ಕಿಶ್ತ್ವಾರ್
ಜಮ್ಮು-ಕಾಶ್ಮೀರದ ಕಿಶ್ತ್ವಾರ್ನಲ್ಲಿ ಈದ್-ಉಲ್-ಫಿತರ್ ದಿನದಂದು ಹೊತ್ತಿದ್ದ ಕೋಮು ಗಲಭೆಯ ಕಿಚ್ಚು ಸೋಮವಾರ ಸಂಸತ್ಗೂ ವ್ಯಾಪಿಸಿತ್ತು. ಗಲಭೆ ನಿಯಂತ್ರಿಸುವಲ್ಲಿ ಒಮರ್...
ಪಿಟಿಐ ನವದೆಹಲಿ/ಜಮ್ಮು ಆ.12
ಜಮ್ಮು-ಕಾಶ್ಮೀರದ ಕಿಶ್ತ್ವಾರ್ನಲ್ಲಿ ಈದ್-ಉಲ್-ಫಿತರ್ ದಿನದಂದು ಹೊತ್ತಿದ್ದ ಕೋಮು ಗಲಭೆಯ ಕಿಚ್ಚು ಸೋಮವಾರ ಸಂಸತ್ಗೂ ವ್ಯಾಪಿಸಿತ್ತು. ಗಲಭೆ ನಿಯಂತ್ರಿಸುವಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಬಿಜೆಪಿ ನಾಯಕ ಅರುಣ್ ಜೇಟ್ಲಿ ಭೇಟಿಗೆ ತಡೆಯೊಡ್ಡಿದ್ದ ಕಣಿವೆ ರಾಜ್ಯದ ಕ್ರಮ ಖಂಡಿಸಿ ಸಂಸತ್ಲ್ಲಿ ಕಲಹದ ವಾತಾವರಣ ಏರ್ಪಟ್ಟಿತು.
ಇದೇ ವೇಳೆ, ಕಿಶ್ತ್ವಾರ್ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆದೇಶಿಸಿದ್ದಾರೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಖಾತೆ ಸಹಾಯಕ ಸಚಿವ ಸಜ್ಜದ್ ಕಿಚ್ಲೂ ರಾಜಿನಾಮೆ ನೀಡಿದ್ದಾರೆ.
ಗದ್ದಲವೋ ಗದ್ದಲ: ಕಿಶ್ತ್ವಾರ್ ಗಲಭೆಗೆ ಸಂಬಂಧಿಸಿದಂತೆ ಸಂಸತ್ನ ಉಭಯ ಸದನಗಳಲ್ಲಿ ಗದ್ದಲ ಉಂಟಾಗಿತ್ತು. ಪದೇ ಪದೇ ಗದ್ದಲ ಉಂಟಾದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಒಮರ್ ಕ್ರಮಕ್ಕೆ ಸಮರ್ಥನೆ: ಗಲಭೆ ನಿಯಂತ್ರಿಸಲು ಒಮರ್ ಅಬ್ದುಲ್ಲಾ ಸರ್ಕಾರ ಸರಿಯಾದ ಕ್ರಮಗಳನ್ನೇ ಕೈಗೊಂಡಿದೆ ಎಂದು ಹಣಕಾಸು ಸಚಿವ ಚಿದಂಬರಂ ಶ್ಲಾಘಿಸಿದರು. ಯಾವುದೇ ಕಾರಣಕ್ಕೂ ಕಣಿವೆ ರಾಜ್ಯದಲ್ಲಿ 1990ರ ಪರಿಸ್ಥಿತಿ ನಿರ್ಮಾಣ ಆಗಲು ಕೇಂದ್ರ ಅವಕಾಶ ನೀಡುವುದಿಲ್ಲ ಎಂದರು. 'ಜಮ್ಮು-ಕಾಶ್ಮೀರದಲ್ಲಿನ ಒಟ್ಟಾರೆ ಪರಿಸ್ಥಿತಿ ತೃಪ್ತಿಕರವಾಗಿದೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರೂ ನಿಯಂತ್ರಣದಲ್ಲಿದೆ' ಎಂದರು. 'ಕಾನೂನು ಸುವ್ಯವಸ್ಥೆ ಕಾಪಾಡಲು ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಚಿದಂಬರಂ ಹೇಳಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸುವಂತೆ ಒಮರ್ ಅವರಿಗೆ ಸೂಚಿಸಲಾಗಿದೆ ಎಂದರು.
