ಪ್ರಧಾನ ಸುದ್ದಿ

'ಕೈ' ಕೆಸರಾಗಲಿದೆ, 'ಹೊರೆ' ಹಸಿರಾಗಲಿದೆ: ಅನಿತಾ

Published On :

ಕ.ಪ್ರ.ವಾರ್ತೆ    ರಾಮನಗರ    ಆ. 17
ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನಾಯಕರು ಕಂಡ ಕಂಡವರ ಮನೆಯ ಕದ ಕಾಯುತ್ತಿದ್ದು, ಸಿಕ್ಕ ಸಿಕ್ಕವರ ಕಾಲು ಹಿಡಿಯುತ್ತಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ತಾವಾಗಿ ನಮ್ಮನ್ನು ಬೆಂಬಲಿಸಲು ಮುಂದಾದರೆ ಬೇಡವೆನ್ನಬೇಕೆ?
ಇದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪ್ರಶ್ನೆ. ಲೋಕಸಭೆ ಮರು ಚುನಾವಣೆ ಹಿನ್ನೆಲೆಯಲ್ಲಿ 'ಕನ್ನಡಪ್ರಭ'ಕ್ಕೆ ನೀಡಿರುವ ವಿಶೇಷ ಸಂದರ್ಶನ ನೀಡಿದ್ದು, ಅದರ ಅರ್ಥಪೂರ್ಣ ಪಾಠ ಇಲ್ಲಿದೆ..
ಕಾಂಗ್ರೆಸ್ ಸೋಲಿಸುವ ಗುರಿಯೊಂದಿಗೆ ಬಿಜೆಪಿ ಮತ್ತು ಕೆಜೆಪಿ ನಾಯಕರು ಹೋರಾಡುತ್ತಿದ್ದಾರೆ. ಬೆಂಬಲ ಕೋರಿಕೆ ಇಲ್ಲವೇ ಮೈತ್ರಿ ಸಂಬಂಧ ನಮ್ಮ ಪಕ್ಷ ಮಾತುಕತೆ ನಡೆಸಿಲ್ಲ. ಹೊಂದಾಣಿಕೆ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರ ಅಪಪ್ರಚಾರ ಕ್ಷೇತ್ರದಲ್ಲಿ ಪರಿಣಾಮ ಬೀರದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಹುದ್ದೆಯ ಘನತೆ, ಗೌರವವನ್ನೇ ಮರೆತು ಮಾತನಾಡುತ್ತಿದ್ದಾರೆ. ಅವರ ಹಾದಿಯಲ್ಲಿಯೇ ಕಾಂಗ್ರೆಸ್ ನಾಯಕರೂ ಹರಿಹಾಯುತ್ತಿದ್ದಾರೆ. ಅದ್ಯಾವ ಸಂಚು, ಷಡ್ಯಂತ್ರ ನಡೆಸಿದರೂ ರಾಜಕೀಯವಾಗಿ ದೇವೇಗೌಡರ ಕುಟುಂಬವನ್ನು ಹಣಿಯಲಾಗದು.
ಕನಕಪುರ ಲೋಕಸಭಾ ಕ್ಷೇತ್ರ ನನ್ನ ಮಾವ ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ನೀಡಿದೆ. ಪತಿ ಕುಮಾರಸ್ವಾಮಿಯ ಕರ್ಮಭೂಮಿಯೂ ಇದೇ. ಜೆಡಿಎಸ್ ಭದ್ರಕೋಟೆಯಾದ ಕ್ಷೇತ್ರದಲ್ಲಿ 2002ರ ಮರು ಚುನಾವಣೆ ಫಲಿತಾಂಶ ಪುನರಾವರ್ತನೆ ನಿಶ್ಚಿತ ಎಂದರು.
ಒತ್ತಡಕ್ಕೆ ಮಣಿದು ಸ್ಪರ್ಧೆ: ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಈ ಮರು ಚುನಾವಣೆ ಗೆಲವು ಅನಿವಾರ್ಯವಾಗಿದೆ. ಜೆಡಿಎಸ್ನ ಜನಬಲ ಮತ್ತು ಕಾಂಗ್ರೆಸ್ನ ಧನಬಲದ ನಡುವೆ ಇಲ್ಲಿ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ.  
ಕೇಂದ್ರದ ಯುಪಿಎ ಸರ್ಕಾರ ಮನಸ್ಸು ಮಾಡಿದ್ದರೆ ಅಲ್ಪಾವಧಿಗೆ ನಡೆಯುತ್ತಿರುವ ಈ ಚುನಾವಣೆಯನ್ನು ತಪ್ಪಿಸಬಹುದಿತ್ತು. ಜೆಡಿಎಸ್ ಹಣಿಯುವ ದುರುದ್ದೇಶದಿಂದಲೇ ಇದನ್ನು ಕಾಂಗ್ರೆಸ್ ತಂದೊಡ್ಡಿದೆ.
