ನ್ಯೂಟನ್ ಬಾಯಲ್ಲಿ ವರ್ಷವಿಡೀ ಫ್ರೀಡಂಗೀತೆ!
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಆ.14
ಸರ್ಪರೋಶೀ ಕೀ ತಮನ್ನಾ, ಅಬ್ ಹಮಾರೆ ದಿಲ್ಮೇ ಹೈ..
ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತಾಂಬೆಯನ್ನು ಶೌರ್ಯ, ಸಾಹಸದಿಂದಲೇ ಬಿಡಿಸಿಕೊಳ್ಳೋಣ ಎನ್ನುವ ಹಟ ತೊಟ್ಟಿದ್ದ ಕ್ರಾಂತಿಕಾರಿಗಳಿಗೆ ಮಂತ್ರವಾಗಿದ್ದ ಈ ಹಾಡನ್ನು ಬರೆದವರಾರು? ಅವರು ಹೇಗೆ ಬಲಿದಾನವಾದರು ಎನ್ನುವುದು ಇಂದಿನ ಹೊಸ ಪೀಳಿಗೆಯ ಬಹುತೇಕರಿಗೆ ಗೊತ್ತಿಲ್ಲ. ಅಷ್ಟೇ ಏಕೆ ಪಿಂಚಣಿ ಪಡೆಯುವ ಕೆಲವು ಸ್ವಾತಂತ್ರ್ಯ ಯೋಧರಿಗೂ ನೆನಪಲ್ಲಿ ಉಳಿದಿಲ್ಲ.
ಆದರೆ, ಬಾಗಲಕೋಟೆಯ ಯುವಕ ಡ್ಯಾನಿಯಲ್ ನ್ಯೂಟನ್ ಬಾಯಲ್ಲಿ ಈ ಹಾಡು ಇಂದಿಗೂ ಮಂತ್ರವಾಗಿದೆ. ಇದನ್ನು ಬರೆದು ಭಾರತೀಯರ ಎದೆಯಲ್ಲಿನ ದೇಶಭಕ್ತಿಯನ್ನು ಬಡಿದೆಬ್ಬಿಸಿದ ರಾಮಪ್ರಸಾದ ಬಿಸ್ಮಿಲ್ಲ ಮತ್ತು ಅವರ ಜತೆಗೆ ಭಾರತ್ ಮಾತಾಕಿ ಜೈ ಎನ್ನುತ್ತಲೇ ನೇಣುಗಂಬ ಏರಿದ ಅಶ್ಪಾಕ್ ಉಲ್ಲಾಖಾನ್ ಸೇರಿದಂತೆ ನೂರಾರು ಕ್ರಾಂತಿಕಾರಿಗಳ ಚರಿತ್ರೆ ಡ್ಯಾನಿಯಲ್ ಬಾಯಲ್ಲಿ ಲಿಂಗಾಷ್ಟಕದಂತೆ ಉದ್ಘೋಷವಾಗುತ್ತವೆ.
ಹಲವರಿಗೆ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಉಕ್ಕಿ ಹರಿಯುವ ದೇಶಪ್ರೇಮ, ರಾಷ್ಟ್ರಭಕ್ತಿ ಧ್ವಜ ಅವರೋಹಣವಾಗುತ್ತಿದ್ದಂತೆ ಎಲ್ಲವೂ ತಣ್ಣಗಾಗುತ್ತದೆ. ಈ ಡ್ಯಾನಿಯಲ್ಗೆ ಮಾತ್ರ ವರ್ಷವಿಡೀ ಸ್ವಾತಂತ್ರ್ಯೋತ್ಸವ. ಮರೆತು ಹೋದ ಮಹಾ ಪುರುಷರನ್ನು ಮತ್ತೆ ಮತ್ತೆ ಜನರ ಮನಸ್ಸಿನಲ್ಲಿ ಚಿರಸ್ಥಾಯಿ ಆಗುವಂತೆ ನೋಡುವುದು ಕೂಡ ದೇಶಪ್ರೇಮವೇ ಎನ್ನುತ್ತಾರೆ ಡ್ಯಾನಿಯಲ್.
ಪದವಿವರೆಗೆ ಓದಿರುವ ಡ್ಯಾನಿಯಲ್ ಹೊಟ್ಟೆ ಪಾಡಿಗಾಗಿ ಸ್ಮರಣಿಕೆ, ಗ್ರೀಟಿಂಗ್ ಕಾರ್ಡ್ ತಯಾರಿಸಿ ಸ್ವಾವಲಂಬಿ ಬದುಕು ಸಾಗಿಸುತ್ತಲೇ ಕ್ರಾಂತಿಕಾರಿ ಸ್ವಾತಂತ್ರ್ಯ ವೀರರ ಕಥನವನ್ನು ಹೊಸ ಪೀಳಿಗೆಗೆ ಮನವರಿಕೆ ಮಾಡುವ ಜತೆಗೆ ಅವರಲ್ಲಿ ರಾಷ್ಟ್ರಭಕ್ತಿಯ ಕೆಚ್ಚು ಹೆಚ್ಚಿಸುವುದನ್ನು ಪೂರ್ಣಪ್ರಮಾಣದ ಕಾಯಕ ಮಾಡಿಕೊಂಡಿದ್ದಾರೆ.
