ಗುಂಡಿಗೆ ಬಿದ್ದು ಕಿರುತೆರೆ ನಟ ದುರ್ಮರಣ

ಬೆಂಗಳೂರು: ಮಳೆ ನೀರು ಚರಂಡಿ ದುರಸ್ತಿಗೆ ಬಿಬಿಎಂಪಿ ಅಗೆದಿಟ್ಟಿದ್ದ ಗುಂಡಿಗೆ ಬಿದ್ದು ಕಿರುತೆರೆ ಕಲಾವಿದ ಮೃತಪಟ್ಟಿರುವ ಘಟನೆ ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಟ್ಟುಮಡು ನಿವಾಸಿ ಅಶೋಕ್ಕುಮಾರ್ (55) ಮೃತಪಟ್ಟವರು. ಮುಕ್ತ ಮುಕ್ತ, ಪಲ್ಲವಿ-ಅನುಪಲ್ಲವಿ ಧಾರಾವಾಹಿಯಲ್ಲಿ ನಟನೆಯೂ ಸೇರಿದಂತೆ ರಂಗಭೂಮಿಯಲ್ಲಿ ಅವರು ಸಕ್ರಿಯರಾಗಿದ್ದರು. ಹೊಸದುರ್ಗದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಸಿಕೊಂಡು ಬಸ್ನಲ್ಲಿ ಚಾಮರಾಜಪೇಟೆಗೆ ಬಂದಳಿದು, ಅಲ್ಲಿಂದ ತಮ್ಮ ಯಮಹಾ ಬೈಕ್ನಲ್ಲಿ ಬೆಳಗಿನ ಜಾವ 5.30ರ ಸುಮಾರಿಗೆ ಇಟ್ಟುಮಡುವಿನ ಮನೆಗೆ ಹೋಗುತ್ತಿದ್ದರು.
ಆದರೆ ರಾಮಕೃಷ್ಣ ಆಶ್ರಮ ಹಾಗೂ ನಾರಾಯಣಸ್ವಾಮಿ ವೃತ್ತ ನಡುವಿನ ಹಯವದನ ರಸ್ತೆಯಲ್ಲಿ ಬಿಬಿಎಂಪಿ ಅಗೆದಿದ್ದ ಗುಂಡಿಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು 5 ಅಡಿಗಿಂತ ಹೆಚ್ಚು ಆಳವಿರುವ ಗುಂಡಿಗೆ ಬಿದ್ದಿದ್ದಾರೆ.
ರಸ್ತೆಯಲ್ಲಿ ವಾಹನ ಸಂಚಾರ ಅತಿ ವಿರಳವಾಗಿದ್ದರಿಂದ ಅಶೋಕ್ ಅವರು ಗುಂಡಿಗೆ ಬಿದ್ದಿರುವುದು ಯಾರ ಕಣ್ಣಿಗೂ ಬಿದ್ದಿಲ್ಲ. ಹೀಗಾಗಿ ಗುಂಡಿಯಿಂದ ಮೇಲೇಳಲಾಗದೇ ಕೊಳಚೆ ನೀರು ಕುಡಿದು ಮೃತಪಟ್ಟಿದ್ದಾರೆ. ಬೆಳಗ್ಗೆ 6.30ರ ಸುಮಾರಿಗೆ ದಾರಿ ಹೋಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೈಕ್ ವೇಗವಾಗಿದ್ದು ಗುಂಡಿ ಇರುವುದನ್ನು ಗಮನಿಸಿದರೂ ನಿಯಂತ್ರಿಸಲು ಸಾಧ್ಯವಾಗದೆ ಅಶೋಕ್ ಅವರು ಬಿದ್ದಿರಬಹುದು ಎನ್ನಲಾಗಿದೆ. ಬಿದ್ದ ರಭಸಕ್ಕೆ ಕೊಳಚೆ ನೀರು ಹಾಗೂ ಕೆಸರು ತುಂಬಿಕೊಂಡಿದ್ದ ಕಾರಣ ಅಶೋಕ್ ಅವರು ಮೇಲೆಳಲು ಸಾಧ್ಯವಾಗದೇ ಚರಂಡಿ ನೀರು ಕುಡಿದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಗುಂಡಿಯೊಳಗೆ ಸುಮಾರು 2 ರಿಂದ 3 ಅಡಿ ಚರಂಡಿ ನೀರು ನಿಂತಿದ್ದು ಬೈಕ್ ಅರ್ಧ ಭಾಗ ಮುಳುಗಿ ಹೋಗಿತ್ತು.
