ಪರಿಸ್ಥಿತಿ ಕೈ ಮೀರುವ ಭೀತಿ, ಸಮನ್ವಯ ಸಮಿತಿ ಸಭೆ ರದ್ದು

ಕನ್ನಡಪ್ರಭವಾರ್ತೆ ಬೆಂಗಳೂರು ಡಿ.14
ರಾಜ್ಯ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನಕ್ಕೆ ಬೆಚ್ಚಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ಶನಿವಾರ ನಡೆಯಬೇಕಿದ್ದ ಸಮನ್ವಯ ಸಮಿತಿ ಸಭೆ ಮೊಟಕು ಮಾಡಿ ದೆಹಲಿಗೆ ವಾಪಸ್ ತೆರಳಿದರು.
ಸಮನ್ವಯ ಸಮಿತಿ ಮತ್ತು ಚುನಾವಣಾ ಸಮಿತಿ ಸಭೆ ನಡೆಸುವ ಉದ್ದೇಶದಿಂದ ಶುಕ್ರವಾರ ರಾತ್ರಿಯೇ ದಿಗ್ವಿಜಯಸಿಂಗ್ ಬೆಂಗಳೂರಿಗೆ ಆಗಮಿಸಿದ್ದರು. ಶನಿವಾರ ಮತ್ತು ಭಾನುವಾರ ಅವರು ಪಕ್ಷದ ಅನೇಕ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು.
ಆದರೆ, ದಿಗ್ವಿಜಯಸಿಂಗ್ ಉಳಿದುಕೊಂಡಿದ್ದ ಕುಮಾರಕೃಪಾ ಅತಿಥಿ ಗೃಹಕ್ಕೆ ದೂರುಗಳ ಮಹಾಪೂರ ಶುಕ್ರವಾರ ರಾತ್ರಿಯಿಂದಲೇ ಹರಿದು ಬರಲಾರಂಭಿಸಿತು. ಇದರಿಂದ ಬೆಚ್ಚಿದ ದಿಗ್ವಿಜಯಸಿಂಗ್, ಸಮನ್ವಯ ಸಮಿತಿ ಸಭೆ ಗೊಂದಲದ ಗೂಡಾಗಬಹುದು ಎಂಬ ಕಾರಣಕ್ಕೆ ಸಭೆಯನ್ನು ಮೊಟಕು ಮಾಡಿದರು. ಜನವರಿ 6ರಂದು ಸಮನ್ವಯ ಸಮಿತಿ ಸಭೆ ನಡೆಸುವುದಾಗಿ ಭರವಸೆ ಕೊಟ್ಟು ಹೋದರು.
ಸದಾ ಕ್ಲೀನ್ ಇಮೇಜ್ ಮತ್ತು ಕಾನೂನು ಮಂತ್ರ ಪಠಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯಕಟ್ಟಿನ ಸ್ಥಳಗಳಿಗೆ ಅಧಿಕಾರಿಗಳನ್ನು ನೇಮಿಸುವಾಗ ಮಾತ್ರ ಭ್ರಷ್ಟರಿಗೆ ಮಣೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರಿಗೆ ಒಂದು ನೀತಿ, ತಮ್ಮ ಆಪ್ತರಿಗೆ ಇನ್ನೊಂದು ನೀತಿ ಅನುಸರಿಸುತ್ತಿದ್ದಾರೆ ಎಂಬುದು ಪ್ರಮುಖ ದೂರು.
ಈ ಮಧ್ಯೆ ಕೆಲವರು ತಮ್ಮವರನ್ನು ಮಂತ್ರಿ ಮಾಡಿ ಎಂದು ಮನವಿ ಪತ್ರ ಸಲ್ಲಿಸಿದರೆ, ಇನ್ನೂ ಕೆಲವರು, ಬಳ್ಳಾರಿಯಲ್ಲಿ ಪಕ್ಷಕ್ಕೆ ಸೇರಿದ ಜಾಗ ಕಬಳಿಸಿರುವ ಮುಖಂಡ ಕೆ.ಸಿ.ಕೊಂಡಯ್ಯ ವಿರುದ್ಧ ಯಾವುದೇ ಕ್ರಮ ಜರುಗಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ದೂರು, ಅಸಮಾಧಾನ ಮತ್ತು ಕುಮಾರಕೃಪಾ ಆವರಣದಲ್ಲಿ ನೆರೆದಿದ್ದ ಮುಖಂಡರು, ಕಾರ್ಯಕರ್ತರ ದಂಡು ನೋಡಿ ದಿಗ್ವಿಜಯಸಿಂಗ್ ಅವರು ಸಮನ್ವಯ ಸಮಿತಿ ಸಭೆ ನಡೆಸುವ ಮನಸ್ಸು ಮಾಡಲೇ ಇಲ್ಲ. ಅಸಮಾಧಾನ ಭುಗಿಲೇಳುವ ಸಾಧ್ಯತೆಯನ್ನು ಅರಿತ ದಿಗ್ವಿಜಯಸಿಂಗ್ ಪೂರ್ವ ನಿಯೋಜಿತ ಸಭೆಯನ್ನು ರದ್ದುಗೊಳಿಸಿದರು. ಮಾತ್ರವಲ್ಲ, ಹೈಕಮಾಂಡ್ ಬುಲಾವ್ ಕಾರಣ ನೀಡಿ ದೆಹಲಿಗೆ ತೆರಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರಿಗೆ ಒಂದು, ತಮ್ಮ ಆಪ್ತರಿಗೆ ಇನ್ನೊಂದು ನೀತಿ ಅನುಸರಿಸುತ್ತಿದ್ದಾರೆ ಎಂಬ ಆಕ್ಷೇಪ ಈ ಸಂದರ್ಭದಲ್ಲಿ ಹರಿದು ಬಂತು. ಮಾತ್ರವಲ್ಲ ಪಕ್ಷ, ಸರ್ಕಾರ ಹಾಗೂ ರಾಜಭವನದ ನಡುವೆ ಸಂಪರ್ಕದ ಕೊಂಡಿ ಹರಿದು ಹೋಗಿರುವ ವಿಚಾರ ದಿಗ್ವಿಜಯಸಿಂಗ್ ಅವರ ಗಮನಕ್ಕೆ ಬಂತು. ಹೀಗಾಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಹೊಟೇಲ್ನಲ್ಲಿ ಮಧ್ಯಾಹ್ನ 3.30ಕ್ಕೆ ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯನ್ನು ರದ್ದುಗೊಳಿಸಲು ಅವರು ಸೂಚನೆ ನೀಡಿದರು.
ತಾವು ವಾಸ್ತವ್ಯ ಹೂಡಿದ್ದ ಕುಮಾರಕೃಪಾ ಅತಿಥಿಗೃಹಕ್ಕೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಗೃಹ ಸಚಿವ ಕೆ.ಜೆ.ಜಾರ್ಜ್, ಶಾಸಕ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶಾಂತಾರಾಂ ನಾಯಕ್ ಹಾಗೂ ಕಾರ್ಯದರ್ಶಿ ಡಾ.ಚಲ್ಲಕುಮಾರ್ ಅವರಿಗೆ ಸೂಚನೆ ನೀಡಿದರು. ಆದರೆ ಅದಕ್ಕೆ ಮುನ್ನವೇ ಹಾವೇರಿ, ಹುಬ್ಬಳ್ಳಿ-ಧಾರವಾಡ, ಗದಗ, ಬೆಂಗಳೂರು ಮೊದಲಾದ ಕಡೆಗಳಿಂದ ಬಂದಿದ್ದ ಕಾರ್ಯಕರ್ತರು ಹಾಗೂ ಮುಖಂಡರು ದಿಗ್ವಿಜಯಸಿಂಗ್ ಅವರನ್ನು ಭೇಟಿ ಮಾಡಲೇ ಬೇಕೆಂದು ಪಟ್ಟು ಹಿಡಿದರು.
ಸಿಎಂ ವಿರುದ್ಧ ದೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುತ್ತಿದ್ದಾರೆ. ಸರ್ಕಾರದ ಉನ್ನತ ಹುದ್ದೆಗಳಿಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರಿಗೆ ಬಡ್ತಿ ನೀಡಿ ನೇಮಕ ಮಾಡುತ್ತಿದ್ದಾರೆ. ಶಾಸಕರ ವಿರೋಧದ ನಡುವೆಯೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸ್ಥಾನಕ್ಕೆ ಚಿಕ್ಕರಾಯಪ್ಪಅವರನ್ನು ನಿಯೋಜಿಸಲಾಗಿದೆ. ಬಿಡಿಎಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಲದಿಂದಲೂ ಅವರ ಮೇಲೆ ಆರೋಪ ಇದೆ. ಲೋಕಾಯುಕ್ತ ತನಿಖೆಯನ್ನೂ ಎದುರಿಸುತ್ತಿದ್ದಾರೆ. ಇಂಥ ಹಲವು ನೇಮಕಗಳು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದಿವೆ ಎಂಬ ದೂರನ್ನು ನೀಡಲಾಯಿತು. ಮಾತ್ರವಲ್ಲ ಸಭೆ ಮುಗಿಸಿ ಬಂದ ಸಿದ್ದರಾಮಯ್ಯ ಅವರನ್ನೂ ಮುತ್ತಿಗೆ ಹಾಕಿದ ನೂರಾರು ಮುಖಂಡರು ತರಾಟೆಗೆ ತೆಗೆದುಕೊಂಡರು.
