ಪ್ರಧಾನ ಸುದ್ದಿ

ಎಡ, ಬಲ ಬೇಡ, ನಡು ಚಿಂತನೆ ಇರಲಿ

Published On :

ವಿದ್ಯಾಗಿರಿ (ಮೂಡುಬಿದಿರೆ): ಎಡಚಿಂತನೆ ಬೇಡ ಬಲಚಿಂತನೆಯೂ ಬೇಡ. ನಮಗೆ ಬೇಕಾಗಿರುವುದು ನಡುಚಿಂತನೆ. ಒಂದೊಂದು ಸರ್ಕಾರಗಳು ಬಂದಾಗ ಒಂದೊಂದು ಪಂಥದ ನೀತಿಗಳು ಜಾರಿಯಾಗುವುದು ನಿಲ್ಲಬೇಕು ಎಂದು ಆಳ್ವಾಸ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.
ವಿಶ್ವನುಡಿಸಿರಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಅವರು ಜನರೊಂದಿಗೆ ಸಂವಾದ ನಡೆಸಿದರು.
ಸಂಸ್ಕೃತಿ- ಸಾಹಿತ್ಯಕ್ಕೆ ಸಂಬಂಧಿಸಿದಂತೆ ನೀತಿ ಅಗತ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ವ್ಯಕ್ತಿ, ಸಂಸ್ಥೆ, ರಾಜ್ಯ, ಕೇಂದ್ರ ಸರ್ಕಾರಗಳಿಗೆ ಒಂದು ನೀತಿ ಇರಬೇಕು. ಅದಕ್ಕೆ ತಕ್ಕನಾಗಿ ನಡೆದಾಗ ಮಾತ್ರ ಅದಕ್ಕೊಂದು ಉತ್ತಮ ವ್ಯಕ್ತಿತ್ವ ಮೂಡಲು ಸಾಧ್ಯ. ಆದರೆ, ನಮ್ಮ ಸರ್ಕಾರಗಳ ಬಳಿ ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಂದು ನೀತಿಯೇ ಇಲ್ಲ. ಒಂದು ಸರ್ಕಾರ ಬಂದಾಗ ಬಲಚಿಂತನೆ, ಇನ್ನೊಂದು ಸರ್ಕಾರ ಬಂದಾಗ ಎಡಚಿಂತನೆ. ಹೀಗೆ ಪ್ರತಿ ಸರ್ಕಾರಗಳು ಬಂದಾಗಲೂ ಒಂದೊಂದು ಚಿಂತನೆ ಹೊರಹೊಮ್ಮುವ ಬದಲು ನಮಗೆ ಬೇಕಿರುವುದು ನಡುಚಿಂತನೆಯ ನೀತಿ. ರಾಜ್ಯದ ಸಂಸ್ಕೃತಿ ಸಾಹಿತ್ಯದ ಕುರಿತು ಸಮಗ್ರ ಬೆಳವಣಿಗೆಯ ನೀತಿ ಎಂದರು.
ಮೌಲ್ಯಯುತ ಸಮಾಜ: ಜನ ಒಳ್ಳೆಯ ಕನಸುಗಳನ್ನು ಕಾಣಬೇಕು. ನಮಗೆ ಬೇಕಿರುವುದು ಮೌಲ್ಯಯುತ ಮತ್ತು ಸಮಾಜಮುಖಿ ಕನಸುಗಳು. ಉತ್ತಮ ಕನಸು ಕಂಡರಷ್ಟೇ ಸಾಲದು, ಅವುಗಳ ಅನುಷ್ಠಾನಕ್ಕೆ ಸೂಕ್ತ ಯೋಚನೆ ಮತ್ತು ಯೋಜನೆಯೊಂದಿಗೆ ಜಾರಿ ಮಾಡಿ. ಯಶಸ್ಸು ನಿಮ್ಮದಾಗುತ್ತದೆ ಎಂದರು.
