ಪ್ರಧಾನ ಸುದ್ದಿ

ಸೌಮ್ಯ 'ಶಿವ'ನನ್ನು 'ವಿಷ್ಣು' ಸಂದರ್ಶಿಸಿದ!

ಸೌಮ್ಯ 'ಶಿವ'ನನ್ನು 'ವಿಷ್ಣು' ಸಂದರ್ಶಿಸಿದ!
Published On :

ಕನ್ನಡದ 'ರಾಷ್ಟ್ರಕವಿ' ಆದ ಕ್ಷಣ ಜಿ.ಎಸ್. ಶಿವರುದ್ರಪ್ಪರನ್ನು 'ಯಜಮಾನ' ಡಾ. ವಿಷ್ಣುವರ್ಧನ್ ಕನ್ನಡಪ್ರಭದ ಅತಿಥಿ ವರದಿಗಾರರಾಗಿ 3 ನವೆಂಬರ್ 2006ರಂದು ಸಂದರ್ಶಿಸಿದರು. ಒಂದು ಅಕ್ಷರಲೋಕ, ಇನ್ನೊಂದು ಬಣ್ಣದ ಲೋಕ ಮುಖಾಮುಖಿಯಾದಾಗ ಅಲ್ಲಿ ತೆರೆದುಕೊಂಡಿದ್ದು ಇನ್ನೊಂದು ಲೋಕ... ಅದನ್ನೀಗ ಮತ್ತೆ ನೋಡಿ...

ಅದು ಆಕಸ್ಮಿಕವಾಗಿ ಬಂದ ಆಹ್ವಾನ. ಗುರುಗಳಾದ ಜಿ.ಎಸ್. ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಗೌರವ ಕೊಡಮಾಡಿದ್ದನ್ನು ಪತ್ರಿಕೆಯಲ್ಲಿ ಓದಿ ಇನ್ನೇನು ಕರೆಮಾಡಿ ಅಭಿನಂದಿಸಬೇಕು ಅನ್ನುವಷ್ಟರಲ್ಲಿ 'ಕನ್ನಡಪ್ರಭ'ದಿಂದ ಫೋನು ಬಂತು. ಜಿ.ಎಸ್. ಶಿವರುದ್ರಪ್ಪನವರನ್ನು ಮುಖತಃ ಕಂಡು ಪತ್ರಿಕೆಗಾಗಿ ನಾಲ್ಕು ಮಾತಾಡಿ ಅನ್ನುವ ಆಹ್ವಾನ ಕೊಟ್ಟರು. ಅನಾಯಾಸವಾಗಿ ಕವಿಗಳನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತು.
ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ನಾನು ಜಿ.ಎಸ್. ಶಿವರುದ್ರಪ್ಪನವರನ್ನು ಅವರ ಮನೆಯಲ್ಲಿ ನೋಡಿದೆ.
ಕೆಲವು ಮನೆಗಳಿಗೆ ಫ್ಯಾನು, ಏರ್ ಕಂಡೀಷನರ್ ಯಾವುದೂ ಬೇಕಾಗೋದಿಲ್ಲ. ಅಲ್ಲೊಂದು ಹೊಸತನದ ಗಾಳಿ ಇರುತ್ತದೆ. ಪಂಚಭೂತಗಳೂ ಅಲ್ಲಿ ಹೊಸತನದಿಂದ ನಳನಳಿಸುತ್ತಿರುತ್ತವೆ. ರಾಷ್ಟ್ರಕವಿಗಳ ಮನೆಗೆ ಕಾಲಿಟ್ಟಾಗ ನನಗಾದ ಅನುಭವ ಅದೇ.
