ಟಾರ್ಗೆಟ್ ಡೆಲ್ಲಿ

ಪಿಟಿಐ ನವದೆಹಲಿ ಆ.9
ದೆಹಲಿ ಮೇಲೆ ಭಯೋತ್ಪಾದಕ ದಾಳಿಗೆ ಉಗ್ರ ಹಫೀಜ್ ಸಯೀದ್ ಸಂಚು ಹೂಡಿದ್ದಾನೆಯೇ?
ಹೌದು ಎನ್ನುತ್ತಿವೆ ಗುಪ್ತಚರ ಮೂಲಗಳು. ದೆಹಲಿಯ ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶಗಳ ಮೇಲೆ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಲಿದ್ದಾರೆ ಎಂದು ಗುಪ್ತಚರ ಸಂಸ್ಥೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದೆಹಲಿಯ ಜನನಿಬಿಡ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಕಲಾಗಿದ್ದು, ಗರಿಷ್ಠ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ದೆಹಲಿಯ ಮಾರುಕಟ್ಟೆ, ಸರ್ಕಾರಿ ಕಟ್ಟಡಗಳು ಮತ್ತು ಖಾಸಗಿ ಕಟ್ಟಡಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಂಭವವಿದೆ ಎಂದು ಹೇಳಲಾಗಿದೆ.
ರಂಜಾನ್ ಪ್ರಯುಕ್ತ ಲಾಹೋರ್ನಲ್ಲಿ ಪ್ರಾರ್ಥನಾ ಸಭೆಯ ನೇತೃತ್ವ ವಹಿಸಿದ್ದ ಉಗ್ರ ಸಯೀದ್ ಬಹಿರಂಗವಾಗಿಯೇ ಇದು ಖುಷಿ ಪಡುವ ಕಾಲ ಎನ್ನುವ ಮೂಲಕ ದಾಳಿಯ ಮುನ್ಸೂಚನೆ ನೀಡಿದ್ದಾನೆ. ಅಲ್ಲದೆ ಕಳೆದ ತಿಂಗಳಷ್ಟೇ ಆತ ದೇಶದ ವಿವಿಧೆಡೆ ದಾಳಿ ನಡೆಸುವ ಬಗ್ಗೆ ಹೇಳಿದ್ದ. ಗುಪ್ತಚರ ದಳ ಈ ಮಾಹಿತಿ ನೀಡಿದ ಬಳಿಕ ದೆಹಲಿ ಪೊಲೀಸರು ಮಾರುಕಟ್ಟೆಗಳು, ಶಾಪಿಂಗ್ ಮಾಲ್ಗಳಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ದೆಹಲಿ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದು, ಸಯೀದ್ ಬೆದರಿಕೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ವಹಿಸಲಾಗಿಲ್ಲ ಎಂದಿದ್ದಾರೆ. ರಂಜಾನ್ ಇರುವುದರಿಂದ ಜನದಟ್ಟಣೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭದ್ರತೆ ಜಾಸ್ತಿ ಮಾಡಲಾಗಿದೆ ಎಂದಿದ್ದಾರೆ.
ಲಾಹೋರ್ನಲ್ಲಿ ಸ್ವತಂತ್ರ ಅಲೆಮಾರಿ: ಉಗ್ರ ಸಯೀದ್ ಮೇಲೆ ಅಮೆರಿಕ 62 ಕೋಟಿ ಬಹುಮಾನ ಘೋಷಿಸಿದ್ದರೂ ಕೂಡ ಆರಾಮಾಗಿ ಲಾಹೋರ್ನಲ್ಲಿ ಓಡಾಡಿಕೊಂಡಿದ್ದಾನೆ. ರಂಜಾನ್ ಪ್ರಯುಕ್ತ ನಡೆದ ವಿಶೇಷ ಪ್ರಾರ್ಥನಾ ಸಭೆಯ ಮೇಲುಸ್ತುವಾರಿಯನ್ನು ಸ್ವತಃ ಉಗ್ರ ಸಯೀದ್ ವಹಿಸಿದ್ದಾನೆ. ಬಳಿಕ ಟ್ವೀಟ್ ಮಾಡಿದ್ದು, ಇದು ಕಾಶ್ಮೀರ, ಬರ್ಮಾ ಮತ್ತು ಪ್ಯಾಲೆಸ್ತೀನ್ನಲ್ಲಿ ನೊಂದವರು ಖುಷಿ ಪಡುವ ಕಾಲ ಎಂದಿದ್ದಾನೆ.
ನೀವು ಗೆಲ್ಲುವ ಕಾಲ ಬಂದಿದೆ, ಈ ಈದ್ ನಿಮಗೆಲ್ಲಾ ಖುಷಿ ತರಲಿದೆ ಎಂದು ಘೋಷಿಸಿದ್ದಾನೆ. ನಿಮ್ಮ ತ್ಯಾಗಗಳನ್ನು ಆ ಅಲ್ಲಾ ವ್ಯರ್ಥ ಮಾಡುವುದಿಲ್ಲ. ಇಡೀ ಜಗತ್ತಿನಾದ್ಯಂತ ಮುಸ್ಲಿಂ ವೈಭವೀಕೃತವಾಗುತ್ತದೆ. ಒಂದು ದಿನ ಪ್ರಪಂಚವೇ ನಿಮಗೆ ಈದ್ ಮುಬಾರಕ್ ಎನ್ನುತ್ತದೆ ಎಂದಿದ್ದಾನೆ.
ಮುಂಬೈ ದಾಳಿ ಸಂಬಂಧ ಭಾರತ ಪದೇ ಪದೆ ಸಯೀದ್ ಮೇಲೆ ಕ್ರಮ ಜರುಗಿಸಿ ಎಂದು ಹೇಳಿದರೂ ಸಾಕ್ಷ್ಯ ಇಲ್ಲ ಎನ್ನುತ್ತಿರುವ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುತ್ತಲೇ ಬಂದಿದೆ.
ಮಾತುಕತೆ ಅನಿಶ್ಚಿತ?
ಮುಂದಿನ ತಿಂಗಳು ನಡೆಯಬೇಕಿರುವ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ನಡುವಣ ಮಾತುಕತೆ ಅನಿಶ್ಚಿತತೆಯಿಂದ ಕೂಡಿದೆ ಎಂದು ಹೇಳಲಾಗುತ್ತಿದೆ. ಮಾತುಕತೆಗೆ ಪಾಕಿಸ್ತಾನ ಉತ್ಸುಕತೆ ತೋರಿದ್ದರೂ, ಭಾರತ ಇನ್ನೂ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಪಾಕಿಸ್ತಾನವೇ ಈ ಸಂಬಂಧ ಭಾರತದ ಮೇಲೆ ಒತ್ತಡ ಹೇರುತ್ತಿದ್ದರೂ, ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಕಾಯ್ದು ನೋಡುವ ತಂತ್ರ ಅನುಸರಿಸುತ್ತಿರುವ ಭಾರತ, ತಡವಾಗಿಯೇ ಉತ್ತರ ನೀಡಲಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಸೇನೆಯ ಮಾಜಿ ತಜ್ಞರು ಭಾರತ - ಪಾಕ್ ನಡುವೆ ಯಾವುದೇ ಮಾತುಕತೆ ಬೇಡ ಎಂದು ಆಗ್ರಹಿಸಿದ್ದಾರೆ. ಈ ಹೊತ್ತಲ್ಲಿ ಮಾತುಕತೆ ವ್ಯರ್ಥ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