ವರ್ಷವಿಡೀ ಸ್ವಾತಂತ್ರ್ಯೋತ್ಸವ: ಬಾಗಲಕೋಟೆಯ ಬಹುತೇಕರು ಆ.15ರ ಸ್ವಾತಂತ್ರ್ಯೋತ್ಸವದ ಸಿದ್ಧತೆಯಲ್ಲಿದ್ದಾಗ ಈ ಡ್ಯಾನಿಯಲ್ ಹುತಾತ್ಮ ಕುದಿರಾಮ ಬೋಸ್ ಅವರ ಭಾವಚಿತ್ರ ಹಿಡಿದು ಬೀದಿ ಬೀದಿ, ಶಾಲಾ-ಕಾಲೇಜುಗಳನ್ನು ಸುತ್ತುತ್ತಿದ್ದರು. ಭಗತ್ ಸಿಂಗ್ ಪಡೆಯಲ್ಲಿದ್ದ ಅತ್ಯಂತ ಕಿರಿಯ ಯೋಧ ಈ ಕುದಿರಾಮಸಿಂಗ್ ಎನ್ನುವುದು ಹಲವರಿಗೆ ಗೊತ್ತಾದದ್ದು ಈ ಡ್ಯಾನಿಯಲ್ ಹಂಚಿದ ಕರಪತ್ರದಿಂದಲೇ. ಕುದಿರಾಮಸಿಂಗ್ ಮತ್ತು ಪ್ರಪುಲ್ಲಾ ಚೆಕ್ಕಿ ಎಂಬ ಸೇನಾನಿಗಳು ಪಶ್ಚಿಮ ಬಂಗಾಳದಲ್ಲಿದ್ದ ಭಾರತೀಯರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದ, ಬಂಧಿತ ಕೈದಿಗಳಿಗೆ ತನ್ನ ಬೂಟಿನಲ್ಲಿ ನೀರು ಹಾಕಿ ಕುಡಿಸುತ್ತಿದ್ದ ಕಿಂಗ್ಸ್ ಪೋರ್ಟ್ ಎಂಬ ಬ್ರಿಟಿಷ್ ಅಧಿಕಾರಿಯ ಸಾರೋಟದ ಮೇಲೆ ಬಾಂಬ್ ಹಾಕಿದ ಅಪರಾಧಕ್ಕಾಗಿ ಸ್ವಸಂತೋಷದಿಂದ ನೇಣುಗಂಬ ಏರಿದವರು. ಅದೆಷ್ಟು ಭಾರತೀಯರಿಗೆ ಈ ಸತ್ಯ ಗೊತ್ತಿದೆ? ಭಗತ್ ಸಿಂಗ್ಗೆ ಮಾದರಿಯಾದ ಕರ್ತಾರ ಸಿಂಗ್ ಸರಾಬಾ, ಭಗತ್ ಸಿಂಗ್ ಅವರ ಪಾಳೆಯದ ಏಕೈಕ ಮಹಿಳಾ ಸೇನಾನಿ ದುರ್ಗಾಬಾಯಿ, ಚಂದ್ರಶೇಖರ ಆಜಾದ್, ರೋಷನ್ ಸಿಂಗ್, ರಾಜೇಂದ್ರ ಲಹರಿ, ಭಟಕೇಶ್ವರ ದತ್, ಅಜಯ ಗೋಷ್ ಸೇರಿದಂತೆ ನೂರಾರು ರಾಷ್ಟ್ರೀಯ ನಾಯಕರು, ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ಮೈಲಾರ ಮಹಾದೇವ, ಸಿಂಧೂರ ಲಕ್ಷ್ಮಣ, ಸಂಗೊಳ್ಳಿ ರಾಯಣ್ಣ ಮುಂತಾದವರ ಚರಿತ್ರೆ ಡ್ಯಾನಿಯಲ್ ಬಾಯಲ್ಲಿ ಅರಳು ಹುರಿದಂತೆ. ಸ್ವಾತಂತ್ರ್ಯೋತ್ಸವ ಸಮರದಲ್ಲಿ ಹುತಾತ್ಮರಾದ ಇಂಥ ನೂರಾರು ಕ್ರಾಂತಿಕಾರಿಗಳ ಜನನ ಮತ್ತು ಮರಣದ ದಿನಗಳು ನಿತ್ಯ ಎದುರಾಗುತ್ತಲೇ ಇರುತ್ತವೆ. ಆಗೆಲ್ಲ ಅವರ ಭಾವಚಿತ್ರ, ಅವರು ಮಾಡಿದ ಕ್ರಾಂತಿ, ನೇಣುಗಂಬ ಏರುವಾಗಲೂ ಅವರು ಪ್ರದರ್ಶಿಸಿದ ರಾಷ್ಟ್ರಭಕ್ತಿಯ ವಿವರ ಇರುವ ಕರಪತ್ರ ಹಿಡಿದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಂಚುತ್ತಾರೆ. ಹತ್ತಾರು