ಇನ್ನು ಸರ್ಕಾರಿ ಲೆಕ್ಕಕ್ಕೆ ತೂಕ-ಅಳತೆ ಇಲ್ಲ
ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದಲ್ಲಿರುವ ತೂಕ ಮತ್ತು ಮಾಪನ ಘಟಕದ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಸುಮಾರು 17 ಕೋಟಿಗೂ ಅಧಿಕ ಹಣ ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಕೈ ತಪ್ಪುತ್ತದೆ ಹಾಗೂ ದೇಶಾದ್ಯಂತ 650 ಕೋಟಿಗೂ ಅಧಿಕ ಮೊತ್ತದ ಹಣ ಖಾಸಗಿ ಕಂಪನಿಗಳ ಪಾಲಾಗಲಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರಕ್ಕೆ ಬರುವ ಆದಾಯ 4 ಕೋಟಿ ಮೀರುವುದಿಲ್ಲ. ಇನ್ನು ಮುಂದೆ ತೂಕ ಮತ್ತು ಮಾಪನ ಪ್ರಮಾಣಪತ್ರದಿಂದ ರಾಜ್ಯ ಸರ್ಕಾರಕ್ಕೆ ನಯಾಪೈಸೆಯೂ ಸಿಗುವುದಿಲ್ಲ. ಬದಲಾಗಿ ಕೇಂದ್ರ ಸರ್ಕಾರದ
ಅನುಮತಿ ಪಡೆದು ಖಾಸಗಿ ಒಡೆತನದ ಗೌರ್ನ್ಮೆಂಟ್ ಅಪ್ರೂವ್ಡ್ ಟೆಸ್ಟ್ ಸೆಂಟರ್ಸ್(ಜಿಎಟಿಸಿ) ಎಲ್ಲವನ್ನೂ ಗುಳುಂ ಮಾಡಲಿವೆ.
ರಾಜ್ಯ ಸರ್ಕಾರಿ ಅಧಿಕಾರಿಗಳು ನಡೆಸುತ್ತಿರುವ ತೂಕ ಮತ್ತು ಮಾಪನ ಘಟಕದ ಗುಣಮಟ್ಟ ವೃದ್ಧಿ ನೆಪದಲ್ಲಿ ಕೇಂದ್ರ ಸರ್ಕಾರ ಈ ನೂತನ ಯೋಜನೆಗೆ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ದೇಶಾದ್ಯಂತ ಖಾಸಗಿ ಕಂಪನಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮತ್ತೊಂದು ವಿಚಿತ್ರವೆಂದರೆ ಈ ಅಧಿಸೂಚನೆ ಹೊರಡಿಸುವ ಮುನ್ನ ಕೇಂದ್ರ ಸರ್ಕಾರ ಯಾವೊಂದು ರಾಜ್ಯ ಸರ್ಕಾರದಿಂದಲೂ ಅಭಿಪ್ರಾಯ ಕೋರಿಲ್ಲ.
ಖಾಸಗಿ ಮಾಪನ ಘಟಕಗಳ ಮೇಲೆ ಸರ್ಕಾರದ ನಿಯಂತ್ರಣ, ಶೂನ್ಯ ಆದಾಯ ಹಾಗೂ ಸರ್ಕಾರಿ ಮಾಪನ ಘಟಕಗಳ ಭವಿಷ್ಯ ಕುರಿತಂತೆ ಅಧಿಸೂಚನೆ ಬಳಿಕ ರಾಜ್ಯ ಸರ್ಕಾರ ಸ್ಪಷ್ಟನೆ ಕೇಳಿದೆ. ಆದರೆ ಈವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ಬಂದಿಲ್ಲ.
ಏನಿದು ಖಾಸಗಿ ಜಿಎಟಿಸಿ?: ಯಾವುದೇ ಖಾಸಗಿ ಸಂಸ್ಥೆಗಳು ತೂಕ ಮತ್ತು ಮಾಪನ ಘಟಕ ಸ್ಥಾಪಿಸಬಹುದು. ಕೇಂದ್ರ ಸರ್ಕಾರ ವಿಧಿಸಿರುವ ಸುಮಾರು 20 ಷರತ್ತು ಒಪ್ಪಿಕೊಂಡು ಈ ಘಟಕ ಸ್ಥಾಪಿಸಲು ಪರವಾನಿಗೆ ಪಡೆಯಬಹುದು. ಈಗ ಕರ್ನಾಟಕದಲ್ಲಿ ಒಟ್ಟು 109 ತೂಕ ಮತ್ತು ಮಾಪನ ಇನ್ಸ್ಪೆಕ್ಟರ್ಗಳಿದ್ದಾರೆ. ಈ ಎಲ್ಲ ಇನ್ಸ್ಪೆಕ್ಟರ್ಗಳ ಅಧಿಕಾರ ವ್ಯಾಪ್ತಿಗೊಂದರಂತೆ ಖಾಸಗಿ ಘಟಕಗಳು ಪ್ರಾರಂಭವಾಗುತ್ತವೆ. ಈಗ ಸರ್ಕಾರ ಪಡೆಯುತ್ತಿರುವ ಶುಲ್ಕವನ್ನೇ ಖಾಸಗಿ ಸಂಸ್ಥೆಗಳು ಪಡೆಯಲಿವೆ. ಇದಲ್ಲದೇ ವ್ಯಾಪಾರಸ್ಥರ ಮೇಲೆ ಹಾಕುವ ದಂಡ ಹಣವು ಖಾಸಗಿ ಸಂಸ್ಥೆಗಳ ಕೈಸೇರಲಿವೆ. ಕೇಂದ್ರ ಸರ್ಕಾರ ಹೇಳುವ ಪ್ರಕಾರ ಇದರಿಂದ ಸರ್ಕಾರಿ ಮಾಪಕರ ಗುಣಮಟ್ಟ ವೃದ್ಧಿಸಲಿದೆ. ಆದರೆ ಭವಿಷ್ಯದಲ್ಲಿ ಇವೆಲ್ಲ ಸರ್ಕಾರಿ ಹುದ್ದೆಗಳೇ ನಾಶವಾಗಲಿವೆ ಎಂಬ ಸಂಶಯವಿದೆ.
ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗುತ್ತಿಗೆ ನೌಕರರಾಗಿರುವುದರಿಂದ ಯಾವುದೇ ಪ್ರಮಾದಗಳಿಗೂ ಕ್ರಮತೆಗೆದುಕೊಳ್ಳಲು ಸಾಧ್ಯವಿಲ್ಲ. ಹೆಚ್ಚೆಂದರೆ ಸಂಸ್ಥೆ ಪರವಾನಿಗೆ ರದ್ದು ಮಾಡಬಹುದು.
ರಾಜ್ಯ ಸರ್ಕಾರಕ್ಕಾಗುವ ನಷ್ಟವೇನು?: ರಾಜ್ಯದಲ್ಲಿ 109 ಮಾಪಕರಿದ್ದಾರೆ. 2012-13ನೇ ಸಾಲಿನಲ್ಲಿ ಈ ಘಟಕಗಳಿಂದ 17.53 ಕೋಟಿ ಪ್ರಮಾಣಪತ್ರದ ಶುಲ್ಕ ವಸೂಲಿಯಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 40 ಕೋಟಿ, ತಮಿಳುನಾಡಿನಲ್ಲಿ 54 ಕೋಟಿ ಹಾಗೂ ದೆಹಲಿಯಲ್ಲಿ 100 ಕೋಟಿಗೂ ಅಧಿಕ ಶುಲ್ಕ ವಸೂಲಿಯಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದೇ ಕೆಲಸಕ್ಕಾಗಿ ಪ್ರತಿ ರಾಜ್ಯ ಸರ್ಕಾರವೂ ತನ್ನದೇ ಆದ ಇಲಾಖೆ ಹೊಂದಿದೆ. ಆದರೆ ಕೇಂದ್ರ ಸರ್ಕಾರದ ಒಂದೇ ಹೊಡೆತಕ್ಕೆ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನೂ ಪಡೆಯದೆ ಖಾಸಗೀಕರಣ ಮಾಡಲು ಮುಂದಾಗಿದೆ.
ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಕೇಂದ್ರ ಸರ್ಕಾರದ ಈ ಆದೇಶ ವಿರೋಧಿಸಿ ರಾಜ್ಯ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗುತ್ತಿದ್ದು, ಖಾಸಗಿ ಲಾಬಿಗೆ ಮಣಿದು ಈ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೇಂದ್ರ ಸರ್ಕಾರದ ಈ ಆದೇಶದಿಂದ ಒಟ್ಟಾರೆ ರಾಜ್ಯ ಸರ್ಕಾರಗಳಿಗೆ 1 ಸಾವಿರ ಕೋಟಿಗೂ ಅಧಿಕ ನಷ್ಟವಾಗಲಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ರಾಜ್ಯಸಭೆ ಉತ್ತರ - ಆದೇಶಕ್ಕೆ ವಿರುದ್ಧ
2009ರಲ್ಲಿ ಕಾನೂನು ಮಾಪನ ಕಾಯಿದೆ ಜಾರಿಗೆ ಬಂದಾಗ ಕೆಲ ಸಂಸದರು ಖಾಸಗೀಕರಣ ವಿರೋಧಿಸಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ಕೆ.ವಿ.ಥಾಮಸ್, ಮಾಪನ ಘಟಕಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದಿಲ್ಲ. ಇದರಿಂದ ಘಟಕದ ದುರುಪಯೋಗವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಂಗಸಂಸ್ಥೆಗಳಿಗೆ ಜವಾಬ್ದಾರಿ ನೀಡುತ್ತೇವೆ ಎಂದು ಉತ್ತರಿಸಿದ್ದರು. ಆದರೆ ಈಗ ಹೊರಡಿಸಿರುವ ಅಧಿಸೂಚನೆ ರಾಜ್ಯಸಭೆಯಲ್ಲಿ ಸಚಿವರು ನೀಡಿದ ಉತ್ತರಕ್ಕೆ ತದ್ವಿರುದ್ಧವಾಗಿದೆ.
ಇಲಾಖೆ ಸುಧಾರಣೆಗಾಗಿ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರಕ್ಕೆ ಬರಬೇಕಿರುವ ಆದಾಯ ನಿಲ್ಲುವುದು ನಿಜ.
-ಎಸ್.ಆರ್.ವೆಂಕಟೇಶ್, ರಾಜ್ಯ ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕರು
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

