ನೈಸ್ ಅಕ್ರಮ ಬಗ್ಗೆ ಸಿಬಿಐ ತನಿಖೆಯಾಗಲಿ

-ನನ್ನ ಅವಧಿಯ ಸರ್ಕಾರವನ್ನೂ ಸೇರಿಸಿಕೊಂಡು ಇದುವರೆಗಿನ ಎಲ್ಲಾ ಸರ್ಕಾರಗಳ ಬಗ್ಗೆ ರಾಜ್ಯ ಸರ್ಕಾರ ಸಿಬಿಐ ತನಿಖೆ ನಡೆಸಲಿ. ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ನನ್ನ ಪತ್ರಕ್ಕೆ ಬೆಲೆ ನೀಡದಿದ್ದರೆ ಪರವಾಗಿಲ್ಲ. ಅವರ ನಾಯಕರಿಗೆ ಬೆಲೆ ನೀಡಲಿ.
ಪತ್ರಿಕಾಗೋಷ್ಠಿಯಲ್ಲಿ ದಾಖಲೆ ನೋಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಕನ್ನಡಪ್ರಭ ವಾರ್ತೆಬೆಂಗಳೂರು ಡಿ.7
ಭೂ ಸ್ವಾಧೀನ ಕಾಯಿದೆ ಪ್ರಕಾರ ಬಿಎಂಐಸಿ ಯೋಜನೆಗೆ ಮೀಸಲಿಟ್ಟ ಭೂಮಿಯನ್ನು ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡು, ನೈಸ್ ಸಂಸ್ಥೆಯಿಂದ ಯೋಜನೆ ಕಿತ್ತುಕೊಳ್ಳಬೇಕು. ಕೂಡಲೇ ಈ ಅಕ್ರಮಗಳ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಅಣತಿ ಮೇರೆಗೆ ಲೋಕಸಭೆಯಲ್ಲಿ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಕಾಯಿದೆ ಸೆಕ್ಷನ್ 24(1)ರ ಪ್ರಕಾರ ಯಾವುದೇ ಸಂಸ್ಥೆಗೆ ಕೃಷಿ ಭೂಮಿಯನ್ನು ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಿದ್ದರೆ, ಪರಿಹಾರ ಧನದಲ್ಲಿ ನೀಡಬೇಕಾದ ಮೊತ್ತವನ್ನು ಠೇವಣಿ ಇಡಬೇಕು. ಆದರೆ ನೈಸ್ ಸಂಸ್ಥೆ ನಯಾ ಪೈಸೆಯಷ್ಟು ಹಣ ಠೇವಣಿ ಇಟ್ಟಿಲ್ಲ. ಸುಮಾರು 1926 ಎಕರೆ ಭೂಮಿಯ ಸ್ವಾಧೀನಕ್ಕೆ ಮುಂದಾಗಿದ್ದರೂ ಯಾವುದೇ ಪರಿಹಾರ ಧನ ನೀಡಲಾಗಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಕಿಡಿಕಾರಿದ್ದಾರೆ.
ಪ್ರಾಮಾಣಿಕತೆ ಸಾಬೀತು ಪಡಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರದರ್ಶಕ ಆಡಳಿತದ ಭರವಸೆ ಮೇರೆಗೆ ಅಧಿಕಾರಕ್ಕೆ ಬಂದಿದ್ದಾರೆ. ಅವರು ಪ್ರಾಮಾಣಿಕರೆಂದು ನಾನು ನಂಬಿದ್ದೇನೆ. ಆದರೆ ನೈಸ್ ಸಂಸ್ಥೆಗೆ ನೀಡಿರುವ ಭೂಮಿ ಹಿಂಪಡೆದು ನನ್ನ ಅವಧಿಯ ಸರ್ಕಾರವನ್ನು ಸೇರಿಸಿ, ಆ ಬಳಿಕ ಆಡಳಿತಕ್ಕೆ ಬಂದ ಸರ್ಕಾರಗಳ ಆದೇಶಗಳ ವಿರುದ್ಧ ಸಿಬಿಐ ಹಾಗೂ ವಿಶೇಷ ತನಿಖಾ ದಳದಿಂದ ವಿಚಾರಣೆ ನಡೆಸಬೇಕು. ಈ ಮೂಲಕ ಪಾರದರ್ಶಕ ಆಡಳಿಕ, ಪ್ರಾಮಾಣಿಕತೆಯನ್ನು ಸಿದ್ದರಾಮಯ್ಯ ಸಾಬೀತುಪಡಿಸಲಿ ಎಂದು ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಸವಾಲೆಸೆದರು. ನೈಸ್ ಅಕ್ರಮಗಳ ಕುರಿತಂತೆ ಸಿದ್ದರಾಮಯ್ಯ ಅವರಿಗೂ ವಿವರವಾದ ಪತ್ರ ಬರೆದಿದ್ದೇನೆ. ನಾನು ಆಗ್ರಹಿಸಿದ್ದೇನೆ ಎಂದು ಭೂಮಿ ವಾಪಸ್ ಪಡೆಯುವ ಅಗತ್ಯವಿಲ್ಲ. ಅವರದೇ ಪಕ್ಷದ ನಾಯಕರು ತಂದ ಕಾಯಿದೆಗೆ ಮರ್ಯಾದೆ ನೀಡಿ ಭೂಮಿ ವಾಪಸ್ ಪಡೆಯುವ ದಿಟ್ಟತನವನ್ನು ಸಿದ್ದರಾಮಯ್ಯ ಪ್ರದರ್ಶಿಸಲಿ ಎಂದರು.
