ಚಾಲಕ, ಮೆಕ್ಯಾನಿಕ್ಗೆ ದಂಡ!
ಮಂಗಳೂರು: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!
ಇದು ಕೆಎಸ್ಆರ್ಟಿಸಿಗೆ ಸರಿಯಾಗಿ ಒಪ್ಪುತ್ತದೆ. ತೀರಾ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ವೋಲ್ವೋ ಬಸ್ ಕೆಟ್ಟು ಹೋದರೆ, ಎಂಜಿನ್ ಹಾಳಾದರೆ ಚಾಲಕ ಹಾಗೂ ಮೆಕ್ಯಾನಿಕ್ನ ಗ್ರಹಚಾರ ಹಾಳಾದಂತೆ. ಕಳೆದೊಂದು ವರ್ಷದಲ್ಲಿ 100ಕ್ಕೂ ಅಧಿಕ ನೌಕರರ ಮೇಲೆ ಕೇಸ್ ಹಾಕಿ ಲಕ್ಷಗಟ್ಟಲೆ ದಂಡ ವಸೂಲಿ ಮಾಡಿದ್ದಾರೆ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳು. ಈ ವಿಭಾಗದಲ್ಲಿ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಅಥವಾ ಕ್ಲರ್ಕ್ಗಳ ವಿರುದ್ಧ ಪ್ರತಿದಿನ ಒಂದಿಲ್ಲೊಂದು ಕೇಸ್ ದಾಖಲಾಗುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಅಧಿಕಾರಿಗಳು ಕೆಳಹಂತದ ನೌಕರರಿಗೆ ಕಿರುಕುಳ ಕೊಡುತ್ತಿದ್ದಾರೆ ಎನ್ನುವುದು ನೌಕರರ ಸಂಘಟನೆಗಳ ಆರೋಪ.
ವೋಲ್ವೋದಲ್ಲೇ ಏಕೆ ಸಮಸ್ಯೆ?: ವೋಲ್ವೋ ಬಸ್ಗೆ ಎಂಜಿನ್ ಇರುವುದು ಹಿಂಭಾಗದಲ್ಲಿ. ಶಿರಾಡಿ ಘಾಟ್ನಲ್ಲಿ ಸಂಚರಿಸುವಾಗ ಬಸ್ನ ಆ್ಯಂಟಿ ರೋಲ್ ಬಾರ್ ರಸ್ತೆಗೆ ಪದೇ ಪದೇ ಸ್ಪರ್ಶಿಸಿ ತುಂಡಾಗುತ್ತದೆ. ಕೆಲವೊಮ್ಮೆ ಎಂಜಿನ್ನಿಂದ ಆಯಿಲ್ ಸೋರಿಕೆ, ಎಂಜಿನ್ ಪೂರ್ತಿ ಕೆಟ್ಟು ನಿಲ್ಲುವುದೂ ಉಂಟು. ಇವೆಲ್ಲದರ ತಪ್ಪು ಚಾಲಕ ಹಾಗೂ ಮೆಕ್ಯಾನಿಕ್ ತಲೆಗೆ ಕಟ್ಟುತ್ತಾರೆ. ಮಾತ್ರವಲ್ಲ ಸಾವಿರಾರು ಮೊತ್ತ ದಂಡ ಕಕ್ಕಿಸುತ್ತಾರೆ.
ನೂರಕ್ಕೂ ಅಧಿಕ ಕೇಸ್!: ಈ ಸಾಲಿನಲ್ಲಿ ಚಾಲಕ, ನಿರ್ವಾಹಕ, ಮೆಕ್ಯಾನಿಕ್, ಕ್ಲಾರ್ಕ್ಗಳಿಗೆ 100ಕ್ಕೂ ಅಧಿಕ ಕೇಸ್ ಹಾಕಲಾಗಿದೆ. ಈಗಾಗಲೇ ಲಕ್ಷಾಂತರ ಮೊತ್ತ ದಂಡ ವಸೂಲಿ ಮಾಡಲಾಗಿದೆ. ಇದರ ವಿರುದ್ಧ ಕೆಎಸ್ಆರ್ಟಿಸಿ ನೌಕರ ಮತ್ತು ಕಾರ್ಮಿಕರ ಸಂಘಟನೆ ಕೇಂದ್ರ ಕಚೇರಿಗೆ ಅಪೀಲು ಮಾಡಿದೆ.
ನೌಕರರ ವಿರುದ್ಧದ ಆರೋಪವನ್ನು ಹಿಂದಿನ 2 ವರ್ಷದ್ದನ್ನು ಒಟ್ಟಿಗೆ ಸೇರಿಸಿ 6 ತಿಂಗಳ ನಂತರ ದಂಡ ವಸೂಲಿಗೆ ನೋಟಿಸ್ ನೀಡುವುದು ಇಲ್ಲಿನ ಕ್ರಮ. ಇದರ ವಿರುದ್ಧ ಲೇಬರ್ ಕಮಿಷನರ್ಗೆ ಸಂಘಟನೆ ದೂರು ನೀಡಿದೆ. ವಿಚಾರಣೆ ವೇಳೆ ಕೆಎಸ್ಆರ್ಟಿಸಿ ಆಡಳಿತ ಹಾಜರಾಗುವುದೇ ಇಲ್ಲ. ಹಾಗಾಗಿ ಪ್ರಕರಣ ಬೇಗ ಇತ್ಯರ್ಥವಾಗುವುದಿಲ್ಲ. ಶಿರಾಡಿ ಘಾಟ್ ಹಾಳಾಗಿ ವೋಲ್ವೋ ಕೆಟ್ಟು ನಿಂತ ಪ್ರಕರಣದಲ್ಲಿ ಚಾಲಕರೊಬ್ಬರಿಗೆ ಎರಡು ಸಲ 20 ಸಾವಿರ ದಂಡ ವಿಧಿಸಲಾಗಿದೆ. ಕೇಂದ್ರ ಕಚೇರಿಯಿಂದ ಆಗಮಿಸಿದ ಮೇಲ್ವಿಚಾರಣಾ ಅಧಿಕಾರಿ ದಂಡ ಮೊತ್ತ ಕಡಿಮೆ ಮಾಡುವಂತೆ ತಿಳಿಸಿದ ಬಳಿಕ ಸ್ವಲ್ಪ ಮೊತ್ತ ಕಡಿಮೆ ಮಾಡಿದ್ದಾರೆ. ಪ್ರತಿ ತಿಂಗಳು ವೇತನದಲ್ಲಿ ನಾಲ್ಕೈದು ಸಾವಿರ ಮೊತ್ತ ಕಡಿತಗೊಳ್ಳುತ್ತಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಸ್ ಚಾಲಕ.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

