತ್ಯಾಂಶವಿರಬಹುದು ಎಂಬ ಅನುಮಾನವೂ ಕಾಣಿಸಿಕೊಳ್ಳುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.