ದೇವೇಗೌಡ ಹೇಳಿದಿಷ್ಟು: ದೆಹಲಿಯಲ್ಲಿ ಯಮುನಾ ಎಕ್ಸ್ಪ್ರೆಸ್ ರಸ್ತೆ ನಿರ್ಮಿಸುವಾಗ ರೈತರು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮಾಡಿದರು.
ಆಗ ಕಾಂಗ್ರೆಸ್ನ ಉಪಾಧ್ಯಕ್ಷ ರಾಹುಲ್ಗಾಂಧಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದ್ದರು. ಇದರ ಪರಿಣಾಮವೇ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲಾಯಿತು. ಇದೇ ರೀತಿ ಕಳೆದ ವರ್ಷ ನೈಸ್ ಹೋರಾಟವು ಉತ್ತುಂಗಕ್ಕೆ ಹೋಗಿದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ರೈತರಿಗೆ ಅಭಯ ನೀಡಿ ಬಂದಿದ್ದರು. ರೈತರಿಗೆ ಅಂದು ನೀಡಿದ್ದ ಭಾಷೆಯನ್ನು ಇಂದು ಪೂರೈಸಬೇಕಿದೆ. ರೈತ ಪರ ಸರ್ಕಾರ ಎಂದು ಬಾಯಿಯಲ್ಲಿ ಹೇಳಿಕೊಂಡರೆ ಸಾಲದು.
ಲಾಭ ಮಾಡಿಕೊಳ್ಳಲಾಗುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಎಂಐಸಿ ಯೋಜನೆಯನ್ನು ಸರ್ಕಾರವೇ ವಹಿಸಿಕೊಳ್ಳಲು ಮುಂದಾಗಿತ್ತು. ಆದರೆ ಅಂದು ಮೈತ್ರಿ ಪಕ್ಷವಾಗಿದ್ದ ಬಿಜೆಪಿ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಬಿಎಂಐಸಿ ಯೋಜನೆ ಪ್ರಾರಂಭವಾದ ಬಳಿಕ ಖಾಸಗಿ ಬಿಲ್ಡರ್ಗಳ ಜತೆ ಸೇರಿಕೊಂಡು ಸುಮಾರು 8 ಸಾವಿರ ಕೋಟಿಯಷ್ಟು ಹಣವನ್ನು ನೈಸ್ ಗಳಿಸಿದೆ. ಆದರೆ ಯೋಜನೆಗೆ ಖರ್ಚು ಮಾಡಿರುವುದು ಮಾತ್ರ ಕೇವಲ 1500 ಕೋಟಿ. ಜಂಟಿ ಸಹಭಾಗಿತ್ವದಲ್ಲಿ ಬಡಾವಣೆಗಳನ್ನು ನಿರ್ಮಿಸಿ ಲಾಭ ಮಾಡಿಕೊಳ್ಳಲಾಗುತ್ತಿದೆ. ಆದರೆ ರೈತರಿಗೆ ಪರಿಹಾರ ಹಣ ನೀಡಲಾಗುತ್ತಿಲ್ಲ. ಮತ್ತೊಂದೆಡೆ ಮೂಲ ಒಪ್ಪಂದದ ಪ್ರಕಾರ ಯೋಜನೆಯನ್ನು ನಡೆಸುತ್ತಿಲ್ಲ.
