ಬಂಡೀಪುರ ರೈಲು ಮಾರ್ಗ; ಕೇಸು ಹಿಂಪಡೆದ ಕೇರಳ

ಕ.ಪ್ರ. ವಾರ್ತೆ, ಮೈಸೂರು, ಡಿ.12-
ಈಶಾನ್ಯ ಭಾರತದಲ್ಲಿ ರೈಲಿಗೆ ಸಿಲುಕಿ ವನ್ಯಪ್ರಾಣಿಗಳು ಬಲಿಯಾಗುತ್ತಿರುವ ಬೆನ್ನಲ್ಲೇ ಬಂಡೀಪುರ ಅರಣ್ಯದ ಮೂಲಕ ಕೇರಳ ಹಾಗೂ ಕರ್ನಾಟಕದ ಮಧ್ಯೆ ಸಂಪರ್ಕ ಕಲ್ಪಿಸುವ ರೇಲ್ವೆ ಯೋಜನೆಗೆ ಮತ್ತೆ ಜೀವ ಬಂದಿದೆ. ಕೇರಳದ ವಯನಾಡು ಮೂಲದ ನೀಲಗಿರೀಸ್ ವಯನಾಡು ರಾಷ್ಟ್ರೀಯ ಹೆದ್ದಾರಿ ಮತ್ತು ರೇಲ್ವೆ ಕ್ರಿಯಾ ಸಮಿತಿಯು ಸತ್ಯಕ್ಕೆ ದೂರವಾದ ಸಂಗತಿಗಳೊಂದಿಗೆ ಹಲವು ನ್ಯಾಯಾಲಯ ಹಾಗೂ ನ್ಯಾಯಪೀಠಗಳಲ್ಲಿ ಮೊಕದ್ದಮೆ ದಾಖಲಿಸುತ್ತಿದೆ. ಇತ್ತೀಚೆಗಷ್ಟೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ಈ ಸಮಿತಿಯು ಹೂಡಿದ್ದ ಮೊಕದ್ದಮೆಯನ್ನು ಸದ್ದಿಲ್ಲದೆ ಹಿಂಪಡೆದಿದೆ.
ಕೇರಳ ಸರ್ಕಾರ ಬಂಡೀಪುರದ ಮೂಲಕ ಹಾದು ಹೋಗುವ ಪ್ರಸ್ತಾಪಿತ ರೇಲ್ವೆ ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 212 ಮತ್ತು 67ರಲ್ಲಿನ ರಾತ್ರಿ ವಾಹನ ಸಂಚಾರ ನಿಷೇಧದ ಆದೇಶವನ್ನು ಹಿಂಪಡೆಯಲು ಕರ್ನಾಟಕದ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರುತ್ತಿದೆ.
ಒಬ್ಬರಾದ ಮೇಲೆ ಒಬ್ಬರಂತೆ ರಾಜ್ಯದ ಮೂವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಪ್ರತಿ ಬಾರಿಯೂ ಕಟುವಾಗಿ ತಿರಸ್ಕರಿಸಲ್ಪಟ್ಟಿದ್ದರೂ ಸುಮ್ಮನಾಗಿಲ್ಲ.
ಬೇಡಿಕೆ ಸಮಂಜಸವಲ್ಲ: ಆರ್ಥಿಕ ಹಾಗೂ ಪರಿಸರ ಕಾರಣಗಳಿಂದಾಗಿ ಕಾರ್ಯ ಸಾಧ್ಯವಲ್ಲದ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಪ್ರಸ್ತಾವಿತ ಕರ್ನಾಟಕದ ನಂಜನಗೂಡು ಹಾಗೂ ಕೇರಳದ ನಿಲಂಬೂರನ್ನು ಸಂಪರ್ಕಿಸುವ ರೈಲು ಯೋಜನೆಯನ್ನು ಈಗಾಗಲೇ ಕೇರಳದ ಹೈಕೋರ್ಟ್ ತಿರಸ್ಕರಿಸಿದೆ. ಇದೇ ರೇಲ್ವೆ ಕ್ರಿಯಾ ಸಮಿತಿಯು ದಾಖಲಿಸಿದ್ದ ರಿಟ್ ಅರ್ಜಿ 602-2013ರಲ್ಲಿ, 2013ರ ಫೆ.13 ತನ್ನ ಆದೇಶದಲ್ಲಿ ನ್ಯಾಯಾಲಯವು ಯೋಜನೆ ಬಗ್ಗೆ ಈ ರೀತಿ ಹೇಳಿದೆ. 'ಈ ಎರಡೂ ಸ್ಥಳಗಳ ಮಧ್ಯೆ ಪ್ರಸ್ತುತ ರಸ್ತೆ ಸಂಪರ್ಕವಿದ್ದು, ಈ ವಿಷಯದಲ್ಲಿ ಪರ್ಯಾಯ ಸಾರಿಗೆ ಅನುಕೂಲಗಳು ಇಲ್ಲವೆಂಬ ಪರಿಸ್ಥಿತಿ ಉದ್ಭವಿಸುವುದಿಲ್ಲ. ರಸ್ತೆಯಲ್ಲಿ ರಾತ್ರಿ ಸಾರಿಗೆ ಸಂಚಾರ ನಿಷೇಧವಿದೆ ಎಂಬ ಒಂದೇ ಕಾರಣಕ್ಕಾಗಿ ರೈಲು ಸಂಪರ್ಕಬೇಕೆಂಬ ಬೇಡಿಕೆಯು ಯಾವುದೇ ರೀತಿಯಲ್ಲಿ ಸಮಂಜಸವಲ್ಲ.'
