ಪ್ರಧಾನ ಸುದ್ದಿ

ಸದನ ಸುಸೂತ್ರ

ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವ ರಾಜ್ಯಪಾಲರ ಭರವಸೆಗೆ ಬಿಜೆಪಿ ನಿರಾಳ

ಸದನ ಸುಸೂತ್ರ
Published On :

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆಡಳಿತಾರೂಢ ಬಿಜೆಪಿಯಲ್ಲಿನ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಸುಸೂತ್ರವಾಗಿ ನಡೆಯುವ ಲಕ್ಷಣ ಕಾಣಿಸುತ್ತಿದೆ.
ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಬಗ್ಗೆ ತಮಗೆ ಯಾವುದೇ ದೂರು ಬಂದಿಲ್ಲ. ಹೀಗಾಗಿ ಸರ್ಕಾರದ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ. ಸೋಮವಾರ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುತ್ತೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.
ಇನ್ನೊಂದೆಡೆ ಸರ್ಕಾರದ ಪಾಲಿಗೆ ಕಂಟಕವಾಗುತ್ತಾರೆ ಎಂದೇ ಭಾವಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸಲು ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೂಡ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸದಿರಲು ತೀರ್ಮಾನಿಸಿದೆ. ಹೀಗಾಗಿ ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಫೆ. 8ರಂದು ಸಿಎಂ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸುವುದು ಮತ್ತು ಅಧಿವೇಶನ ಫೆ. 15ರವರೆಗೆ ನಡೆಯುವುದು ಖಚಿತವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್  ವಿಧಾನಸಭೆ ಸಭಾಂಗಣದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದು, ನಂತರ ಎರಡೂ ಸದನಗಳಲ್ಲಿ ಈ ಭಾಷಣವನ್ನು ಮಂಡಿಸುವುದರೊಂದಿಗೆ ಮೊದಲ ದಿನದ ಕಲಾಪ ಮುಕ್ತಾಯಗೊಳ್ಳಲಿದೆ.
ಯಾರೂ ದೂರು ನೀಡಿಲ್ಲ: ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವುದಾಗಿ ರಾಜ್ಯಪಾಲರೂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಇದುವರೆಗೆ ಯಾರೂ ನನಗೆ ದೂರು ನೀಡಿಲ್ಲ.   ಬಿಜೆಪಿಯ 14 ಶಾಸಕರು ರಾಜಿನಾಮೆ ನೀಡಿದ್ದು ಮತ್ತು 12 ಶಾಸಕರ ರಾಜಿನಾಮೆ ಅಂಗೀಕಾರವಾಗಿದ್ದು ನನ್ನ ಗಮನಕ್ಕೆ ಬಂದಿದೆ. ಆದರೆ, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ನನ್ನ ಕಚೇರಿಗೆ ಅಧಿಕೃತವಾಗಿ ಯಾರೂ ತಿಳಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಚೊಚ್ಚಲ ಬಜೆಟ್
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ಪಾಲಿಗೆ ಇದು ಪ್ರತಿಷ್ಠೆಯ ಅಧಿವೇಶನ. ಫೆ. 8ರಂದು ಅವರು ಪ್ರಸಕ್ತ ಸರ್ಕಾರದ ಕೊನೆಯ ಮತ್ತು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಸದ್ಯದಲ್ಲೇ ಚುನಾವಣೆ ಬರಲಿರುವುದರಿಂದ ಬಜೆಟ್ ಆಡಳಿತ ಪಕ್ಷಕ್ಕೆ ಹೆಚ್ಚು ಬಲ ನೀಡಬೇಕು. ಈ ಕಾರಣಕ್ಕಾಗಿ ಹಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿ, ಅದಕ್ಕೆ ಅನುದಾನವನ್ನೂ ಹೊಂದಾಣಿಕೆ ಮಾಡಬೇಕಾಗಿದ್ದು, ಈ ಸವಾಲನ್ನು ಶೆಟ್ಟರ್ ಹೇಗೆ ಎದುರಿಸುತ್ತಾರೆ ಎಂಬುದು ಬಜೆಟ್‌ನಲ್ಲಿ ಗೊತ್ತಾಗಲಿದೆ. ಈಗಾಗಲೇ ಆರ್ಥಿಕ ತಜ್ಞರು, ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿದವರು, ರೈತ ಮುಖಂಡರು ಸೇರಿದಂತೆ ಎಲ್ಲಾ ಕ್ಷೇತ್ರಗಳ ಪರಿಣಿತರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿಗಳು, ಈ ಸಂದರ್ಭದಲ್ಲಿ ಬಂದ ಸಲಹೆಗಳೆಲ್ಲವನ್ನೂ ಪರಿಗಣಿಸಿ ಬಜೆಟ್ ಅಂತಿಮಗೊಳಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.