ಯೋಜನೆಯನ್ನು ಜಾರಿಗೊಳಿಸಿದಾಗ ಸುಮಾರು 522 ಕೋಟಿಯಷ್ಟು ಬಂಡವಾಳ ರಾಜ್ಯಕ್ಕೆ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಯಾಪೈಸೆ ಬಂಡವಾಳವನ್ನು ಸಂಸ್ಥೆಯು ರಾಜ್ಯದಲ್ಲಿ ಹೂಡಲಿಲ್ಲ. ನಂತರದ ಸರ್ಕಾರಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ರೈತರ ಭೂಮಿಯನ್ನೇ ಅಡವಿಟ್ಟು ಖಾಸಗಿ ಬ್ಯಾಂಕ್ಗಳಲ್ಲಿ ಸಾಲ ಮಾಡಲಾಯಿತು. ಆಯಾ ಸರ್ಕಾರಗಳ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಶಾಮೀಲಿನಿಂದ ಸರ್ಕಾರವೇ ಆ ಸಾಲಕ್ಕೆ ಜಾಮೀನು ನೀಡಲು ಮುಂದಾಯಿತು. ಈ ಮೂಲಕ ನೈಸ್ ಸಂಸ್ಥೆಯೂ ಯಾವ ರೀತಿಯಲ್ಲಿ ಅಂತಾರಾಷ್ಟ್ರೀಯ ವಂಚಕ ಸಂಸ್ಥೆ ಎನ್ನುವುದನ್ನು ಸಾಬೀತು ಮಾಡಿದೆ.
ನೈಸ್ ಪರ ವಕಾಲತ್ತು ನಿಲ್ಲಿಸಿ
ಕೋರ್ಟ್ಗಳಲ್ಲಿ ಕೆಲ ಪ್ರಕರಣಗಳನ್ನು ನೈಸ್ ಸಂಸ್ಥೆಯು ಗೆಲ್ಲುತ್ತಿದೆ ಎಂದಾಕ್ಷಣ ಎಲ್ಲವೂ ಕಾನೂನು ಪ್ರಕಾರವಾಗಿದೆ ಎಂದಲ್ಲ. ನೈಸ್ ಸಂಸ್ಥೆಯೊಂದಿಗೆ ಸರ್ಕಾರ ಶಾಮೀಲಾಗಿರುವುದರಿಂದ ಕೋರ್ಟ್ ಮುಂದೆ ಎಲ್ಲ ಅವಶ್ಯ ದಾಖಲೆಗಳನ್ನು ಇಡಲಾಗುತ್ತಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಲಯವನ್ನು ಕತ್ತಲಲ್ಲಿಡುತ್ತಿದ್ದಾರೆ. ಇನ್ನಾದರೂ ಸರ್ಕಾರದ ಮೂಲ ಆದೇಶಗಳನ್ನು ಕೋರ್ಟ್ಗೆ ನೀಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಲಿ. ನೈಸ್ಗೆ ನೀಡಿರುವ ಭೂಮಿಯನ್ನು ಸಮೀಕ್ಷೆ ಮಾಡುವಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಸಾಕಷ್ಟು ಆದೇಶ ನೀಡಿದ್ದರೂ ಸರ್ಕಾರ ಸುಮ್ಮನಾಗಿದೆ ಎಚ್.ಡಿ.ದೇವೇಗೌಡ ಟೀಕಿಸಿದರು.
ದಿನಕ್ಕೊಂದು 'ನೈಸ್' ವರಸೆ!
ಸ್ವಂತ ಬಂಡವಾಳದಿಂದ ಯೋಜನೆ ಪ್ರಾರಂಭಿಸುವುದಾಗಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ನೈಸ್ ಸಂಸ್ಥೆ ಕೆಲವೇ ವರ್ಷಗಳಲ್ಲಿ ಅದನ್ನು ಮರೆಯಿತು. ರೈತರ ಭೂಮಿಯನ್ನೇ ಅಡವಾಗಿಟ್ಟು ಸಾಲ ಪಡೆದ ಕಂಪನಿ ಪರಿಹಾರ ನೀಡಲಿಲ್ಲ. ಎಕರೆಗೆ 40 ಲಕ್ಷ ಪರಿಹಾರ ಧನ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಇದನ್ನು ನಿರಾಕರಿಸಿದ ನೈಸ್ ಸಂಸ್ಥೆಯವರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕೇವಲ 7 ಲಕ್ಷಕ್ಕೆ ಇಳಿಸುವಂತೆ ಕೋರಿದ್ದಾರೆ. ಈಗ ಮತ್ತೆ ವರಸೆ ಬದಲಿಸುವ ಮೂಲಕ ಜಿಲ್ಲಾಧಿಕಾರಿಗೆ ಪರಿಹಾರ ಧನ ನಿರ್ಧರಿಸುವ ಅಧಿಕಾರವೇ ಇಲ್ಲ ಎನ್ನುತ್ತಿದ್ದಾರೆ. ಈಗ ಎಲ್ಲವನ್ನೂ ಮರೆತು, ರೈತರಿಂದ ಪಡೆದುಕೊಳ್ಳುವ ಭೂಮಿಯಲ್ಲಿ ಶೇ.40ರಷ್ಟು ಅಭಿವೃದ್ಧಿಪಡಿಸಿ ವಾಪಸ್ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


