'ಕ್ಷೀರ ಭಾಗ್ಯ'ಕ್ಕೆ ಸಕ್ಕರೆ ಕೊರತೆ!
ಕನ್ನಡಪ್ರಭ ವಾರ್ತೆ ಕೊಪ್ಪಳ ಆ.15
'ಕ್ಷೀರಭಾಗ್ಯ' ಯೋಜನೆಯಡಿ ಸರ್ಕಾರವೇನೋ ಹಾಲು ಕೊಟ್ಟಿದೆ. ಆದರೆ, ಅದಕ್ಕೆ ಸಕ್ಕರೆ ಕೊಡುವವರು ಯಾರು?
ಇಂಥದೊಂದು ಪ್ರಶ್ನೆ ಈಗ ಎದುರಾಗಿದ್ದು ಸದ್ಯ ಎಸ್ಡಿಎಂಸಿಯಲ್ಲಿರುವ ಹಣದಿಂದ ಸಕ್ಕರೆ ಖರೀದಿಸಲಾಗುತ್ತಿದೆ. ಆದರೆ, ಅಂಗನವಾಡಿಯಲ್ಲಿನ ಮಕ್ಕಳ ಹಾಲಿಗೆ ಸಕ್ಕರೆ ಎಲ್ಲಿಂದ ಹಾಕುವುದು ಎನ್ನುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪ್ರಶ್ನಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಅಧಿಕಾರಿಗಳು ನೀವೇ ಹಾಕಿ ಎಂದು ಹೇಳಿ ಸಾಗು ಹಾಕಿದ್ದಾರೆ. ವಾರದಲ್ಲಿ ಮೂರು ದಿನ ಕೊಡುವ ಹಾಲಿಗೆ ಪ್ರತಿ ಸಾರಿಯೂ ಎಲ್ಲಿಂದ ತಂದು ಸಕ್ಕರೆ ಹಾಕುವುದು? ಅಧಿಕಾರಿಗಳು ಹೇಳಿದಂತೆ ಸ್ವಂತ ಖರ್ಚಿನಲ್ಲಿಯೇ ಹಾಕಿದರೆ ಕೊಡುವ ಅಲ್ಪಸ್ವಲ್ಪ ವೇತನ ಹಾಲಿಗೆ ಸಕ್ಕರೆ ಹಾಕಲೂ ಸಾಲುವುದಿಲ್ಲ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.
ಸರ್ಕಾರ ರಾಜ್ಯಾದ್ಯಂತ ಅಂಗನವಾಡಿ ಮಕ್ಕಳಿಗೆ ಹಾಗೂ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಹಾಲು ವಿತರಣೆ ಮಾಡುವಂತೆ ಆದೇಶ ಮಾಡಿದೆ. ಶಾಲೆಯಲ್ಲಿನ ಮಕ್ಕಳಿಗೆ ನೀಡುವ ಹಾಲಿಗೆ ಬೆರೆಸಬೇಕಾದ ಸಕ್ಕರೆಯನ್ನು ಎಸ್ಡಿಎಂಸಿ (ಶಾಲಾ ಸುಧಾರಣಾ ಸಮಿತಿ)ಯಲ್ಲಿರುವ ಹಣವನ್ನೇ ಬಳಕೆ ಮಾಡಿಕೊಳ್ಳುವಂತೆ ಹೇಳಿರುವುದರಿಂದ ಇಲ್ಲಿ ಅಷ್ಟಾಗಿ ಸಮಸ್ಯೆಯಾಗುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಮಿತಿಯಲ್ಲಿರುವ ಶಾಲೆಯಲ್ಲಿ ಅಂಥ ಸಮಸ್ಯೆ ಇಲ್ಲವಾದರೂ, ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಇರುವ ಕಡೆ ಶಾಲೆಯಲ್ಲಿಯೂ ಸಮಸ್ಯೆಯಾಗಿದೆ.
ಹಾಲು ಸಿಹಿಯಾಗಲು ಹಾಲಿನ ಪೌಡರ್ನಷ್ಟೇ ಸಕ್ಕರೆ ಹಾಕಬೇಕು. ಸಕ್ಕರೆ ಬೆರೆಸಿದರೆ ಮಾತ್ರ ಮಕ್ಕಳು ಹಾಲು ಕುಡಿಯುತ್ತಾರೆ. ಈಗ ಇರುವ ನಿಯಮಾನುಸಾರ 18 ಗ್ರಾಂ ಹಾಲಿನ ಪುಡಿಗೆ 20 ಗ್ರಾಂ ಸಕ್ಕರೆ ಬೆರೆಸುವಂತೆ ಸಲಹೆ ನೀಡಲಾಗಿದೆ. ಅಂದರೆ ಒಂದು ಕೆಜಿ ಹಾಲಿನ ಪುಡಿ ಬಳಕೆ ಮಾಡುವ ಶಾಲೆಯಲ್ಲಿ ಒಂದು ಕೆಜಿಗೂ ಅಧಿಕ ಪ್ರಮಾಣದ ಸಕ್ಕರೆ ಬೇಕಾಗುತ್ತದೆ. ಹೀಗಾಗಿ ಶಾಲೆಗಳಲ್ಲಿಯೂ ಇದು ತೀವ್ರ ಸಮಸ್ಯೆಯಾಗಿದೆ. ಕೆಲವು ಶಾಲೆಗಳ ಎಸ್ಡಿಎಂಸಿಯಲ್ಲಿ ಹಣ ಇಲ್ಲದಿರುವುದರಿಂದ ಸಕ್ಕರೆ ಬೆರಸದೆ ಹಾಗೇ ಕೊಡುತ್ತಿರುವುದರಿಂದ ಮಕ್ಕಳು ತಿರಸ್ಕರಿಸುತ್ತಿದ್ದಾರೆ.