ಮೂಲಭೂತ ಸೌಲಭ್ಯಗಳಿಲ್ಲ: ಇದೇ ಮೊಕದ್ದಮೆಯಲ್ಲಿ ರೇಲ್ವೆ ಇಲಾಖೆಯು ಕರ್ನಾಟಕದ ನಂಜನಗೂಡು ಮತ್ತು ಕೇರಳದ ನಿಲಂಬೂರನ್ನು ಸೇರಿಸುವ ಈ ರೇಲ್ವೆ ಮಾರ್ಗವು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಮತ್ತು ಈ ಪ್ರಸ್ತಾಪವನ್ನು ಕೈಗೊಳ್ಳಲು ಇಲಾಖೆಯಲ್ಲಿ ಅಗತ್ಯವಾದ ಮೂಲಭೂತ ಸೌಲಭ್ಯಗಳಿಲ್ಲ ಎಂದು ಕೇರಳದ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಇದಲ್ಲದೆ ರೇಲ್ವೆ ಪ್ರಾಧಿಕಾರದಿಂದ ಸರ್ವೆ ನಡೆಸಿ ರೇಲ್ವೆ ಮಂಡಳಿಗೆ 2013ರ ಮೇ 24ರಂದು ಸಲ್ಲಿಸಲ್ಪಟ್ಟ ವರದಿಯ ಪ್ರಕಾರ ಪ್ರಸ್ತಾಪಿಸಲ್ಪಟ್ಟ ರೇಲ್ವೆ ಮಾರ್ಗಕ್ಕೆ ಶೇ. 0.895ರಷ್ಟು ನಕಾರಾತ್ಮಕ ಆಂತರಿಕ ಪ್ರತಿಫಲ ದರದೊಂದಿಗೆ 4,266.88 ಕೋಟಿ ಬಂಡವಾಳ ಬೇಕಾಗುತ್ತದೆ. ಇದು ಈ ಯೋಜನೆಯನ್ನು ಸಂಪೂರ್ಣವಾಗಿ ಅನರ್ಹಗೊಳಿಸುತ್ತದೆ. ಸತ್ಯಾಂಶ ಹೀಗಿದ್ದರೂ ರೇಲ್ವೆ ಕ್ರಿಯಾ ಸಮಿತಿಯು ಈ ಯೋಜನೆಯು ಪರಿಸರ ಹಾಗೂ ಆರ್ಥಿಕವಾಗಿ ಕಾರ್ಯ ಸಾಧ್ಯವೆಂದು ಎಲ್ಲೆಡೆ ಪ್ರತಿಪಾದಿಸುತ್ತಿದೆ.
ಸದ್ದಿಲ್ಲದೆ ಮೊಕದ್ದಮೆ ಹಿಂಪಡೆದಿದೆ: ಕೇರಳದ ಹೈಕೋರ್ಟ್ ಆದೇಶದಿಂದ ತೃಪ್ತಿಯಾಗದ ಈ ಸಮಿತಿಯು ಬಂಡೀಪುರದ ಸುತ್ತಲೂ ಘೋಷಿಸಿರುವ ಪರಿಸರ ಸೂಕ್ಷ್ಮ ವಲಯವನ್ನು ಪ್ರಶ್ನಿಸಿ ಕೇರಳದ ಹೈಕೋರ್ಟ್‌ನಲ್ಲಿ ಮತ್ತೊಂದು ರಿಟ್ ಅರ್ಜಿ 6181-2013ನ್ನು ದಾಖಲಿಸಿತ್ತು. ಈ ರಿಟ್ ಅರ್ಜಿಯಲ್ಲಿ ರೇಲ್ವೆ ಕ್ರಿಯಾ ಸಮಿತಿಯು ಪರಿಸರ ಸಂರಕ್ಷಣಾ ಕಾಯಿದೆ ಹಾಗೂ ನಿಯಮ 1986ರಲ್ಲಿ ಸಂರಕ್ಷಿತ ಪ್ರದೇಶಗಳ ಸುತ್ತಲೂ ಪರಿಸರ ಸೂಕ್ಷ್ಮ ವಲಯವನ್ನು ಘೋಷಿಸುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧಿಕಾರವನ್ನೇ ಸಮಿತಿ ಪ್ರಶ್ನಿಸಿತ್ತು. ಕೇರಳದ ನ್ಯಾಯಾಲಯವು ಈ ಮೊಕದ್ದಮೆಯನ್ನು ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ ವರ್ಗಾಯಿಸಿತ್ತು. ಈಗ ಕ್ರಿಯಾ ಸಮಿತಿಯು ಹಸಿರು ನ್ಯಾಯಪೀಠದ ಮೊದಲ ಹಲವು ವಿಚಾರಣೆಗಳಿಗೆ ಹಾಜರಾಗದೆ ಈಗ ಸದ್ದಿಲ್ಲದೆ ಮೊಕದ್ದಮೆ ಹಿಂಪಡೆದಿದೆ. ರೇಲ್ವೆ ಕ್ರಿಯಾ ಸಮಿತಿಯು ಈ ಯೋಜನೆ ಕಾರ್ಯ ಸಾಧ್ಯವಲ್ಲವೆಂಬ ವಿಷಯವನ್ನು ಮರೆಮಾಚಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ. ರೈಲು ಯೋಜನೆಯು ಜಾರಿಯಾದರೆ ಬಂಡೀಪುರದ ರಾಷ್ಟ್ರೀಯ ಹೆದ್ದಾರಿ ಮೇಲಿನ ಸಂಚಾರ ಒತ್ತಡವು ಕಡಿಮೆಯಾಗುತ್ತದೆಂದು ಪ್ರತಿಪಾದಿಸುತ್ತಿದೆ. ಆದರೆ, ಇದೇ ಸಮಿತಿ ಸುಪ್ರೀಂ ಕೋರ್ಟ್ ಬಂಡೀಪುರದ ರಾಷ್ಟ್ರೀಯ ಹೆದ್ದಾರಿ 212 ಮತ್ತು 67ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಹೂಡಿರುವ ಮೊಕದ್ದಮೆ ಎಸ್‌ಎಲ್‌ಪಿ 13838-2010ರಲ್ಲಿ ಪಾಲುದಾರನಾಗಿದೆ.
ದಿಕ್ಕುತಪ್ಪಿಸುವ ಉದ್ದೇಶದಿಂದ ಮೊಕದ್ದಮೆ
ಸಮಿತಿಯು ನ್ಯಾಯಾಲಯಗಳನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಒಂದೇ ವಿಷಯಕ್ಕೆ ಹಲವಾರು ನ್ಯಾಯಾಲಯಗಳಲ್ಲಿ (ಕೇರಳದ ಹೈಕೋರ್ಟ್, ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠ, ಸುಪ್ರೀಂ ಕೋರ್ಟ್) ಮೊಕದ್ದಮೆಗಳನ್ನು ಹೂಡಿದೆ. ದೇಶದಲ್ಲಿ ರೈಲಿಗೆ ಸಿಲುಕಿ ಮೃತಪಡುವ ಆನೆಗಳ ಸಂಖ್ಯೆ ಏರುತ್ತಿದ್ದರೂ ಸೂಕ್ಷ್ಮ ವನ್ಯಜೀವಿ ಆವಾಸಸ್ಥಾನ ಹಾಗೂ ಆನೆ ವಲಸೆ ಮಾರ್ಗಗಳ ಮೂಲಕ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲು ಚರ್ಚೆಗಳು ಹಾಗೂ ಪ್ರಸ್ತಾವನೆಗಳು ನಡೆಯುತ್ತಲೇ ಇವೆ. ಕೇರಳ ಸರ್ಕಾರ ಹಾಗೂ ಕ್ರಿಯಾ ಸಮಿತಿಯು ಪ್ರತಿಪಾದಿಸುತ್ತಿರುವ ಇದೇ ಮಾದರಿಯ ಈ ರೈಲು ಯೋಜನೆಯು ದೇಶದಲ್ಲೇ ಅತಿಹೆಚ್ಚು ಆನೆಗಳ ನೆಲೆವೀಡಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುತ್ತದೆ. ಈ ವಿಚಾರದಲ್ಲಿ ಬಿ.ಪಿ. ಅನುಪ್ ಎಂಬವರು ರಾಷ್ಟ್ರೀಯ ಹಸಿರು ಪೀಠದಲ್ಲಿ ಈ ರೈಲು ಯೋಜನೆ ಹಾಗೂ ಬಂಡೀಪುರದ ಮೂಲಕ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆರವುಗೊಳಿಸುವುದರ ವಿರುದ್ಧ ಹೋರಾಡಿದ್ದಾರೆ. ಚೆನ್ನೈನ ಹೆಸರಾಂತ ಪರಿಸರ ನ್ಯಾಯವಾದಿ ಸಂತಾನರಾಮನ್ ಅವರು ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿ ವಾದಿಸಿದ್ದಾರೆ.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


