ಪ್ರಧಾನ ಸುದ್ದಿ

ಕಸವನಹಳ್ಳಿ ಅಪಾರ್ಟ್‌ಮೆಂಟ್‌ಗಳು ಅಕ್ರಮ

Published On :


ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ. 15
ದೊಡ್ಡ ಪ್ರಾಜೆಕ್ಟ್, ಎತ್ತರದ ಕಟ್ಟಡ. ಮೂರ್ನಾಲ್ಕು ಬ್ಲಾಕ್‌ಗಳಿವೆ. ಬಿಬಿಎಂಪಿ ಅಪ್ರೂವ್ ಮಾಡಿದೆಯಂತೆ... ಬೋರ್ಡ್‌ನಲ್ಲೇ ಹಾಕಿದ್ದಾರೆ. ಅದರ ಸರ್ಟಿಫಿಕೇಟ್ ಕೂಡ ಇದೆ. ಫ್ಲ್ಯಾಟ್ ಖರೀದಿಸಬಹುದು...
ಅಪಾರ್ಟ್‌ಮೆಂಟ್ ಅಥವಾ ಫ್ಲ್ಯಾಟ್ ಖರೀದಿಸಲು ಇಷ್ಟು ಮಾಹಿತಿ ಸಾಕೇ? ಖಂಡಿತಾ ಇಲ್ಲ. ಸಿಲಿಕಾನ್ ಸಿಟಿಯಲ್ಲಿ ಎಷ್ಟು ದಾಖಲೆಗಳನ್ನು ಸಂಗ್ರಹಿಸಿದರೂ ಸಾಕಾಗಲ್ಲ. ಬಿಬಿಎಂಪಿ ಅಥವಾ ಬಿಡಿಎ ನೀಡಿರುವ ಪ್ರಮಾಣ ಪತ್ರ ರದ್ದಾಗಿರುತ್ತದೆ ಎಂಬುದು ಅರಿವಿಗೇ ಬಂದಿರುವುದಿಲ್ಲ. ಹಳೆಯ ಪ್ರಮಾಣಪತ್ರಗಳಲ್ಲೇ ಖರೀದಿ ಪ್ರಕ್ರಿಯೆ ನಡೆಯುತ್ತಿರುತ್ತವೆ. ಕೊನೆಗೆ, ಖಾತೆಗಾಗಿ ಬಿಬಿಎಂಪಿಗೆ ಹೋದಾಗ ಸತ್ಯಾಂಶ ಅರಿವಾಗುತ್ತದೆ.
ಇಂತಹದ್ದೇ ಸ್ಥಿತಿ ಮಹದೇವಪುರದಲ್ಲಿದೆ. ಬಿಬಿಎಂಪಿ ವ್ಯಾಪ್ತಿಯ ಕಸವನಹಳ್ಳಿಯ ಸರ್ವೆ ನಂ.8ರಲ್ಲಿ ನಿರ್ಮಾಣವಾಗುತ್ತಿರುವ ವೈಸ್‌ರಾಯ್ ಸ್ಪ್ಲೆಂಡರ್, ಶರಣ್ಯಾ ಆರ್ಕೇಡ್, ಸಂಜನಾ ಬೃಂದಾವನ ಎಂಬ ಮೂರು ಬೃಹತ್ ಅಪಾರ್ಟ್‌ಮೆಂಟ್‌ಗಳ ನಕ್ಷೆ ಹಾಗೂ ಖಾತೆಯನ್ನೇ ಬಿಬಿಎಂಪಿ ರದ್ದುಮಾಡಲು ಮುಂದಾಗಿದೆ. ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರು ಸೇರಿದಂತೆ ಇತರೆ ಎಂಜಿನಿಯರ್‌ಗಳು ನೋಟಿಸ್ ನೀಡಿಯೂ ಕ್ರಮ ಕೈಗೊಳ್ಳದೆ ಬಿಲ್ಡರ್‌ಗಳ ಜತೆ ಸೇರಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ.
ಮಹದೇವಪುರದ ಕಸವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ವೈಸ್‌ರಾಯ್ ಸ್ಪ್ಲೆಂಡರ್, ಶರಣ್ಯಾ ಆರ್ಕೇಡ್, ಸಂಜನಾ ಬೃಂದಾವನದ ಬಿಲ್ಡರ್‌ಗಳು ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟಿರುವುದರಿಂದ ನಕ್ಷೆ ಹಾಗೂ ಖಾತೆಯನ್ನು ರದ್ದುಪಡಿಸಲು ಬಿಬಿಎಂಪಿ ಜುಲೈ 2ರಂದೇ ನಿರ್ಧರಿಸಿ ನೋಟಿಸ್ ಸಿದ್ಧಪಡಿಸಿದೆ. ಆದರೆ, ಬಿಲ್ಡರ್‌ರಿಂದ ವಲಯದ ಜಂಟಿ ಆಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳಿಗೆ 'ಅನುಕೂಲ' ಆಗಿರುವುದರಿಂದ ಒಂದು ತಿಂಗಳು ಈ ನೋಟಿಸ್ ಜಾರಿಯೇ ಆಗಿರಲಿಲ್ಲ. ಅರ್ಜಿದಾರರ ಒತ್ತಡ ಹೆಚ್ಚಾದ್ದರಿಂದ ಕೊನೆಗೂ ಆಗಸ್ಟ್ 2ರಂದು ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಕಾನೂನು ಪ್ರಕಾರ ಈವರೆಗೂ ಕ್ರಮವಾಗಿಲ್ಲ. ಕನಿಷ್ಠ ನಿರ್ಮಾಣ ಕಾರ್ಯವನ್ನೂ ಸ್ಥಗಿತಗೊಳಿಸಿಲ್ಲ. ಬದಲಿಗೆ ಬಿಬಿಎಂಪಿ ಅಧಿಕಾರಿಗಳೇ ಕಟ್ಟಡ ನಿರ್ಮಾಣ ಬಿರುಸಾಗಲು ಅನುವು ಮಾಡಿಕೊಟ್ಟಿದ್ದಾರೆ.
