ಕೆಪಿಎಸ್ಸಿ ಕರ್ಮಕಾಂಡ; ಅಭ್ಯರ್ಥಿಗೆ ಮೋಸ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.7-
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪಿಡಿಒ ಪರೀಕ್ಷೆಯಲ್ಲಿ ನಡೆದಿರುವ ಹಲವು ಅಪರಾತಪರಾಗಳು ಸಾಲದು ಎಂಬಂತೆ ಈಗ ದಲಿತ ಅಭ್ಯರ್ಥಿ ಆಯ್ಕೆಯಾಗಿದ್ದರೂ ನೇಮಕ ಆದೇಶ ನೀಡದೇ ಮೋಸ ಮಾಡಿರುವ ಪ್ರಕರಣ ಪತ್ತೆಯಾಗಿದೆ.
ಆಗಿರುವ ಅನ್ಯಾಯದ ಕುರಿತು ಅಭ್ಯರ್ಥಿ ಸಲ್ಲಿಸಿದ ಆಕ್ಷೇಪಣೆಗೆ ಕನಿಷ್ಠ ಉತ್ತರಿಸುವ ಸೌಜನ್ಯವನ್ನೂ ಕೆಪಿಎಸ್ಸಿ ತೋರಿಲ್ಲ.
ಈಗ ಅವರು ಎಲ್ಲ ದಾಖಲೆ ಹಾಗೂ ಕೆಪಿಎಸ್ಸಿ ಅಧಿಕಾರಿಗಳೊಂದಿಗಿನ ಮಾತುಕತೆಯ ಧ್ವನಿಮುದ್ರಿಕೆ ಸಮೇತ ದೂರನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ.
ಈ ನಡುವೆ ಎಲ್ಲ ಅವ್ಯವಹಾರ ಆರೋಪ, ದೂರುಗಳನ್ನು ನಿರ್ಲಕ್ಷಿಸಿ ಪಿಡಿಒ ಆಯ್ಕೆಯ ಅಂತಿಮ ಆಯ್ಕೆಪಟ್ಟಿಯನ್ನು ಆ.14ರಂದು ಪ್ರಕಟಿಸಲು ಕೆಪಿಎಸ್ಸಿ ಮುಂದಾಗಿದೆ ಎಂದು ತಿಳಿದುಬಂದಿದೆ. ದಲಿತರು, ಹಿಂದುಳಿದವರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಈಗಲಾದರೂ ಈ ಬ್ರಹ್ಮಾಂಡ ಭ್ರಷ್ಟಾಚಾರದ ಪಿಡಿಒ ಪರೀಕ್ಷೆಯನ್ನು ರದ್ದುಪಡಿಸುವ ಮನಸ್ಸು ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕು.
ಬೆಂಗಳೂರಿನ ದಿನೇಶ್ ಕುಮಾರ್ ಬಿ. ಅವರು (ಪರೀಕ್ಷೆ ನೋಂದಣಿ ಸಂಖ್ಯೆ 313390) ಪಿಡಿಒ ಪರೀಕ್ಷೆ ಬರೆದಿದ್ದರು. 80 ಅಂಕ ಪಡೆದ ಅವರು ಎಸ್ಸಿ-ಗ್ರಾಮಾಂತರ ಮೀಸಲಿನಲ್ಲಿ ಮಂಡ್ಯಕ್ಕೆ ಆಯ್ಕೆ ಬಯಸಿದ್ದರು. ಕೆಪಿಎಸ್ಸಿಯಿಂದ ದಾಖಲೆ ಪರಿಶೀಲನೆಗೆ ಆಮತ್ರಣವೂ ಬಂದಿತ್ತು.
ಉತ್ತಮ ಅಂಕ ಗಳಿಸಿದವರನ್ನು ದಾಖಲೆ ಪರಿಶೀಲನೆಗೆ ಕರೆಸುವಾಗ 1:1:5 ಅನುಪಾತದಲ್ಲಿ ಆಮಂತ್ರಿಸಲಾಗಿತ್ತು. ಅಂದರೆ 1 ಹುದ್ದೆಗೆ ಒಂದೂವರೆ ಮಂದಿ. ಅಂದರೆ 2 ಹುದ್ದೆಗೆ 3 ಮಂದಿ. ಅಂದರೆ ಒಂದು ಹುದ್ದೆಗೆ ಒಬ್ಬರು ಎಂಬ ಅನುಪಾತದಲ್ಲಿ ಅಯ್ಕೆಯಾದ ಅಭ್ಯರ್ಥಿಗಳು ಬಾರದಿದ್ದಲ್ಲಿ ಅಥವಾ ಸೂಕ್ತ ದಾಖಲೆಗಳನ್ನು ಹಾಜರು ಮಾಡಲು ವಿಫಲರಾದಲ್ಲಿ ಆಗ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡುವುದು ಇದರ ಉದ್ದೇಶ.
