ಆಂಟನಿ ಗೊಂದಲ
ಪಾಕ್ ಸೈನಿಕರ ದಾಳಿ ಸಂಬಂಧ ಎ.ಕೆ. ಆ್ಯಂಟನಿ ನೀಡಿದ್ದ ಹೇಳಿಕೆ ಸಂಸತ್ತಿನ ಮೂರನೇ ದಿನದ ಕಲಾಪವನ್ನು ನುಂಗಿ ಹಾಕಿತು.ಮಂಗಳವಾರವಷ್ಟೇ ಸದನದಲ್ಲಿ ಪಾಕ್ ದಾಳಿ...

ನವದೆಹಲಿ/ಜಮ್ಮು: ಪಾಕ್ ಸೈನಿಕರ ದಾಳಿ ಸಂಬಂಧ ಎ.ಕೆ. ಆಂಟನಿ ನೀಡಿದ್ದ ಹೇಳಿಕೆ ಸಂಸತ್ತಿನ ಮೂರನೇ ದಿನದ ಕಲಾಪವನ್ನು ನುಂಗಿ ಹಾಕಿತು.
ಮಂಗಳವಾರವಷ್ಟೇ ಸದನದಲ್ಲಿ ಪಾಕ್ ದಾಳಿ ಬಗ್ಗೆ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದ ಆ್ಯಂಟನಿ ಅವರು, ಪಾಕಿಸ್ತಾನದ ಸೈನಿಕರ ಬಟ್ಟೆ ತೊಟ್ಟಿದ್ದ 20 ಮಂದಿ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ ಎಂದಿದ್ದರು. ಈ ಹೇಳಿಕೆ ಬಗ್ಗೆ ಮಂಗಳವಾರವೇ ಆಕ್ಷೇಪವೆತ್ತಿದ್ದ ವಿಪಕ್ಷಗಳು, ಬುಧವಾರ ಬೆಳಗ್ಗೆಯೂ ಮುಂದುವರಿಸಿದವು.
ರಕ್ಷಣಾ ಸಚಿವರು ಇಡೀ ದೇಶವನ್ನೇ ದಿಕ್ಕುತಪ್ಪಿಸಿದ್ದಾರೆ. ಅವರು ಸಂಸತ್ ಮತ್ತು ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮತ್ತು ಎಸ್‌ಪಿ ಸಂಸದರು ಆಗ್ರಹಿಸಿದರು.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನೀವು ಭಾರತವನ್ನು ರಕ್ಷಿಸಲು ಯತ್ನಿಸುತ್ತಿದ್ದೀರೋ ಅಥವಾ ಪಾಕಿಸ್ತಾನವನ್ನು ಬಚಾವ್ ಮಾಡಲು ಯತ್ನಿಸುತ್ತಿದ್ದೀರೋ? ರಕ್ಷಣಾ ಸಚಿವರಾಗಿ ನೀವು ಹೇಳಿಕೆ ನೀಡುವಾಗ ಪಾಕಿಸ್ತಾನಕ್ಕೆ ಕ್ಲೀನ್‌ಚಿಟ್ ಕೊಟ್ಟುಬಿಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಾಕ್ ದಾಳಿ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿಕೆ ನೀಡಬೇಕು. ಅಲ್ಲದೆ ಆ್ಯಂಟನಿ ಅವರು ಕ್ಷಮೆ ಕೋರಬೇಕು ಎಂದು ಬಿಜೆಪಿ ಮತ್ತು ಎಸ್‌ಪಿ ಸಂಸದರು ಆಗ್ರಹಿಸಿದರು.
ಅತ್ತ, ರಾಜ್ಯಸಭೆಯಲ್ಲೂ ಅರುಣ್ ಜೇಟ್ಲಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ವೆಂಕಯ್ಯ ನಾಯ್ಡು ಅವರು ಆ್ಯಂಟನಿ ವಿರುದ್ಧ ವಾಗ್ದಾಳಿ ನಡೆಸಿದರು. ಇಡೀ ದೇಶವನ್ನೇ ತಲೆತಗ್ಗಿಸುವಂತೆ ಮಾಡಿದ್ದೀರಿ. ನೀವು ಉತ್ತಮ ಇಮೇಜ್ ಉಳ್ಳವರಾಗಿದ್ದೀರಿ. ಆದರೆ ಈ ರೀತಿ ಏಕೆ ಹೇಳಿಕೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಆ್ಯಂಟನಿ ಅವರು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು, ಇದ್ದ ಮಾಹಿತಿಯನ್ನಾಧರಿಸಿ ಹೇಳಿಕೆ ನೀಡಿದ್ದಾಗಿ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಆ್ಯಂಟನಿ ವಿರುದ್ಧ ಹಕ್ಕು ಚ್ಯುತಿ ನೋಟಿಸ್ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪೀಕರ್ ಮೀರಾಕುಮಾರ್ ಅವರು ಹೇಳಿದ್ದಾರೆ.
ಈ ಮಧ್ಯೆ ಗದ್ದಲ ನಿಯಂತ್ರಣಕ್ಕೆ ಬಾರದೇ ಇದ್ದುದರಿಂದ ಉಭಯ ಸದನಗಳ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


