ಭಕ್ತರ ಮಧ್ಯೆ ಭಗವದ್ಗೀತಾ ಅಭಿಯಾನ ಸಂಪನ್ನ
ಶಿರಸಿ: ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆಗೈಯುವ ಮೂಲಕ ಸಂಪನ್ನಗೊಂಡಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಹಸ್ರ ಜನಸಾಗರ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು. ಭಗವದ್ಗೀತಾ ಶ್ಲೋಕ ಏಕಕಾಲಕ್ಕೆ ಸಾವಿರ ಸಾವಿರ ಕಂಠಗಳಿಂದ ಮುಗಿಲು ಮುಟ್ಟುವ ಮೂಲಕ ಮಹಾಸಮರ್ಪಣೆಗೆ ನಾಂದಿ ಹಾಡಿತು.
5 ವರ್ಷಗಳಿಂದ ಭಗವದ್ಗೀತಾ ಅಭಿಯಾನ ರಾಜ್ಯವ್ಯಾಪಿ ನಡೆಯಿತು. ಎಲ್ಲ ಜನಾಂಗದ, ಸಮೂಹದ ಜನರನ್ನು ಅಭಿಯಾನದಲ್ಲಿ ಸೇರ್ಪಡಿಸಿಕೊಳ್ಳಲಾಗಿತ್ತು. ವಿಶೇಷವಾಗಿ ಶಾಲಾ ಮಕ್ಕಳಿಗೂ ಭಗವದ್ಗೀತೆ ಅಧ್ಯಯನ ಮಾಡಿಸಲಾಯಿತು. ಅಂಧ ಮಕ್ಕಳು ಸಹ ಇದರೊಳಗೆ ಪಾಲ್ಗೊಂಡಿದ್ದರು. ರಾಜ್ಯದಲ್ಲಿಯ 30 ಜೈಲುಗಳಲ್ಲಿಯೂ ಖೈದಿಗಳಿಗೆ ಭಗವದ್ಗೀತೆ ಮನನ ಮಾಡಿಸಲಾಯಿತು. ಹೀಗೆ ರಾಜ್ಯದ ಎಲ್ಲ ಸ್ತರದ ಜನರನ್ನು ತಲುಪುವಲ್ಲಿ ಯಶಸ್ವಿಯಾದ ಭಗವದ್ಗೀತೆ ಅಭಿಯಾನ ಮುಂದಿನ ದಿನಗಳಲ್ಲೂ ನಿರಂತರವಾಗಿ ನಡೆಯಬೇಕು ಎನ್ನುವ ಸದಾಶಯ ಇಂದಿನ ಸಮರ್ಪಣಾ ಸಮಾವೇಶದಲ್ಲಿ ಮಾರ್ದನಿಸಿತು.
ಆಧ್ಯಾತ್ಮ ಮೀರಿದ ಗ್ರಂಥ: ಭಾನುವಾರ ಶಿರಸಿಯಲ್ಲಿ ಭಗವದ್ಗೀತಾ ಅಭಿಯಾನದ ಸಮರ್ಪಣಾ ಸಮಾವೇಶವನ್ನು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಹಲವಾರು ಯತಿಶ್ರೇಷ್ಠರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವರ್ಣವಲ್ಲೀಶ್ರೀಗಳು, 'ಭಗವದ್ಗೀತೆ ಆಧ್ಯಾತ್ಮ ಗ್ರಂಥ ಎಂದು ಹೇಳುವುದಕ್ಕಿಂತ ಆಧ್ಯಾತ್ಮವನ್ನು ಮೀರಿದ ಮಾನವ ಧರ್ಮ ಹೇಳಿದ ಶ್ರೇಷ್ಠ ಕೃತಿ ಎಂದು ಉಲ್ಲೇಖಿಸಬಹುದಾಗಿದೆ. ಈ ಗ್ರಂಥದಲ್ಲಿ ಯಾವುದೇ ಪೂಜೆ, ಪುನಸ್ಕಾರ, ಜಾತಿ, ಧರ್ಮದ ಕುರಿತು ಉಲ್ಲೇಖವಿಲ್ಲ. ಬದಲಾಗಿ ಎಲ್ಲ ಜನಾಂಗಗಳ ಜೀವನಕ್ಕೆ ಅಗತ್ಯವಾಗಿರುವ ಜೀವನಪಾಠ ಹೇಳಲಾಗಿದೆ' ಎಂದರು.
