ಪ್ರಧಾನ ಸುದ್ದಿ

ಮಹಾಲಕ್ಷ್ಮೀ ನಮೋಸ್ತುತೇ...

Published On :

ನಮಸ್ತೇತು ಮಹಾಮಾಯೆ
ಶ್ರೀಪೀಠೆ ಸುರಪೂಜಿತೇ
ಶಂಕಚಕ್ರ ಗದಾಹಸ್ತೇ
ಮಹಾಲಕ್ಷ್ಮೀ ನಮೋಸ್ತುತೇ....
ಹೀಗೆ ಹುಣ್ಣಿಮೆಗೂ ಮುನ್ನ ಬರುವ ಶ್ರಾವಣ ಮಾಸದ ಎರಡನೇ ಶುಕ್ರವಾರ ಎಲ್ಲರ ಮನೆಯಲ್ಲೂ ಲಕ್ಷ್ಮೀಸ್ತುತಿ. ನಾಗರಪಂಚಮಿ ಆಚರಣೆಯ ಬಳಿಕ ಹಿಂದೂಗಳಿಗೆ ಸಾಲು ಸಾಲು ಹಬ್ಬಗಳು. ಇದರಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರ ವಿಷ್ಣು ಪತ್ನಿ ಲಕ್ಷ್ಮಿಯನ್ನು ಸ್ತುತಿಸುವ ವರಮಹಾಲಕ್ಷ್ಮೀ ವ್ರತಾಚರಣೆ ವಿವಾಹಿತ ಹೆಂಗಳೆಯರಿಗೆ ಬಹುಮೆಚ್ಚಿನ ಹಬ್ಬಗಳಲ್ಲೊಂದು.
ತಮ್ಮೆಲ್ಲ ಕಷ್ಟಗಳನ್ನು ದೂರ ಮಾಡಿ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲಸುವಂತೆ ಮಾಡು ಎಂದು ವರಲಕ್ಷ್ಮಿಯಲ್ಲಿ ವರವನ್ನು ಕೇಳುವ ಈ ಹಬ್ಬಕ್ಕೆ ಹೆಂಗಳೆಯರು ಒಂದು ವಾರ ಮೊದಲೇ ಹಬ್ಬದ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆ ದಿನ ಮಹಿಳೆಯರು ಬೆಳಗ್ಗೆ ಬೇಗ ಎದ್ದು ಮನೆ ಮುಂದಿನ ಅಂಗಳವನ್ನು ಶುಚಿಗೊಳಿಸಿ, ವಿವಿಧ ರೀತಿಯಲ್ಲಿ ರಂಗೋಲಿಗಳಿಂದ ಅಲಂಕರಿಸುತ್ತಾರೆ. ಬಳಿಕ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು, ಚಿನ್ನಾಭರಣಗಳಿಂದ ಅಲಂಕರಿಸಿಕೊಂಡು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಮಹಾಲಕ್ಷ್ಮೀ ಎಂದರೆ ವರವನ್ನು ನೀಡುವವಳು ಎಂದರ್ಥ. ವರಮಹಾಲಕ್ಷ್ಮೀ ಹಬ್ಬದಂದು ಲಕ್ಷ್ಮೀಯನ್ನು ಪೂಜಿಸಿ ಆಕೆಯಲ್ಲಿ ಭಕ್ತಿಪೂರ್ವಕವಾಗಿ ನಾವು ಬೇಡಿಕೊಂಡರೆ ಆಕೆ ಅದನ್ನೆಲ್ಲ ನೀಡುತ್ತಾಳೆ ಎಂಬ ಪ್ರತೀತಿ ಇದೆ. ಸಂಪತ್ತು, ವಿದ್ಯೆ, ಭೂಮಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟೀ ಹಾಗೂ ಪುಷ್ಟಿ ಎಂಬ ಎಂಟು ಶಕ್ತಿಗಳನ್ನು ಒಳಗೊಂಡಿರುವ ಅಷ್ಟಲಕ್ಷ್ಮಿಯನ್ನು ಈ ಹಬ್ಬದಂದು ಪೂಜಿಸಲಾಗುತ್ತದೆ.
