ಭ್ರಷ್ಟಾಚಾರ ಮುಕ್ತವಾಗಲು ಮಾರ್ಗಸೂಚಿ

ನವದೆಹಲಿ: ಮಹತ್ತರ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ)ಯ ಸಂವಿಧಾನಕ್ಕೆ ತರಲಾಗಿರುವ ತಿದ್ದುಪಡಿಗೆ ಅನುಮೋದನೆ ನೀಡಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ), ಐಒಎ ಪದಾಧಿಕಾರಿಗಳ ಚುನಾವಣೆಗೆ ಸಂಬಂಧಿಸಿದಂತೆ, ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ.
ಸುಮಾರು 43 ಪುಟಗಳ ಸಂವಿಧಾನ ತಿದ್ದುಪಡಿ ಕರಡನ್ನು ಐಒಎಗೆ ರವಾನಿಸಿರುವ ಐಒಸಿ, ಕಳಂಕಿತರಿಗೆ ಐಒಎ ಚುನಾವಣೆಯಲ್ಲಿ ನಿಲ್ಲಲು ಯಾವುದೇ ಅವಕಾಶವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಅಲ್ಲದೇ, ಭಾರತದ ಅತ್ಯುನ್ನತ ಕ್ರೀಡಾ ಸಂಸ್ಥೆಯನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಮಾತೃಸಂಸ್ಥೆ, ಈ ಬಗ್ಗೆ ಸಂವಿಧಾನ ತಿದ್ದುಪಡಿಯ ಕರಡಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರದ ಸುಳಿಯೊಳಗೆ ಸಿಲುಕಿದ್ದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯನ್ನು ಶುದ್ಧೀಕರಿಸುವ ಬಗ್ಗೆ ಐಒಎ ಸಾಕಷ್ಟು ತಲೆಕೆಡಿಸಿಕೊಂಡಿರುವುದ ಅದು ಕಳುಹಿಸಿರುವ 43 ಪುಟಗಳ ಸಂವಿಧಾನ ತಿದ್ದುಪಡಿಯ ಕರಡು ಪ್ರತಿಯಲ್ಲಿ ವ್ಯಕ್ತವಾಗುತ್ತದೆ.
ಕಳಂಕಿತರು ಸಂಸ್ಥೆಯ ಚುನಾವಣೆಯಲ್ಲಿ ನಿಲ್ಲುವುದಷ್ಟೇ ಅಲ್ಲ, ಅಂತಹ ವ್ಯಕ್ತಿಗಳನ್ನು ಸಂಸ್ಥೆಯಿಂದ ದೂರವಿಡಲೂ ಐಒಸಿ ನಿರ್ಧರಿಸಿರುವುದು ಸ್ಪಷವಾಗಿದೆ. ಈ ಬಗ್ಗೆ ಸ್ಪಷ್ಟವಾಗಿ ಹೇಳಿರುವ ಐಒಸಿ, 'ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಯಾವುದೇ ಅಧಿಕಾರಿ ಅಥವಾ ಕಾರ್ಯಕಾರಿಣಿ ಮಂಡಳಿಯ ಯಾವುದೇ ಸದಸ್ಯ ಅಲ್ಲದೇ, ಐಒಎನಲ್ಲಿ ಸಕ್ರಿಯರಾಗಿರುವ ಯಾವುದೇ ಸದಸ್ಯರಾಗಲೀ ಅಥವಾ ಪದಾಧಿಕಾರಿಯಾಗಲೀ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಹಾಕಿಕೊಂಡರೆ, ಅಂಥವನ್ನು ಅಮಾನತುಗೊಳಿಸುವ ಹಾಗೂ ಅವರ ಆರೋಪ ಸಾಬೀತಾದಲ್ಲಿ ಅವರನ್ನು ಸಂಪೂರ್ಣವಾಗಿ ಸಂಸ್ಥೆಯಿಂದ ಕೈಬಿಡುವ ಪ್ರಸ್ತಾವನೆಯನ್ನೂ ಐಒಸಿ ಮಾಡಿದ್ದು, ಇದರಿಂದ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದಿರುವಂತೆ ಹಾಲಿ ಸದಸ್ಯರಿಗೆ ಹಾಗೂ ಪದಾಧಿಕಾರಿಗಳಿಗೆ ಪರೋಕ್ಷವಾದ ಎಚ್ಚರಿಕೆಯನ್ನೂ ಅದು ನೀಡಿದೆ.
ಐಒಸಿ ಸೂಚನೆಯೇನು?: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಸರಾಗ ಕಾರ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಹಲವಾರು ಮಾರ್ಗಸೂಚಿಗಳನ್ನು ಕರಡು ಪ್ರತಿಯಲ್ಲಿ ನೀಡಿರುವ ಐಒಸಿ, ಸಂಸ್ಥೆಯ ಪದಾಧಿಕಾರಿಗಳ ಚುನಾವಣೆಗೆ ಕೆಲವೊಂದು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ.