ಕುಟುಂಬದ ಕೊಡುಗೆ ಅಪಾರ: ರಾಮನಗರವನ್ನು ಜಿಲ್ಲೆ ಮಾಡಿ, ಸಾಕಷ್ಟು ಅಭಿವೃದ್ಧಿಗೆ ಕುಮಾರಸ್ವಾಮಿ ಕಾರಣೀಭೂತರು. ರಾಮನಗರ ಜಿಲ್ಲೆ ಆಗುವುದು ಬೇಡ ಎಂದು ಕಾಂಗ್ರೆಸ್ ನಾಯಕರೇ ಹುಯಿಲೆಬ್ಬಿಸಿದ್ದರು. ಇಗ್ಗಲೂರು ಬ್ಯಾರೇಜ್, ಹಾರೋಬೆಲೆ ಡ್ಯಾಂ ಸಹಿತ ನೀರಾವರಿ ಕೊಡುಗೆ ದೇವೇಗೌಡರದ್ದು ಎನ್ನುವುದನ್ನೂ ಮರೆಮಾಚುವ ಕುತಂತ್ರ ನಡೆದಿದೆ.
ನಮ್ಮದು ಪ್ರಾದೇಶಿಕ ಪಕ್ಷ. ಕಾವೇರಿ ಜಲ ವಿವಾದ ಸಹಿತ ಈ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನಮ್ಮಿಂದಷ್ಟೇ ಸಾಧ್ಯ.
ನಗರದಲ್ಲೂ ನಮಗೇ ಲೀಡ್: ದೇವೇಗೌಡ ಮತ್ತು ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಯಲ್ಲೂ ಸಾಕಷ್ಟು ಮೈಲುಗಲ್ಲುಗಳಿವೆ. ಹೀಗಾಗಿ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ, ಆನೇಕಲ್ ಕ್ಷೇತ್ರಗಳಲ್ಲೂ ನನಗೆ ಲೀಡ್ ಸಿಗುವುದು ಗ್ಯಾರಂಟಿ. ರಾಮನಗರ ಜಿಲ್ಲೆಯ 4 ಕ್ಷೇತ್ರಗಳು ಮತ್ತು ತುಮಕೂರಿನ ಕುಣಿಗಲ್ ಕ್ಷೇತ್ರದಲ್ಲಿ ದೇವೇಗೌಡ, ಕುಮಾರಸ್ವಾಮಿ ನಾಮಬಲ ಕೆಲಸ ಮಾಡಲಿದೆ.
ಅಧಿಕಾರ ಸಿಕ್ಕರೆ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ. ಪ್ರಚಾರದ ವೇಳೆ ಎದುರಾಳಿ ಡಿ.ಕೆ.ಸುರೇಶ್ ಮತ್ತವರ ಸಹೋದರ ಡಿ.ಕೆ.ಶಿವಕುಮಾರ್ ಸಹಿತ ಆ ಪಕ್ಷದ ಯಾವ ಮುಖಂಡರನ್ನೂ ಟೀಕಿಸುವುದಕ್ಕೆ ಹೋಗಿಲ್ಲ. ಸಂಸದೆಯಾಗಲು ನನಗಿರುವ ಅರ್ಹತೆ ಬದ್ಧತೆ ಮತ್ತು ಜನಪರ ಧೋರಣೆ.


ಸಿಎಂ ಸೇಡಿನ ರಾಜಕಾರಣ

ದೇವೇಗೌಡ ಅವರಿಂದಲೇ ರಾಜಕೀಯವಾಗಿ ಸಾಕಷ್ಟು ಎತ್ತರಕ್ಕೆ ಬೆಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅದೇ ದೇವೇಗೌಡ ಮತ್ತು ಕುಟುಂಬದ ಬಗ್ಗೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮಾತು ಮಾತಿಗೂ ತಮ್ಮ ಪದಚ್ಯುತಿಗೆ ದೇವೇಗೌಡ ಸಂಚು ನಡೆಸುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ ಆರೋಪದ ಹಿಂದೆಯೂ ದುರುದ್ದೇಶ ಅಡಗಿದೆ.


ವಂಶಪಾರಂಪರ್ಯ ರಾಜಕಾರಣ

ಸೋನಿಯಾ ಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣವನ್ನು ಒಪ್ಪಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಹೌದು. ನಮ್ಮದು ಕುಟುಂಬ ರಾಜಕಾರಣವೇ. ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ನಮ್ಮ ಕುಟುಂಬ ಸದಸ್ಯರಿದ್ದಂತೆಯೇ.

 ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.