ಇದರ ನಡುವೆ ದಿಗ್ವಿಜಯಸಿಂಗ್ ಅವರ ಮುಂದೆ ಕೆಲವು ಬೇಡಿಕೆಗಳ ಪಟ್ಟಿಯೂ ಸಲ್ಲಿಕೆಯಾಗಿದೆ. ರಾಜ್ಯದ 11 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಈ ಸೌಲಭ್ಯದಿಂದ ವಂಚಿತವಾಗಿವೆ ಎಂಬ ದೂರು ನೀಡಲಾಗಿದೆ. ವಿನಯ್ ಕುಲಕರ್ಣಿ, ಕೆ.ಬಿ.ಕೋಳಿವಾಡ ಮತ್ತು ಮನೋಹರ ತಹಶೀಲ್ದಾರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಬಲಿಗರು ದಿಗ್ವಿಜಯಸಿಂಗ್ ಅವರಿಗೆ ಮುತ್ತಿಗೆ ಹಾಕಿದರು.
ಸಂಧಾನಕ್ಕೆ ದಿಗ್ವಿಜಯ ಸಿಂಗ್ ಯತ್ನ
ಬೆಂಗಳೂರು: ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಹಳಸಿರುವ ಸಂಬಂಧಕ್ಕೆ ತೇಪೆ ಹಾಕುವ ಕೆಲಸವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ದಿಗ್ವಿಜಯಸಿಂಗ್ ಶನಿವಾರ ಮಾಡಿದರು. ಸಮನ್ವಯ ಸಮಿತಿ ಸಭೆ ಮೊಟಕುಗೊಳಿಸಿ ದೆಹಲಿಗೆ ವಾಪಾಸ್ ಆಗುವುದಕ್ಕೆ ಮುನ್ನ ರಾಜಭವನಕ್ಕೆ ತೆರಳಿ ಅವರು ರಾಜ್ಯಪಾಲರ ಜತೆ ಚರ್ಚಿಸಿದರು. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ರಾಜ್ಯಪಾಲರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ದಿಗ್ವಿಜಯಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿ ರಾಜಭವನಕ್ಕೆ ಹೋದರು. ಅಲ್ಲಿಯೂ ಪಕ್ಷ ಮತ್ತು ಸರ್ಕಾರದ ಇಮೇಜ್ ಕುರಿತು ರಾಜ್ಯಪಾಲರ ಬಳಿ ಮಾತನಾಡಿದರು. ಆದರೆ ದಿಗ್ವಿಜಯ್ ಸಿಂಗ್ ಅವರ ಈ ಪ್ರಯತ್ನಕ್ಕೆ ಎರಡೂ ಕಡೆಯಿಂದ 'ಮೌನ'ವೇ ಉತ್ತರವಾಗಿತ್ತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಸಚಿವ ಕೆ.ಜೆ.ಜಾರ್ಜ್, ಶಾಸಕ ಡಿ.ಕೆ. ಶಿವಕುಮಾರ್,ಎಐಸಿಸಿ ಪ್ರತಿನಿಧಿಗಳಾದ ಶಾಂತರಾಂ ನಾಯಕ್ ಹಾಗೂ ಡಾ.ಚಲ್ಲಕುಮಾರ್ ಜತೆ ಸಭೆ ನಡೆಸುವ ಸಂದರ್ಭದಲ್ಲೂ ರಾಜ್ಯಪಾಲರ ಟೀಕೆಯ ಬಗ್ಗೆ ಪ್ರಸ್ತಾಪವಾಗಿತ್ತು.
ದೂರು ಏನು?
ಭ್ರಷ್ಟ ಅಧಿಕಾರಿಗಳಿಗೆ ಮಣೆ, ಉನ್ನತ ಹುದ್ದೆಗೆ ಬಡ್ತಿ
ಅಪ್ತರಿಗೊಂದು, ಬೇರೆಯವರಿಗೊಂದು ನೀತಿ
ಲೋಕೋಪಯೋಗಿ ಇಲಾಖೆಗೆ ಚಿಕ್ಕರಾಯಪ್ಪ ನೇಮಕ
ಬೇಡಿಕೆ ಏನು?
ವಿನಯ್ ಕುಲಕರ್ಣಿ, ಕೆ.ಬಿ.ಕೋಳಿವಾಡ ಮತ್ತು ಮನೋಹರ ತಹಶೀಲ್ದಾರ್ ಅವರಿಗೆ ಸಚಿವ ಸ್ಥಾನ
ಸಭೆಯೊಳಗೆ ನಡೆದಿದ್ದೇನು?
ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆಯಾದರೂ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಜಟಾಪಟಿ ಬಗ್ಗೆ ದಿಗ್ವಿಜಯಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಲವು ಕಿವಿ ಮಾತು ಹೇಳಿದ್ದಾರೆ. ಸರ್ಕಾರ, ಕೆಲ ಸಚಿವರ ವರ್ತನೆ ಬಗ್ಗೆ ರಾಜ್ಯಪಾಲರು ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇಂಥ ಬೆಳವಣಿಗೆ ನಡೆಯಬಾರದು. ರಾಜ್ಯಪಾಲರ ಸಲಹೆಯನ್ನು ಸಾಧ್ಯವಾದ ಮಟ್ಟಿಗೆ ಪಾಲಿಸುವಂತೆ ದಿಗ್ವಿಜಯಸಿಂಗ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


