ಮಳೆ ಸುರಿದರೂ ನೀಗದ ಕರೆಂಟ್ ಅಭಾವ

ಮಳೆಗಾಲ ಮುಗಿದು ಇನ್ನೂ ತಿಂಗಳಾಗಿಲ್ಲ.ಕರೆಂಟ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಈಗಲೇ ಹೀಗಾದರೆ, ಇನ್ನುಬೇಸಿಗೆಗೆ ಸರ್ಕಾರ ಹೇಗೆ ಕತ್ತಲೆ ಸಮಸ್ಯೆ ನಿವಾರಿಸಬಲ್ಲುದು ಎಂಬ ಪ್ರಶ್ನೆ ಜನರದ್ದು.
175-180
ರಾಜ್ಯದ ಒಟ್ಟಾರೆ ವಿದ್ಯುತ್ ಬೇಡಿಕೆ
161.05
ಎಸ್ಕಾಂಗಳಿಗೆ ನಿಗದಿಪಡಿಸಿರುವ ವಿದ್ಯುತ್
154
ಎಸ್ಕಾಂಗಳಿಗೆ ಪೂರೈಸುತ್ತಿರುವ ವಿದ್ಯುತ್
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.20-
ಇಲ್ಲ.. ಇಲ್ಲ... ಎನ್ನುತ್ತಲೇ ಧುತ್ತನೆ ಎದುರಾಗಿದೆ ವಿದ್ಯುತ್ ಸಮಸ್ಯೆ. ಉತ್ತಮ ಮಳೆಯಾಗಿ ಜಲಾಶಯಗಳಲ್ಲಿ ನೀರು ತುಂಬಿದೆ. ಕಳೆದ ವರ್ಷದಂತೆ ಕಲ್ಲಿದ್ದಲು ಪೂರೈಕೆಯಲ್ಲೂ ಹೆಚ್ಚಿನ ವ್ಯತ್ಯಯವಾಗುವುದಿಲ್ಲ. ಹೀಗಾಗಿ ಈ ವರ್ಷ ಬೇಸಿಗೆಯಲ್ಲೂ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂಬ ಸರ್ಕಾರದ ಮಾತು ಹುಸಿಯಾಗಿದೆ.
ಬೇಸಿಗೆ ಆರಂಭವಾಗಲು ಇನ್ನೂ ಮೂರು ತಿಂಗಳು ಇರುವಂತೆ ರಾಜ್ಯಾದ್ಯಂತ ತೀವ್ರ ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಂತೂ ಸಮಸ್ಯೆ ಗಂಭೀರವಾಗಿದೆ. ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಆತಂಕ ಕಾಣಿಸಿಕೊಂಡಿದೆ. ರಾಜಧಾನಿ ಬೆಂಗಳೂರು ಕೂಡ ಇದರಿಂದ ಹೊರತಾಗಿಲ್ಲ.
ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕರೆಂಟ್ ಯಾವಾಗ ಬರುತ್ತದೆ, ಹೋಗುತ್ತದೆ ಎಂಬುದೇ ತಿಳಿಯದಂತೆ ಆಗಿದೆ. ಮುನ್ಸೂಚನೆ ಇಲ್ಲದೆ ಇಡೀ ದಿನ ವಿದ್ಯುತ್ ಪೂರೈಕೆ ಕಡಿತ ಮಾಡಲಾಗುತ್ತಿದೆ. ಇದರಿಂದ ಗೃಹ ಬಳಕೆದಾರರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ.
ವಾಣಿಜ್ಯ ವಹಿವಾಟಿನ ಮೇಲೂ ವಿದ್ಯುತ್ ಕಡಿತ ಪರಿಣಾಮ ಬೀರಿದೆ. ದಿನವಿಡೀ ವಿದ್ಯುತ್ ಕೈ ಕೊಡುವುದರಿಂದ ಅಂಗಡಿ ಮುಂಗಟ್ಟುಗಳ ಮಾಲೀಕರು ಜನರೇಟರ್ಗಳ ಮೊರೆ ಹೋಗುವಂತಾಗಿದೆ. ಪರೀಕ್ಷೆಗಳ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿದ್ಯುತ್ ಸಮಸ್ಯೆ ಈ ಬಾರಿ ಚಳಿಗಾಲದಲ್ಲೇ ಶುರುವಾಗಿದೆ.