ವ್ರತಾಚರಣೆ ಹಿಂದಿನ ಕಥೆ
ವರಮಹಾಲಕ್ಷ್ಮಿ ವ್ರತಾಚರಣೆಯ ಹಿಂದೆ ಹಿಂದೂ ಪುರಾಣಗಳಲ್ಲಿ ವಿವಿಧ ಕಡೆ ವಿವಿಧ ರೀತಿಯ ಕಥೆಗಳು ಪ್ರತೀತಿಯಲ್ಲಿವೆ. ಒಮ್ಮೆ ವೈಕುಂಠದಲ್ಲಿ ಹರಿ ಮತ್ತು ಲಕ್ಷ್ಮೀ ಬಹಳ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಈ ಸಮಯದಲ್ಲಿ ಭೂಲೋಕದಲ್ಲಿ ಜನರು ತುಂಬಾ ಸಂಕಷ್ಟಕ್ಕೀಡಾಗಿದ್ದರು. ಧನ, ಧಾನ್ಯಗಳ ಕೊರತೆಯಿಂದ ಜನರಿಗೆ ಬರಗಾಲದ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ವೈಕುಂಠಕ್ಕೆ ಭೃಗು ಮಹರ್ಷಿ ಆಗಮಿಸಿದ. ಭೂಲೋಕದಲ್ಲಿ ಜನ ಕಷ್ಟ ಎದುರಿಸುತ್ತಿದ್ದರೆ ಇಲ್ಲಿ ಹರಿ ಲಕ್ಷ್ಮೀಯೊಂದಿಗೆ ಆನಂದದಿಂದ ಕಾಲ ಕಳೆಯುತ್ತಿದ್ದಾನೆಂದು ಕೋಪಗೊಂಡು ಹರಿಯ ಎದೆಯನ್ನು ತುಳಿಯುತ್ತಾನೆ. ಇದರಿಂದ ಕುಪಿತನಾದ ಹರಿ ಭೃಗುಮಹರ್ಷಿಯ ಕಾಲಿನಲ್ಲಿದ್ದ ಮೂರನೇ ಕಣ್ಣನ್ನು ಕೀಳುತ್ತಾನೆ. ಹರಿಯ ಎದೆಯಲ್ಲಿ ವಾಸವಾಗಿದ್ದ ಲಕ್ಷ್ಮೀ ಭೃಗು ಮಹರ್ಷಿಗಳ ಪಾದಸ್ಪರ್ಶದಿಂದ ತನ್ನ ವಾಸಸ್ಥಾನ ಅಶುದ್ಧವಾಯಿತೆಂದು ಕುಪಿತಳಾಗಿ ಭೂಲೋಕಕ್ಕೆ ಬಂದಿಳಿಯುತ್ತಾಳೆ. ಭೂಲೋಕದಲ್ಲಿ ಜನರ ಸಂಕಷ್ಟ ಕಂಡು ಮರುಗುತ್ತಾಳೆ. ಆಕೆಯ ಆಗಮನದ ನಂತರ ಭೂಲೋಕದಲ್ಲಿ ಧನ, ಧಾನ್ಯ, ಸಂಪತ್ತು ಸಮೃದ್ಧಿಯಾಗುತ್ತದೆ. ಇದರಿಂದ ಸಂತಸಗೊಂಡ ಲಕ್ಷ್ಮಿ ವೈಕುಂಠಕ್ಕೆ ಹಿಂತಿರುಗಲು ಇಚ್ಚಿಸದೆ ಹರಿಯನ್ನೇ ಭೂಲೋಕಕ್ಕೆ ಆಹ್ವಾನಿಸುತ್ತಾಳೆ. ಹೀಗೆ ಲಕ್ಷ್ಮಿಯ ವರದಿಂದ ಭೂಲೋಕಕ್ಕೆ ಸಮೃದ್ಧಿಯೇ ಹರಿದು ಬಂತೆಂದು ಜನರು ಲಕ್ಷ್ಮೀಯನ್ನು ಪೂಜಿಸಲು ಆರಂಭಿಸಿದರು. ಅಂದಿನಿಂದ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತಾಚರಣೆ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಕೆಲವೆಡೆ ಲಕ್ಷ್ಮಿಯೊಂದಿಗೆ ಹರಿಯನ್ನೂ ಪೂಜಿಸುತ್ತಾರೆ. ಕೆಲವೆಡೆ ಲಕ್ಷ್ಮಿಯನ್ನು ಮಾತ್ರ ಪೂಜಿಸುತ್ತಾರೆ.
ವೀರಲಕ್ಷ್ಮೀ, ಗಜಲಕ್ಷ್ಮೀ, ಸಂತಾನಲಕ್ಷ್ಮೀ, ವಿಜಯಲಕ್ಷ್ಮೀ, ಧಾನ್ಯಲಕ್ಷ್ಮಿ, ಆದಿಲಕ್ಷ್ಮೀ, ಧನಲಕ್ಷ್ಮೀ, ಐಶ್ವರ್ಯ ಲಕ್ಷ್ಮೀ... ಹೀಗೆ ಅಷ್ಟಲಕ್ಷ್ಮಿಯರ ಹೆಸರದಲ್ಲಿ ಆ ದಿನ ಲಕ್ಷ್ಮಿಗೆ ವಿಶೇಷ ಪೂಜೆ ನಡೆಯುತ್ತದೆ.
