ಅಧ್ಯಾದೇಶಕ್ಕೆ ಅಂಕಿತ
ಕ್ರಿಮಿನಲ್ ತಿದ್ದುಪಡಿಗೆ ರಾಷ್ಟ್ರಪತಿ ಒಪ್ಪಿಗೆ, ಆರು ತಿಂಗಳೊಳಗೆ ಬೇಕು ಸಂಸತ್ ಒಪ್ಪಿಗೆ

ನವದೆಹಲಿ: ಮಹಿಳಾ ಸಂಘಟನೆಗಳ ವಿರೋಧದ ನಡುವೆಯೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೇಂದ್ರ ಸಂಪುಟ ಅಂಗೀಕರಿಸಿದ ಕ್ರಿಮಿನಲ್ ಕಾನೂನು (ತಿದ್ದುಪಡಿ) ಅಧ್ಯಾದೇಶ 2013ಕ್ಕೆ ಅಂಕಿತ ಹಾಕಿದ್ದಾರೆ.
6 ತಿಂಗಳೊಳಗೆ ಅಂಗೀಕಾರ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ 2 ದಿನಗಳ ಹಿಂದಷ್ಟೇ ಕೇಂದ್ರ ಸಂಪುಟ ಅಧ್ಯಾದೇಶವನ್ನು ಅಂಗೀಕರಿಸಿತ್ತು. ಇದಕ್ಕೆ ಈಗ ಪ್ರಣಬ್ ಅವರ ಸಹಿ ಬಿದ್ದಿದೆ. ಹಾಗಾಗಿ ತಕ್ಷಣದಿಂದಲೇ ಈ ಅಧ್ಯಾದೇಶ ಜಾರಿಯಾಗಿದೆ. ಇನ್ನು 6 ತಿಂಗಳೊಳಗಾಗಿ ಇದನ್ನು ಸಂಸತ್ ಅಂಗೀಕರಿಸಬೇಕು. ಫೆ.21ರಂದು ಸಂಸತ್ನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಆಗಲೇ ಅಧ್ಯಾದೇಶ ಅಂಗೀಕಾರವಾಗುವ ಸಾಧ್ಯತೆಯೂ ಇದೆ.
ಇದೇ ವೇಳೆ, ಈಗ ಅಂಗೀಕಾರವಾದ ಅಧ್ಯಾದೇಶ ಅಂತಿಮವಲ್ಲ. ಅದರಲ್ಲಿ ಇನ್ನಷ್ಟು ಬದಲಾವಣೆಗಳಾಗಲಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ಆರ್ಪಿಎನ್ ಸಿಂಗ್ ತಿಳಿಸಿದ್ದಾರೆ.
ಡಿ.16ರಂದು ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರವು ನ್ಯಾ. ವರ್ಮಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ಮಾಡಿದ ಶಿಫಾರಸುಗಳ ಅನ್ವಯ ಕಾನೂನಿಗೆ ತಿದ್ದುಪಡಿ ತಂದು ಸಂಪುಟ ಅಧ್ಯಾದೇಶ ಅಂಗೀಕರಿಸಿತ್ತು.
ಮಹಿಳಾ ಸಂಘಟನೆಗಳ ವಿರೋಧ ಏಕೆ?: ಸರ್ಕಾರವು ಅಧ್ಯಾದೇಶದಲ್ಲಿ ನ್ಯಾ. ವರ್ಮಾ ಸಮಿತಿಯ ಬಹುತೇಕ ಶಿಫಾರಸುಗಳನ್ನು ನಿರ್ಲಕ್ಷಿಸಿದೆ ಎನ್ನುವುದು ಮಹಿಳಾ ಸಂಘಟನೆಗಳ ಆರೋಪ. ಸಮಿತಿ ಶಿಫಾರಸುಗಳನ್ನು ಬದಿಗಿಡಲೆಂದೇ ಸರ್ಕಾರ ಅಧ್ಯಾದೇಶ ಹೊರಡಿಸಿದೆ. ಇದು ದೇಶದ ಜನತೆಗೆ ಮಾಡಿದ ದ್ರೋಹ ಎನ್ನುವುದು ಸಂಘಟನೆಗಳ ಆರೋಪವಾಗಿತ್ತು. ಜನರೊಂದಿಗೆ ಹಂಚಿಕೊಳ್ಳದೇ, ಚರ್ಚೆ ನಡೆಸದೇ ಅಧ್ಯಾದೇಶ ಹೊರಡಿಸಿದೆ. ಇದರಲ್ಲಿ ಪಾರದರ್ಶಕತೆಯೇ ಇರದಿರುವುದು ವಿಷಾದಕರ ಎಂದು ಮಹಿಳಾ ಸಂಘಟನೆಗಳ ಹೇಳಿದ್ದವು. ಈ ಎಲ್ಲ ಕಾರಣಗಳಿಗಾಗಿ ಸರ್ಕಾರದ ಅಧ್ಯಾದೇಶಕ್ಕೆ ಸಹಿ ಹಾಕಬಾರದು ಎಂದು ರಾಷ್ಟ್ರಪತಿ ಪ್ರಣಬ್ರನ್ನು ಕೋರಿದ್ದರು.
ಕಾನೂನು ತಜ್ಞರ ಅಭಿಪ್ರಾಯ ಕೋರಿಕೆ
ಸೂರ್ಯನೆಲ್ಲಿ ಗ್ಯಾಂಗ್ರೇಪ್ ಪ್ರಕರಣದ ಆರೋಪಿಯಾಗಿರುವ ರಾಜ್ಯಸಭೆ ಉಪಸಭಾಪತಿ ಪಿ.ಜೆ. ಕುರಿಯನ್ ವಿರುದ್ಧ ಹೊಸದಾಗಿ ತನಿಖೆ ನಡೆಸಬೇಕೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೋರಲು ಕೇರಳ ಸರ್ಕಾರ ಚಿಂತನೆ ನಡೆಸಿದೆ. ಕುರಿಯನ್ ಮೇಲಿನ ಆರೋಪ ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದೇ ಎಂದು ಕೇಳಿ ಅತ್ಯಾಚಾರಕ್ಕೊಳಗಾದ ಯುವತಿ ವಕೀಲರಿಗೆ ಇತ್ತೀಚೆಗಷ್ಟೇ ಪತ್ರ ಬರೆದಿದ್ದಾಳೆ. ಈ ಹಿನ್ನೆಲೆಯಲ್ಲಿ ಕುರಿಯನ್ ವಿರುದ್ಧದ ತನಿಖೆ ಸಂಬಂಧ ಅಡ್ವೊಕೇಟ್ ಜನರಲ್ ಹಾಗೂ ಡೈರೆಕ್ಟರ್ ಜನರಲ್ ಆಫ್ ಪ್ರಾಸಿಕ್ಯೂಷನ್ ಬಳಿ ಅಭಿಪ್ರಾಯ ಕೋರಿ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ತಿರುವನಂಚೂರ್ ರಾಧಾಕೃಷ್ಣನ್ ಹೇಳಿದ್ದಾರೆ. ಇದೇ ವೇಳೆ, ಆರೋಪ ಕುರಿತು ಮಾತನಾಡಿರುವ ಕುರಿಯನ್, ಇದು ನನ್ನ ತೇಜೋವಧೆಗೆ ರಾಜಕೀಯ ವೈರಿಗಳು ಮಾಡುತ್ತಿರುವ ಷಡ್ಯಂತ್ರ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


