ಪ್ರಧಾನ ಸುದ್ದಿ

ಓ ದೇವ್ರೇ.. ನಿನ್ನನ್ಯಾರು ಕಾಪಾಡ್ತಾರೆ?

Published On :

ಕ.ಪ್ರ.ವಾರ್ತೆ    ಬೆಂಗಳೂರು    ಆ. 16
ಮನೆ ಬಾಗಿಲು ಹಾಕಿ ಹೊರಗೆ ಹೋಗುವಾಗ 'ದೇವರೇ ನಮ್ಮನ್ನು, ಮನೆಯನ್ನು ಕಾಪಾಡಪ್ಪಾ' ಎನ್ನೋದು ವಾಡಿಕೆ ಮತ್ತು ನಂಬಿಕೆ.
ಆದರೆ, ಈ ಜಗತ್ರಕ್ಷಕ ತನ್ನದೇ ಆಸ್ತಿ ರಕ್ಷಿಸಿಕೊಳ್ಳಲು ಪರಿತಪಿಸುತ್ತಿದ್ದಾನೆ. ಏಕೆಂದರೆ, ದೇವರ ತಾಣವನ್ನೇ ಕಳ್ಳರು ಕಾರ್ಯಸ್ಥಾನ ಮಾಡಿಕೊಂಡಿದ್ದಾರೆ. ಆದರೂ ಮುಜರಾಯಿ ಸಚಿವರಿಗೆ ಇತ್ತ ಗಮನವೇ ಇಲ್ಲ.
ಹೌದು, ರಾಜ್ಯದ ದೇಗುಲಗಳಲ್ಲಿರುವ ದೇವರಿಗೇ ರಕ್ಷಣೆ ಇಲ್ಲ. ಜಗ ಕಾಯುವ ದೇವರು ತನ್ನ ಆಸ್ತಿ ಅಥವಾ ವಸ್ತುಗಳನ್ನು ಕಾಪಾಡಿಕೊಳ್ಳಲು ಅಸಮರ್ಥ. ಅದಕ್ಕೇ ಕಳ್ಳರು ದೇವಸ್ಥಾನಕ್ಕೇ ಕನ್ನ ಹಾಕುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಸುಮಾರು 2.75 ಕೋಟಿ ಮೌಲ್ಯದ ಸ್ವತ್ತನ್ನು ಲಪಟಾಯಿಸಿದ್ದಾರೆ.
ದೇವಸ್ಥಾನದಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡರೇ ದೇವರು ಶಿಕ್ಷಿಸುತ್ತಾನೆ. ಇನ್ನು ಕಳ್ಳತನ ಮಾಡಿದರೆ ಬಿಟ್ಟಾನೆಯೇ? ಕಳ್ಳನನ್ನು ಹಾಗೇ ಬಿಟ್ಟಿದ್ದಾನೋ ಇಲ್ಲವೋ ಅದರ ಬಗ್ಗೆ ಮಾಹಿತಿ ಇಲ್ಲ. ಆದರೆ, ದೇವಸ್ಥಾನದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳಲ್ಲಿ ಶೇ.68ರಷ್ಟರಲ್ಲಿ ಕಳ್ಳರೇ ಸಿಕ್ಕಿಲ್ಲ.
ರಾಜ್ಯದ ದೇವಸ್ಥಾನಗಳಲ್ಲಿ 2012ರಲ್ಲಿ 435 ಕಳವು ಪ್ರಕರಣಗಳು ದಾಖಲಾಗಿವೆ. 2013ರಲ್ಲಿ ಜೂನ್ವರೆಗೆ ಈ ಸಂಖ್ಯೆ 209. ದೇವಸ್ಥಾನಗಳಲ್ಲಿ ಕಳೆದ ವರ್ಷ ಕಳವಾದ ವಸ್ತುಗಳ ಮೌಲ್ಯ 1,81,08,007. ಈ ವರ್ಷಜೂನ್ವರೆಗೆ ಈ ಮೌಲ್ಯ 94 ಲಕ್ಷ ಮೀರಿದೆ. ಒಂದೂವರೆ ವರ್ಷಗಳಲ್ಲಿ 644 ಕಳವು ಪ್ರಕರಣಗಳು ದಾಖಲಾಗಿದ್ದರೂ ಈವರೆಗೆ ಆರೋಪಿ ಪತ್ತೆ ಹಚ್ಚಲಾದ ಪ್ರಕರಣಗಳ ಸಂಖ್ಯೆ ಕೇವಲ 210.