ಜನ ಒಂದೆಡೆ ಸೇರುತ್ತಾರೆಂದರೆ ಅಲ್ಲಿಗೆ ಹೋಗಿ ಆ ಹುತಾತ್ಮರ ಬಗ್ಗೆ ವಿವರಣೆ ನೀಡುತ್ತಾರೆ. ಗೆಳೆಯರು ಸಿಕ್ಕರೆ ಹುತಾತ್ಮರಾದ ಪ್ರಸಂಗವನ್ನು ಬೀದಿ ನಾಟಕದಲ್ಲಿ ಪ್ರದರ್ಶಿಸುತ್ತಾರೆ. ತಾವೇ ತಯಾರಿಸಿದ ಹಲವು ಮಹನೀಯರ ಕಿರು ಚಿತ್ರಗಳನ್ನು ತೋರಿಸುತ್ತಾರೆ. ವರ್ಷದುದ್ದಕ್ಕೂ ಡ್ಯಾನಿಯಲ್ಗೆ ಇದೇ ಕಾಯಕ.
ಸಂಬಳ ರಹಿತ ರಾಷ್ಟ್ರಸೇವೆಯ ಸೇನಾನಿ
ದೇಶಕ್ಕಾಗಿ ಕೆಲಸ ಮಾಡುವವರು ಸಾಕಷ್ಟು ಜನ ನಮ್ಮ ಮಧ್ಯದಲ್ಲಿದ್ದಾರೆ. ಆದರೆ, ಸ್ವಾತಂತ್ರ್ಯ ಸಮರದಲ್ಲಿ ಹುತಾತ್ಮರಾದ ಮಹನೀಯರ ನೆನಪನ್ನು ಸದಾ ಹಸಿರಾಗಿಡಲು ಯತ್ನಿಸುವವರು ಕಡಿಮೆ. ಹಾಗಾಗಿ ಡ್ಯಾನಿಯಲ್ ನಮ್ಮೊಳಗಿನ ರಾಷ್ಟ್ರ ಸೇವೆಯ ಸೇನಾನಿ ಎನಿಸಿದ್ದಾರೆ. ಬಾಲ್ಯದಲ್ಲಿ ಇವರಿಗೆ ಸೈನ್ಯ ಸೇರುವ ಆಸೆ ಇತ್ತಂತೆ. ಆದರೆ, 13 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ಆ ಸೈನ್ಯದ ಕನಸು ಸಾಕಾರ ಮಾಡಿಕೊಳ್ಳಲು ನಿತ್ಯವೂ ಸೈನಿಕರ ವೇಷ ಧರಿಸುತ್ತಾರೆ. ಸ್ವಾತಂತ್ರ್ಯ ಸೇನಾನಿಗಳ ಪ್ರಚಾರ ಮಾಡುತ್ತ ದೇಶಭಕ್ತಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ನಾನೊಬ್ಬ ಸಂಬಳ ರಹಿತ ಸೇನಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಡ್ಯಾನಿಯಲ್, ಬ್ಯಾಗ್ನಲ್ಲಿ ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರ, ಅವರ ಚರಿತ್ರೆಯ ಪುಸ್ತಕ, ಕರಪತ್ರ, ಬ್ಯಾನರ್ ಇರುತ್ತವೆ. ಡ್ಯಾನಿಯಲ್ ಮಾತು- ಕೃತಿಯಲ್ಲಿ ಬರೀ ದೇಶಪ್ರೇಮ. ಅವರ ಉಸಿರಾಟವೇ ರಾಷ್ಟ್ರಭಕ್ತಿ. 37ರ ಹರೆಯದ ಡ್ಯಾನಿಯಲ್ ಮದುವೆಯಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ಹಲವು ಮಹನಿಯರು ಬದುಕನ್ನೇ ರಾಷ್ಟ್ರಕ್ಕೆ ಅರ್ಪಿಸಿಕೊಂಡಿರುವಾಗ ಸ್ವಾರ್ಥ ಬದಿಗಿಟ್ಟು, ಹೀಗೆ ಬದುಕುವುದೇ ನನಗೆ ಇಷ್ಟ ಎನಿಸಿದೆ ಎನ್ನುತ್ತಾರೆ ಡ್ಯಾನಿಯಲ್.
ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

