ಪ್ರಧಾನ ಸುದ್ದಿ

ಮುಖ್ಯೋಪಾಧ್ಯಾಯರ ಮೊಬೈಲ್ ಸ್ವಿಚ್‌ಆಫ್!

Published On :

ಹುಬ್ಬಳ್ಳಿ: ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಿಗೆ ನೀಡಿದ್ದ ಮೊಬೈಲ್ ಸಿಮ್‌ಗಳು ರಿಚಾರ್ಜ್‌ಗೊಳ್ಳದ ಪರಿಣಾಮ ಮೊಬೈಲ್ ರಿಂಗಣಿಸುತ್ತಿಲ್ಲ.  ಆ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿದಂತಾಗಿದೆ.
ಆಡಳಿತ ನಿರ್ವಹಣೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸಂಪರ್ಕ ಸಾಧಿಸಲು ರಾಜ್ಯದಲ್ಲಿರುವ 6 ಸಾವಿರಕ್ಕೂ ಹೆಚ್ಚು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ)ದಡಿ ಮೊಬೈಲ್, ಸಿಮ್ ವಿತರಿಸಲಾಗಿತ್ತು. ಇದರಿಂದ ಮೇಲಧಿಕಾರಿಗಳು ಮುಖ್ಯ ಶಿಕ್ಷಕರೊಂದಿಗೆ ಹಾಗೂ ಮುಖ್ಯೋಪಾಧ್ಯಾಯರು ಮೇಲಧಿಕಾರಿ, ಸಹ ಶಿಕ್ಷಕರು ಇಲಾಖೆಗೆ ಸಂಬಂಧಿಸಿದ ಇನ್ನಿತರ ಅಧಿಕಾರಿಗಳೊಂದಿಗೆ ಆಡಳಿತಾತ್ಮಕ ವಿಚಾರ ಚರ್ಚಿಸಲು ಅನುಕೂಲವಾಗಿತ್ತು.

ಆರು ತಿಂಗಳಷ್ಟೇ ಆಯಸ್ಸು: ಅಂದಹಾಗೆ, ಶಿಕ್ಷಣ ಇಲಾಖೆ ಆರ್‌ಎಂಎಸ್‌ಎ ಅನುದಾನದಲ್ಲಿ 12-13ನೇ ಶೈಕ್ಷಣಿಕ ವರ್ಷದ ಮಧ್ಯಾರ್ಧದಲ್ಲಿ ಸಿಮ್ ವಿತರಿಸುವ ಯೋಜನೆ ಜಾರಿಗೆ ತಂದಿತ್ತು. ಆರ್‌ಎಂಎಸ್‌ಎ ಶಾಲಾನುದಾನದಲ್ಲಿ ಪ್ರತಿ ತಿಂಗಳಿಗೆ 150ರಂತೆ ಆರು ತಿಂಗಳಿಗೆ 900 ರಿಚಾರ್ಜ್ ಮಾಡಲಾಗಿತ್ತು. ರಾಜ್ಯದ ಆರು ಸಾವಿರ ಮುಖ್ಯೋಪಾಧ್ಯಾಯರ ಬಳಿಯಿದ್ದ ಈ ಸಿಮ್‌ಗಳಿಂದ ಗ್ರೂಪ್ ಕಾಲ್ ಉಚಿತವಾಗಿತ್ತು. ಇಲಾಖೆಗೆ ಸಂಬಂಧ ಪಟ್ಟವರೊಂದಿಗೇ ಮಾತನಾಡಲಷ್ಟೇ ಸಿಮ್ ಬಳಸಬೇಕೆಂಬ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿತ್ತು. ಜತೆಗೆ ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಮಾಡದಂತೆ ತಿಳಿಸಿತ್ತು. ಆದರೆ ಈ ಸಿಮ್‌ಗಳು 2013ನೇ ಸಾಲಿನ ಮಾರ್ಚ್ ತಿಂಗಳವರೆಗೆ ಮಾತ್ರ ಚಾಲ್ತಿಯಲ್ಲಿದ್ದವು.

ಐದು ತಿಂಗಳಿನಿಂದ ಬಂದ್: ಇದಾದ ಬಳಿಕ ಇಲಾಖೆ ಮೊಬೈಲ್ ರಿಚಾರ್ಜ್ ಮಾಡುವ ಗೋಜಿಗೆ ಹೋಗಲಿಲ್ಲ. ಪರಿಣಾಮ ಕಳೆದ ಐದು ತಿಂಗಳಿನಿಂದ ಮುಖ್ಯೋಪಾಧ್ಯಾಯರಿಗೆ ನೀಡಿದ್ದ ಸಿಮ್‌ಗಳು ಕಾರ್ಯ ಮಾಡುತ್ತಿಲ್ಲ. ಸರ್ಕಾರಿ ಸಿಮ್ ರಿಚಾರ್ಜ್‌ಗೊಳ್ಳದ ಪರಿಣಾಮ ಮುಖ್ಯೋಪಾಧ್ಯಾಯರು ತಮ್ಮ ಖಾಸಗಿ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮೇಲಧಿಕಾರಿಗಳು ಕಾರಣ ಕೇಳುವಂತೆಯೂ ಇಲ್ಲ.
ಸ್ವತಃ ರಿಚಾರ್ಜ್ ಮಾಡುವಂತಿಲ್ಲ: ಕಚೇರಿ ಕಾರ್ಯಕ್ಕೆ ಅನುಕೂಲವಾಗುತ್ತದೆ ಎಂದು ಮುಖ್ಯೋಪಾಧ್ಯಾಯರೇ ಸ್ವತಃ ಖರ್ಚು ಮಾಡಿ ಸಿಮ್ ರಿಚಾರ್ಜ್ ಮಾಡಿಕೊಳ್ಳುವಂತೆಯೂ ಇಲ್ಲ. ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರು (ಎಸ್‌ಪಿಡಿ) ಮಾತ್ರ ಈ ಮೊಬೈಲ್ ರಿಚಾರ್ಜ್ ಮಾಡುವ ಅಧಿಕಾರ ಹೊಂದಿದ್ದಾರೆ.

- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.