ಮಂಡ್ಯ, ತುಮಕೂರು ಪ್ರಥಮ: ದೇವಸ್ಥಾನಗಳ ಕಳವು ಪ್ರಕರಣಗಳಲ್ಲಿ ಪ್ರಥಮ ಸ್ಥಾನ ಮಂಡ್ಯ ಜಿಲ್ಲೆ ಪಾಲಾಗಿದೆ. 2012ರಲ್ಲಿ 57 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, 9.21 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ. ತುಮಕೂರು 36, ಮೈಸೂರು 32, ಹಾಸನದಲ್ಲಿ 30 ಪ್ರಕರಣಗಳು ದಾಖಲಾಗಿವೆ. ಯಾದಗಿರಿ, ಬಿಜಾಪುರ, ಹುಬ್ಬಳ್ಳಿ- ಧಾರವಾಡದಲ್ಲಿ ಕಳೆದ ವರ್ಷ ತಲಾ ಒಂದೇ ಕಳವಾಗಿದೆ. ಅಂದರೆ ಈ ಜಿಲ್ಲೆಗಳಲ್ಲಿ 2012ರಲ್ಲಿ ದೇವರು ಸಂರಕ್ಷಿತರಾಗಿದ್ದರು ಎಂದರ್ಥ!
2013ರ ಮೊದಲ ಆರು ತಿಂಗಳಲ್ಲಿ ಬೆಂಗಳೂರು ನಗರ 23 ಪ್ರಕರಣಗಳಿಂದ ಪ್ರಥಮ ಸ್ಥಾನದಲ್ಲಿದ್ದರೆ, ಮೈಸೂರು, ಹಾಸನ ತಲಾ 14 ಹಾಗೂ ರಾಮನಗರ, ಶಿವಮೊಗ್ಗ ಜಿಲ್ಲೆಗಳು ತಲಾ 13 ಪ್ರಕರಣಗಳಿಂದ ನಂತರ ಸ್ಥಾನದಲ್ಲಿ ಪೈಪೋಟಿ ನಡೆಸುತ್ತಿವೆ. ಹುಬ್ಬಳ್ಳಿ, ರಾಯಚೂರು, ಕೊಪ್ಪಳದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ್ಲ. ದೇವಸ್ಥಾನಗಳ ಕಳವು ಪ್ರಕರಣಗಳಲ್ಲಿ ಅತಿ ಹೆಚ್ಚು ಮೌಲ್ಯದಲ್ಲಿ 2012ರಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ತುಮಕೂರು ದೇವಸ್ಥಾನಗಳ ಕಳವಿನ ಮೌಲ್ಯ 39.40 ಲಕ್ಷ. ನಂತರದ ಸ್ಥಾನ ಶಿವಮೊಗ್ಗದ್ದಾಗಿದ್ದು, 15.13 ಲಕ್ಷವಾಗಿದೆ. 2013ರಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನವನ್ನು ಕಸಿದುಕೊಂಡಿದೆ. ಇಲ್ಲಿ 10 ಪ್ರಕರಣಗಳಲ್ಲಿ 14.35 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ. ಇದರ ನಂತರದ ಸ್ಥಾನ ಮಂಗಳೂರು ನಗರಕ್ಕೆ. ಇಲ್ಲಿ ನಾಲ್ಕು ಪ್ರಕರಣಗಳಲ್ಲೇ 8.27 ಲಕ್ಷ ಮೌಲ್ಯದ ವಸ್ತು ಕಳ್ಳತನವಾಗಿವೆ.


ರಾತ್ರಿ ಗಸ್ತಿದೆಯಂತೆ!
ದೇವಸ್ಥಾನಗಳಿರುವ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ರಾತ್ರಿ ಗಸ್ತಿಗೆ ಸಿಬ್ಬಂದಿ ನೇಮಿಸಲಾಗಿದೆಯಂತೆ. ಚೀತಾ, ಹೊಯ್ಸಳ, ಗರುಡ, ಚಾಲುಕ್ಯ ವಾಹನಗಳ ಸಿಬ್ಬಂದಿಗಳಿಗೆ ಕಳ್ಳತನ ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಗಿದೆಯಂತೆ. ಹಗಲು-ರಾತ್ರಿ ಬೀಟ್ ಪೊಲೀಸರು ಪುಸ್ತಕಕ್ಕೆ ಸಹಿ ಮಾಡುತ್ತಾರಂತೆ. ದೇವಸ್ಥಾನದವರು ಖಾಸಗಿ ಭದ್ರತೆ ವ್ಯವಸ್ಥೆ ಮಾಡಿಕೊಳ್ಳಬೇಕಂತೆ. ಸಿಸಿ ಕ್ಯಾಮೆರಾ ಅಳವಡಿಸಬೇಕಂತೆ. ದೇವಸ್ಥಾನದಲ್ಲಿ ಬೆಲೆ ಬಾಳುವ ವಸ್ತುಗಳನ್ನು ರಾತ್ರಿವೇಳೆ ಇಡಬಾರದಂತೆ. ಖಜಾನೆಯಲ್ಲಿ ಇಟ್ಟರೆ ಪೊಲೀಸ್ ಪಹರೆ ನೇಮಕ ಮಾಡಲಾಗುತ್ತದಂತೆ. ದೇವಸ್ಥಾನಗಳಲ್ಲಿ ನಡೆಯುತ್ತಿರುವ ಕಳವು ಪ್ರಕರಣಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳನ್ನು ತಡೆಯಲು ಪೊಲೀಸ್ ಇಲಾಖೆ ಕೈಗೊಂಡರುವ ಕ್ರಮ ಇದಂತೆ. ಇಷ್ಟು ಸಾಕೇ ಎಂದು ಕೇಳಿದರೆ, ಇನ್ನೇನು ಮಾಡಲು ಸಾಧ್ಯವಾದೀತು ಎಂಬ ಮರುಪ್ರಶ್ನೆಯಲ್ಲೇ ಎಲ್ಲವೂ ನಿಂತುಹೋಗುತ್ತದೆ.

ಮುಜರಾಯಿ ಸಚಿವರು ಬ್ಯುಸಿ

ರಾಜ್ಯದ ದೇವಸ್ಥಾನಗಳಲ್ಲಿ ಕಳವು ಪ್ರಕರಣ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಪೊಲೀಸ್ ಗಸ್ತು ಹೆಚ್ಚಸಲು ಸೂಚಿಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ. ಆದರೆ, ದೇವಸ್ಥಾನಗಳಲ್ಲಿ ಆಸ್ತಿ ರಕ್ಷಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು, ಆ ಬಗ್ಗೆ ಚಿಂತನೆ ನಡೆಸಲು ಸಭೆ ನಡೆಸಿ ಕ್ರಮ ಕೈಗೊಳ್ಳಲು ಸಚಿವರಿಗೆ ಸಮಯ ಇಲ್ಲವಂತೆ. ಸಕ್ಕರೆ ಹಾಗೂ ಸಣ್ಣ ಕೈಗಾರಿಕೆಗೆ ಸಂಬಂಧಿಸಿದ ಸಭೆಗಳಿಗೇ ದಿನದ ಸಮಯ ವ್ಯಯವಾಗುತ್ತಿರುವುದರಿಂದ ದೇವಸ್ಥಾನಗಳ ಬಗ್ಗೆ ಚಿಂತನೆ ನಡೆದಿಲ್ಲ. ದೇವರ ರಕ್ಷಣೆಗೆ ಮುಜರಾಯಿ ಸಚಿವರೂ ಮುಂದಾಗದಿರುವುದು ಶೋಚನೀಯ.

ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.