ಕೆಪಿಎಸ್ಸಿ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ ಒಂದು ಹುದ್ದೆಗೆ ಒಬ್ಬರು (1:1) ಅನುಪಾತದಲ್ಲಿ ಆಯ್ಕೆಯಾದವರು ಸೂಕ್ತ ದಾಖಲೆಗಳನ್ನು ಹಾಜರುಪಡಿಸಿದಲ್ಲಿ ಆಯ್ಕೆ ಪಕ್ಕಾ. ಅಕಸ್ಮಾತ್ 1:1 ಅನುಪಾತದಲ್ಲಿ ಆಯ್ಕೆಯಾದವರು ಬಾರದಿದ್ದಲ್ಲಿ ಅಥವಾ ಸೂಕ್ತ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ಆಗ 1:1.5 ಅಭ್ಯರ್ಥಿಗೆ ಅವಕಾಶ ನೀಡಲಾಗುತ್ತದೆ.
ಇದಕ್ಕೆ ಇಂಬು ನೀಡುವಂತೆ ದಾಖಲೆ ಪರಿಶೀಲನೆಗೆ ಆಹ್ವಾನ ಕಳುಹಿಸುವಾಗ ಕೆಪಿಎಸ್ಸಿ 2 ರೀತಿಯ ಪತ್ರಗಳನ್ನು ಸಿದ್ಧಪಡಿಸಿದೆ. ದಿನೇಶ್ಕುಮಾರ್ ಅವರಿಗೆ ಕೆಪಿಎಸ್ಸಿ ಕಳುಹಿಸಿದ ಪತ್ರದಲ್ಲಿ 'ಈ ಸೂಚನಾ ಪತ್ರವನ್ನು ನೀವು ಪಡೆದ ಮಾತ್ರಕ್ಕೆ ಹುದ್ದೆಗಳಿಗೆ ನಿಮ್ಮನ್ನು ಆಯೋಗವು ಆಯ್ಕೆ ಮಾಡಿದೆ ಎಂದು ತಿಳಿಯಕೂಡದು. ನಿಮ್ಮ ಆಯ್ಕೆಯು ಆನ್ಲೈನ್ನಲ್ಲಿ ನಮೂದಿಸಿರುವ ವಿದ್ಯಾರ್ಹತೆ, ಜನ್ಮದಿನಾಂಕ ಮತ್ತು ಮೀಸಲು ಪ್ರಮಾಣ ಪತ್ರಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ' ಎಂದಿದೆ. ಹಾಗೆಯೇ ಕೆಲವು ಅಭ್ಯರ್ಥಿಗಳಿಗೆ ಕಳುಹಿಸಿದ ಪತ್ರದಲ್ಲಿ 'ಈ ಸೂಚನಾ ಪತ್ರವನ್ನು ನೀವು ಪಡೆದ ಮಾತ್ರಕ್ಕೆ ಹುದ್ದೆಗಳಿಗೆ ನಿಮ್ಮನ್ನು ಆಯೋಗವು ಆಯ್ಕೆ ಮಾಡಿದೆ ಎಂದು ತಿಳಿಯಕೂಡದು. ಆದರೆ 1:1ರ ಅನುಪಾತದಲ್ಲಿ ಪರಿಶೀಲನೆಗೆ ಕರೆದ ಅಭ್ಯರ್ಥಿಗಳು ಹಾಜರಾಗದಿದ್ದಲ್ಲಿ ಅಥವಾ ಅನ್ಯ ಕಾರಣಗಳಿಂದ ತಿರಸ್ಕೃತಗೊಂಡಲ್ಲಿ ಮಾತ್ರ ನಿಮ್ಮ ಆಯ್ಕೆಯನ್ನು ಪರಿಗಣಿಸಲಾಗುವುದು' ಎಂದಿದೆ. ಅಲ್ಲಿಗೆ ಕೆಪಿಎಸ್ಸಿ ಹೇಳಿರುವಂತೆ 1:1ರ ಅಭ್ಯರ್ಥಿಗಳು ಹಾಜರಾಗಿ ಸೂಕ್ತ ದಾಖಲೆಗಳನ್ನು ಒದಗಿಸಿದಲ್ಲಿ ಅವರ ಆಯ್ಕೆ ಪಕ್ಕಾ. ಹಾಗಾಗದಿದ್ದಲ್ಲಿ ಮಾತ್ರ ಹೆಚ್ಚುವರಿ ಅಭ್ಯರ್ಥಿಗೆ ಅವಕಾಶ ನೀಡಲಾಗುತ್ತದೆ. ದಿನೇಶ್ಕುಮಾರ್ ಅವರಿಗೆ ಬಂದಿದ್ದು 1:1ರ ಅನುಪಾತದ ಪತ್ರ. ಅಂದ ಮೇಲೆ ಅವರ ಆಯ್ಕೆ ಆಗಬೇಕಿತ್ತು. ಆದರೆ ಆಯ್ಕೆಪಟ್ಟಿಯಲ್ಲಿ ಅವರ ಹೆಸರೇ ಇಲ್ಲ!