ಭಯೋತ್ಪಾದಕರ ಕೃತ್ಯವಲ್ಲ: ಹಿಂಸಾಚಾರಕ್ಕೂ ಭಯೋತ್ಪಾದಕರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಚಿದಂಬರಂ ತಿಳಿಸಿದರು. ಪ್ರತಿಪಕ್ಷ ನಾಯಕ ವ್ಯಕ್ತಪಡಿಸಿದ ಕಳವಳ ಸರಿಯಲ್ಲ ಎಂದರು.
ಆರಂಭದಲ್ಲಿ ಮಾತನಾಡಿದ್ದ ಪ್ರತಿಪಕ್ಷ ನಾಯಕ ಜೇಟ್ಲಿ ಹಿಂಸಾಚಾರ ಪ್ರಕರಣ ದೇಶದ ಸಮಗ್ರತೆ ಮತ್ತು ಐಕ್ಯತೆ ಧಕ್ಕೆ ತಂದಿದೆ. ಈ ಪ್ರಕರಣ 1990ರ ದಿನಗಳನ್ನು ಮತ್ತೆ ನೆನಪಿಸುವಂತಾಗಲು ಒಮರ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ. ರಾಜ್ಯದಲ್ಲಿ ಈ ಹಿಂದೆ ನಡೆದ ಕೋಮು ಗಲಭೆಗಳಿಗೆ ಭಯೋತ್ಪಾದಕರ ಕುಮ್ಮಕ್ಕು ಇತ್ತು.
ಈ ಬಗ್ಗೆ ಕೇಂದ್ರ ಎಚ್ಚರಿಕೆ ವಹಿಸಲೇಬೇಕು ಎಂದು ಒತ್ತಾಯಿಸಿದ್ದರು. ತಮಗೆ ಕಿಶ್ತ್ವಾರ್ಗೆ ಭೇಟಿ ನೀಡಲು ಅವಕಾಶ ನೀಡದಿದ್ದ ಒಮರ್ ಸರ್ಕಾರದ ಕ್ರಮವನ್ನು ಜೇಟ್ಲಿ ಪ್ರಶ್ನಿಸಿದರು. ಆದರೆ ಈ ಕ್ರಮವನ್ನು ಚಿದಂಬರಂ ಸಮರ್ಥಿಸಿಕೊಂಡಿದ್ದಾರೆ.
ಪಾಕ್ನದ್ದೇ ಕೈವಾಡ: ಸಂಸತ್ನ ಹೊರಗೆ ಮಾತನಾಡಿದ ಬಿಜೆಪಿ ನಾಯಕ ಯಶವಂತ ಸಿನ್ಹಾ, ಗಲಭೆಯಲ್ಲಿ ಪಾಕಿಸ್ತಾನ ಕೈವಾಡ ಇದೆ ಎಂದು ದೂರಿದ್ದಾರೆ. ಎಲ್ಲರೂ ತಿಳಿದುಕೊಂಡಂತೆ ಪ್ರಕರಣ ಕೋಮು ಗಲಭೆ ಅಲ್ಲ. ಭಾರತ- ಪಾಕ್ ನಡುವಿನ ಯುದ್ಧ ಎಂದರು. ಗಲಭೆ ವೇಳೆ ಪಾಕ್ ಪರ ಘೋಷಣೆ ಹಾಕಲಾಗಿದ್ದರೂ ಕೇಂದ್ರ, ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ನ್ಯಾಯಾಂಗ ತನಿಖೆ: ಕಿಶ್ತ್ವಾರ್ ಗಲಭೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಿ ಅದನ್ನು ಬಹಿರಂಗಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. ಸೋಮವಾರ ಕೂಡ ಕಿಶ್ತ್ವಾರ್ನ ಹಿದ್ಯಾಲ್ ಎಂಬಲ್ಲಿ ಹೊಸತಾಗಿ ಹಿಂಸಾಚಾರ ನಡೆದು ಆರು ಮಂದಿ ಗಾಯಗೊಂಡಿದ್ದಾರೆ.
