ಪ್ರಧಾನ ಸುದ್ದಿ

ಜಯಂತಿ ರಾಜಿನಾಮೆ ಪಕ್ಷ ಸೇವೆಗೆ ನಿಯೋಜನೆ

ಜಯಂತಿ ರಾಜಿನಾಮೆ ಪಕ್ಷ ಸೇವೆಗೆ ನಿಯೋಜನೆ
Published On :

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ. 2014ರ ಲೋಕಸಭೆ ಚುನಾವಣೆ ವೇಳೆಗಾದರೂ ಪಕ್ಷವನ್ನು ಬಲಪಡಿಸಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಈಗಲೇ ಸಿದ್ಧತೆ ಆರಂಭಿಸಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಶನಿವಾರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವೆಯಾಗಿದ್ದ ಜಯಂತಿ ನಟರಾಜನ್ ಅವರ ರಾಜಿನಾಮೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ರಾಜಿನಾಮೆ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಸಂಘಟನಾ ಪುನಾರಚನೆಗೆ ಕೈಹಾಕಿದ್ದಾರೆ. ಅದರ ಫಲವಾಗಿ ಜಯಂತಿ ನಟರಾಜನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅದನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಇವರಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಸಚಿವರಾದ ಸಚಿನ್ ಪೈಲಟ್, ಗುಲಾಂ ನಬಿ ಆಜಾದ್, ಜೈರಾಂ ರಮೇಶ್ ಸೇರಿದಂತೆ ಇನ್ನೂ ಅನೇಕರು ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಸಂಘಟನೆ ಕೆಲಸ: ತಮಿಳುನಾಡಿನವರಾದ ಜಯಂತಿ ನಟರಾಜನ್ ಅವರು ಸತತ 3 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಬಂದವರು. 2 ವರ್ಷಗಳ ಹಿಂದಷ್ಟೇ ಅವರು ಸಚಿವೆ ಸ್ಥಾನ ಪಡೆದಿದ್ದರು. ಇವರು ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ತಯಾರಿ ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಸಚಿವ ಮೊಯ್ಲಿ ಅವರಿಗೆ ಪರಿಸರ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ಹೊರಿಸಲಾಗಿದೆ.
ಚುನಾವಣೆಗೆ ರಾಹುಲ್ ಮಂತ್ರ
'ಭ್ರಷ್ಟಾಚಾರವು ನಮ್ಮ ದೇಶದ ಜನರ 'ನೆತ್ತರು' ಹರಿಸುತ್ತಿದೆ. ಅದರ ವಿರುದ್ಧದ ಹೋರಾಟಕ್ಕೆಂದೇ ಯುಪಿಎ ಸರ್ಕಾರ ಲೋಕಪಾಲವನ್ನು ಅಂಗೀಕರಿಸಿದ್ದು. ಭ್ರಷ್ಟಾಚಾರವನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ.'
ಇದು ಶನಿವಾರ ಫಿಕ್ಕಿ ವಾರ್ಷಿಕ ಮಹಾಸಭೆಯಲ್ಲಿ  ರಾಹುಲ್ ಗಾಂಧಿ ಆಡಿದ ಮಾತು. ಮೊದಲ ಬಾರಿಗೆ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದೇಶದ ಅಭಿವೃದ್ಧಿಯ ಕನಸನ್ನು ತೆರೆದಿಟ್ಟರು.
ರಾಹುಲ್ ಹೇಳಿದ್ದೇನು?
1931ರಲ್ಲಿ ಮಹಾತ್ಮ ಗಾಂಧಿ ಫಿಕ್ಕಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದಿನಿಂದಲೇ ನಿಮ್ಮ(ಉದ್ಯಮಿಗಳ) ಮತ್ತು ನಮ್ಮ ನಡುವೆ ಸಂಬಂಧ ಬೆಳೆಯಲಾರಂಭಿಸಿತು.
ರಾಜಕೀಯ ಪಕ್ಷವೆಂದರೆ ಅದು ಪ್ರತಿನಿಧಿಸುತ್ತಿರುವ ಜನರಿಗೆಂದೇ ಇರುವುದು. ಆ ಜನರ ಧ್ವನಿಯನ್ನು ಆಲಿಸುವುದು ನಮ್ಮ ಕರ್ತವ್ಯ.
ಮೊದಲು ನಮ್ಮ ದೇಶದಲ್ಲಿರುವ ನಿಯಂತ್ರಣಾ ವ್ಯವಸ್ಥೆಯನ್ನು ದುರಸ್ತಿಗೊಳಪಡಿಸಬೇಕು.
ಭ್ರಷ್ಟಾಚಾರವು ನಮ್ಮ ದೇಶದ ಜನರಿಗೆ ಅತಿ ದೊಡ್ಡ ಹೊರೆಯಾಗಿದೆ. ಭ್ರಷ್ಟಾಚಾರವನ್ನು ಒಪ್ಪಲು ಸಾಧ್ಯವೇ ಇಲ್ಲ.
ದೋಷಿ ರಾಜಕಾರಣಿಗಳನ್ನು ಸಂಸತ್‌ನಿಂದ ದೂರವಿಡುವ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಕ್ರಿಮಿನಲ್‌ಗಳನ್ನು ಪಕ್ಷದಿಂದ ಹೊರಗಿಡುವಂತೆ ನೋಡಿಕೊಂಡಿದ್ದೇವೆ.
ಎಷ್ಟೋ ಅವಧಿಯಿಂದ ಅಂಗೀಕಾರವಾಗದೇ ಉಳಿದಿದ್ದ ಲೋಕಪಾಲ ಮಸೂದೆ ಅಂಗೀಕಾರವಾಗುವಂತೆ ಮಾಡಿದೆವು.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದೆವು. ಇಂತಹ ಮಸೂದೆಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯ ಎಲ್ಲ ಸರ್ಕಾರಗಳಿಗೂ ಇರುವುದಿಲ್ಲ.
ಭಾರತದಲ್ಲಿ ಅತಿ ಬುದ್ಧಿವಂತ ಯುವಜನತೆಯಿದೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಅವರಿಗೆ ನ್ಯಾಯ ಒದಗಿಸುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.