ಪ್ರಧಾನ ಸುದ್ದಿ

ಗೋವು ಇಲ್ಲದ ಬದುಕು ಶವವಿದ್ದಂತೆ

Published On :

ಕುಮಟಾ: ಗೋವು ಇಲ್ಲದ ನಮ್ಮ ಬದುಕು ಶವವಿದ್ದಂತೆ. ಗೋವಿಲ್ಲದೆ ನಾವೀಗ ತಬ್ಬಲಿಗಳಾಗಿದ್ದೇವೆ. ಗೋವು ಕಸಾಯಿಖಾನೆಯ ಬಾಗಿಲು ಸೇರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, 'ಗೋವುಗಳೇ ಮರಳಿ ಬನ್ನಿ' ಎಂದು ಪ್ರಾರ್ಥಿಸಿದರು.
ಕುಮಟಾದಲ್ಲಿ ಭಾನುವಾರ ಆರಂಭವಾದ ಐದು ದಿನಗಳ ಕಾಲದ 'ಜನ ಜನನಿ ಗೋ ಉತ್ಸವ' ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಗೋವು ಇಲ್ಲದೆ ಇದ್ದರೆ ನಮ್ಮ ಬದುಕಿಗೆ ಅರ್ಥವೇ ಇಲ್ಲ. ಗೋವಿಲ್ಲದೆ ನಾವಿಲ್ಲ. ನಮ್ಮ ಅಸ್ತಿತ್ವ ಗೋವನ್ನು ಅವಲಂಬಿಸಿದೆ. ಗೋವು ಸಭೆ, ಗೋವಿನ ಕುರಿತಾದ ಕಾರ್ಯಕ್ರಮದ ಮೂಲಕ ಜನಮಾನಸದಲ್ಲಿ ಪರಿವರ್ತನೆ ಉಂಟು ಮಾಡಬೇಕಾಗಿದೆ. ಆ ಮೂಲಕ ಹೊಸ ನಾಡನ್ನು ಕಟ್ಟುವ ಸಂಕಲ್ಪ ಮಾಡಬೇಕಿದೆ ಎಂದು ಶ್ರೀಗಳು ಹೇಳಿದರು.
'ತಬ್ಬಲಿಯು ನೀನಾದೆ ಮಗನೆ..' ಎನ್ನುವ ಗೋವಿನ ಹಾಡು ಎಲ್ಲರಿಗೂ ಗೊತ್ತಿದೆ. ಇಲ್ಲಿ ಗೋವು ಇಲ್ಲದೆ ನಾವು ತಬ್ಬಲಿಗಳಾಗಿದ್ದೇವೆ. ಗೋವು ವಧೆ ನಡೆಯುತ್ತಲೇ ಇದೆ. ಗೋವು ಕಸಾಯಿಖಾನೆಗೆ ಹೋಗದಂತೆ ರಕ್ಷಿಸಬೇಕಾಗಿದೆ. ನಶಿಸುತ್ತಿರುವ ಗೋವು ಸಂಕುಲವನ್ನು ಹೆಚ್ಚಿಸಲೇಬೇಕಾದ ಅನಿವಾಯಂತೆ ಉಂಟಾಗಿದೆ. ಹಾಗಾಗಿಯೇ ಈ ಕಾರ್ಯಕ್ರಮ ನೆರವೇರಲು ಗೋವು ಪ್ರೇರಣೆ ಎಂದರು.
ಹಳದೀಪುರದ ವಾಮನಾಶ್ರಮ ಸ್ವಾಮೀಜಿ, ಕಾರವಾರ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ಉತ್ತರ ಕನ್ನಡ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ, ಹಿರಿಯ ನ್ಯಾಯವಾದಿ ಪಿ.ಎಸ್. ಕಾಮತ, ಗೋ ಉತ್ಸವ ಸಮಿತಿ ಜಿಲ್ಲಾ ಪ್ರಮುಖ ಮುರಳೀಧರ ಪ್ರಭು ಮತ್ತಿತರರು ಮಾತನಾಡಿದರು. ರಾಘವೇಶ್ವರ ಭಾರತೀ ಸ್ವಾಮೀಜಿ ಗೋವಿನ ಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೋ ಕಥಾ