ನುಡಿಸಿರಿ, ವಿರಾಸತ್‌ನಂತಹ ಕಾರ್ಯಕ್ರಮಗಳನ್ನು ನಡೆಸಲು ನಿಮಗೆ ಪ್ರೇರಣೆ ಏನು ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
ಕೆಲವರು ಗೊತ್ತಿದ್ದೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಹೇಳಿದ್ದನ್ನು ಪತ್ರಿಕೆಯವರು ಮುದ್ರಿಸಿದ್ದಾರೆ. ನಾನು ನುಡಿಸಿರಿ- ವಿರಾಸತ್ ಕಾರ್ಯಕ್ರಮಗಳಿಗೆ ಕಳ್ಳತನ ಮಾಡಿ ಹಣ ತರುವುದಿಲ್ಲ. ನೋಟು ಮುದ್ರಿಸುವುದೂ ಇಲ್ಲ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ದುಡ್ಡಿನ ಗಿಡವನ್ನೂ ಬೆಳೆದಿಲ್ಲ. ನನಗೆ 80 ಕೋಟಿ ಸಾಲವಿದೆ. ಇಂದಿಗೂ ನಾನು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ವಿಶ್ವನುಡಿಸಿರಿಗೆ ರು. 10- 15 ಕೋಟಿ ವೆಚ್ಚವಾಗುತ್ತದೆ. ಬ್ಯಾಂಕುಗಳಿಂದ ಪಡೆದ ಹಣದಿಂದಲೇ ಇವುಗಳನ್ನು ಹೊಂದಿಸುತ್ತಿದ್ದೇನೆ. ಆದರೂ, ಕೆಲವರು ಸುಳ್ಳು ಹೇಳುವಾಗ ಮನಸ್ಸಿಗೆ ನೋವಾಗುತ್ತದೆ.
ನಾನು ನುಡಿಸಿರಿ ಆರಂಭಿಸಿದ್ದು ಲಾಭಕ್ಕಲ್ಲ. ವಿದ್ಯಾರ್ಥಿಗಳಲ್ಲಿ ಉತ್ತಮ ಮನಸ್ಸು ರೂಪಿಸುವ ಉದ್ದೇಶದಿಂದ. ಆರಂಭದಲ್ಲಿ ನುಡಿಸಿರಿ ನಡೆಸಲು ಉದ್ದೇಶಿಸಲಾಯಿತು. ಆದರೆ, ಅದೇ ಕನಸು ಬೆಳೆದು, ದೊಡ್ಡದಾಗಿ ಇಂತಹ ರೂಪ ಪಡೆದುಕೊಂಡಿದೆ. ವಿದ್ಯಾರ್ಥಿಗಳಲ್ಲಿ ಸೌಂದರ್ಯ ಪ್ರಜ್ಞೆ, ಸಾಹಿತ್ಯಾಸಕ್ತಿ, ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ನುಡಿಸಿರಿ ಬಿಟ್ಟು 20- 30 ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಲಾಗುತ್ತದೆ.
ಪಾಲಕರ ಆಸೆಯೇ ಬೇರೆ: ಮಕ್ಕಳನ್ನು ಕಾಲೇಜಿಗೆ ಸೇರಿಸಲು ಬಂದ ಯಾವುದೇ ಪಾಲಕರು ನನ್ನ ಬಳಿ ನನ್ನ ಮಕ್ಕಳಿಗೆ ಸಾಹಿತ್ಯದಲ್ಲಿ ಆಸಕ್ತಿ ಬರುವಂತೆ ಹೇಗೆ ಮಾಡುತ್ತೀರಿ? ಅದಕ್ಕೆ ನಿಮ್ಮ ಬಳಿ ಎಂತಹ ವ್ಯವಸ್ಥೆ ಇದೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಎಷ್ಟು ತಾಸು ವ್ಯಯಿಸುತ್ತೀರಿ ಎಂದು ಕೇಳುವುದಿಲ್ಲ. ಬದಲಾಗಿ ವೈದ್ಯರಾಗಲು, ಐಐಟಿ ಸೇರಲು, ಎನ್‌ಐಟಿ ಸೇರಲು ಏನು ವ್ಯವಸ್ಥೆ ಇದೆ ಎಂದು ಪ್ರಶ್ನಿಸುತ್ತಾರೆ.
ಆದರೂ, ನಾವು ಇಷ್ಟೆಲ್ಲ ಚಟುವಟಿಕೆ ನಡೆಸುತ್ತೇವೆ. ಮಕ್ಕಳಿಗೆ ಶಿಕ್ಷಣ, ತರಗತಿ, ಪರೀಕ್ಷೆಗಳನ್ನು ಕೂಡ ಅಷ್ಟೇ ಸರಿಯಾಗಿ ನಡೆಸುತ್ತೇವೆ. ಓದಿನ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಗೆಳನ್ನು ಓದಿಗೆ ತೊಂದರೆಯಾಗದಂತೆ ನಡೆಸುವುದು ನಮ್ಮ ಉದ್ದೇಶ. ಈವರೆಗೆ 27 ರ್ಯಾಂಕ್‌ಗಳು ಬಂದಿರುವುದು ಅದಕ್ಕೆ ಸಾಕ್ಷಿ ಎಂದರು.