ಬೇಕಾದಷ್ಟು ವಿದ್ಯುತ್ ಸಿಗುತ್ತಿಲ್ಲ: ಪ್ರಸ್ತುತ ರಾಜ್ಯದಲ್ಲಿ ಪ್ರತಿನಿತ್ಯದ ವಿದ್ಯುತ್ ಬೇಡಿಕೆ ಪ್ರಮಾಣ 175ರಿಂದ 180 ದಶಲಕ್ಷ ಯೂನಿಟ್ ಇದೆ. ಆದರೆ, ಬೆಂಗಳೂರಿಗೆ ದಿನದ 24 ಗಂಟೆ, ಇತರೆ ನಗರಗಳಿಗೆ 22 ಗಂಟೆ, ಗ್ರಾಮೀಣ ಪ್ರದೇಶಗಳಿಗೆ 18 ಗಂಟೆ ವಿದ್ಯುತ್ ಪೂರೈಕೆ ಆಧಾರದ ಮೇಲೆ ಕೆಪಿಟಿಸಿಎಲ್ ನಿಗದಿಪಡಿಸಿರುವ ವಿದ್ಯುತ್ 161.05 ದಶಲಕ್ಷ ಯೂನಿಟ್. ಆದರೆ, ಎಸ್ಕಾಂಗಳಿಗೆ ಹಂಚಿಕೆಯಾಗಿರುವ ವಿದ್ಯುತ್ 154 ದಶಲಕ್ಷ ಯೂನಿಟ್ ಮಾತ್ರ. ಎಸ್ಕಾಂಗಳಿಗೆ ನಿಗದಿಪಡಿಸಿರುವ ವಿದ್ಯುತ್ (161.05ದಶಲಕ್ಷ ಯೂನಿಟ್) ಮತ್ತು ಹಂಚಿಕೆಯಾಗಿರುವ ವಿದ್ಯುತ್ (154 ದಶಲಕ್ಷ ಯೂನಿಟ್) ಮಧ್ಯೆ ಕೇವಲ 7 ದಶಲಕ್ಷ ಯೂನಿಟ್ ಮಾತ್ರ ವ್ಯತ್ಯಾಸವಿದೆ. ಹೀಗಾಗಿ ವಿದ್ಯುತ್ ಸಮಸ್ಯೆ ಗಂಭೀರ ಸ್ವರೂಪದ್ದಲ್ಲ ಎನ್ನುವುದು ಕೆಪಿಟಿಸಿಎಲ್ ಅಧಿಕಾರಿಗಳ ವಾದ. ಆದರೆ, ಚಳಿಯ ಮಧ್ಯೆಯೂ ಬಿಸಿಲು ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚು ನೀರು ಬೇಕಾಗುತ್ತದೆ. ಇದರಿಂದಾಗಿ ಡಿಸೆಂಬರ್ನಲ್ಲೇ ಅನಿಯಂತ್ರಿತ ವಿದ್ಯುತ್ ಬೇಡಿಕೆ ಪ್ರಮಾಣ 175ರಿಂದ 180 ದಶಲಕ್ಷ ಯೂನಿಟ್ ತಲುಪಿದೆ. ಆದರೆ, ಪೂರೈಕೆಯಾಗುತ್ತಿರುವುದು 154 ದಶಲಕ್ಷ ಯೂನಿಟ್ ಮಾತ್ರವಾಗಿದ್ದರಿಂದ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.
