ಶಿವಕುಮಾರನಾಥ ಸ್ವಾಮೀಜಿ ವಿಧಿವಶ
ತುರುವೇಕೆರೆ/ನಾಗಮಂಗಲ: ಆದಿಚುಂಚನಗಿರಿ ಮಠದ ತುರುವೇಕೆರೆ ತಾಲೂಕು ಮಾಯಸಂದ್ರ ಶಾಖಾಮಠ ಮಾಯಸಂದ್ರ ಕಲ್ಪತರು ಆಶ್ರಮದ ಶ್ರೀ ಶಿವಕುಮಾರನಾಥ ಸ್ವಾಮೀಜಿ (56) ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಭಾನುವಾರ ವಿಧಿವಶರಾಗಿದ್ದಾರೆ.
ಭಾನುವಾರ ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ ಆದಿಚುಂಚನಗಿರಿ ಮಹಾಸಂಸ್ಧಾನದ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಯವರಿಗೆ ಗುರವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಪೀಣ್ಯ ಬಳಿ ಆಗಮಿಸುತ್ತಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಚಾಲಕ ಗಂಗಾಧರ್ ತಕ್ಷಣ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ದೈವಾದೀನರಾಗಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಬೆಟ್ಟದಮಲ್ಲೇನಹಳ್ಳಿ ಗ್ರಾಮದಲ್ಲಿ ಜನಿಸಿದ ಶಿವಕುಮಾರನಾಥ ಸ್ವಾಮೀಜಿ 12 ವರ್ಷದವರಿದ್ದಾಗಲೇ ಆದಿಚುಂಚನಗಿರಿ ಮಠಕ್ಕೆ ಸೇರಿದ್ದರು. ಸಂಸ್ಕೃತ ಅಭ್ಯಾಸ ಮಾಡಿ 71ನೇ ಪೀಠಾಧ್ಯಕ್ಷ ರಮಾನಂದನಾಥಸ್ವಾಮೀಜಿಯವರ ನೆಚ್ಚಿನ ಶಿಷ್ಯನಾಗಿ ಬೆಳೆದಿದ್ದರು. ಬಳಿಕ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ದೀಕ್ಷೆ ಪಡೆದಿದ್ದರು. ಬೆಟ್ಟದಮಲ್ಲೇನಹಳ್ಳಿ ಎಂಬ ಕುಗ್ರಾಮದ ದಿ. ಎಂ.ಇ. ಹಲಗೇಗೌಡ ಮತ್ತು ನಿಂಗಮ್ಮ ದಂಪತಿ ಪುತ್ರ ಈರೇಗೌಡ, ಮಠದಲ್ಲಿ ಸಂಸ್ಕೃತ ಅಭ್ಯಾಸ ಮಾಡಿದ ತರುವಾಯ ದೀಕ್ಷೆ ಪಡೆದ ನಂತರ ಶಿವಕುಮಾರನಾಥ ಸ್ವಾಮೀಜಿಗಳಾಗಿದ್ದರು.
ಮಠದಲ್ಲಿ 72ನೇ ಪೀಠಾಧ್ಯಕ್ಷರಾಗಿ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ಅವರಿಗೆ ಪಟ್ಟಾಭಿಷೇಕವಾದ ನಂತರದಲ್ಲಿ ಮಠದ ಅಭಿವೃದ್ಧಿಗೆ ನಾಡಿನಾದ್ಯಂತ ಪ್ರವಾಸ ಕೈಗೊಂಡಿದ್ದರು. ಇವರ ಕಾರ್ಯಚಟುವಟಿಕೆಗಳನ್ನು ನೋಡಿ ತುರುವೇಕೆರೆ ಮಾಯಸಂದ್ರದಲ್ಲಿ ಶಾಖಾ ಮಠ ಆರಂಭಿಸಿ ನೇಮಕ ಮಾಡಲಾಗಿತ್ತು.
ಮಾಯಸಂದ್ರ ಕಲ್ಪತರು ಆಶ್ರಮದಲ್ಲಿ ಶಿವಕುಮಾರನಾಥಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಆದಿಚುಂಚನಗಿರಿ ಕ್ಷೇತ್ರದ ತಪ್ಪಲಿನಲ್ಲಿರುವ ತೋಟದಲ್ಲಿ ನಾಥಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಕಿರಿಯ ಸ್ವಾಮೀಜಿಗಳಾದ ಪುರುಷೋತ್ತಮಾನಂದನಾಥಸ್ವಾಮೀಜಿ, ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ಶ್ರೀಮಠದ ಎಲ್ಲ ಶಾಖೆಗಳ ಸ್ವಾಮೀಜಿಗಳು, ಸಾಧುಸಂತರು, ಗಣ್ಯರು ಹಾಗೂ ಸಾವಿರಾರು ಭಕ್ತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

