ಪ್ರಧಾನ ಸುದ್ದಿ

ಇನ್ನೂ ಯಾಕ ಬರ್ಲಿಲ್ಲವ್ವಾ ಸಿದ್ರಾಮಣ್ಣ

Published On :

ಕ.ಪ್ರ.ವಾರ್ತೆ,  ಚಾಮರಾಜನಗರ,  ಆ. 25-
'ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದು, ನಾನು ಮುಖ್ಯಮಂತ್ರಿಯಾದರೆ ಮೊದಲು ಚಾಮರಾಜನಗರಕ್ಕೆ ಭೇಟಿ ನೀಡುವ ಮೂಲಕ ಇಲ್ಲಿಗೆ ಅಂಟಿರುವ ಕಳಂಕವನ್ನು ತೊಡೆದು ಹಾಕುವೆ. ಹಿಂದುಳಿದ ಈ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು...'
ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಏ.28ರಂದು ಜಿಲ್ಲೆಗೆ ಆಗಮಿಸಿದ್ದ ಸಿದ್ದರಾಮಯ್ಯ ಜನತೆಗೆ ಇಂಥದ್ದೊಂದು ಭರವಸೆ ನೀಡಿದ್ದರು.
ಇದೀಗ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಶತ ದಿನಗಳಾದೂ ಜಿಲ್ಲೆಯತ್ತ ಮುಖ ಮಾಡುವ ಯಾವುದೇ ಸುದ್ದಿಯೂ ಇಲ್ಲ. ಚಾಮರಾಜನಗರಕ್ಕೆ ಬರುವುದಾಗಿ ನುಡಿಯದಂತೆ ನಡೆಯದೆ, ಮಾತಿಗೆ ತಪ್ಪಿದ ಮುಖ್ಯಮಂತ್ರಿಗಳ ಸಾಲಿಗೆ ಸಿದ್ದರಾಮಯ್ಯ ಅವರದ್ದು ಹೊಸ ಸೇರ್ಪಡೆ.
ಇಲ್ಲಿಯ ಜನರೂ ಸಿದ್ದರಾಮಯ್ಯ ಅವರ ಮಾತನ್ನು ಅಪಾರವಾಗಿ ನಂಬಿದ್ದರು. ಜಿಲ್ಲೆಗೆ ಭೇಟಿ ನೀಡಿಯೇ ನೀಡುತ್ತಾರೆ ನಮ್ಮ ಕಷ್ಟಗಳು ತೀರುತ್ತವೆ ಎಂಬ ವಿಶ್ವಾಸದಿಂದ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಗೆಲ್ಲಿಸಿದರು.

ಅಭಿವೃದ್ಧಿಗಿಲ್ಲ ಗಮನ: ಸಿದ್ದರಾಮಯ್ಯ ಅವರಿಗೆ ಚಾಮರಾಜನಗರ ಹೊಸತಲ್ಲ. ಚಾಮರಾಜನಗರ ಜಿಲ್ಲೆ ಅವಿಭಜಿತ ಮೈಸೂರು ಜಿಲ್ಲೆಯಲ್ಲಿತ್ತು. ಅವರು ಜನತಾದಳ ಸರ್ಕಾರದಲ್ಲಿ ಡಿಸಿಎಂ ಆಗಿದ್ದಾಗ ಹೊಸ ಜಿಲ್ಲೆಯಾಗಿ ಮಾರ್ಪಾಡಾಯಿತು. ಆದರೆ, ಜಿಲ್ಲಾಭಿವೃದ್ಧಿಗೆ ಮಾತ್ರ ತಲೆ ಕೆಡಿಸಿಕೊಳ್ಳಲಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ ಜಿಲ್ಲೆಯ ಅಭಿವೃದ್ಧಿಯೆಡೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಜತೆಗೆ ಕುಮಾರಸ್ವಾಮಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ 16 ವರ್ಷಗಳ ಬಳಿಕ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಒಳಗಾದರು. ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಪ್ರಮುಖ ಯೋಜನೆಗಳನ್ನು ನೀಡಿದ್ದರಾದರೂ ಭೇಟಿ ನೀಡಿಲಿಲ್ಲ. ಆದರೆ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುವುದಕ್ಕೆ ಮುಂಚೆ ನೀಡಿದ ಭರವಸೆಯಂತೆ ಜಿಲ್ಲೆಗೆ ಎರಡು ಭಾರಿ ಭೇಟಿ ನೀಡಿ, ಅನೇಕ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದರು. ಆದರೆ, ಅನುಷ್ಠಾನಗೊಳ್ಳುವ ಮುನ್ನ ಅವರ ಅಧಿಕಾರವಧಿ ಮುಗಿದಿತ್ತು.

ಕೈ ಬಿಟ್ಟ ವಿಶೇಷ ಪ್ಯಾಕೇಜ್:
ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಮಂಡಿಸಿದ ಬಜೆಟ್‌ನಲ್ಲಿ ಶೆಟ್ಟರ್ ಘೋಷಿಸಿದ 100 ಕೋಟಿ ವಿಶೇಷ ಪ್ಯಾಕೇಜ್ ಅನ್ನು ಕೈ ಬಿಟ್ಟರು. ಹಿಂದೆಯೇ ಘೋಷಿಸಲಾಗಿದ್ದ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವುದಾಗಿ ಮತ್ತೆ ಘೋಷಿಸಿದರು. ಆದರೆ, ಇದಕ್ಕಿನ್ನೂ ಚಾಲನೆ ಸಿಕ್ಕಿಲ್ಲ.
ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ಜೊತೆಗೆ 297 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಜಾರಿಗೊಳಿಸಲು ಮುಂಜೂರಾತಿ ನೀಡಿದ್ದರು. ಆದರೆ, ಅದಕ್ಕಿನ್ನೂ ಚಾಲನೆ ಸಿಕ್ಕಿಲ್ಲ. ಜತೆಗೆ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರು ಮತ್ತು ಜಿಲ್ಲೆಯ ಜನರನ್ನು ಬರದ ದವಡೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಕಬಿನಿ ಎರಡನೇ ಹಂತದ ಶಾಶ್ವತ ನೀರಾವರಿ ಯೋಜನೆಗೆ ಚಾಲನೆ ನೀಡುವ ಸವಾಲು ಸಿದ್ದರಾಮಯ್ಯ ಅವರ ಮೇಲಿದೆ.

- ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.