ಮಹದೇವಪುರ ವಲಯದ ಕಸವನಹಳ್ಳಿ ಗ್ರಾಮದ ಸರ್ವೆ ನಂ.8ರಲ್ಲಿ ವಸತಿ ಸಮುಚ್ಚಯ ಕಟ್ಟಡ ನಿರ್ಮಿಸಲು (ಎಲ್‌ಪಿ 123/ 2012-13 ಹಾಗೂ ಎಲ್‌ಪಿ 230/ 2012-13) ಎರಡು ನಕ್ಷೆಗಳನ್ನು ಮಹದೇವಪುರ ವಲಯದ ಜಂಟಿ ಆಯುಕ್ತರ ಕಚೇರಿಯಿಂದ 2012ರ ಜುಲೈ ಮತ್ತು ನವೆಂಬರ್‌ನಲ್ಲಿ ಮಂಜೂರು ಮಾಡಲಾಗಿದೆ. ಆದರೆ ಈ ಸ್ವತ್ತು ವಿವಾದದಲ್ಲಿದ್ದು ನ್ಯಾಯಾಲಯದಲ್ಲಿದೆ. ಸಿವಿಲ್ ನ್ಯಾಯಾಲಯದಲ್ಲಿ (ಒ.ಎಸ್. ಸಂಖ್ಯೆ 4287/2000) ದಾವೆ ಬಾಕಿ ಇರುವುದರಿಂದ ಈ ಸ್ವತ್ತನ್ನು ಮೂರನೇ ವ್ಯಕ್ತಿಗೆ ಹಕ್ಕು ಸೃಷ್ಟಿ ಮಾಡಬಾರದು ಎಂದು ಐಎ ಇರುವುದಾಗಿ ಸುಶೀಲಾ ಅವರು ದೂರು ಸಲ್ಲಿಸಿದ್ದಾರೆ.
ಇದನ್ನು ಪರಿಶೀಲಿಸಿದ ಜಂಟಿ ಆಯುಕ್ತರು, ಜಗದೀಶ್ ರೆಡ್ಡಿ ಎಂಬುವವರಿಗೆ ನೋಟಿಸ್ ಜಾರಿ ಮಾಡಿ, ಸರ್ವೆ ನಂ. 8ರ ಸ್ವತ್ತಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿರುವುದು, ನಿಜ ಮಾಹಿತಿ ಬಚ್ಚಿಟ್ಟು ಖಾತೆ ಮತ್ತು ನಕ್ಷೆ ಮಂಜೂರು ಮಾಡಿಸಿಕೊಂಡಿದ್ದೀರಿ. ನಿಮ್ಮ ನಕ್ಷೆ ಹಾಗೂ ಖಾತೆಯನ್ನು ಏಕೆ ರದ್ದುಗೊಳಿಸಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್ ಜುಲೈ 2ರಂದು ಸಿದ್ಧವಾಗಿದ್ದರೂ, ಜಾರಿಯಾಗಿರುವುದು ಆಗಸ್ಟ್ 2ರಂದು.
ಕಾರಣ ನೀಡುವ ಕಾಲ ಏಳು ದಿನ ಮುಗಿದಿದ್ದರೂ ಮುಂದಿನ ಕ್ರಮ ಆಗಿಲ್ಲ. ನೋಟಿಸ್ ಜಾರಿ ದಿನದಿಂದಲೇ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಬೇಕು ಎಂದು ಮಾರತ್‌ಹಳ್ಳಿ ಉಪ ವಿಭಾಗದ ಎಇಇ ಅವರಿಗೆ ಸೂಚಿಸಿದ್ದರೂ ಕಟ್ಟಡ ಕಾಮಗಾರಿ ಚುರುಕುಗೊಂಡಿದೆ.
ವೈಸ್‌ರಾಯ್ ಸ್ಪ್ಲೆಂಡರ್, ಶರಣ್ಯಾ ಆರ್ಕೇಡ್, ಸಂಜನಾ ಬೃಂದಾವನದಲ್ಲಿ ಫ್ಲ್ಯಾಟ್ ಖರೀದಿಸುವ ಗ್ರಾಹಕರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಷ್ಟೊಂದು ಅಕ್ರಮವಾಗಿದ್ದರೂ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಿ ಅಲ್ಲೊಂದು ನೋಟಿಸ್ ಅಂಟಿಸಿ ನಾಗರಿಕರನ್ನು ಎಚ್ಚೆತ್ತುಕೊಳ್ಳುವಂತೆಯೂ ಮಾಡಿಲ್ಲ. ಬಿಬಿಎಂಪಿಗೆ ಬಿಲ್ಡರ್‌ಗಳ ಮೇಲಿರುವ ಕಾಳಜಿ ಬೇರೆ ರೀತಿಯದ್ದು. ಇದೆಲ್ಲ ಮುಗಿದ ಮೇಲೆ ವೈಯಕ್ತಿಕ ಖಾತೆಗೆ ಹೋದಾಗ ಇದೆಲ್ಲವನ್ನು ಮುಂದಿಡುತ್ತಾರೆ. ನೀರು ಕೊಡಲ್ಲ, ಒಳಚರಂಡಿ ಸಂಪರ್ಕ ಕೊಡಲ್ಲ ಎನ್ನುತ್ತಾರೆ. ಬಿಬಿಎಂಪಿಯ ಇಂತಹ ಕಾರ್ಯವೈಖರಿ ನಾಗರಿಕರಿಗೆ ಸಂಕಷ್ಟ ತಂದಿಟ್ಟಿದೆ.