ಬಿಬಿಎಂಪಿ, ಜಲಮಂಡಳಿ ಕೆಸರೆರಚಾಟ: ಘಟನೆ ಸಂಬಂಧ ಕನ್ನಡಪ್ರಭದೊಂದಿಗೆ ಮಾತನಾಡಿದ ಸುಂಕೇನಹಳ್ಳಿ ಬಿಬಿಎಂಪಿ ಪಾಲಿಕೆ ಸದಸ್ಯ ಪಿ.ಎನ್ ಸದಾಶಿವ, ಮಳೆ ನೀರು ಚರಂಡಿ ಅಭಿವೃದ್ದಿ ಕಾಮಗಾರಿಯನ್ನು ಡಿಸೆಂಬರ್ 6ಕ್ಕೆ ಆರಂಭಿಸಲಾಗಿತ್ತು.
ಗವಿಪುರಂ ಕಡೆಯಿಂದ ಬರುವ ಮಳೆ ನೀರನ್ನು ಚಿಕ್ಕ ಮೋರಿಯಿಂದ ದೊಡ್ಡ ಮೋರಿಗೆ ಸಂಪರ್ಕ ಕಲ್ಪಿಸುವ ಕೆಲಸ ನಡೆದಿತ್ತು. ಇದ್ದ ಮೋರಿಯನ್ನು ಇನ್ನಷ್ಟು ದೊಡ್ಡದು ಮಾಡುವ ಉದ್ದೇಶದಿಂದ ಈ ಕೆಲಸ ನಡೆಯುತ್ತಿತ್ತು. ಇದಕ್ಕಾಗಿ ಸಂಚಾರ ಪೊಲೀಸರಿಂದ ಅನುಮತಿ ಪಡೆಯಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಸಂಚಾರ ಪೊಲೀಸರಿಗೆ ತಿಳಿಸಿದ್ದೇವೆ. ಕಾಮಗಾರಿ ನಡೆಸುತ್ತಿದ್ದ ವೇಳೆ ಜಲಮಂಡಳಿಯ ಹಳೇ ಪೈಪ್ ಒಡೆದು ಹೋಗಿದೆ. ಒಡೆದ ಪೈಪ್ನ್ನು ಸರಿಪಡಿಸಲು ಸೂಚಿಸಿದ್ದೆವು. ಪೈಪ್ ತಂದಿದ್ದ ಅವರು ಸೋಮವಾರ ಕಾಮಗಾರಿ ನಡೆಸುವವರಿದ್ದರು. ಅಷ್ಟರಲ್ಲೇ ದುರಂತ ಸಂಭವಿಸಿದೆ ಎಂದರು.
ನಸುಕಿನಲ್ಲಿ ಘಟನೆ ನಡೆದಿರುವ ಕಾರಣ ಅಶೋಕ್ ಅವರು ಬಿದ್ದ ತಕ್ಷಣ ರಕ್ಷಣೆಗೆ ಧಾವಿಸಲು ಯಾರು ಇರಲಿಲ್ಲ. ಗುಂಡಿ ಅಗೆದಿರುವ ಎರಡು ಕಡೆ ಮಣ್ಣು ಹಾಕಲಾಗಿದೆ. ಉಳಿದ ಎರಡು ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ. ರಸ್ತೆಯಲ್ಲಿ ಎರಡು ಬೀದಿ ದೀಪಗಳು ಇವೆ. ಹೀಗಿದ್ದರೂ ದುರಂತ ಸಂಭವಿಸಿದ್ದಾದರೂ ಹೇಗೆ ಎನ್ನುವುದು ಗೊತ್ತಾಗಿಲ್ಲ ಎಂದು ಸದಾಶಿವ ಹೇಳಿದರು.