ಇನ್ನು ಶಾಲೆಯಲ್ಲಿಯೇ ಈ ಸ್ಥಿತಿ ಇರುವುದರಿಂದ ಅಂಗನವಾಡಿಗಳಲ್ಲಿನ ಸ್ಥಿತಿ ಹೇಗಿರಬೇಡ? ಅಲ್ಲಿ ಯಾವುದೇ ಹಣ ಇರುವುದಿಲ್ಲ. ಈಗ ಅಧಿಕಾರಿಗಳು ನೀಡಿರುವ ಮೌಖಿಕ ಸಲಹೆಯಂತೆ ಅಂಗನವಾಡಿಗಳಿಗೆ ಇತರೆ ಖರ್ಚಿಗಾಗಿ ಎಂದು ಪ್ರತಿ ತಿಂಗಳು 50 ನೀಡಲಾಗುತ್ತದೆ. ಇದನ್ನೇ ಸಕ್ಕರೆಗೆ ಬಳಕೆ ಮಾಡಿಕೊಳ್ಳುವಂತೆ ಹೇಳಲಾಗಿದೆ. ಆದರೆ, ಆ 50 ಪೊರಕೆ, ಪೀನಾಯಿಲ್ ಸೇರಿದಂತೆ ಅಂಗನವಾಡಿ ಸ್ವಚ್ಛ ಮಾಡಲು ಬೇಕಾಗುವ ಸಾಮಗ್ರಿಗೆ ಬಳಕೆ ಮಾಡಲಾಗುತ್ತದೆ. ಈಗ ಸಕ್ಕರೆಗೂ ಅದೇ 50 ಬಳಕೆ ಮಾಡಿಕೊಳ್ಳಿ, ಕಡಿಮೆ ಬಿದ್ದರೆ ನೀವೇ ಕೈಯಿಂದ ಹಾಕಿ ಎಂದು ಅಧಿಕಾರಿಗಳು ಮೌಖಿಕ ತಾಕೀತು ಮಾಡಿದ್ದಾರೆ. ಇದರಿಂದ ಅಂಗನವಾಡಿ ಕಾರ್ಯಕತೆರ್ಯರಿಗೆ ದಿಕ್ಕು ತೋಚದಂತಾಗಿದೆ.
ಸಮಸ್ಯೆ ಸರಿಪಡಿಸಲು ಆಗ್ರಹ: ಹಾಲು ಕೊಟ್ಟಿರುವ ಸರ್ಕಾರ ಕೂಡಲೇ ಅದಕ್ಕೆ ಬೆರೆಸುವ ಸಕ್ಕರೆಯನ್ನು ಕೊಡುವುದಾಗಲಿ ಇಲ್ಲವೇ ಅದಕ್ಕೆ ಅನುದಾನ ಬಿಡುಗಡೆ ಮಾಡುವ ಕ್ರಮಕೈಗೊಳ್ಳುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಆಗ್ರಹಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಇದಕ್ಕೊಂದು ಪರಿಹಾರ ಸೂಚಿಸುವಂತೆಯೂ ಒತ್ತಾಯಿಸಿದ್ದಾರೆ.
ಹಾಲು ಕೊಟ್ಟಿರುವ ಸರ್ಕಾರ ಅದಕ್ಕೆ ಬೆರೆಸಬೇಕಾದ ಸಕ್ಕರೆ ನೀಡಿಲ್ಲ. ಸಕ್ಕರೆಯನ್ನು ನಮ್ಮ ಸ್ವಂತ ಹಣದಿಂದ ಖರೀದಿಸುವಂತೆ ಅಧಿಕಾರಿಗಳು ಹೇಳುತ್ತಾರೆ. ವಾರದಲ್ಲಿ ಮೂರು ದಿನ ಕೊಡುವ ಹಾಲಿಗೆ ಸಕ್ಕರೆ ಹಾಕಬೇಕು ಎಂದಾದರೆ ನಮಗೆ ಬರುವ ವೇತನವೆಲ್ಲ ಅದಕ್ಕೆ ಖರ್ಚಾಗುತ್ತದೆ. ಸರ್ಕಾರ ಇದಕ್ಕೆ ಪರಿಹಾರ ಸೂಚನೆ ಮಾಡಬೇಕು.
ಟಿ ಅಂಗನವಾಡಿ ಕಾರ್ಯಕರ್ತೆ
ಹಾಲು ಕೊಟ್ಟಿರುವ ಸರ್ಕಾರ ಅದಕ್ಕೆ ಸಕ್ಕರೆ ನೀಡಬೇಕು. ಅದು ಬಿಟ್ಟು ಅಂಗನವಾಡಿ ಕಾರ್ಯಕರ್ತೆಯರೇ ಕೈಯಿಂದ ಹಾಕಿಕೊಳ್ಳಬೇಕು ಎಂದರೆ ಯಾವ ನ್ಯಾಯ? ಇದನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುತ್ತೇವೆ.
ಟಿ ಬಸವರಾಜ ಶೀಲವಂತರ, ಎಐಟಿಯುಸಿ ಸಂಚಾಲಕ
-ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

