ಬೀಗದ ಫ್ಯಾಕ್ಟರಿ ಹೆಸರಲ್ಲಿ ಬಾಂಬ್ ಫ್ಯಾಕ್ಟರಿ
ಮಂಗಳೂರು: ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸೀನ್ ಭಟ್ಕಳ ಮಂಗಳೂರು ಮತ್ತು ಕೊಪ್ಪದ ವಿಠಲಮಕ್ಕಿ, ಹಕ್ಕಲಮನೆಗಳಲ್ಲಿ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ ಜತೆ ಸೇರಿ ಬೀಗದ ಫ್ಯಾಕ್ಟರಿ ಹೆಸರಲ್ಲಿ ಬಾಂಬ್ ತಯಾರಿಸುತ್ತಿದ್ದ. ವಿಠಲಮಕ್ಕಿಗೆ ಮಂಗಳೂರು ಪೊಲೀಸರು ದಾಳಿ ನಡೆಸುವ ಒಂದು ದಿನ ಮೊದಲು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು.
2007 ಮತ್ತು 2008ರ ದೇಶದಲ್ಲಿನ ಸ್ಫೋಟಗಳಿಗೆ ಇಲ್ಲಿಂದಲೇ ಬಾಂಬ್ಗಳನ್ನು ತಯಾರಿಸಿ ಕಳುಹಿಸಿದ್ದರು. 2007 ಆ.25ರಂದು ಹೈದರಾಬಾದ್ ಲುಂಬಿನಿ ಗಾರ್ಡನ್ನಲ್ಲಿ ಹಳೆಯಂಗಡಿ ಅಹಮ್ಮದ್ ಬಾವ, ನೌಷಾದ್ ತಯಾರಿಸಿದ ಬಾಂಬ್ ಇಟ್ಟಿದ್ದರು. 2008ಜು. 26ರಂದು ಗುಜರಾತ್ ಅಹಮದಾಬಾದ್ ಸ್ಫೋಟದಲ್ಲಿ 21 ಬಾಂಬ್ ಇರಿಸಿದ್ದು, 70 ನಿಮಿಷಗಳ ಅಂತದಲ್ಲಿ ಸ್ಫೋಟಿಸಿ, 56 ಮಂದಿ ಮೃತಪಟ್ಟಿದ್ದರು. 2007ರಲ್ಲಿ ಮಂಗಳೂರು ಸುಭಾಷ್ ನಗರದ ಬಾಡಿಗೆ ಮನೆಯಲ್ಲಿ ಮುದಸ್ಸಿರ್ ಮತ್ತು ನೌಷಾದ್ ಜತೆ ಯಾಸೀನ್ ಭಟ್ಕಳ್ ಕೂಡಾ ಇದ್ದ. ಉಳ್ಳಾಲ ಮುಕ್ಕಚೇರಿ ಮನೆಯಲ್ಲಿ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಮನೆ ಮಾಡಿದ್ದರು. ಬಾಂಬ್ ತಯಾರಿಕೆಗೆ ಕೊಪ್ಪದ ನಿರ್ಜನ ಪ್ರದೇಶ ಆರಿಸಿಕೊಂಡಿದ್ದರು. ಹಕ್ಕಲಮನೆಯಲ್ಲಿ ಬಾಡಿಗೆ ಮನೆ ಪಡೆದು ಪಿಸ್ತೂಲ್, ರಿವಾಲ್ವರ್ ಹಿಡಿದು ಟಾರ್ಗೆಟ್ ಅಭ್ಯಾಸ ಮಾಡುತ್ತಿದ್ದ ವೇಳೆ ಮನೆ ಮಾಲೀಕನ ಅಳಿಯ(ಕಟಪಾಡಿ ನಿವಾಸಿ)ಗೆ ಸದ್ದು ಕೇಳಿತ್ತು. ಮಾಲೀಕರು ಹೆದರಿ ಮನೆ ಖಾಲಿ ಮಾಡಿಸಿದ್ದರು. ಅಲ್ಲಿಂದ ತೆರಳಿದ ಉಗ್ರರ ಪಡೆ ಬೀಗದ ಫ್ಯಾಕ್ಟರಿ ಮಾಡುತ್ತೇನೆ ಹೇಳಿ ವಿಠಲಮಕ್ಕಿಯಲ್ಲಿ 2 ಎಕರೆ ಜಾಗ ಖರೀದಿ ಮಾಡಿದ್ದರು. ಅಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟ ಮಾಡುವ ಪ್ರಾತ್ಯಕ್ಷಿಕೆ, ಟಾರ್ಗೆಟ್ ಪ್ರಾಕ್ಟೀಸ್ ನಡೆಸುತ್ತಿದ್ದರು.
