ಲೋಕಪಾಲಕ್ಕೆ ಹಿರಿಯರ ಮನೆ ಒಪ್ಪಿಗೆ

ನವದೆಹಲಿ: ಮಹತ್ವಾಕಾಂಕ್ಷೆಯ ಲೋಕಪಾಲ ಮಸೂದೆಗೆ ಕೊನೆಗೂ ರಾಜ್ಯಸಭೆಯ ಅಂಗೀಕಾರ ದೊರಕಿದೆ. ಎರಡು ವರ್ಷದಿಂದ ರಾಜ್ಯಸಭೆಯ ಅಂಗೀಕಾರಕ್ಕಾಗಿ ಕಾಯುತ್ತಿದ್ದ ಈ ಮಸೂದೆಗೆ ಐದು ಗಂಟೆಗಳಷ್ಟು ಸುದೀರ್ಘ ಚರ್ಚೆಯ ಬಳಿಕ ಧ್ವನಿ ಮತದ ಮೂಲಕ ಹಿರಿಯರ ಮನೆಯ ಒಪ್ಪಿಗೆ ಸಿಕ್ಕಿದೆ.
ಇನ್ನು ಈ ಪರಿಷ್ಕೃತ ಮಸೂದೆ ಬುಧವಾರ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಅಲ್ಲಿ ಅಂಗೀಕಾರ ಸಿಕ್ಕರೆ ಕಾನೂನು ಆಗಿ ಪರಿವರ್ತನೆಯಾಗಲಿದೆ. ಈ ಮಸೂದೆ ಇನ್ನು ಮುಂದೆ ಪ್ರಧಾನಮಂತ್ರಿಗಳನ್ನೂ ಲೋಕಪಾಲದಡಿ ತರಲಿದೆ. 2011ರ ಡಿಸೆಂಬರ್ನಲ್ಲಿ ಲೋಕಸಭೆಯ ಅಂಗೀಕಾರ ಪಡೆದಿದ್ದ ಈ ಮಸೂದೆಯ ಕೆಲವು ಅಂಶಗಳಿಗೆ ಸಂಬಂಧಿಸಿ ರಾಜ್ಯಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅದರಂತೆ ಮಸೂದೆಯನ್ನು ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು. ಸಮಿತಿಯು ಎಲ್ಲಾ ಪಕ್ಷಗಳಿಗೆ ಸಮ್ಮತಿಯಾಗುವಂತೆ ಅನೇಕ ತಿದ್ದುಪಡಿಗಳನ್ನು ಶಿಫಾರಸು ಮಾಡಿತ್ತು. ಇವುಗಳಲ್ಲಿ ಸರ್ಕಾರ ಬಹುತೇಕ ತಿದ್ದುಪಡಿಗಳನ್ನು ಅಂಗೀಕರಿಸಿದೆ. ಈ ಪರಿಷ್ಕೃತ ಮಸೂದೆಯಂತೆ ಇನ್ನು ಎಲ್ಲ ರಾಜ್ಯಗಳು ವರ್ಷದೊಳಗೆ ಲೋಕಾಯುಕ್ತ ರಚನೆ ಮಾಡುವುದು ಕಡ್ಡಾಯವಾಗಲಿದೆ. ಇದಕ್ಕೂ ಮೊದಲು ಮಸೂದೆಗೆ ಸಂಬಂಧಿಸಿ ಚರ್ಚೆ ಆರಂಭಿಸಿದ ಸಿಬಲ್, ಕಾನೂನೊಂದರಿಂದಲೇ ಭ್ರಷ್ಟಾಚಾರವನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಆದರೆ, ಭ್ರಷ್ಟಾಚಾರಿಗಳಿಗೆ ಶಿಕ್ಷೆ ವಿಧಿಸಲು ಇದು ನೆರವು ನೀಡಲಿದೆ ಎಂದು ತಿಳಿಸಿದರು.
ಒಪ್ಪಿಕೊಂಡ ಪ್ರಮುಖ ತಿದ್ದುಪಡಿ: ಲೋಕಪಾಲ ಮಸೂದೆಗೆ ಸಂಸದೀಯ ಸಮಿತಿ ಮಾಡಿದ್ದ ಮೂರು ಶಿಫಾರಸುಗಳನ್ನು ಹೊರತುಪಡಿಸಿ ಉಳಿದ ತಿದ್ದುಪಡಿಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇವುಗಳಲ್ಲಿ ಪ್ರಮುಖವಾದವು...