ಇವೆಲ್ಲವುಗಳಿಗೆ ಕಳಸವಿಟ್ಟಂತೆ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಗೋ ಕಥಾ ಆರಂಭಿಸಿದ್ದಾರೆ. ಗೋ ಕಥಾ ಕೇಳಲು ಸಾವಿರಾರು ಜನರು ಆಗಮಿಸಿದ್ದರು. ಸ್ವಾಮೀಜಿ ಈಗಾಗಲೇ ಭಾರತೀಯ ಗೋ ಯಾತ್ರೆ, ಗೋ ಸಂಸತ್, ಗೋ ಸಂಧ್ಯಾ, ವಿಶ್ವ ಗೋ ಸಮ್ಮೇಳನ, ಕೋಟಿ ನೀರಾಂಜನ, ದೀಪ ಗೋಪುರ, ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ ಹೀಗೆ ಹತ್ತಾರು ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಗೋ ಹತ್ಯಾ ನಿಷೇಧಕ್ಕೆ ಆಗ್ರಹಿಸಿ ಸಂತರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ 8.2 ಕೋಟಿ ಗೋ ಭಕ್ತರ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗೆ ಒಪ್ಪಿಸಲಾಗಿದೆ. ಈಗ ಮತ್ತೊಮ್ಮೆ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಗೋ ಗ್ರಾಮ ಉತ್ಸವ, ಪ್ರದರ್ಶನ
ಭಾರತೀಯ ಗ್ರಾಮ ಜೀವನ ಪ್ರತಿಬಿಂಬಿಸುವ ಮಾದರಿಗಳು, ಕರಕುಶಲ ಮತ್ತು ಪ್ರಾಚೀನ ವಸ್ತುಗಳ ಪ್ರದರ್ಶನ, ವಿಶೇಷವಾಗಿ ಗೋವರ್ಧನ ಗಿರಿಧಾರಿಯಾದ ಕೃಷ್ಣನ ಮೂರ್ತಿ ಸುತ್ತಲೂ ಗೋವುಪ್ರದರ್ಶನ ಏರ್ಪಡಿಸಲಾಗಿತ್ತು. ಭಾರತೀಯ ಗೋವುಗಳಿಗೆ ಸಂಬಂಧಿಸಿದ ಅಪೂರ್ವ ಸಂಗ್ರಹದ ಗೋ ವಿಶ್ವದರ್ಶನ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ಖಗೋಳ ಶಾಸ್ತ್ರಗಳನ್ನು ಅನಾವರಣಗೊಳಿಸುವ ಚಿತ್ರ ಪ್ರದರ್ಶನ, ಕೃಷಿ, ಕೃಷಿ ಪೂರಕ ಯಂತ್ರೋಪಕರಣಗಳು, ಪುಸ್ತಕ, ಆಲೆಮನೆ ಸೇರಿದಂತ ಇನ್ನೂ ಮುಂತಾದ ವೈವಿಧ್ಯಮಯ ಜನಾಕರ್ಷಣೆಯ ಮಳಿಗೆಗಳು ಉತ್ಸವದಲ್ಲಿ ಜನಮನಸೂರೆಗೊಂಡವು. ಇದಲ್ಲದೆ, 32 ಭಾರತೀಯ ಗೋ ತಳಿಗಳ ಅಪರೂಪದ ಪ್ರದರ್ಶನವನ್ನ ಸಾವಿರಾರು ಜನರು ವಿವಿಧ ತಳಿಯ ಗೋವುಗಳನ್ನು ವೀಕ್ಷಿಸಿದರು.

- ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.