ರಾಜ್ಯದ ಬೇರೆ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶವಿಲ್ಲ. ಹಾಗೆ ಮಾಡಿದರೆ ನಾನು ವಾಣಿಜ್ಯ ಶಿಕ್ಷಣೋದ್ಯಮಿಯಾಗಿ ಬೆಳೆಯುತ್ತೇನೆ. ಆದರೆ, ಬೇರೆ ಊರುಗಳಿಗೆ ವಿಸ್ತರಿಸಿದಾಗ ನನ್ನ ನಿರೀಕ್ಷೆಗೆ ತಕ್ಕಂತೆ ಅವುಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಎಲ್ಲ ಕಡೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ದೊಡ್ಡ ಉದ್ಯಮಿಯಾಗಬೇಕು ಎಂಬ ಹಂಬಲವೂ ನನಗಿಲ್ಲ. ಮೂಡುಬಿದಿರೆಯಲ್ಲೇ ವೈದ್ಯಕೀಯ ಕಾಲೇಜು ತೆರೆಯುವ ಮನಸ್ಸು ನನಗಿಲ್ಲ. ಬದಲಾಗಿ 1ನೇ ತರಗತಿಯಿಂದ ಶಾಲೆ ಆರಂಭಿಸಬೇಕು ಎಂಬ ಆಸೆಯಿದೆ. ಚಿಕ್ಕವರಿರುವಾಗಲೇ ಮಕ್ಕಳ ಮನಸ್ಸನ್ನು ಸಾಹಿತ್ಯ- ಸಂಸ್ಕೃತಿಯತ್ತ ಸೆಳೆಯುವ ಉದ್ದೇಶವಿದೆ. ಯಾಕೆಂದರೆ ಅವುಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಕೂಡ ಅವರ ಮೇಲೆಯೇ ಇದೆ ಎಂದರು.
ನುಡಿಸಿರಿ ಭವಿಷ್ಯ
ನುಡಿಸಿರಿ ಮತ್ತು ವಿರಾಸತ್ ಎರಡೂ ಬೇರೆಯಾಗಿಯೇ ಮುಂದುವರಿಯಲಿವೆ. ಈ ವರ್ಷ ವಿಶ್ವ ನುಡಿಸಿರಿ ಎಂಬ ಕಾರಣಕ್ಕೆ ಅವುಗಳನ್ನು ಒಟ್ಟಿಗೆ ಆಯೋಜಿಸಲಾಗಿದೆ. ಆದರೆ, ಅವೆರಡೂ ಪ್ರತ್ಯೇಕ ಅಭಿರುಚಿಯವಾದ್ದರಿಂದ ಅವು ಬೇರೆಯಾಗಿಯೇ ನಡೆಯಲಿವೆ. 10ನೇ ವರ್ಷದ ನುಡಿಸಿರಿ ಎಂಬ ಕಾರಣಕ್ಕೆ ಸ್ವಲ್ಪ ವೈಭವವಾಗಿ ಆಯೋಜಿಸಲಾಗಿದೆ. ಆದರೆ, ಮುಂದಿನ ವರ್ಷದಿಂದ ಸರಳವಾಗಿ ನುಡಿಸಿರಿ ನಡೆಸಲಾಗುವುದು ಎಂದರು.
ದಯವಿಟ್ಟು ನನಗೆ ಮತ ಹಾಕಬೇಡಿ
ಎಲ್ಲರೂ ನನಗೆ ಮತ ಹಾಕಿ ಎಂದು ಕೇಳುವವರೇ. ಆದರೆ, ಇಲ್ಲೊಬ್ಬರು ನಾನು ಚುನಾವಣೆಗೆ ನಿಂತರೆ ನನಗೆ ಮತ ಹಾಕಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಇಂತಹ ವಿಚಿತ್ರ ಮನವಿ ಮಾಡಿದವರು ಬೇರಾರೂ ಅಲ್ಲ. ಆಳ್ವಾಸ್ ನುಡಿಸಿರಿಯ ರೂವಾರಿ ಡಾ.ಎಂ. ಮೋಹನ ಆಳ್ವ. ಸಂವಾದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರವೇಶಿಸುತ್ತೀರಾ ಎಂಬ ಜನರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜಕೀಯ ಪ್ರವೇಶಿಸೋದಿಲ್ಲ. ಯಾಕೆಂದರೆ ರಾಜಕಾರಣಿಯಾಗುವ ಅರ್ಹತೆ ನನಗಿಲ್ಲ. ಅಕಸ್ಮಾತ್ ನಾನು ಚುನಾವಣೆಗೆ ನಿಂತರೆ ದಯವಿಟ್ಟು ಯಾರೂ ನನಗೆ ಓಟು ಹಾಕಬೇಡಿ. ಆ ಮೂಲಕ ನಾನು ಕೆಟ್ಟ ರಾಜಕಾರಣಿ ಎನಿಸಿಕೊಳ್ಳುವುದನ್ನು ತಡೆಯಿರಿ ಎಂದು ಜನರಿಗೆ ಮನವಿ ಮಾಡಿದರು.



-ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.