ಉಮೇದುವಾರಿಕೆ ನಿಯಮ: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆಗೆ ನಿಲ್ಲುವ ಅಭ್ಯರ್ಥಿಯು ಭಾರತೀಯ ನಾಗರಿಕನಾಗಿದ್ದು, ಆತ (ಅಥವಾ ಆಕೆ) ದೇಶದ ನಾಗರಿಕ ಹಕ್ಕುಗಳ ಸ್ವಾಮ್ಯತೆಯನ್ನು ಹೊಂದಿರಬೇಕು. ಅಲ್ಲದೇ, ದೇಶದ ಯಾವುದೇ ನ್ಯಾಯಾಲಯದಲ್ಲಿ ಆತನ (ಅಥವಾ ಆಕೆಯ) ವಿರುದ್ಧ ಭ್ರಷ್ಟಾಚಾರ ಹಾಗೂ ಇನ್ನಿತರ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರಬಾರದು. ಅಲ್ಲದೇ, ಜೈಲು ಶಿಕ್ಷೆಗೆ ಅರ್ಹನಾಗಿರುವಂಥ ಅಪರಾಧಗಳನ್ನು ಆತ ಎದುರಿಸುವವನಾಗಿದ್ದರೆ, ಆತನಿಗೆ ಐಒಎ ಚುನಾವಣೆಯ ಪದಾಧಿಕಾರಿಗಳ ಚುನಾವಣೆಗೆ ನಿಲ್ಲುವ ಯಾವುದೇ ಅರ್ಹತೆಯಿಲ್ಲ ಎಂದು ಐಒಸಿ ಸ್ಪಷ್ಟವಾಗಿ ಹೇಳಿದೆ.
ಆರೋಪಿತರು ಅಮಾನತು: ಇನ್ನು, ಚುನಾಯಿತ ಅಭ್ಯರ್ಥಿಗೆ ಅಥವಾ ಐಒಎ ಸದಸ್ಯರ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದಲ್ಲಿ ಆ ಬಗ್ಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಐಒಸಿ ಸ್ಪಷ್ಟವಾಗಿ ಹೇಳಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಯಾವುದೇ ಚುನಾಯಿತ ಅಧಿಕಾರಿ ಅಥವಾ ಕಾರ್ಯಕಾರಿಣಿ ಮಂಡಳಿಯ ಯಾವುದೇ ಸದಸ್ಯ ಅಥವಾ ಐಒಎ ಅಧೀನದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಆಯೋಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯು ಭ್ರಷ್ಟಾಚಾರದ ಆರೋಪ ಎದುರಿಸಿದರೆ, ಅಥವಾ ಅಂಥ ಪ್ರಕರಣಗಳು ದೇಶದ ಯಾವುದೇ ನ್ಯಾಯಾಲಯದ ಮೆಟ್ಟಿಲೇರಿದ್ದರೆ, ಅಂಥ ವ್ಯಕ್ತಿಗಳನ್ನು ತಕ್ಷಣ ಅಮಾನತು ಮಾಡಬೇಕೆಂದು ಐಒಸಿ ಕಟ್ಟುನಿಟ್ಟಾಗಿ ಹೇಳಿದೆ. ಆರೋಪ ಹೊತ್ತ ವ್ಯಕ್ತಿಯ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಆ ವ್ಯಕ್ತಿಯ ಅಮಾನತು ಮುಂದುವರಿಯಲಿದೆ ಎಂದು ಐಒಸಿ ಹೇಳಿದೆ. ಅಲ್ಲದೇ, ತೀರ್ಪಿನನ್ವಯ ಆರೋಪಿಯು ಜೈಲು ಶಿಕ್ಷೆಗೆ ಗುರಿಯಾದರೆ, ಆ ವ್ಯಕ್ತಿಯು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯಿಂದ ತಂತಾನೆ ವಜಾಗೊಳ್ಳಲಿದ್ದಾನೆ.