- ಲೋಕಪಾಲರನ್ನು ಪ್ರಧಾನಿ, ಸ್ಪೀಕರ್, ಲೋಕಸಭಾ ಪ್ರತಿಪಕ್ಷ ನಾಯಕ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ರಾಷ್ಟ್ರಪತಿಗಳ ಶಿಫಾರಸಿನಂತೆ ನೇಮಕಗೊಂಡ ಖ್ಯಾತ ನ್ಯಾಯತಜ್ಞರನ್ನೊಳಗೊಂಡ ಸಮಿತಿ ನೇಮಕ ಮಾಡಬೇಕು.
- ಲೋಕಪಾಲಕ್ಕೆ ಸಂಬಂಧಿಸಿದ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದು.
ಸರ್ಕಾರ ತಿರಸ್ಕರಿಸಿದ ಪ್ರಮುಖ ಶಿಫಾರಸು
- ತನಿಖೆಗೂ ಮೊದಲು ಸಾರ್ವಜನಿಕ ಅಧಿಕಾರಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬಾರದು.
ರಾಜ್ಯಸಭೆಗೆ ಅಣ್ಣಾ ಹಜಾರೆ ಕೃತಜ್ಞತೆ
ರಾಳೇಗಣ್ ಸಿದ್ಧಿ: ಲೋಕಪಾಲ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆತಿದ್ದಕ್ಕೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಂತಸಗೊಂಡಿದ್ದಾರೆ. ಇದಕ್ಕಾಗಿ ಅವರು ರಾಜ್ಯಸಭಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಲೋಕಪಾಲ ಮಸೂದೆಗೆ ಅಂಗೀಕಾರ ದೊರತ ಸುದ್ದಿ ತಿಳಿಯುತ್ತಿದ್ದಂತೆ ನಿರಶನ ಕೂತಿದ್ದ ಸ್ಥಳದಿಂದ ಎದ್ದು ನಿಂತು ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು. ನಂತರ ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಕೂಗಿದರು. ರಾಜ್ಯಸಭೆಯ ಒಪ್ಪಿಗೆ ಸಿಕ್ಕಿದೆ ಇನ್ನು ಲೋಕಸಭೆಯ ಅಂಗೀಕಾರ ಸಿಕ್ಕಬಳಿಕ ತಮ್ಮ ನಿರಶನ ಕೈಬಿಡುವುದಾಗಿ ಅಣ್ಣಾ ಹೇಳಿದ್ದಾರೆ.
ಲೋಕಪಾಲ ಮಸೂದೆಗಾಗಿ ಹೋರಾಟ ಆರಂಭಿಸಿದ್ದ ಅಣ್ಣಾ ಹಜಾರೆ ಕಳೆದ ಎಂಟು ದಿನಗಳಿಂದ ಹುಟ್ಟೂರಲ್ಲಿ ನಿರಶನ ನಡೆಸುತ್ತಿದ್ದಾರೆ.
ರಾಹುಲ್ಗೆ ಕ್ರೆಡಿಟ್ ನೀಡಿದ ಕಾಂಗ್ರೆಸ್: ಲೋಕಪಾಲ ಮಸೂದೆ ಅಂಗೀಕಾರ ಪಡೆಯುವಲ್ಲಿ ಸಿಕ್ಕಿದ ಯಶಸ್ಸನ್ನು ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಅರ್ಪಿಸಿದೆ. ರಾಹುಲ್ಗಾಂಧಿ ಅವರ ಪ್ರಯತ್ನದಿಂದಾಗಿ ಎಲ್ಲ ಪಕ್ಷಗಳ ಸಮ್ಮತಿ ಪಡೆದು ಶೀಘ್ರವಾಗಿ ಮಸೂದೆಗೆ ಅಂಗೀಕಾರ ಪಡೆಯುವುದು ಸಾಧ್ಯವಾಯಿತು ಎಂದು ಪಕ್ಷದ ವಕ್ತಾರ ಪಿ.ಸಿ. ಚಾಕೋ ಹೇಳಿದ್ದಾರೆ.
'ಈ ಬದಲಾದ ಪರಿಸ್ಥಿತಿಯಲ್ಲಿ' ಕೇಂದ್ರ ಸರ್ಕಾರ ಎಲ್ಲ ತಿದ್ದುಪಡಿಗಳನ್ನು ಒಪ್ಪಿಕೊಂಡು ಲೋಕಪಾಲ ಮಸೂದೆಗೆ ಬೆಂಬಲ ನೀಡಿದ್ದಕ್ಕೆ ಸಂತಸಗೊಂಡಿದ್ದೇನೆ.
