5 ವಿಧೇಯಕಗಳಿಗೆ ವಿಧಾನ ಪರಿಷತ್ನಲ್ಲೂ ಅಂಗೀಕಾರ
ಸುವರ್ಣ ವಿಧಾನ ಪರಿಷತ್: ವಿಧಾಸಭೆಯಲ್ಲಿ ಅಂಗೀಕಾರವಾಗಿರುವ ಐದು ವಿವಿಧ ವಿಧೇಯಕಗಳಿಗೆ ಪ್ರತಿಪಕ್ಷದ ವಿರೋಧದ ನಡುವೆ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಾನೂನು ತಿದ್ದುಪಡಿ ವಿಧೇಯಕಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರೆ, ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ರಾಜೀವ್ ಗಾಂಧಿ ವಿವಿ ವಿಧೇಯಕ ಮಂಡನೆ ಮಾಡಿದಾಗ ಕೆಲವೊಂದು ಸಲಹೆ ನೀಡಿದ ಬಿಜೆಪಿ ಸದಸ್ಯರು, ವಿಶೇಷವಾಗಿ ಸಿಂಡಿಕೇಟ್ ಗಾತ್ರ ಹೆಚ್ಚಳ ಮಾಡಿರುವುದನ್ನು ಕೈಬಿಡಬೇಕು ಮತ್ತು ಸದಸ್ಯರ ನೇಮಕದಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆದರೆ, ಇದಕ್ಕೆ ಒಪ್ಪದ ಸಚಿವರು, ಈಗ ಅನುಮೋದನೆ ನೀಡಿ, ಮುಂಬರುವ ಆರು ತಿಂಗಳಲ್ಲಿ ಖಂಡಿತವಾಗಿಯೂ ಸುಧಾರಣೆ ಮಾಡಲಾಗುವುದು ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಸದನ ಅಂಗೀಕರಿಸಿತು.
ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಅನುಮೋದನೆಯಾಗಿದ್ದರೂ ರಾಜ್ಯಪಾಲರು ತಡೆಹಿಡಿದಿದ್ದ ಪಟ್ಟಣ ಮತ್ತು ಗ್ರಾಮಾಂತರ ಯೋಜನೆಯ ಅಕ್ರಮ-ಸಕ್ರಮ ತಿದ್ದುಪಡಿ ವಿಧೇಯಕಕ್ಕೆ ಸರ್ವಾನುಮತದಿಂದ ಅನುಮೋದನೆ ಪಡೆಯಲಾಯಿತು.
ಯಶಸ್ವಿಯಾದ ಎಚ್.ಕೆ.ಪಾಟೀಲ್: ತಾಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ರಕ್ಷಣೆ ಮಾಡುವ ಆಸ್ತಿ ಘೋಷಣೆ ಕುರಿತ ಕರ್ನಾಟಕ ಪಂಚಾಯತ್ ರಾಜ್ ವಿಧೆಯಕ ತಿದ್ದುಪಡಿ 2013ಕ್ಕೆ ವಿಧಾನ ಪರಿಷತ್ನಲ್ಲಿ ಅನುಮೋದನೆ ನೀಡಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಎಚ್.ಕೆ.ಪಾಟೀಲ್ ಅವರು ಮಂಡನೆ ಮಾಡಿದ ವಿಧೆಯಕಕ್ಕೆ ವಿರೋಧ ಪಕ್ಷದ ಸದಸ್ಯರು ಕೆಲವೊಂದು ಸಲಹೆ ನೀಡಿದರು. ಇವುಗಳನ್ನು ವಿಧೇಯಕದಲ್ಲಿ ಸೇರಿಸಲು ಬರುವುದಿಲ್ಲವಾದ್ದರಿಂದ ಸುತ್ತೋಲೆ ಹೊರಡಿಸುವ ವೇಳೆ ಪರಿಗಣಿಸುವುದಾಗಿ ಸಚಿವ ಪಾಟೀಲ್ ಸಭೆಗೆ ವಿವರಿಸಿ, ವಿಧೇಯಕಕ್ಕೆ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು.
ವಿಧಾನ ಸಭೆಯಲ್ಲಿ ಈಗಗಾಲೇ ಅನುಮೋದನೆಯಾಗಿರುವ ಕೃಷಿ ವಿವಿ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲಿಯೂ ಅನುಮೋದನೆ ನೀಡಲಾಯಿತು. ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ವಿಧೇಯಕ ಮಂಡನೆ ಮಾಡಿ ವಿವರಿಸಿದರು. ಜಲ್ಲಿ ಕ್ರಷರ್ಗಳ ನಿಯಂತ್ರಣಕ್ಕಾಗಿ ರೂಪಿಸಲಾಗಿರುವ ನೂತನ ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲಿಯೂ ಅನುಮೋದನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಮಂಡನೆ ಮಾಡಿದ ವಿಧೇಯಕಕ್ಕೆ ಕೆಲವೊಂದು ಸಣ್ಣಪುಟ್ಟ ಸಲಹೆಯೊಂದಿಗೆ ಅನುಮೋದನೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