ಕೆಲಸ ಮುಗಿದಿತ್ತು: 'ಈ ಮಾರ್ಗದಲ್ಲಿ ಒಳಚರಂಡಿ, ನೀರು ಹಾಗೂ ಕೇಬಲ್ಗಳು ಹಾದುಹೋಗಿವೆ. ಕಾಮಗಾರಿ ವೇಳೆ ಕೆಲಸಗಾರರು ಒಳಚರಂಡಿ ಪೈಪ್ ಒಡೆದಿದ್ದಾರೆ. ಮಾಹಿತಿ ಪಡೆದ ನಾವು ಹೊಸ ಪೈಪ್ ಅಳವಡಿಸಿ ಸರಿ ಮಾಡಿಕೊಟ್ಟಿದ್ದೇವು. ಕೆಲಸ ಆರಂಭಿಸಿದ ಕೆಲಸಗಾರರು ಕಾಂಕ್ರಿಟ್ ಹಾಕುವಾಗ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಜಲಮಂಡಳಿಯ ಪೈಪ್ ತೆಗೆದಿದ್ದಾರೆ. ಹೀಗಾಗಿ ಒಳಚರಂಡಿ ನೀರು ಗುಂಡಿ ಒಳಗೆ ತುಂಬಿಕೊಂಡಿತ್ತು' ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಶಿವಮೂರ್ತಿ ಹೇಳಿದರು.
ಮದ್ಯಪಾನ ಮಾಡುವುದಿಲ್ಲ: ಮಾಧ್ಯಮದವರೊಂದಿಗೆ ಮಾತನಾಡಿದ ಕಿರುತೆರೆ ಕಲಾವಿದ ಅಶೋಕ್ ಸ್ನೇಹಿತ ಕಿಶೋರ್, ಅಶೋಕ್ ಅವರಿಗೆ ಮದ್ಯಪಾನ ಅಭ್ಯಾಸ ಇರುವುದನ್ನು ಅಲ್ಲಗಳೆದಿದ್ದಾರೆ. ಅವರು ಮದ್ಯ ಸೇವಿಸುತ್ತಿರಲಿಲ್ಲ. ಅಲ್ಲದೇ ವೇಗವಾಗಿ ಬೈಕ್ ಚಲಾಯಿಸುವುದು ಇಲ್ಲ ಎಂದಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಸಂಚಾರ ಪೊಲೀಸರು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.
ಬೇರ ವಾಹನ ಡಿಕ್ಕಿ ಹೊಡೆಯಿತೇ?
ಗುಂಡಿ ಬದಿಯಲ್ಲಿ ಅಶೋಕ್ ಅವರು ಹೋಗುತ್ತಿದ್ದಾಗ ಅಪರಿಚಿತ ವಾಹನ ತಾಗಿ ಗುಂಡಿಗೆ ಬಿದ್ದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಎರಡು ಬದಿಯಲ್ಲಿ ಮಣ್ಣು ಹಾಕಲಾಗಿದ್ದು, ವಾಹನಗಳು ಓಡಾಡುವ ಕಡೆ ಮಾತ್ರ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಬೆಳಗ್ಗೆ ಗುಂಡಿ ಬಳಿ ಸಂಚರಿಸುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.
ಸೋಮವಾರ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಿ ಘಟನೆಗೆ ಬಿಬಿಎಂಪಿ ಅಥವಾ ಜಲಮಂಡಳಿ ಕಾರಣವೇ ಎನ್ನುವುದರ ಬಗ್ಗೆ ಚರ್ಚಿಸಲಾಗುತ್ತದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಾಗುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಗುತ್ತಿಗೆದಾರರು ಹೆಚ್ಚಿನ ಜಾಗ್ರತೆ ವಹಿಸಲು ಸೂಚಿಸಲಾಗುವುದು.
- ಸತ್ಯನಾರಾಯಣ, ಮೇಯರ್
ಒಳಚರಂಡಿ ಪೈಪ್ ಸರಿಪಡಿಸಿದ್ದೆವು. ಕಾಮಗಾರಿಗೆ ಅಡ್ಡಿಯಾಗುತ್ತದೆ ಎಂದು ಕೆಲಸಗಾರರು ಅದನ್ನು ತೆಗೆದಿಟ್ಟಿದ್ದಾರೆ. ಹೀಗಾಗಿ ಗುಂಡಿಯೊಳಗೆ ಚರಂಡಿ ನೀರು ತುಂಬಿಕೊಂಡಿತ್ತು. ಇದಕ್ಕೆ ನಾವು ಕಾರಣವಲ್ಲ.
- ಶಿವಮೂರ್ತಿ, ಎಇಇ, ಜಲಮಂಡಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


