ನಾನವನಲ್ಲ
ನರೇಂದ್ರ ಮೋದಿ ಹಾಗೂ ತಮ್ಮನ್ನು ಕನಸಲ್ಲೂ ನಾನು ಹೋಲಿಸಿಕೊಂಡಿಲ್ಲ.

ಕನ್ನಡಪ್ರಭ ವಾರ್ತೆ , ಬೆಂಗಳೂರು , ಆ.20
ನರೇಂದ್ರ ಮೋದಿ ಹಾಗೂ ತಮ್ಮನ್ನು ಕನಸಲ್ಲೂ ನಾನು ಹೋಲಿಸಿಕೊಂಡಿಲ್ಲ. ರಾಷ್ಟ್ರ ರಾಜಕಾರಣದ ಬಗ್ಗೆ ಎಂದೂ ಚಿಂತನೆ ಮಾಡಿಲ್ಲ. ಆ ಕುರಿತು ಸಣ್ಣ ಯೋಚನೆಯೂ ನನ್ನಲ್ಲಿ ಮೂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ದಕ್ಷಿಣ ಧ್ರುವವಾದರೆ ಮೋದಿ ಉತ್ತರ ಧ್ರುವ. ನಾನು ಜಾತ್ಯತೀತವಾದಿ ಅವರು ಕೋಮುವಾದಿ. ಹೀಗಾಗಿ ನನ್ನ ಮತ್ತು ಮೋದಿ ನಡುವಿನ ಹೋಲಿಕೆಯೇ ಸರಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕೆ.ಆರ್.ನಗರದಲ್ಲಿ ವಸತಿ ಸಚಿವ ಅಂಬರೀಷ್ ತಮ್ಮನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹೋಲಿಸಿ ನೀಡಿರುವ ಹೇಳಿಕೆಯಿಂದ ತೀವ್ರ ಮುಜುಗರಕ್ಕೆ ಗುರಿಯಾಗಿರುವ ಸಿದ್ದರಾಮಯ್ಯ ಇದರಿಂದ ಸೃಷ್ಟಿಯಾಗಿರುವ ವಿವಾದ ಪರಿಹಾರಕ್ಕೆ ದಿನವಿಡೀ ಹರಸಾಹಸ ನಡೆಸಿದರು.
ಸಿದ್ದರಾಮಯ್ಯ ಕರ್ನಾಟಕದ ಮೋದಿ ಇದ್ದಂತೆ ಎಂದು ಅಂಬರೀಷ್ ಹೇಳಿದ್ದರು. ಜತೆಗೆ ರಾಷ್ಟ್ರ ರಾಜಕಾರಣದಲ್ಲೂ ಸಿದ್ದರಾಮಯ್ಯ ಮಿಂಚಲಿದ್ದಾರೆ ಎಂದಿದ್ದರು. ಆದರೆ, ರಾಷ್ಟ್ರ ರಾಜಕಾರಣ ಪ್ರವೇಶಿಸುವ ಸಾಧ್ಯತೆಯನ್ನು ಮುಖ್ಯಮಂತ್ರಿಯವರು ತಳ್ಳಿ ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ, ದಿವಂಗತ ದೇವರಾಜು ಅರಸು ಅವರ ಜನ್ಮದಿನದ ಅಂಗವಾಗಿ ವಿಧಾನಸೌಧ ಮತ್ತು ಕೆಪಿಸಿಸಿ ಕಚೇರಿ ಆವರಣದಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಸಚಿವ ಅಂಬರೀಷ್ ಹೇಳಿಕೆಯಿಂದ ಉಂಟಾಗಿರುವ ವಿವಾದ ತಣ್ಣಗಾಗಿಸುವ ಪ್ರಯತ್ನಕ್ಕೆ ತಮ್ಮ ಭಾಷಣ ಮೀಸಲಿಟ್ಟರು.
ವಿಧಾನಸೌಧದಲ್ಲಿ ಹೇಳಿದ್ದು: ಮೋದಿ ಎಂದಿಗೂ ಸಮಾಜಮುಖಿ ಆಗಲು ಸಾಧ್ಯ ಇಲ್ಲ. ಬಿಜೆಪಿಯವರು ಮೋದಿಯನ್ನು ಎಷ್ಟು ಹೊಗಳಿದರೂ ಏನೂ ಆಗುವುದಿಲ್ಲ. ಸಚಿವ ಅಂಬರೀಷ್ ಯಾವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ನನಗೆ ಹೋಲಿಸಿದರೋ ಗೊತ್ತಿಲ್ಲ. ಅವರು ಸದುದ್ದೇಶದಿಂದ ಆ ರೀತಿ ಮಾತನಾಡಿರಬಹುದು. ಅವರ ಹೇಳಿಕೆಯನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನನಗೂ ನರೇಂದ್ರ ಮೋದಿಗೆ ಯಾವುದೇ ರೀತಿಯಲ್ಲೂ ಹೋಲಿಕೆ ಇಲ್ಲ.