ಅಂಥ ಮನೆಗಳಲ್ಲಿ ವಾಸಿಸುವವರನ್ನು ಚೇತನಗಳು ಅಂತಲೇ ಕರೆಯಬೇಕು. ಇತ್ತೀಚೆಗೆ ಹಾರ್ನಹಳ್ಳಿ ರಾಮ ಸ್ವಾಮಿಯವರನ್ನು ನೋಡಿದಾಗಲೂ ಹಾಗೇ ಅನಿಸಿತ್ತು. ನಾನು ಮನೆಯೊಳಗೆ ಕಾಲಿಟ್ಟು ಕವಿಗಳಿಗೆ ನಮಸ್ಕರಿಸಿದೆ. ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದನೆ ಸಲ್ಲಿಸಿದೆ. ತುಂಬಾ ಸಂಕೋಚದಿಂದ ನಕ್ಕರು. ದೊಡ್ಡವರು ಹಾಗೆ, ಬಂದಾಗಲೂ ಬರದೇ ಇದ್ದಾಗಲೂ ಒಂದೇ ಥರ ಇರುತ್ತಾರೆ. ಮನೆತುಂಬ ಪುಸ್ತಕಗಳು. ಗ್ರಂಥಾಲಯದ ಮಧ್ಯ ಸೆಳೆತ ಹಾಗಿತ್ತು. ಕವಿಗಳೂ ಪುಸ್ತಕದ ಹಾಗೆ. ಜ್ಞಾನ ಎಲ್ಲಿದೆ ಅಂತ ಗೊತ್ತಾದರೆ ಸಾಲದು. ಇರವಿನ ಅರಿವೂ ಆಗಬೇಕಲ್ಲ. 'ನೀವು ಜ್ಞಾನ ಭಂಡಾರ' ಅಂದೆ. 'ನಾವೆಲ್ಲ ಒಂದೇ ಜಾತಿಗೆ ಸೇರಿದವರು. ಕಲಾವಿದರು' ಅಂದರು. ಶಿವರುದ್ರಪ್ಪ ಕಲೆಯ ವಿಚಾರಕ್ಕೆ ಬಂದಾಗ ನಾವೆಲ್ಲರೂ ವಿದ್ಯಾರ್ಥಿಗಳೇ, ನಮ್ಮ ಜಗತ್ತೇ ಒಂದು ಕ್ಲಾಸ್ ರೂಮು ಇದ್ದ ಹಾಗೆ ಅನ್ನುವ ಮಾತು ನೆನಪಿದೆ.
'ನಮ್ಮ ನಿಮ್ಮ ಅಭಿವ್ಯಕ್ತಿ ಮಾಧ್ಯಮ ಬೇರೆ ಇರಬಹುದು. ಆದರೆ ಇಬ್ಬರೂ ಮಾಡುತ್ತಿರೋದು ಒಂದೇ ಕೆಲಸ. ನಮಗೆ ನಮಗೆ ತಿಳಿದ ಹಾಗೆ ಕೆಲಸ ಮಾಡ್ತಿದ್ದೇವೆ' ಎಂದರು ಅವರು.
'ಆದರೆ ನಮಗಿಂತ ನಿಮ್ಮ ಕೊಡುಗೆ ದೊಡ್ಡದು. ಇತಿಹಾಸದ ಪುಟ ತೊರೆದಾಗ ನೀವು ಬರೆದದ್ದೆಲ್ಲ ಕಾಣಿಸುತ್ತಾ ಹೋಗತ್ತೆ. ನಾವಾದರೆ ಆಡಿ ತೋರಿಸಬೇಕು, ಮಾಡಿ ತೋರಿಸಬೇಕು. ನೀವು ಬರೆದಿಟ್ಟದ್ದು ಹೊಸ ಪೀಳಿಗೆಯವರಿಗೂ ಹೊಸತಾಗಿಯೇ ಇರುತ್ತದೆ' ಎಂದೆ.
'ಅದನ್ನು ನಾವು ಹೇಳಿಕೊಳ್ಳಬಾರದು' ಅಂದರು. ಅಂಥ ವಿನಯವನ್ನು ನೋಡಿ ಬಹಳ ದಿನವಾಗಿತ್ತು. ಹೇಳಿಕೊಳ್ಳದೆ ಇದ್ದರೇನಂತೆ. ಪರಿಮಳ ಇರೋ ಜಾಗಕ್ಕೆ ವಿಳಾಸ ಬೇಕಾ?
ಕೇಳುವುದು ತುಂಬಾ ಇತ್ತು. ಹೀಗಾಗಿ ಮಾತುಕತೆ ಸರಾಗವಾಗಿ ಸಾಗಿತು. ನಮಗೆಲ್ಲ ಲೇಖಕರೆಂದರೆ ಕುತೂಹಲ. ಅವರು ಸೃಷ್ಟಿಸಿದ್ದನ್ನು ನಾವು ಅಭಿನಯಿಸುತ್ತೇವೆ. ಅವರು ಬೇರೆ, ನಾವು ಬೇರೆ ರೆಂಬೆಕೊಂಬೆ.