ಆಚರಣೆ ಪದ್ಧತಿ ಹೇಗೆ?
ವರಮಹಾಲಕ್ಷ್ಮೀ ವ್ರತ ವಿವಾಹಿತ ಮಹಿಳೆಯರು ಆಚರಿಸುವ ಹಬ್ಬ. ಆ ದಿನ ಮಹಿಳೆಯರು ಮುಂಜಾನೆಯೇ ಎದ್ದು ಮನೆಯ ಅಂಗಳ, ಹೊಸ್ತಿಲು ಶುಚಿಗೊಳಿಸಿ ರಂಗೋಲಿ ಬಿಡಿಸಿ ಪೂಜೆ ಮಾಡಿ ಲಕ್ಷ್ಮೀಯನ್ನು ಸ್ತುತಿಸುತ್ತಾರೆ. ಅಕ್ಕಿ ತುಂಬಿದ ತಟ್ಟೆ ಮೇಲೆ ಕಳಸವಿಟ್ಟು ಅದಕ್ಕೆ ಮಾವಿನ ಎಲೆ ಹಾಗೂ ತೆಂಗಿನಕಾಯಿ ಇಟ್ಟು ಹೊಸ ಸೀರೆಯನ್ನುಡಿಸಿ ಲಕ್ಷ್ಮಿಯಂತೆ ಶೃಂಗಾರ ಮಾಡಲಾಗುತ್ತದೆ. ಹೀಗೆ ಶೃಂಗಾರ ಮಾಡಿದ ಕಳಸಕ್ಕೆ ಮುತ್ತೈದೆಯರು ಶಕ್ತ್ಯಾನುಸಾರ ತಮ್ಮಲ್ಲಿರುವ ಚಿನ್ನ, ಬೆಳ್ಳಿಯನ್ನು ಲಕ್ಷ್ಮಿಗೆ ತೊಡಿಸುತ್ತಾರೆ. ನಂತರ ವಿಘ್ನನಾಶಕ ಗಣಪತಿಯ ಸ್ತುತಿಯೊಂದಿಗೆ ಪೂಜೆ ಆರಂಭಿಸಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ತನ್ನ ಗಂಡ, ಮಕ್ಕಳಿಗೆ ಆಯುರಾರೋಗ್ಯ, ಸಮೃದ್ಧಿ ಕರುಣಿಸಿ ತನಗೆ ಮುತ್ತೈದೆ ಭಾಗ್ಯ ಕೊಡು ತಾಯಿ ಎಂದು ಲಕ್ಷ್ಮಿಯಲ್ಲಿ ಬೇಡಿಕೊಳ್ಳುತ್ತಾರೆ. ಬಳಿಕ ಅರಿಶಿಣ ನೀರಿನಲ್ಲಿ ಅದ್ದಿದ ಹಸಿನೂಲನ್ನು ಮಹಿಳೆಯರು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಇದನ್ನು ಕಟ್ಟಿಕೊಂಡರೆ ಎಂಥ ಕಷ್ಟದ ಸಮಯದಲ್ಲೂ ಲಕ್ಷ್ಮೀ ತಮ್ಮೊಂದಿಗೆ ಇರುತ್ತಾಳೆ ಎಂಬ ನಂಬಿಕೆ ದಕ್ಷಿಣ ಭಾರತದಲ್ಲಿದೆ.
ಈ ದಿನ ಹೋಳಿಗೆ, ಕೋಸಂಬರಿ, ಪುಳಿಯೊಗರೆ, ಹುಳಿಅನ್ನ, ಹೆಸರುಬೇಳೆ ಪಾಯಸ ಮಾಡುತ್ತಾರೆ. ಸಂಜೆಯಾಗುತ್ತಿದ್ದಂತೆ ಎಲ್ಲ ಮಹಿಳೆಯರು ತುಂಬಾ ಬ್ಯುಸಿಯಾಗುತ್ತಾರೆ. ಎಲ್ಲರ ಮನೆಯಲ್ಲೂ ಸಂಭ್ರಮ ಮತ್ತಷ್ಟು ಕಳೆಪಡೆದುಕೊಳ್ಳುತ್ತದೆ. ಮಹಿಳೆಯರು ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋಗಿ ಬಾಗಿನ ತೆಗೆದುಕೊಂಡು ಬರುತ್ತಾರೆ. ಹೀಗೆ ವರಮಹಾಲಕ್ಷ್ಮೀ ವ್ರತಾಚರಣೆ  ಮಹಿಳೆಯರ ಪಾಲಿನ ಅಚ್ಚುಮೆಚ್ಚಿನ ಹಬ್ಬ.

- ಚಿತ್ರಾ ಸಿ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.