ಹೆಸ್ಕಾಂ ವ್ಯಾಪ್ತಿಯಲ್ಲಿ ಸಮಸ್ಯೆ ಹೆಚ್ಚು
ನಾಲ್ಕು ಎಸ್ಕಾಂಗಳು ಮತ್ತು ಚಾಮುಂಡೇಶ್ವರಿ ವಿದ್ಯುತ್ ಕಂಪನಿಗಳ ಪೈಕಿ ಅತಿ ಹೆಚ್ಚು ವಿದ್ಯುತ್ ಸಮಸ್ಯೆ ಎದುರಿಸುತ್ತಿರುವುದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ. ಇಲ್ಲಿ ಒಟ್ಟಾರೆ ಬೇಡಿಕೆ ಸುಮಾರು 42 ದಶಲಕ್ಷ ಯೂನಿಟ್ನಷ್ಟಿದೆ. ಕೆಪಿಟಿಸಿಎಲ್ ಈ ಕಂಪನಿಗೆ ನಿಗದಿಪಡಿಸಿರುವ ವಿದ್ಯುತ್ 36.36 ದಶಲಕ್ಷ ಯೂನಿಟ್. ಆದರೆ, ಪೂರೈಕೆಯಾಗುತ್ತಿರುವುದು 29.55 ದಶಲಕ್ಷ ಯೂನಿಟ್. ಹೀಗಾಗಿ ಹೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ತೀವ್ರವಾಗಿ ಕಾಡುತ್ತಿದೆ.ಅದೇ ರೀತಿ ಇತರೆ ವಿದ್ಯುತ್ ಸರಬರಾಜು ಕಂಪನಿಗಳಲ್ಲೂ ವಿದ್ಯುತ್ ಕೊರತೆ ಕಾಡುತ್ತಿದ್ದು, 133ರಿಂದ 138 ದಶಲಕ್ಷ ಯೂನಿಟ್ ವಿದ್ಯುತ್ ಬೇಕಾದ ಕಡೆ 125 ದಶಲಕ್ಷ ಯೂನಿಟ್ ವಿದ್ಯುತ್ ಮಾತ್ರ ಪೂರೈಕೆಯಾಗುತ್ತಿದೆ.
ಜಲವಿದ್ಯುತ್ ಉತ್ಪಾದನೆ ಹೆಚ್ಚಳ
ಉಡುಪಿಯ ಉಷ್ಣ ವಿದ್ಯುತ್ ಸ್ಥಾವರದಿಂದ (ಯುಪಿಸಿಎಲ್) ಬರಬೇಕಿದ್ದ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ. ಅದೇ ರೀತೀ ರಾಯಚೂರು ಮತ್ತು ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಗಳಿಂದಲೂ ನಿರೀಕ್ಷಿತ ವಿದ್ಯುತ್ ಲಭ್ಯವಾಗುತ್ತಿಲ್ಲ. ಈ ಕೊರತೆಯನ್ನು ಭರಿಸಲು ಜಲವಿದ್ಯುತ್ ಮೊರೆ ಹೋಗಲಾಗಿದೆ. ಜಲ ವಿದ್ಯುತ್ ಉತ್ಪಾದಿಸುವ ಮೂರು ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಸೂಪ ಮತ್ತು ಮಾಣಿಗಳಲ್ಲಿ ಪ್ರಸ್ತುತ 6936 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5392 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಹೀಗೆ ಹೆಚ್ಚುವರಿ ಉತ್ಪಾದನೆಯಾಗುತ್ತಿರುವ 1544 ಮೆಗಾವ್ಯಾಟ್ ವಿದ್ಯುತ್ತನ್ನು ಉಷ್ಣ ವಿದ್ಯುತ್ ಸ್ಥಾವರಗಳಿಂದ ಅಲಭ್ಯವಾಗಿರುವ ವಿದ್ಯುತ್ತಿಗೆ ಪರ್ಯಾಯವಾಗಿ ಬಳಸಿಕೊಳ್ಳಲಾಗುತ್ತಿದೆ.
- ಪ್ರದೀಪ್ಕುಮಾರ್ ಎಂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