'ಬೇರೆ ಕಡೆಯಲ್ಲಿ ಆದಷ್ಟು ನಮ್ಮಲ್ಲಿ ಬೆಳವಣಿಗೆ ಆಗಿಲ್ಲ ಅನ್ನಿಸುತ್ತೆ. ಹಿಂದಿನವರ ಕೊಡುಗೆ ಅಪಾರವಾಗಿತ್ತು. ಈಗ ನಮ್ಮಲ್ಲೂ ಬಡತನವಿದೆ. ವ್ಯಾಪಾರಿ ಮನೋವೃತ್ತಿಯೇ ಮೊದಲಾಗಿದೆ; ಅದು ನಮ್ಮ ದುರಾದೃಷ್ಟ ಅಲ್ವಾ?'.
'ಎಲ್ಲಾ ಕಡೆಯಲ್ಲೂ ಹೀಗೇ ಆಗುತ್ತಿದೆ' ಎಂದರು. ಜೀವನಾನುಭವದ ಮಾತು. 'ನಿಮ್ಮ ಬರಹಕ್ಕೆ ಕಾವ್ಯಕ್ಕೆ ಸ್ಫೂರ್ತಿ ಏನು?' ಕೇಳಿದೆ.
'ಹೇಳೋದಕ್ಕೆ ಆಗೋದಿಲ್ಲ. ಅನೇಕ ಸ್ತರಗಳಿಂದ ಸ್ಫೂರ್ತಿ ಬರುತ್ತೆ. ಕನಸು, ಪ್ರಕೃತಿ, ಅನುಭವ, ಯಾವುದು ಬೇಕಿದ್ದರೂ ಆಗಬಹುದು. ಅದು ರಹಸ್ಯ. ಹಾಗಿದ್ದಾಗಲೇ ಅದು ಕಾವ್ಯ. ಅನೇಕರು ಹೇಳ್ತಾರೆ ಇದೆಲ್ಲಾ ನಾವು ಬರೆದದ್ದಲ್ಲ, ಯಾರೋ ನಿಂತು ಬರೆಸಿದ್ದು ಅಂತ. ಅದನ್ನು ಹೇಳೋದು ಕಷ್ಟ' ಎಂದರು.
'ನಿಜ. ನಮ್ಮ ನಟನೆಗೆ ಸ್ಫೂರ್ತಿ ಏನು ಅಂತ ಕೇಳ್ತಾರೆ. ಬರೆಯುವ ನೀವೇ ಇನ್ಯಾವುದೋ ಸ್ಫೂರ್ತಿ ಎನ್ನುವಾಗ ನಾವು ಏನು ಹೇಳೋಣ? ಮೂಲವೇ ಮೌನವಾದಾಗ ಮೂಲದಿಂದ ಸೃಷ್ಟಿಯಾದದ್ದು ಸುಮ್ಮನಿರುವುದೇ ವಾಸಿ'.
'ಆದರೆ, ಇಬ್ಬರದ್ದೂ ಒಂದೇ ರೀತಿಯ ಅನುಭವ' ಅಂದರು ಶಿವರುದ್ರಪ್ಪ. 'ಕಲಾವಿದ ಕೂಡ ಪಾತ್ರದೊಳಗೆ ಪ್ರವೇಶ ಮಾಡಬೇಕು. ನಾವು ಕೂಡ ನೋಡುತ್ತಿರುವ ವಸ್ತು ನಾವೇ ಆಗಬೇಕು. ನಾನು ಮರಗಳ ಮಧ್ಯ ಮರವಾದೆ ಅಂತ ಇಂಗ್ಲಿಷ್ ಕವಿ ಹೇಳ್ತಾನೆ. ಆಗಲೇ ಎಲ್ಲವೂ ಸಾಧ್ಯ'.
