ಪ್ರಧಾನ ಸುದ್ದಿ

ಜಿಲ್ಲಾ ಸಚಿವರಿಗೆ ಮತ್ತೊಂದು ಟಾಂಗ್

Published On :

ಮಂಡ್ಯ: ಶ್ರೀರಂಗಪಟ್ಟಣ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸ್ಥಾನ ಪಲ್ಲಟ ಮಾಡುವುದರ ಮೂಲಕ ಕೆಪಿಸಿಸಿ ಜಿಲ್ಲಾ ಮಂತ್ರಿಗಳಿಗೆ ಮತ್ತೊಂದು ಟಾಂಗ್ ನೀಡಿದೆ.
ಮಂಡ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ಬದಲಾವಣೆಯ ಗಾಳಿ ಬೀಸುವುದರ ಜೊತೆಗೆ ಆಂತರಿಕ ಸಂಘರ್ಷಕ್ಕೂ ಕಾರಣವಾಗುವ ಬೆಳವಣಿಗೆಗಗಳು ನಡೆಯುತ್ತಿವೆ. ಮೂಲ ಕಾಂಗ್ರೆಸ್ಸಿಗರಿಗೆ ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಆದ್ಯತೆ ನೀಡಲು ನಿರ್ಧರಿಸಿರುವ ಬೆನ್ನಲ್ಲೇ, ಕೆಪಿಸಿಸಿ ಈಗ ಶ್ರೀರಂಗಪಟ್ಟಣ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪಲ್ಲಟ ಮಾಡಿದೆ.
ಸಚಿವ ಅಂಬರೀಷ್ ಬೆಂಬಲಿಗರಾಗಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ  ಹುಲ್ಕಕೆರೆಯ ಯೋಗಾನಂದ ಪಟೇಲ್ ಬದಲು ಮಾಡಿ ರವೀಂದ್ರ ಶ್ರೀಕಂಠಯ್ಯನವರ ಕಟ್ಟಾ ಬೆಂಬಲಿಗ ಕೊತ್ತಿತ್ತ ರಾಜು ಅವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದೆ.
ಈಗಾಗಲೇ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ನೇಮಕಾತಿ ಮಾಡಿರುವ ಕೆಪಿಸಿಸಿ ಒಂದೊಂದೇ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳನ್ನು ಬದಲಾವಣೆ ಮಾಡುತ್ತದೆ. ಜಿಲ್ಲಾ ಕಾಂಗ್ರೆಸ್ ಪಟ್ಟಿಯಲ್ಲಿ ಜಿಲ್ಲಾ ಮಂತ್ರಿ ಅಂಬರೀಷ್ ಬಣಕ್ಕೆ ಸಾಕಷ್ಟು ಮುಖ ಭಂಗವಾದ ಬೆನ್ನಲ್ಲೇ ಈಗ ರವೀಂದ್ರ ಶ್ರೀಕಂಠಯ್ಯನವರ ಬೆಂಬಲಿಗ ರಾಜು ಅವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ನಲ್ಲಿದ್ದ ಬಣಗಳ ಸಮತೋಲ ಕಾಯುವ ಪ್ರಯತ್ನವನ್ನು ಪಕ್ಷದ ಅಧ್ಯಕ್ಷರು ಮಾಡಿದ್ದಾರೆಂದು ಮೂಲಗಳು ಹೇಳಿವೆ.
ಈ ಹಿಂದೆ ಅಂಬರೀಷ್ ಸಂಸದರಾಗಿದ್ದ ವೇಳೆ ಕೊತ್ತತ್ತಿ ರಾಜು ಕಟ್ಟಾ ಬೆಂಬಲಿಗರಾಗಿಯೇ ಇದ್ದರು. ಕೆಲವು ವರ್ಷಗಳ ನಂತರ ಪಕ್ಷದಲ್ಲಿ ತಮಗೆ ಅನ್ಯಾಯವಾದ ಸಂದರ್ಭದಲ್ಲಿ ಅಂಬರೀಷ್ ತಮ್ಮ ರಕ್ಷಣೆಗೆ ಬರಲಿಲ್ಲ ಎನ್ನುವ ಕಾರಣಕ್ಕಾಗಿ ರಾಜು ತಮ್ಮ ನಿಷ್ಟೆಯನ್ನು ಕಾಂಗ್ರೆಸ್ಗೆ ತೋರಿಸಿದರೂ ರವೀಂದ್ರ ಶ್ರೀಕಂಠಯ್ಯನವರನ್ನು ನಾಯಕನನ್ನು ಆಯ್ಕೆ ಮಾಡಿಕೊಂಡರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರ ಶ್ರೀಕಂಠಯ್ಯನವರಿಗೆ ಪಕ್ಷದ ಟಿಕೆಟ್ ತಪ್ಪಿಹೋದ ಸಮಯದಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರವೀಂದ್ರಗೆ ರಾಜು ಬೆಂಬಲಿಸಿದ್ದರು. ನಂತರ ಲೋಕಸಭಾ ಚುನಾವಣೆಯಲ್ಲಿ ರವೀಂದ್ರ ಅವರ ಅಮಾನತ್ತನ್ನು ಪಕ್ಷ ರದ್ದು ಪಡಿಸಿತು. ಈಗ ರಾಜು ನೇಮಕ ರವೀಂದ್ರರ ಬಣಕ್ಕೆ ಶಕ್ತಿ ತುಂಬಿದಂತಾಗಿದೆ.
ಜಿಲ್ಲಾ ಕಾಂಗ್ರೆಸ್ನಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತವೆ. ಸಚಿವ ಅಂಬರೀಷ್ ಬಣ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಬೆಳವಣಿಗೆಗಳನ್ನು ನೋಡಿಕೊಂಡು ತಮ್ಮ ಅಸ್ತಿತ್ವ ಕಾಯ್ದುಕೊಳ್ಳಲು ಸಚಿವ ಅಂಬರೀಷ್ ಬಣ ನಿರ್ಧರಿಸುವ ಸಾಧ್ಯತೆ ಇದೆ.

ರಾಜ್ಯ ಕಾಂಗ್ರೆಸ್ ಘಟಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು, ರವೀಂದ್ರ ಶ್ರೀಕಂಠಯ್ಯನವರ ಸಂಘಟನಾ ಶಕ್ತಿಯನ್ನು ನಂಬಿ, ಅವರ ಬೆಂಬಲಿಗನಾದ ನಂಗೆ ಈ ಹುದ್ದೆಯನ್ನು ನೀಡಿದ್ದಾರೆ. ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಬೇಕು. ನಮ್ಮ ಕ್ಷೇತ್ರದಲ್ಲಿ ಯಾವುದೇ ಬಣವಿಲ್ಲ. ನಾವೆಲ್ಲರೂ ಕಾಂಗ್ರೆಸ್ನವರು ಎಂಬ ಭಾವನೆಯಿಂದ ಕೆಲಸ ಮಾಡುತ್ತೇವೆ. ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ಇದೆ. ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ.
- ಕೊತ್ತತ್ತಿ ರಾಜು ನೂತನ ಅಧ್ಯಕ್ಷರು,
ಶ್ರೀರಂಗಪಟ್ಟಣ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.