ಕುತೂಹಲಕಾರಿ ವಿಷಯ: ಐಒಸಿ ನೀಡಿರುವ ಮಾರ್ಗಸೂಚಿಗಳಲ್ಲಿ ಕುತೂಹಲಕಾರಿ ವಿಷಯವೊಂದಿದೆ. ಅದೇನೆಂದರೆ, ಕೇಂದ್ರ ಕ್ರೀಡಾ ಇಲಾಖೆ ರೂಪಿಸಿರುವ ರಾಷ್ಟ್ರೀಯ ಕ್ರೀಡಾನೀತಿಯ ಕೆಲವೊಂದು ಅಂಶಗಳನ್ನು ಐಒಸಿಯ ಹೊಸ ಮಾರ್ಗಸೂಚಿಯು ಹೋಲುತ್ತದೆ. ರಾಷ್ಟ್ರೀಯ ಕ್ರೀಡಾನೀತಿ ಬಗ್ಗೆ ಈ ಮೊದಲು ಐಒಸಿ ತನ್ನ ಅಸಮಾಧಾನ ಸೂಚಿಸಿತ್ತು. ಈಗ, ಹೊಸದಾಗಿ ನೀಡಿರುವ ಐಒಸಿ ಸಂವಿಧಾನ ಕರಡು ಪ್ರತಿಯಲ್ಲಿ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಅದು ಸಂಪೂರ್ಣವಾಗಿ ಒಪ್ಪಿಕೊಂಡಿರುವಾಗಿ ಎಲ್ಲಾ ಸ್ಪಷ್ಟವಾಗಿ ಹೇಳಿಲ್ಲದಿದ್ದರೂ, ಸಂಸ್ಥೆಯ ಪದಾಧಿಕಾರಿಗಳ ಅಧಿಕಾರಾವಧಿಯ ಬಗ್ಗೆ ಅದು ನೀಡಿರುವ ಸೂಚನೆಗಳು ಕೇಂದ್ರ ಕ್ರೀಡಾ ಇಲಾಖೆ ರೂಪಿಸಿರುವ ರಾಷ್ಟ್ರೀಯ ಕ್ರೀಡಾ ನೀತಿಯನ್ನು ತನ್ನಲ್ಲಿ ಅಳವಡಿಸಿಕೊಳ್ಳಲು ಸ್ವಾತಂತ್ರ್ಯವನ್ನು ಐಒಎಗೆ ಅದು ಕೊಟ್ಟಿದೆ.
ಐಒಎನ ಹಾಗೂ ಅದರ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಆಯೋಗದ ಪದಾಧಿಕಾರಿಗಳು ನಾಲ್ಕು ಬಾರಿ ಮಾತ್ರ ಆ ಹುದ್ದೆಗೆ ಆಯ್ಕೆಯಾಗಹುದೆಂದು ಐಒಸಿ ಹೇಳಿದೆ. ಇದರಿಂದ, ಹಲವಾರು ವರ್ಷಗಳ ಕಾಲ ಸಂಸ್ಥೆಯ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಸ್ವೇಚ್ಛಾಚಾರಕ್ಕೆ ಅಥವಾ ಅಧಿಕಾರ ದಾಹಕ್ಕೆ ಅದು ಕಡಿವಾಣ ಹಾಕಿದೆ. ಈ ಅಂಶ, ರಾಷ್ಟ್ರೀಯ ಕ್ರೀಡಾ ನೀತಿಯಲ್ಲೂ ಉಲ್ಲೇಖವಾಗಿರುವುದರಿಂದ, ಐಒಸಿಯ ಈ ಸೂಚನೆ ಅದಕ್ಕೆ ಹೋಲುತ್ತದೆ. ಆದರೆ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅಧಿಕಾರಿಯೊಬ್ಬರ ಅಧಿಕಾರಾವಧಿಯನ್ನು ವಿಸ್ತರಿಸುವ ಹಕ್ಕು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ)ಗೆ ಬಿಟ್ಟದ್ದು' ಎಂದೂ ಅದು ಹೇಳಿದೆ. ಅಲ್ಲದೇ, ಚುನಾವಣೆಗೆ ನಿಲ್ಲುವ ಅಭ್ಯರ್ಥಿಯ ವಯೋವುತಿಯ ನಿರ್ಧಾರದ ಹಕ್ಕನ್ನೂ ಐಒಎಗೇ ನೀಡಲಾಗಿದೆ.
ಅಂತೂ ಇಂತೂ, ಭ್ರಷ್ಟಾಚಾರದಿಂದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯನ್ನು ಮುಕ್ತವಾಗಿಸುವ ಹಿನ್ನೆಲೆಯಲ್ಲಿ, ದೃಢವಾದ ಹೆಜ್ಜೆಯನ್ನಿಟ್ಟಿರುವ ಈ ಮೂಲಕ, ಕಳಂಕಿತರನ್ನು ಸಂವಿಧಾನ ತಿದ್ದುಪಡಿಯನ್ನು ಅಸ್ತ್ರವಾಗಿಸಿಕೊಂಡು ವ್ಯವಸ್ಥಿತವಾಗಿಯೇ ದೂರವಿಟ್ಟಿದೆ.
2010ರ ಕಾಮನ್ವೆಲ್ತ್ ಗೇಮ್ಸ್ ಪಂದ್ಯಾವಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಹೊತ್ತಿರುವ ಐಒಎನ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರು, ಈಗಾಗಲೇ ದೇಶದ ಯಾವುದೇ ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆಗೆ ನಿಲ್ಲುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಲ್ಲದೇ, ಈಗ ಚುನಾವಣೆ ನಡೆದರೆ, ಸಂಸ್ಥೆಯ ಆಯಕಟ್ಟಿನ ಹುದ್ದೆಗಳಿಗೆ ಬರಲು ತವಕಿಸುತ್ತಿದ್ದ ಹಲವಾರು ಆರೋಪಿತರಿಗೂ ಇದರಿಂದ ನಿರಾಸೆ ಉಂಟಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