'ಸಿನಿಮಾ ನೋಡೋ ಅಭ್ಯಾಸ ಇದೆಯಾ?'. 'ನೋಡ್ತಿದ್ದೆ, ನೋಡುತ್ತಾ ಇದ್ದೀನಿ? 'ನಾಗರಹಾವು' ನೋಡಿದ್ದೇನೆ, 'ನಿಷ್ಕರ್ಷ' ನೋಡಿದ್ದೂ ನೆನಪಿದೆ. ನಾನು ಸುಚಿತ್ರಾ ಫಿಲ್ಮ್ ಸೊಸೈಟಿ ಸದಸ್ಯ'.
'ನಿಮ್ಮ ಹವ್ಯಾಸಗಳೇನು? ನಮಗೂ ಅದು ಮಾದರಿ ಆಗಬಹುದೇನೋ ಅಂತ'
'ಅಂಥ ವಿಶೇಷ ಏನಿಲ್ಲ. ರೊಟೀನ್ ಜೀವನ'.
'ಆ ರೊಟೀನ್‌ನಲ್ಲೂ ಒಂದು ವಿಶೇಷ ಇದ್ದೇ ಇರುತ್ತೆ'.
'ನನಗೆ ದಿನಕ್ಕೆರಡು ಹೊಸ ಪುಸ್ತಕ ಬರುತ್ತೆ. ಹೊಸಬರು ಕಳುಹಿಸಿಕೊಡ್ತಿದ್ದಾರೆ. ಓದೋದೆ ಆಗುತ್ತೆ. ಆರು ಗಂಟೆಗೆ ಏಳ್ತೀನಿ, ರಾತ್ರಿ ಹನ್ನೆರಡಕ್ಕೆ ಮಲಗ್ತೀನಿ'.
'ವಾಕ್ ಮಾಡ್ತೀರಾ?' ಕೇಳಿದೆ. ವಾಕ್ ಮಾಡ್ತಾರೆ, ಯೋಗ ಮಾಡೊಲ್ಲ. ಅವರ ವಯಸ್ಸಿನ ಗೆಳೆಯರಿಲ್ಲ. ಶಿಕಾರಿಪುರ ಅವರ ಹುಟ್ಟೂರು. ಇತ್ತೀಚೆಗಷ್ಟೇ ಆ ಊರು ನೋಡಿದ್ದಾರಂತೆ.
'ಈಗಿನ ಹುಡುಗರು ಬರೆಯೋ ಶೈಲಿ, ನೋಡೋ ರೀತಿ ವಿಭಿನ್ನವಾಗಿದೆ. ತುಂಬ ಇಷ್ಟವಾಗಿದೆ' ಅಂದರು.
'ಸಾಹಿತ್ಯದಲ್ಲಿ ಹೊಸ ರೀತಿಯ ಬರಹ ಬರುತ್ತಿದೆಯಾ?' ಕೇಳಿದೆ.
'ಹೊಸ ರೀತಿಯ ಬರಹವೇನೋ ಬರುತ್ತಿದೆ. ಆದರೆ ಸಾಹಿತ್ಯದ ದಿಕ್ಕನ್ನು ಬದಲಾಯಿಸಬಲ್ಲ ಬರಹಗಳು ಬರುತ್ತಾಇಲ್ಲ'.
'ಬರುತ್ತಿರುವ ಬರಹಗಳಲ್ಲಿ ನಮ್ಮತನ ಎಷ್ಟಿದೆ?'
'ನಮ್ಮತನದ ವಿಚಾರದಲ್ಲಿ ಅಂಥ ಆಶಾವಾದ ಏನಿಲ್ಲ. ಹೊಸಬರಿಗೆ ಪರಂಪರೆಯ ಬಗ್ಗೆ ಗಾಢವಾದ ತಿಳಿವಳಿಕೆ ಬೇಕಾಗಿದೆ' ಅಂದರು. ಇತ್ತೀಚೆಗೆ ತನ್ನನ್ನು ತುಂಬ ಕಾಡಿದ ಯಾವ ಪುಸ್ತಕವೂ ಬಂದಿಲ್ಲ. ಪ್ರಾಚೀನಕ್ಕೆ ಹೊರಳುವ ಮೂಲಕ ನವೀನರಾಗಬೇಕು ನಾವು ಅಂತಲೂ ಹೇಳಿದರು.