ರಕ್ಷಣೆಗೆ ಬಾರದ ಬಿಎಂಟಿಎಫ್
ಈ ಬೃಹತ್ ಕಟ್ಟಡಗಳಿಗೆ ಅಕ್ರಮವಾಗಿ ನಕ್ಷೆ ಹಾಗೂ ಖಾತೆ ನೀಡಿರುವ ಬಗ್ಗೆ ಏಳು ದಿನಗಳಲ್ಲಿ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಬಿಎಂಟಿಎಂಫ್ ಮುಖ್ಯಸ್ಥರು ಸೂಚಿಸಿದ್ದರು. ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕರಿಗೆ ಈ ಸೂಚನೆ ನೀಡಿದ್ದು ಆಗಸ್ಟ್ 20ರಂದು. ಆದರೆ, ಬಿಎಂಟಿಎಫ್‌ಗೆ ವರದಿಯೂ ಬಂದಿಲ್ಲ, ಬಿಎಂಟಿಎಫ್ ಕೂಡ ಮುಂದಿನ ಕ್ರಮ ಕೈಗೊಂಡಿಲ್ಲ. ಮಹದೇವಪುರ ವಲಯದ ವರ್ತೂರು ಹೋಬಳಿ ಕಸವನಹಳ್ಳಿಯ ಸರ್ವೆ ನಂ.8ರಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಅಕ್ರಮವಾಗಿ ನಕ್ಷೆ ಮಂಜೂರು ಮಾಡಲಾಗಿದೆ. 20 ಅಡಿ ಇರುವ ರಸ್ತೆಯನ್ನು 40 ಅಡಿ ಎಂದು ಇಲ್ಲದ ರಸ್ತೆಯನ್ನು ತೋರಲಾಗಿದೆ ಎಂದು ಎಂ.ಪಿ. ರಾಮ್‌ಪ್ರಸಾದ್ ಅವರು ಬಿಎಂಟಿಎಫ್‌ಗೆ ದಾಖಲೆ ಸಹಿತ ದೂರು ನೀಡಿದ್ದರು. ಇದನ್ನು ಪರಿಶೀಲಿಸಿ, ಅನಧಿಕೃತ ಕಟ್ಟಡ ನಿರ್ಮಾಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಬಿಎಂಟಿಎಫ್ ಸೂಚನೆ ನೀಡಿತ್ತು. ಆದರೆ, ಎಲ್ಲವನ್ನೂ ಮುಚ್ಚಿಟ್ಟು, ಕಣ್ಣಾಮುಚ್ಚಾಲೆ ಆಡುತ್ತಿರುವ ಬಿಬಿಎಂಪಿ ಮಹದೇವಪುರ ವಲಯ ಅಧಿಕಾರಿಗಳು, ಒಂದು ಕಡೆ ನೋಟಿಸ್ ನೀಡುವಂತೆ ಮಾಡಿ, ಮತ್ತೊಂದು ಕಡೆ ಕಟ್ಟಡ ನಿರ್ಮಾಣ ಮತ್ತಷ್ಟು ವೇಗವಾಗಲು ಅನುವು ಮಾಡಿಕೊಟ್ಟಿದ್ದಾರೆ.


 ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.