- ಅರುಣ್ ಜೇಟ್ಲಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ
ಇದೊಂದು ಐತಿಹಾಸಿಕ ದಿನ. ಎಲ್ಲ ರಾಜ್ಯಗಳೂ ಇದೇ ಮಸೂದೆಯ ಮಾದರಿಯಲ್ಲಿ ಶಾಸನಗಳನ್ನು ಅಂಗೀಕರಿಸುವ ಮೂಲಕ ಲೋಕಾಯುಕ್ತವನ್ನು ಸ್ಥಾಪಿಸುವ ವಿಶ್ವಾಸವಿದೆ.
- ಕಪಿಲ್ ಸಿಬಲ್, ಕೇಂದ್ರ ಸಚಿವ
ಭ್ರಷ್ಟಾಚಾರದ ವಿರುದ್ಧ ಶಾಸನ ಬೇಕೆಂದು ಜನ ಬಯಸಿದ್ದಾರೆನ್ನುವುದು ನಮ್ಮ ನಾಯಕರಿಗೆ ಅರ್ಥವಾದಂತಿದೆ. ಇದು ಭ್ರಷ್ಟಾಚಾರವನ್ನು ಶೇ.100ರಷ್ಟು ತೊಲಗಿಸುತ್ತದೆ ಎಂದು ಹೇಳುವುದಿಲ್ಲ. ಆದರೆ, ಶೇ.40ರಿಂದ 50ರಷ್ಟು ಕಡಿಮೆ ಮಾಡುತ್ತದೆ ಎನ್ನುವುದು ನನ್ನ ನಂಬಿಕೆ.
- ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರ
ಎಸ್ಪಿ ಬಹಿಷ್ಕಾರ
ಪರಿಷ್ಕೃತ ಲೋಕಪಾಲ ಮಸೂದೆಗೆ ಎಸ್ಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ಸೋಮವಾರವೇ ಬೆಂಬಲ ವ್ಯಕ್ತಪಡಿಸಿದ್ದವು. ಹಾಗಾಗಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದು ಬಹುತೇಕ ಖಚಿತವಾಗಿತ್ತು. ಆದರೆ, ಮಸೂದೆಗೆ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿರುವ ಸಮಾಜವಾದಿ ಪಕ್ಷದ ಸದಸ್ಯರು ಮಾತ್ರ ಮಂಗಳವಾರ ಚರ್ಚೆ ಆರಂಭವಾಗುತ್ತಲೇ ಕಲಾಪ ಬಹಿಷ್ಕರಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.
ಪ್ರಮುಖ ಅಂಶಗಳು
* ಲೋಕಪಾಲ ಸದಸ್ಯರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಬಾರದು.
* ಸರ್ಕಾರದಿಂದ ನಿಧಿ ಪಡೆದ ಸೊಸೈಟಿಗಳು, ಟ್ರಸ್ಟ್ಗಳು ಲೋಕಪಾಲ ವ್ಯಾಪ್ತಿಯಡಿ ತರಬೇಕು.
* ಸುಪ್ರೀಂಕೋರ್ಟ್ ಆದೇಶದಂತೆ ಲೋಕಪಾಲ ಸದಸ್ಯರನ್ನು ರಾಷ್ಟ್ರಪತಿ ಅವರಷ್ಟೇ ವಜಾ ಮಾಡಬಹುದು.
* ಸಂಸತ್ತಿನ 100 ಸದಸ್ಯರ ಸಹಿಯುಳ್ಳ ದೂರನ್ನು ಆಧರಿಸಿ ರಾಷ್ಟ್ರಪತಿಗಳು ಶಿಫಾರಸು ಮಾಡಿದರೆ ಲೋಕಪಾಲ ಸದ್ಯಸ್ಯರ ಕುರಿತು ಸುಪ್ರೀಂಕೋರ್ಟ್ ತನಿಖೆ ನಡೆಸಬಹುದು.
* ಸಿಬಿಐ ಪ್ರತ್ಯೇಕ ನಿರ್ದೇಶಕರನ್ನು ನೇಮಿಸಬೇಕು. ಇವರನ್ನು ಸಿವಿಸಿಯ ಶಿಫಾರಸಿನಂತೆ ನೇಮಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