ಗುರುಪರಂಪರೆಯ ಮಾತು ಬಂತು. 'ನಮ್ಮ ಕಾಲದ ಗುರುಗಳೆಲ್ಲ ಮಸ್ತಕದಿಂದ ಪಾಠ ಮಾಡ್ತಿದ್ರು. ಅದು ಹಾಗೆ ಮನಸ್ಸಿನಲ್ಲಿ ಕೂರುತ್ತಿತ್ತು. ಶ್ರವಣ, ಮನನ ಪರಂಪರೆ ನಮ್ಮದು' ಎಂದೆ. 'ಅಂಥ ಗುರುಪರಂಪರೆ ಈಗಿದೆಯಾ?' ಕೇಳಿದೆ.
'ಇಲ್ಲ' ಅನ್ನುವಾಗ ಅವರ ಮುಖದಲ್ಲಿ ಬೇಸರ ಇತ್ತು. ನಾವು ಕುವೆಂಪು ಅವರ ಶಿಷ್ಯ. ಹೀಗೆ ಪರಂಪರೆ ಮುಂದುವರಿಯುತ್ತದೆ. ಈಗ ಅದೆಲ್ಲ ಇಲ್ಲ ಬಿಡಿ ಅಂದರು.
ಕನ್ನಡದ ಮಾತು ಬಂತು. ಕನ್ನಡತನ ಉಳಿಸೋದಕ್ಕೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಶಿವರುದ್ರಪ್ಪನವರು ಎಷ್ಟು ಒಳ್ಳೆಯ ಉತ್ತರ ಕೊಟ್ಟರು: ನಮ್ಮ ಬದುಕೇ ಕನ್ನಡೀಕರಣ ಆಗಬೇಕು. ಪ್ರತಿಯೊಂದು ಕನ್ನಡಮಯ ಆಗಬೇಕು. ಕನ್ನಡ ವರ್ಗ ಸಂಘರ್ಷಕ್ಕೋ ರಾಜಕೀಯಕ್ಕೋ ವಸ್ತುವಾಗಬಾರದು. ನಮ್ಮಲ್ಲಿ ಬಿಟ್ಟರೆ ಬೇರೆಲ್ಲೂ ಭಾಷೆಗಾಗಿ ಹೋರಾಡೋ ಪರಿಸ್ಥಿತಿ ಇಲ್ಲ. ನಮ್ಮಲ್ಲೂ ಅದು ಬರಬಾರದು. ಈ ಸುವರ್ಣ ರಾಜ್ಯೋದಯದಂದು ನಾವು ಆ ತೀರ್ಮಾನ ಕೈಗೊಳ್ಳಬೇಕು.
ಕೇಳುವುದು ಬಹಳ ಇತ್ತು. ಶಿಕ್ಷಣದ ಬಗ್ಗೆ, ಕಲಿಕಾ ಮಾಧ್ಯಮದ ಬಗ್ಗೆ, ನಮ್ಮ ಜವಾಬ್ದಾರಿಗಳ ಬಗ್ಗೆ. ನಾವೆಲ್ಲಾ ಕನ್ನಡ ಮಾಧ್ಯಮದಲ್ಲೇ ಬೆಳೆದು ಇಂಗ್ಲಿಷ್ ಕಲಿತಿದ್ದನ್ನು ನೆನಪಿಸಿಕೊಂಡೆವು. ವರ್ಡ್ಸ್‌ವರ್ತ್, ಶೆಲ್ಲಿ ಮುಂತಾದವರಿಂದ ಅವರು ಕಲಿತದ್ದನ್ನು ಹೇಳಿದರು.
ಮತ್ತೊಮ್ಮೆ ಭೇಟಿಯಾಗುವ ಅವಕಾಶಕ್ಕಾಗಿ ಕಾಯುತ್ತಾ ಅಲ್ಲಿಂದ ಹೊರಟಾಗಲೂ ಅವರು ಬರೆದ ಕವನದ ಸಾಲು ಮನಸ್ಸಿನಲ್ಲಿತ್ತು:
ಕಾಣದ ಕಡಲಿಗೆ ಮೊರೆತದ ಜೋಗುಳ
ಒಳಗಿವಿಗಿಂದೂ ಕೇಳುತಿದೆ
ಸೇರಬಲ್ಲೆನೆ ಒಂದು ದಿನ
ಕಡಲೊಳು ಕರಗಲಾರೆನೆ ಒಂದು ದಿನ...
-ಡಾ. ವಿಷ್ಣುವರ್ಧನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.