ಈ ಬಗ್ಗೆ ದಿನೇಶ್ಕುಮಾರ್ ಅವರು ಕೆಪಿಎಸ್ಸಿಗೆ ಜೂ.21ರಂದೇ ಆಕ್ಷೇಪಣೆ ಸಲ್ಲಿಸಿದ್ದಾರೆ. ಈವಗೆರೂ ಇದಕ್ಕೆ ಉತ್ತರಿಸುವ ಸೌಜನ್ಯವನ್ನು ಕೆಪಿಎಸ್ಸಿ ತೋರಿಲ್ಲ. ತೋರುವುದೂ ಇಲ್ಲ. ಯಾಕೆಂದರೆ ಕೆಪಿಎಸ್ಸಿ ಬಳಿ ಉತ್ತರ ಇರುವುದರ ಬಗ್ಗೆಯೇ ಅನುಮಾನವಿದೆ. ಏಕೆಂದರೆ ಕೊನೆಯ ಹಂತದಲ್ಲಿ ನಡೆದ ಕರಾಮತ್ತಿಗೆ ದಿನೇಶ್ಕುಮಾರ್ ಹುದ್ದೆ ಬಲಿಯಾಗಿದೆ ಎನ್ನಲಾಗಿದೆ.
ಅಂದು ಸ್ಪಷ್ಟೀಕರಣ ಕೊಟ್ಟವರು ಈಗೆಲ್ಲಿ?
ಕೆಪಿಎಸ್ಸಿ ನಡೆಸಿದ ಪಿಡಿಒ ಪರೀಕ್ಷೆ ಅಕ್ರಮಗಳ ಬಗ್ಗೆ (ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 17 ಜನ ಆಯ್ಕೆ, ಒಟ್ಟಿಗೆ ಪರೀಕ್ಷೆ ಬರೆದ ಗಂಡ-ಹೆಂಡತಿ, ಅವರಿಗೆ ಸಹಾಯ ಮಾಡಿದ ಹಾಲಿ ಪಿಡಿಒ ಗಂಡನ ಸಹೋದರ) ಕನ್ನಡಪ್ರಭ ಈವರೆಗೆ 4 ವರದಿಗಳನ್ನು ಪ್ರಕಟಿಸಿದೆ. ಒಂದೇ ಒಂದು ವರದಿಗೂ ಕೆಪಿಎಸ್ಸಿ ಸ್ಪಷ್ಟೀಕರವನ್ನಾಗಲಿ, ಪ್ರತಿಕ್ರಿಯೆಯನ್ನಾಗಲಿ ನೀಡಿಲ್ಲ.
ವರ್ಷದ ಹಿಂದೆ 'ಕನ್ನಡಪ್ರಭ'ದಲ್ಲಿಯೇ ಶಿಕ್ಷಕರ ಆಯ್ಕೆ ಪರೀಕ್ಷೆಯ ಪ್ರಶ್ನೆಗಳಲ್ಲಾದ ತಪ್ಪಿನ ಕುರಿತ ವರದಿಯಲ್ಲಿ ಕೆಪಿಎಸ್ಸಿ ಹೆಸರು ಪ್ರಸ್ತಾಪವಾಗಿತ್ತು. ಆದರೆ ಆ ಪರೀಕ್ಷೆಯನ್ನು ಕೆಪಿಎಸ್ಸಿ ನಡೆಸಿರಲಿಲ್ಲ. ಆಗ ಕೆಪಿಎಸ್ಸಿ ಅಧಿಕಾರಿಗಳು ಪತ್ರ ಬರೆದು, ಅನಗತ್ಯವಾಗಿ ಕೆಪಿಎಸ್ಸಿ ಗೌರವಕ್ಕೆ ಧಕ್ಕೆ ತಂದಿದ್ದೀರಿ ಎಂದು ಪತ್ರ ಬರೆದಿದ್ದರು.
ಈಗ ಕೆಪಿಎಸ್ಸಿ ಮಾನ ಹರಾಜಾಗುತ್ತಿದ್ದರೂ ಕೆಪಿಎಸ್ಸಿ ಅಧಿಕಾರಿಗಳು ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
ಅಂದರೆ ಇದೆಲ್ಲ ಆರೋಪಕ್ಕೆ ಕೆಪಿಎಸ್ಸಿ ಬಳಿ ಉತ್ತರವಿಲ್ಲ ಎಂದರ್ಥವೇ?
- ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

