ಪ್ರಧಾನ ಸುದ್ದಿ

ಮೇಲುಕೋಟೆ 'ಮಾಣಿಕ್ಯ' ಕೃಷಿಯಲ್ಲಿ ಚಾಣಕ್ಯ

Published On :


ಕ.ಪ್ರ.ವಾರ್ತೆ  ಮೈಸೂರು  ಆ. 14
ಅವರಿವರನ್ನು ದೂಷಿಸುತ್ತಾ ಕಾಲ ಕಳೆಯುವ ಬದಲು ಪಾಲಿಗೆ ಬಂದಿದ್ದನ್ನು ಪಂಚಾಮೃತ ಎಂದು ಸ್ವೀಕರಿಸಿ ನಿಷ್ಠೆಯಿಂದ ಶ್ರಮವಹಿಸಿ ಕೆಲಸ ಮಾಡಿದರೆ ಕೃಷಿ ಕೈಹಿಡಿಯುತ್ತದೆ ಎಂಬುದಕ್ಕೆ ಹುಣಸೂರು ತಾಲೂಕು ಹುಸೇನ್‌ಪುರ ಗ್ರಾಮದ ರೈತ ಶಂಕರೇಗೌಡ ನಿದರ್ಶನವಾಗಿದ್ದಾರೆ.
ಒಂದೂವರೆ ದಶಕಗಳಿಂದ ಕೃಷಿಯಲ್ಲಿ ತೊಡಗಿರುವ ಶಂಕರೇಗೌಡ ಮೂಲತಃ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿ ಮಾಣಿಕ್ಯನಹಳ್ಳಿ ಗ್ರಾಮದವರು. ಊರಿನಲ್ಲಿ ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಬದನೆಕಾಯಿ, ಚೆಂಡು ಹೂ, ಕನಕಾಂಬರ, ಸೌತೆಕಾಯಿ, ಸುನಾಮಿಕಾಯಿ ನರ್ಸರಿ ನಡೆಸುತ್ತಿದ್ದರು. ಅಲ್ಲಿಂದಲೇ ಹುಣಸೂರು ತಾಲೂಕಿನ ರೈತರಿಗೆ ಸಸಿಗಳನ್ನು ಪೂರೈಸುತ್ತಿದ್ದರು. ಅಲ್ಲಿಂದ ಬರುವುದು ದೂರ. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಪರಿಚಿತ ಸ್ನೇಹಿತರು ಹುಣಸೂರು ಬಳಿಯೇ ನರ್ಸರಿ ಆರಂಭಿಸುವಂತೆ ಸಲಹೆ ಮಾಡಿ, ಹುಸೇನ್‌ಪುರದಲ್ಲಿ ಎರಡೂವರೆ ಎಕರೆ ಜಮೀನು ಕೊಡಿಸಿದರು. ಶಂಕರೇಗೌಡ ಅಲ್ಲಿ ಕೊಳವೆ ಬಾವಿ ಕೊರೆಸಿ, ಹೂಕೋಸು, ಟೊಮೆಟೋ ಬೆಳೆಯುವುದರ ಜೊತೆಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದು, ಪಾಲಿಹೌಸ್ ನಿರ್ಮಿಸಿಕೊಂಡು, ನರ್ಸರಿ ಆರಂಭಿಸಿದರು. ಕೃಷಿ ಹಾಗೂ ನರ್ಸರಿ- ಎರಡೂ ಕ್ಲಿಕ್ ಆದವು. ಇದೀಗ ಅಲ್ಲಿ ಸಸಿಗಳ ಬೆಳವಣಿಗೆಗೆ ಬೇಕಾದ ಕೋಕೋಫಿಟ್ ಘಟಕವನ್ನು ಆರಂಭಿಸಿದ್ದಾರೆ.