ಇಂದಿನ ದಿನದಲ್ಲಿ ಸಾರ್ವತ್ರಿಕವಾಗಿ ಆವರಿಸಿಕೊಳುತ್ತಿರುವ ನಿಷ್ಕ್ರಿಯತೆ ಮೆಟ್ಟಿನಿಲ್ಲುವ ಅವಶ್ಯಕತೆಯಿದೆ. ಸರ್ಕಾರಿ ರಜೆಯನ್ನು ಬಹುವಾಗಿ ಪ್ರೀತಿಸುತ್ತ ಕರ್ತವ್ಯವನ್ನು ಮರೆಯುತ್ತಿದ್ದೇವೆ. ಸಮಾಜದ ಗಣ್ಯರು ನಿಧನರಾದಾಗ ನೀಡುವ ರಜೆಯ ಮೇಲೆ ದೃಷ್ಟಿ ನೆಟ್ಟಿರುವುದು ದುರಂತ. ಕಾಯಕ ನಮ್ಮದಾಗಬೇಕು. ಕರ್ಮಯೋಗವೇ ಕ್ರಿಯಾಶೀಲತೆ. ರಜಾನಿಷ್ಠೆ ಹೋಗಿ ರಾಜಾ ನಿಷ್ಠೆ ಬರಬೇಕು ಎಂದು ಅವರು ಕರೆಯಿತ್ತರು.
ಸಾಮಾಜಿಕ ಹಬ್ಬವಾಗಲಿ: ಕೃಷ್ಣ ಎಂದರೆ ಕಪ್ಪು. ಅರ್ಜುನ ಎಂದರೆ ಬಿಳುಪು. ಹಾಗಾಗಿ ಕೃಷ್ಣಾರ್ಜುನ ಸಂವಾದ ಎಂದರೆ ಕಪ್ಪು ಬಿಳುಪಿನ ನಡುವಿನ ಅನುಕೂಲಕರ ಸಂವಾದ. ಹಗಲು ಎನ್ನುವುದು ಮನಸ್ಸಿನ ಹೊರಮುಖ, ಕಪ್ಪು ಮನಸ್ಸಿನ ಒಳಮುಖ. ಒಳ-ಹೊರ ಮುಖಗಳಲ್ಲಿ ಸಂಯೋಗ ಸಮಾನತೆ, ಏಕತೆ ರೂಢಿಸಿಕೊಂಡಾಗ ಪ್ರಾಮಾಣಿಕ, ಆರೋಗ್ಯವಂತ ಸಮಾಜದ ಗೌರವಯುತ ವ್ಯಕ್ತಿಯಾಗುತ್ತಾನೆ. ಒಳ ಮತ್ತು ಹೊರಮುಖಗಳು ಬೇರೆಯಾದಾಗ ಅಪ್ರಾಮಾಣಿಕನಾಗುತ್ತಾನೆ. ಇದಕ್ಕೆಲ್ಲ ಭಗವದ್ಗೀತೆಯಲ್ಲಿ ಸ್ಪಷ್ಟನೆ ನೀಡಲಾಗಿದೆ ಎನ್ನುವ ಆಶಯವನ್ನು ಶ್ರೀಗಳು ವ್ಯಕ್ತಪಡಿಸಿದರು.
ಕುಮಟಾ ತಾಲೂಕಿನ ದೀವಗಿಯ ರಾಮಾನಂದ ಅವಧೂತ ಸ್ವಾಮೀಜಿ, ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ, ಸ್ವಾದಿ ದಿಗಂಬರ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಹುಬ್ಬಳ್ಳಿ ಆರ್ಷ ಗುರುಕುಲದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ, ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ಮುಂಡಗೋಡಿನ ಗೌರಮ್ಮಾಜಿ ಆಶ್ರಮದ ವಿರೂಪಾಕ್ಷೇಶ್ವರ ಮಹಾರಾಜರು, ಯಡೂಗಾ ಸಿದ್ಧಾರೂಢ ಮಠದ ಮಾತಾಜಿ ನಿರ್ಮಲಾ ತಾಯಿ ಸಾನ್ನಿಧ್ಯ ವಹಿಸಿದ್ದರು. ಶಿರಸಿ ಮತ್ತು ಯಲ್ಲಾಪುರದ ಶಾಸಕರು, ಸಂಸದ ಅನಂತಕುಮಾರ ಹೆಗಡೆ, ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು.
- ವಿಶ್ವಾಮಿತ್ರ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