ರಾಜ್ಯ ರಾಜಕಾರಣದಲ್ಲಿ ಮಾತ್ರ ನಾನು ಆಸಕ್ತಿ ಹೊಂದಿದ್ದೇನೆ. ದೆಹಲಿಗೆ ಹೋಗುವುದು ಅಥವಾ ರಾಷ್ಟ್ರರಾಜಕಾರಣದಲ್ಲಿ ಪಾತ್ರ ವಹಿಸುವ ಬಗ್ಗೆ ಎಂದೂ ಆಲೋಚಿಸಿಲ್ಲ. ಹೀಗಾಗಿ ಮೋದಿ ಹೋಲಿಕೆ ಅಸಾಧ್ಯ ಮತ್ತು ಅಪ್ರಸ್ತುತ. ದೇವರಾಜು ಅರಸು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಕೆಪಿಸಿಸಿ ಕಚೇರಿ ಆವರಣದಲ್ಲಿ: ಅಂಬರೀಷ್ ಅವರೇನೋ ಸದುದ್ದೇಶದಿಂದ ಈ ಹೇಳಿಕೆ ನೀಡಿರಬಹುದು. ಆದರೆ ನಾನು ಒಪ್ಪಲು ಸಿದ್ದನಿಲ್ಲ. ಮೋದಿ ಒಬ್ಬ ಕೋಮುವಾದಿ. ಆದರೆ ನಾನು ಜಾತ್ಯತೀತವಾದಿ. ಜಾತಿ, ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವುದನ್ನು ವಿರೋಧಿಸುವ ಕಾಂಗ್ರೆಸ್‌ನ ಮೂಲ ಸಿದ್ಧಾಂತದಲ್ಲಿ ನಂಬಿಕೆ ಇರುವವನು ನಾನು ಎಂದು ಹೇಳಿದರು.
ಮೋದಿ ಜನಪ್ರಿಯ ನಾಯಕರೇ ಅಲ್ಲ. ಆದರೆ ಅವರೊಬ್ಬ ರಾಷ್ಟ್ರದ ಜನಪ್ರಿಯ ನಾಯಕ ಎಂದು ಬಿಂಬಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಮೋದಿಯಂತಹವರು ಈ ದೇಶದ ಪ್ರಧಾನಿಯಾಗಬಾರದು.
ಭಾರತದ ಜನ ಅವರಿಗೆ ಮನ್ನಣೆ ನೀಡುವುದಿಲ್ಲ. ಯಾರು ಏನೇ ಹೇಳಿದರೂ ಕೇಂದ್ರದಲ್ಲಿ ಯುಪಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರು ಎಷ್ಟೇ ಪ್ರಯತ್ನ ನಡೆಸಿದರೂ ಮೋದಿ ಈ ದೇಶದ ಪ್ರಧಾನಿಯಾಗುವುದನ್ನು ಭಾರತೀಯರು ಒಪ್ಪುವುದಿಲ್ಲ. ಕೋಮುವಾದದ ಮೂಲಕ ಸಮಾಜ ಒಡೆಯುವ ಸಿದ್ಧಾಂತ ಅವರದ್ದು. ನಾನು ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತದಲ್ಲಿ ನೂರಕ್ಕೆ ನೂರು ನಂಬಿಕೆ ಹೊಂದಿದ್ದೇನೆ. ಹೀಗಾಗಿ ಈ ಹೋಲಿಕೆಯನ್ನು ಒಪ್ಪುವುದಿಲ್ಲ.
ಮಾಫಿಯಾ ಕೈಯಲ್ಲಿ ಪೋರಬಂದರು
ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಾವಿಯಲ್ಲಿರುವ ಕಪ್ಪೆಯಂತೆ ವಟರುಗುಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಹಿಂದುಳಿದ ಘಟಕ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಂಗಳವಾರ ಈ ವಿಷಯ ತಿಳಿಸಿದರು. ಗುಜರಾತ್ ಸ್ವಾತಂತ್ರ್ಯ ಪೂರ್ವದಿಂದಲೇ ಅಭಿವೃದ್ಧಿಯಲ್ಲಿ ಮುಂದಿತ್ತು. ಆದರೆ ಇದಕ್ಕೆಲ್ಲ ತಾನೇ ಕಾರಣ ಎಂದು ಮೋದಿ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾಷಣವನ್ನು ನಕಲು ಮಾಡುವ ಅವರಿಗೆ ವಾಸ್ತವದ ಜ್ಞಾನವಿಲ್ಲ. ಗುಜರಾತ್‌ನಲ್ಲಿ ಸಾವಿರಾರು ಜನ ಅಲ್ಪಸಂಖ್ಯಾತರ ಕೊಲೆ ಮಾಡಿದ್ದೇ ಅವರ ಸಾಧನೆ. ಅಂಥವರು ಈ ದೇಶಕ್ಕೆ ಮಾದರಿ ವ್ಯಕ್ತಿಯಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ವೈಷ್ಣವ ಜನತೋ ಎಂಬ ಶಾಂತಿ ಮಂತ್ರವನ್ನು ಪಠಿಸಿದ ಮಹಾತ್ಮಗಾಂಧಿಯವರ ಜನ್ಮಭೂಮಿ ಪೋರಬಂದರು ಈಗ ಮಾಫಿಯಾದ ಕೈಯಲ್ಲಿದೆ. ಅವರನ್ನು ಹತ್ಯೆ ಮಾಡಿದ ನಾಥುರಾಂ ಗೋಡ್ಸೆ ಈ ದೇಶ ಕಂಡ ಮೊದಲ ಭಯೋತ್ಪಾದಕ ಎಂದು ಕಿಡಿಕಾರಿದರು.
ಮೋದಿ ಉತ್ತರ ಧ್ರುವ, ನಾನು ದಕ್ಷಿಣ ಧ್ರುವ. ಅವರು ಕೋಮುವಾದಿ, ನಾನು ಜಾತ್ಯತೀತವಾದಿ. ಕನಸಿನಲ್ಲಿಯೂ ಅವರ ಜತೆ ನನ್ನನ್ನು ಹೋಲಿಸಿಕೊಳ್ಳಲಾರೆ.ರಾಷ್ಟ್ರ ರಾಜಕಾರಣದ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


