ಪ್ರಧಾನ ಸುದ್ದಿ

ವಿಷ ವರ್ತಕರು ಬೇಡ

ಮತಾಂತರವಿರಲಿ, ಕಾವೇರಿ ನದಿನೀರು ವಿವಾದವಿರಲಿ, ಗಡಿ ತಂಟೆಗಳಿರಲಿ. ಎಲ್ಲವನ್ನೂ ಶಾಂತಿಯಿಂದ ಬಗೆಹರಿಸಿಕೊಳ್ಳೋಣ. ಕುಳಿತು ಮಾತನಾಡಿ...

ವಿಷ ವರ್ತಕರು ಬೇಡ
Published On :

- ವಿನಾಯಕ ಭಟ್ಟ ಮೂರೂರು
ಫ.ಗು.ಹಳಕಟ್ಟಿ ಪ್ರಧಾನ ವೇದಿಕೆ  ಬಿಜಾಪುರ
ಮತಾಂತರವಿರಲಿ, ಕಾವೇರಿ ನದಿನೀರು ವಿವಾದವಿರಲಿ, ಗಡಿ ತಂಟೆಗಳಿರಲಿ. ಎಲ್ಲವನ್ನೂ ಶಾಂತಿಯಿಂದ ಬಗೆಹರಿಸಿಕೊಳ್ಳೋಣ. ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋಣ. ಜಾತಿ ದ್ವೇಷದ ಅಗ್ನಿಕುಂಡದಲ್ಲಿ ಬೆಂದು, ಇಡೀ ದೇಶ ಗೋದ್ರೋತ್ತರ ಕಾಳ್ಗಿಚ್ಚಿಗೆ ಬಲಿಯಾಗುವುದಕ್ಕಿಂತ ಬೌದ್ಧರಾಗಿ ಬದುಕುಳಿಯುವುದು ಉತ್ತಮ. ಸನಾತನಿಗಳ ಅಗ್ನಿಕುಂಡಕ್ಕೆ ಹಾನಿಯಾಗುವುದಕ್ಕಿಂತ ಮತಾಂತರದಿಂದ ಈ ದೇಶ ಉಳಿದು, ಕುವೆಂಪು ಹಾರೈಕೆಯಂತೆ ದೇಶ, ಕನಿಷ್ಠ ಕರ್ನಾಟಕವು ಸರ್ವಜನಾಂಗದ ಶಾಂತಿಯತೋಟವನ್ನಾಗಿ ಮಾಡಿ ಎಂದು ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.
ಭ್ರಷ್ಟಾಚಾರದ ಅರ್ಬುದ ರೋಗ ನಮ್ಮ ದೇಶಕ್ಕೆ ಅಂಟಿದ ಮಹಾವ್ಯಾಧಿ. ಅದು ಕಾಳಿಂಗ ಸರ್ಪದ ವಿಷದಂತೆ. ನಾಗರ ಹಾವಿನ ವಿಷ ಬೇಗನೆ ಏರುತ್ತದೆ. ತಕ್ಕ ಔಷಧ ಕೊಟ್ಟರೆ, ಉರಿಮಂಡಲ ವಿಷಕ್ಕಿಂತ ಬೇಗನೆ ಇಳಿಯಬಹುದು. ಇಳಿಯದಿದ್ದರೂ ಅವನೊಬ್ಬನೇ ಸಾಯುತ್ತಾನೆ. ಆದರೆ ಜಾತೀಯತೆ, ಪರಮತ ದ್ವೇಷವೆಂಬ ವಿಷ ಮನಸ್ಸಿಗೆ ತಗಲುವ ವಿಷ. ಆ ವಿಷ ಹಾವು ಕಚ್ಚಿದವನ ದೇಹದ ಸಾವಿನಿಂದ ಕೊನೆಯಾದೀತು. ಇಡೀ ಜನಾಂಗದ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ ಜಾತೀಯತೆಯಿಂದ ವಿಷವಿತರಕ ವರ್ತಕರನ್ನು  ದೂರವಿಡಬೇಕು.