ಹೂಕೋಸಿನ 14,000 ಗಿಡಗಳಿವೆ. ಟೊಮೆಟೋ 8000, ಹೈಬ್ರಿಡ್ ಟೊಮೆಟೋ 3000, ಹುಳಿ ಟೊಮೆಟೋ 8000 ಗಿಡಗಳಿವೆ. ತರಕಾರಿ ಬೆಳೆಗಳಿಗೆ ಕಾಲಕಾಲಕ್ಕೆ ರಾಸಾಯನಿಕ ಗೊಬ್ಬರ ಹಾಕಲಾಗುತ್ತದೆ. ಕ್ರಿಮಿ ಹಾಗೂ ಕೀಟನಾಶಕ ಬಳಸಲಾಗುತ್ತದೆ. ಹೂಕೋಸು ಬೆಳೆಯಲು 15,000 ವೆಚ್ಚವಾಗುತ್ತದೆ. ಎಷ್ಟೇ ಕಡಿಮೆ ಎಂದರೂ 1.44 ಲಕ್ಷ ಆದಾಯ ಬರುತ್ತದೆ. ಆದರೆ, ಟೊಮೆಟೋ ವಿಷಯದಲ್ಲಿ ಆ ರೀತಿ ನಿಖರವಾಗಿ ಹೇಳಲಾಗದು. ಏಕೆಂದರೆ ಒಮ್ಮೆ ಹವಾಮಾನದಲ್ಲಿ ಏರುಪೇರಾದರೆ ಮತ್ತೊಮ್ಮೆ ಮಾರುಕಟ್ಟೆಯಲ್ಲಿಯೇ ಏರುಪೇರು. ಇದೊಂದು ಬೆಳೆಯದು ಹುಚ್ಚು ರೇಟು. ಒಂದು ರೀತಿಯಲ್ಲಿ ಕನ್ನಡ ಸಿನಿಮಾ ಇದ್ದಂತೆ. ಯಾವಾಗ ಕ್ಲಿಕ್ ಆಗುತ್ತೆ, ಯಾವಾಗ ಬಿದ್ದೋಗುತ್ತೆ ಗೊತ್ತಾಗಲ್ಲ ಎಂದು ನಗುತ್ತಾರೆ.
ಒಂದು ಬಾರಿ ಟೊಮೆಟೋ ಬೆಳೆಗೆ ರೇಟು ಬಂದಿದನ್ನು ನೋಡಿ ಸುತ್ತಮುತ್ತಲಿನ ರೈತರೂ ಟೊಮೆಟೋ ಹಾಕುತ್ತಾರೆ. ಆದರೆ, ಉತ್ಪಾದನೆ ಹೆಚ್ಚಾಗಿ ದರ ಕುಸಿಯುತ್ತದೆ. ಒಮ್ಮೆ 5000. ಲಾಭ ಬಂದರೆ ಮತ್ತೊಮ್ಮೆ ದರ ಕುಸಿದಿದ್ದರಿಂದ ಊರಿನಲ್ಲಿ ಮದುವೆ, ಹಬ್ಬ ಮತ್ತಿತರ ಶುಭ ಕಾರ್ಯ ಮಾಡುವವರಿಗೆ ಉಚಿತವಾಗಿ ನೀಡಿದೆ ಎನ್ನುತ್ತಾರೆ ಶಂಕರೇಗೌಡ.
ಆದರೆ, ನರ್ಸರಿಯಿಂದ ಯಾವತ್ತೂ ನಷ್ಟವಾಗಿಲ್ಲ. ಖರ್ಚೆಲ್ಲಾ ಕಳೆದು ವಾರ್ಷಿಕ 1.50 ರಿಂದ 2 ಲಕ್ಷ ಲಾಭ ಸಿಗುತ್ತಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯರು ರೈತರು ಅಷ್ಟೊಂದು ಆಸಕ್ತಿ ತೋರಿಸುತ್ತಿದ್ದಾರೆ.


ರೈತರು ಭೂತಾಯಿಯನ್ನು ನಂಬಿ ಬದುಕಾಟ ನಡೆಸಬೇಕು. ಅತಿ ಆಸೆಯಿಂದ ಹೆಚ್ಚು ಸಾಲ ಮಾಡಿ, ನಷ್ಟ ಮಾಡಿಕೊಳ್ಳಬಾರದು. ಚಿಕ್ಕದರಿಂದ ದೊಡ್ಡದಾಗಿ ಬೆಳೆಯಲು ಪ್ರಯತ್ನಿಸಬೇಕೆ ಹೊರತು ಏಕಾಏಕಿ ದೊಡ್ಡದಾಗಲು ಯತ್ನಿಸಬಾರದು. ಕೃಷಿಯಲ್ಲಿ ಈ ರೀತಿ ಮುನ್ನಡೆದರೆ ಖಂಡಿತಾ ನಷ್ಟವಾಗಲ್ಲ.
   ಶಂಕರೇಗೌಡ, ಹುಸೇನ್‌ಪುರ

 ಅಂಶಿ ಪ್ರಸನ್ನಕುಮಾರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.