ವಿಠಲಮಕ್ಕಿಯಲ್ಲಿ ಯಾಸೀನ್ ಭಟ್ಕಳ್, ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ, ಖಯಾಮುದ್ದೀನ್ ಕಪಾಡಿಯಾ ಇದ್ದರು. ಈ ಉಗ್ರರ ಸೇವೆಗೆ ಕಾಪು ಮೂಲದ ಅಕ್ಬರ್ ಅಲಿ ಮತ್ತು ಆತನ ಪತ್ನಿ (ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಳು) ಕೆಲಸಕ್ಕಿದ್ದರು. ಅಕ್ಬರ್ ಅಲಿ ಮರದ ಬಾಂಬ್ ಬೇಸ್ ತಯಾರಿಕೆಗೆ ಅಹಮ್ಮದ್ ಬಾವ ಮತ್ತು ಯಾಸೀನ್ಗೆ ಸಹಾಯ ಮಾಡುತ್ತಿದ್ದ. ಅಕ್ಬರ್ ಅಲಿ ಮಂಗಳೂರು ಪೊಲೀಸರಿಗೆ ಸೆರೆ ಸಿಕ್ಕಿದಾಗ ಈ ವಿಚಾರವನ್ನು ತಪ್ಪೊಪ್ಪಿಗೆ ಪತ್ರದಲ್ಲಿ ಸಾದ್ಯಂತ ವಿವರಿಸಿದ್ದ. ವಿಠಲಮಕ್ಕಿಯಲ್ಲಿ ಸಿಕ್ಕಿದ ಬಾಂಬ್ನ ಮರದ ಬೇಸ್, ಹೈದರಾಬಾದ್ ಲುಂಬಿನಿ ಗಾರ್ಡನ್ ಸ್ಫೋಟ ಸಿಕ್ಕಿದ ಬಾಂಬ್ ಸ್ಫೋಟ ಬೇಸ್ ಒಂದೇ ಆಗಿತ್ತು ಎನ್ನುತ್ತಾರೆ ಆಕ್ಬರ್ ಅಲಿಯನ್ನು ಬಂಧಿಸಿದ್ದ ನಿವೃತ್ತ ಎಸಿಪಿ ಸುಭಾಶ್ಚಂದ್ರ. ಸೂರತ್ನಲ್ಲಿ ಯಾಸೀನ್ ಭಟ್ಕಳ ಸೈಕಲ್ ಬಾಂಬ್ ಫಿಕ್ಸ್ ಮಾಡಿದ್ದ. ಬಾಂ ಬ್ ಇವನೆ ಇಟ್ಟದ್ದು, ಸೂರತ್ ರೈಲು ನಿಲ್ದಾಣದಲ್ಲಿ ಸ್ಫೋಟ ಸುದ್ದಿ ಲೈವ್ ನೋಡಿದ್ದ ಎಂದು ನಿವೃತ್ತ ಎಸಿಪಿ ಹೇಳುತ್ತಾರೆ.
ತಪ್ಪಿಸಿಕೊಂಡ ಉಗ್ರರು: ಉಳ್ಳಾಲದಲ್ಲಿ 2008ರ ಆ.3ರಂದು ರಾತ್ರಿ ಪೊಲೀಸರು ತಮ್ಮ ಜತೆಗಾರರನ್ನು ಬಂಧಿಸಿ ವಿಚಾರ ಮರುದಿನ ಬೆಳಗ್ಗೆ ಟಿವಿಯಲ್ಲಿ ನೋಡಿದ ವಿಠಲಮಕ್ಕಿಯಲ್ಲಿದ್ದ ಉಗ್ರರ ತಂಡ ತಕ್ಷಣ ಜಾಗ ಖಾಲಿ ಮಾಡಿತು. ಅಲ್ಲಿಂದ ಶಿವಮೊಗ್ಗ ಶಿಕಾರಿಪುರಕ್ಕೆ ಮಧ್ಯಾಹ್ನ ತಲುಪಿದರು. ಶಿಕಾರಿಪುರದ ಮನೆಯಲ್ಲಿ ವಿಶ್ರಮಿಸಿ ಅದೇ ದಿನ ಸಂಜೆ ಹೊರಟರು. ಇಕ್ಬಾಲ್ ಭಟ್ಕಳ ಪ್ರತ್ಯೇಕಗೊಂಡು ಪುಣೆಗೆ ತೆರಳಿದರೆ ಉಳಿದವರು ಹೈದರಾಬಾದ್ ಸತ್ತಾರ್ (ಆಡ್ವಾಣಿ ಬಂದಾಗ ಕೊಯಮತ್ತೂರ್ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿದವ) ಭೇಟಿಯಾಗಿದ್ದರು. ಈ ವಿಚಾರ ಸತ್ತಾರ್ ಬಂಧನ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ. ಇದೀಗ ಯಾಸೀನ್ ಭಟ್ಕಳ ಸಿಕ್ಕಿದ್ದು, ಇಂಡಿಯನ್ ಮುದಾಹಿದ್ದೀನ್ ಉಗ್ರರ ಬುಡಕ್ಕೆ ಪೆಟ್ಟು ಬಿದ್ದಿದೆ.
ಸಣ್ಣ ಮಗು ಇರುವಾಗಲೇ ಯಾಸೀನ್ ಪಾಸ್ಪೋರ್ಟ್ ಮಾಡಲಾಗಿತ್ತು. ದುಬೈಯಲ್ಲಿ ವ್ಯಾಪಾರಕ್ಕಾಗಿ ತಂದೆ ಜತೆ ಹೋಗಿದ್ದ. ವಾಪಸ್ ಬಂದ ಬಳಿಕ ಕೆಲಸ ಮಾಡದೆ ಜೆಹಾದಿ ಹಾದಿ ಹಿಡಿದಿದ್ದ.
- ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