ಮುಂದುವರಿದ ಕರ್ಫ್ಯೂ: ಕಿಶ್ತ್ವಾರ್ನಲ್ಲಿ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಜಮ್ಮು ಪ್ರದೇಶದ 8 ಜಿಲ್ಲೆಗಳಲ್ಲಿ ಕರ್ಫ್ಯೂವನ್ನು ಮುಂದುವರಿಸಲಾಗಿದೆ.
ಮೋದಿ ಮಾಡಿದ್ದೇನು?: ಹಿಂಸಾಚಾರ ತಡೆಯಲು ತಮ್ಮ ಸರ್ಕಾರ ವಿಫಲವಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ '2002ರಲ್ಲಿ ಗುಜರಾತ್ನಲ್ಲಿ ಗಲಭೆ ಸಂಭವಿಸಿದಾಗ ಮೋದಿ ಏನು ಮಾಡಿದ್ದರು ಎನ್ನುವುದನ್ನು ಬಿಜೆಪಿ ನೆನಪು ಮಾಡಿಕೊಳ್ಳಲಿ. ಗಲಭೆ ಆರಂಭವಾಗಿ 2 ದಿನಗಳು ಕಳೆದ ಮೇಲೆ ಮುಖ್ಯಮಂತ್ರಿ ಸೇನೆಯನ್ನು ಕರೆಸಿದ್ದರು. ಅದು ಅರುಣ್ ಜೇಟ್ಲಿಗೆ ನೆನಪಿದೆಯೇ?' ಎಂದು ಪ್ರಶ್ನಿಸಿದ್ದಾರೆ.
ಕುರಿಯನ್-ಚಿದಂಬರಂ ಜಟಾಪಟಿ
ಯಾರು ಮೊದಲು ಮಾತನಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಚಿದಂಬರಂ ಮತ್ತು ರಾಜ್ಯಸಭೆ ಉಪಸಭಾಪತಿ ಪಿ.ಜೆ.ಕುರಿಯನ್ ನಡುವೆ ವಾಗ್ವಾದ ನಡೆಯಿತು. ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರನ್ನು ಮಾತನಾಡಲು ಆಹ್ವಾನಿಸಿದರು. ಅದೇ ಸಂದರ್ಭದಲ್ಲಿ ಚಿದು ಕೂಡ ಗಲಭೆ ಬಗ್ಗೆ ಮಾತನಾಡಲು ಮುಂದಾದರು. ಇದಕ್ಕೆ ಸಂಬಂಧಿಸಿ ಕೆಲ ಕಾಲ ವಾಗ್ವಾದ ಉಂಟಾಯಿತು. ತಾವು ಈಗಾಗಲೇ ಜೇಟ್ಲಿಗೆ ಮಾತನಾಡಲು ಅವಕಾಶ ಕೊಟ್ಟಿದ್ದಾಗಿ ಕುರಿಯನ್ ತಿಳಿಸಿದರು. ಇದೊಂದು 'ಹೊಸ ಪದ್ಧತಿ' ಎಂದು ಚಿದು ಆಕ್ಷೇಪಿಸಿದರು. ಸುಮಾರು 1 ಗಂಟೆ ಕಾಲ ಈ ವಾಗ್ವಾದ ನಡೆಯಿತು.
ಗೃಹ ಸಚಿವ ರಾಜಿನಾಮೆ
ಹಿಂಸಾಚಾರ ನಿಯಂತ್ರಿಸಲು ವಿಫಲರಾಗಿದ್ದಾರೆ ಎಂಬ ಬಿಜೆಪಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಗೃಹ ಖಾತೆ ಸಹಾಯಕ ಸಚಿವ ಸಜ್ಜದ್ ಕಿಚ್ಲೂ ರಾಜಿನಾಮೆ ನೀಡಿದ್ದಾರೆ. ಕಿಚ್ಲೂ ಗಲಭೆ ನಡೆದ ಕಿಶ್ತ್ವಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಜಮ್ಮು-ಕಾಶ್ಮೀರ ಸರ್ಕಾರವನ್ನು ಕೂಡಲೇ ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಕಿಶ್ತ್ವಾರ್ನಲ್ಲಿ ನಡೆದ ಹಿಂಸಾ ಕೃತ್ಯ ಖಂಡನೀಯ. ಅದನ್ನು ನಿಯತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
- ಮಾಯಾವತಿ, ಬಿಎಸ್ಪಿ ನಾಯಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