- ಇವು 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋ. ಚನ್ನಬಸಪ್ಪ ಅವರ ನುಡಿಗಳು.
ಟಿಪ್ಪು ಹಿಂದೂ ದ್ವೇಷಿಯಲ್ಲ: ಒಬ್ಬ ಸಾಹಿತಿಗಳಾಡಿದ ಅಪ್ಪಟ ತಾಜಾ ಸುಳ್ಳಿನ ಸ್ಯಾಂಪಲ್ ಕೊಡುತ್ತೇನೆ. ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ಕೇಂದ್ರೀಯ ವಿವಿಗೆ ಟಿಪ್ಪು ವಿಶ್ವವಿದ್ಯಾಲಯ ಎಂದು ಹೆಸರಿಡುವುದನ್ನು ವಿರೋಧಿಸುವಾಗ, ಟಿಪ್ಪು ಹಿಂದೂಗಳ ದ್ವೇಷಿಯೆಂದೂ, 71,000 ಹಿಂದೂಗಳನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದನೆಂಬ ಸುಳ್ಳನ್ನು ಹೇಳುತ್ತಿದ್ದಾರೆ.
ಇದನ್ನು ಕೇಳಿದೊಡನೆ ಅವನ ಆಳ್ವಿಕೆಯ ಕಾಲದಲ್ಲಿ ಕೊಡಗು ಪ್ರಾಂತದಲ್ಲಿ ಅಷ್ಟು ಜನಸಂಖ್ಯೆ ಇತ್ತೇ ಎಂಬ ಸಂಶಯವಿದೆ. ಸರ್ಕಾರವೇ ಪ್ರಕಟಿಸಿರುವ ಕೂರ್ಗ್ ಗೆಜೆಟಿಯರ್ ನೋಡಿದೆ. 1871ರಲ್ಲಿ ಕೂರ್ಗ್‌ನಲ್ಲಿ ಕೇವಲ 1,68,312 ಜನರಿದ್ದರು. 1981ರ ಜನಗಣತಿ ಪ್ರಕಾರ 3,22,829 ಜನಸಂಖ್ಯೆ ಇತ್ತು. 1792-1799ರಲ್ಲಿ ಎಷ್ಟು ಜನರಿದ್ದಿರಬಹುದು ಎಂದು ಲೆಕ್ಕಹಾಕಿದರೆ 1 ಲಕ್ಷಕ್ಕಿಂತ ಹೆಚ್ಚಿರಲಾರರು. ಆ ನೂರು ಸಾವಿರ ಜನರಲ್ಲಿ 71 ಸಾವಿರ ಜನರನ್ನು ಇಸ್ಲಾಂ ಮತಕ್ಕೆ ಮತಾಂತರ ಮಾಡಿದ್ದರೆ,  210 ವರ್ಷಗಳಲ್ಲಿ ಎಷ್ಟು ಜನ ಮುಸ್ಲಿಮರಿರಬೇಕಿತ್ತು ಕನಿಷ್ಠ 2 ಲಕ್ಷ ಇರಬೇಕಿತ್ತು.  ಈಗ ಕೊಡಗು ಜಿಲ್ಲೆಯ  ಮುಸ್ಲಿಮರ ಸಂಖ್ಯೆ 14,730 ಮಾತ್ರ.  ಸಂಶೋಧಕರೂ ಹಸಿ ಸುಳ್ಳು ಹೇಳಬಹುದೇ ಎಂದು ಪ್ರಶ್ನಿಸಿದ್ದಾರೆ. ಸಾಹಿತಿಗಳು ಕೋಮುದ್ವೇಷದ ಕಿಚ್ಚು ಹಚ್ಚಬಾರದು. ಸೌಹಾರ್ದದ ಶಾಂತಿ ಸಂದೇಶ ಸಾರಬೇಕು ಎಂದರು.






Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.